More

    ಕಣ್ವ ಬಳಿಯ ರೇಷ್ಮೆ ಕೃಷಿ ಕೇಂದ್ರಕ್ಕೆ ಹೊಸ ರೂಪ: ಬಜೆಟ್‌ನಲ್ಲಿ ಘೋಷಣೆ, ಜಿಲ್ಲೆಯ ರೀಲರ್‌ಗಳಲ್ಲಿ ಖುಷಿ

    ರಾಮನಗರ: ಅಕ್ರಮ ಚಟುವಟಿಕೆಗಳ ತಾಣವಾಗಿ ಬದಲಾಗಿದ್ದ ಕಣ್ವ ಬಳಿಯ ರೇಷ್ಮೆ ಕೃಷಿ ಕೇಂದ್ರಕ್ಕೆ ಹೊಸ ರೂಪ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದು, ಜಿಲ್ಲೆಯ ರೀಲರ್‌ಗಳ ಪಾಲಿಗೆ ಖುಷಿಯ ವಿಚಾರವಾಗಿದೆ.

    1986ರಲ್ಲಿ ರೇಷ್ಮೆ ಸಚಿವರಾಗಿದ್ದ ವೈ.ಕೆ.ರಾಮಯ್ಯ ಉದ್ಘಾಟಿಸಿದ್ದ ರೇಷ್ಮೆ ಕೃಷಿ ಮತ್ತು ಮೊಟ್ಟೆ ಉತ್ಪಾದನಾ ಕೇಂದ್ರ 2006ರಿಂದ ಸ್ಥಗಿತಗೊಂಡಿತ್ತು. ಈ ಕಟ್ಟಡಗಳ ಕಿಟಕಿ, ಬಾಗಿಲುಗಳನ್ನೆಲ್ಲ ಕಳ್ಳರು ಕಿತ್ತೊಯ್ದಿದ್ದು ಪಾಳುಬಿದ್ದ ಬಂಗಲೆಯಂತಾಗಿತ್ತು. ಇದು ಅಕ್ರಮ ಚಟುವಟಿಕೆಗಳ ತಾಣವಾಗಿ ಬದಲಾಗಿ ಸ್ಥಳೀಯರಿಗೂ ಕಿರಿಕಿರಿ ಉಂಟು ಮಾಡಿತ್ತು.

    ಯಾರಿಗೆ ಲಾಭ: ಬಜೆಟ್‌ನಲ್ಲಿ ಜಿಲ್ಲೆಗೆ ಘೋಷಣೆ ಮಾಡಿದ ಯೋಜನೆಗಳಲ್ಲಿ ರೇಷ್ಮೆ ಬೆಳೆಗಾರರ ಹಿತ ಕಾಯುವ ಸಲುವಾಗಿ ರೇಷ್ಮೆಹುಳು ಸಂಸ್ಕರಣಾ ಘಟಕ ನಿರ್ಮಾಣದ ಘೋಷಣೆ ಪ್ರಮುಖವಾಗಿದೆ. ಆದರೆ ಈ ಯೋಜನೆ ಬೆಳೆಗಾರರಿಗಿಂತ ನೂಲು ಬಿಚ್ಚಾಣಿಕೆದಾರರಿಗೆ ಲಾಭ ಎನ್ನುವ ಮಾತು ವ್ಯಕ್ತವಾಗುತ್ತಿದೆ. ಪಿಪಿಪಿ ಮಾದರಿಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕಣ್ವ ಾರ್ಮ್‌ನಲ್ಲಿ ರೇಷ್ಮೆಹುಳು ಸಂಸ್ಕರಣ ಘಟಕ ನಿರ್ಮಿಸಲು ಉದ್ದೇಶಿಸಲಾಗಿದೆ. ರೇಷ್ಮೆಯ ಉಪ ಉತ್ಪನ್ನಗಳ ಮೌಲ್ಯವರ್ಧನೆಗಾಗಿ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇದು ಬೆಳೆಗಾರರಿಗಿಂತ ಬಿಚ್ಚಾಣಿಕೆದಾರರಲ್ಲಿ ಸಾಕಷ್ಟು ಸಂತೋಷವನ್ನುಂಟು ಮಾಡಿದೆ.

