More

    ಸಮಾಜಕ್ಕೆ ಮಾದರಿ ಮಹಿಳೆ ಕಾಂತಿ ಶೆಟ್ಟಿ

    ಕೈಯಲ್ಲೊಂದು ಎರಡೂವರೆ ವರ್ಷದ ಕೂಸು, ಮಡಿಲಿನಲ್ಲೊಂದು ಮೂರು ತಿಂಗಳ ಹಸುಗೂಸಿನ ಆರೈಕೆ ಮಾಡುತ್ತಿರುವಾಗಲೇ ಪತಿ ಅಚಾನಕ್ ಆಗಿ ಹೃದಯಾಘಾತಕ್ಕೆ ಒಳಗಾಗಿ ಬಾರದ ಲೋಕಕ್ಕೆ ಹೋಗಿಬಿಟ್ಟರು. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ಎರಡೂ ಹೆಣ್ಣು ಮಕ್ಕಳನ್ನು ಸಾಕಿ ಸಲುಹಿ, ಹೊಟ್ಟೆ-ಬಟ್ಟೆ, ಶಿಕ್ಷಣ, ಜೀವನ ರೂಪಿಸುವ ಹೊಣೆಯನ್ನು ಹೊತ್ತ ಕಾಂತಿ ಶೆಟ್ಟಿ ಇಂದು ‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವಂತೆ ಹತ್ತಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಮುಖೇನ ಸಮಾಜಕ್ಕೆ ಮಾದರಿ ಮಹಿಳೆಯಾಗಿದ್ದಾರೆ.

    ಬೆಂಗಳೂರು: ಆರ್ಥಿಕ ಮತ್ತು ಕೌಟುಂಬಿಕವಾಗಿ ಅಸಹಾಯಕ ಪರಿಸ್ಥಿತಿಯಲ್ಲಿದ್ದ ಮಹಿಳೆಯೊಬ್ಬರು, ತಾವು ತೆಗೆದುಕೊಳ್ಳುವ ದಿಟ್ಟ ನಿರ್ಧಾರಗಳಿಂದ ಸಾಮಾಜಿಕ ಮತ್ತು ರಾಜಕೀಯವಾಗಿ ಯಾವ ರೀತಿಯಲ್ಲಿ ಪ್ರವರ್ಧಮಾನಕ್ಕೆ ಬರಬಹುದು ಎಂಬುದಕ್ಕೆ ಸಮಾಜ ಸೇವಕಿ ಕಾಂತಿ ಶೆಟ್ಟಿ ಮಾದರಿಯಾಗಿದ್ದಾರೆ. ಕೈಯಲ್ಲೊಂದು ಎರಡೂವರೆ ವರ್ಷದ ಕಂದಮ್ಮ, ಮಡಿಲಲ್ಲಿ ಮೂರು ತಿಂಗಳ ಹಸುಗೂಸು ಇದ್ದಾಗಲೇ ಪತಿ ಹೃದಯಾಘಾತದಿಂದ ಬಾರದ ಲೋಕಕ್ಕೆ ತೆರಳಿದರು. ಬಳಿಕ ಎರಡು ಹೆಣ್ಣು ಮಕ್ಕಳನ್ನು ಸಾಕಿ ಸಲುಹಿ, ಅವರಿಗೆ ಶಿಕ್ಷಣ ನೀಡಿ, ಜೀವನ ರೂಪಿಸುವ ಹೊಣೆ ಹೊತ್ತರು. ಇಂದು ಕಾಂತಿ ಶೆಟ್ಟಿ ‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವ ಹಾಗೆ ಹತ್ತಾರು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಳೆದೆರಡು ದಶಕಗಳಿಂದ ರಾಜಕೀಯ, ಸಿನಿಮಾ, ಸಾಹಿತ್ಯ, ಉದ್ಯಮ, ಸಮಾಜಸೇವೆ ಸೇರಿ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಹಿಳಾ ಸಬಲೀಕರಣಕ್ಕೆ ಮುಂದಾಗಿದ್ದಾರೆ. ಬಿಜೆಪಿ ವಕ್ತಾರೆ, ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ, ಏರ್​ಕಾಮ್ ಸಲ್ಯೂಷನ್ಸ್ ಪ್ರೖೆವೇಟ್ ಲಿ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ, ‘ನಮ್ಮ ಕುಟೀರ’ ಎಂಬ ಸರ್ಕಾರೇತರ ಸಂಸ್ಥೆಯನ್ನು ಹುಟ್ಟಿಹಾಕುವ ಮೂಲಕ ಅಂಗವಿಕಲ ಮಕ್ಕಳ ಬದುಕಿನಲ್ಲಿ ಆಶ್ರಯದಾತರಾಗಿದ್ದಾರೆ. ಇದರ ಜತೆಗೆ ಕರೊನಾ ಸಮಯದಲ್ಲಿ ಫುಡ್ ಕಿಟ್, ಔಷಧ, ಸ್ಯಾನಿಟೈಸರ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

    ಕಷ್ಟದಲ್ಲಿ ಅರಳಿದ ಕಾಂತಿ: ಕಾಂತಿಶೆಟ್ಟಿ ಅವರು ಉಡುಪಿ ಜಿಲ್ಲೆಯ ಕಾರ್ಕಳದ ಕಾನಂಗಿ ಗ್ರಾಮದಲ್ಲಿ ಶಿರ್ವನಡಿಬೆಟ್ಟು ಎಂಬ ಬಂಟರ ಕುಟುಂಬದಲ್ಲಿ ಜನಿಸಿದರು, ಎಸ್ಸೆಸ್ಸೆಲ್ಸಿವರೆಗೂ ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಮನೆಯಿಂದ 8 ಕಿಮೀ ದೂರದ ಶಾಲೆಗೆ ಪ್ರತಿದಿನ ನಡೆದುಕೊಂಡು ಹೋಗಿಯೇ ಕಷ್ಟಕರ ಸಮಯದಲ್ಲಿ ಅಕ್ಷರ ಕಲಿತರು. ಚಿಕ್ಕ ವಯಸ್ಸಲ್ಲೇ ತಂದೆಯನ್ನು