    ಏನಿದು ಘಟಕ: ರೇಷ್ಮೆಗೂಡಿನಲ್ಲಿ ಉಳಿಯುವ ಕಸವನ್ನು ಈ ಘಟಕದ ಮೂಲಕ ಉಪ ಉತ್ಪನ್ನಗಳನ್ನಾಗಿ ತಯಾರಿಸಲಾಗುತ್ತದೆ. ಇದರ ಜತೆಗೆ ಕಳಪೆ ಗೂಡು ವಿಂಗಡಿಸಿ, ಇದರ ಮೂಲಕ ಮೀನಿಗೆ ಆಹಾರ. ನಾಯಿಗೆ ಬಿಸ್ಕೆಟ್ ತಯಾರಿಸಬಹುದು. ಇಷ್ಟು ಮಾತ್ರವಲ್ಲದೆ, ತ್ಯಾಜ್ಯ ವಿಲೇವಾರಿಗೂ ಈ ಘಟಕ ಅನುಕೂಲವಾಗಿದೆ.

    ಬೇಕಿದೆ ಮತ್ತಷ್ಟು ಯೋಜನೆಗಳು: ಏಷ್ಯಾದಲ್ಲೇ ಅತೀ ದೊಡ್ಡ ರೇಷ್ಮೆ ಮಾರುಕಟ್ಟೆ ಹೊಂದಿರುವ ರಾಮನಗರದಲ್ಲಿ 23 ಸಾವಿರ ಕುಟುಂಬ ರೇಷ್ಮೆ ಕೃಷಿ ಅವಲಂಬಿಸಿದೆ. ರಾಮನಗರ ಮಾರುಕಟ್ಟೆಗೆ ನಿತ್ಯ ಸರಾಸರಿ 50 ಟನ್ ರೇಷ್ಮೆಗೂಡಿನ ಆವಕವಿದೆ. ಸಾವಿರಾರು ಬಿಚ್ಚಾಣಿಕೆದಾರರು ರಾಮನಗರ ಮಾತ್ರವಲ್ಲದೆ, ಹೊರ ಜಿಲ್ಲೆಗಳ ಮಾರುಕಟ್ಟೆಗಳಿಂದಲೂ ಗೂಡು ಖರೀದಿಸಿ ತರುತ್ತಾರೆ. ಹೀಗಾಗಿ, ಘಟಕ ಸ್ಥಾಪಿಸುತ್ತಿರುವುದರಿಂದ ಉಪ ಉತ್ಪನ್ನಗಳ ಮೂಲಕ ಆದಾಯ ಮೂಲ ಹೆಚ್ಚಿಸಬಹುದು.

    ಬಜೆಟ್‌ನಲ್ಲಿ ರೇಷ್ಮೆಹುಳು ಸಂಸ್ಕರಣ ಘಟಕ ಸ್ಥಾಪನೆ ಘೋಷಿಸಿರುವುದು ಸ್ವಾಗತಾರ್ಹ. ಆದರೆ, ಇದರಿಂದ ಬೆಳೆಗಾರರಿಗೆ ಯಾವುದೇ ಲಾಭ ಇಲ್ಲ. ಸರ್ಕಾರ ಬೆಳೆಗಾರರನ್ನು ಗಮನದಲ್ಲಿಟ್ಟುಕೊಂಡು ಒಂದಿಷ್ಟು ಯೋಜನೆಗಳನ್ನು ಜಾರಿಗೆ ತರಬೇಕು.
    -ಕೆ.ರವಿ, ರೇಷ್ಮೆ ಬೆಳೆಗಾರ, ರಾಮನಗರ

    ಸರ್ಕಾರ ರೇಷ್ಮೆ ಹುಳು ಸಂಸ್ಕರಣ ಘಟಕ ಸ್ಥಾಪನೆ ಮಾಡಲು ಹಣ ಮೀಸಲಿಟ್ಟಿದೆ. ಇದು ನಮ್ಮಂತಹ ರೀಲರ್‌ಗಳಿಗೆ ಅನುಕೂಲ. ಇದು ಪರೋಕ್ಷವಾಗಿ ಬೆಳೆಗಾರರಿಗೂ ಅನುಕೂಲವಾಗಲಿದೆ. ಯೋಜನೆಯನ್ನು ಶೀಘ್ರವೇ ಜಾರಿಗೆ ತರಬೇಕು.
    -ಮೊಹಮದ್ ಆರೀಫ್, ರೀಲರ್, ರಾಮನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts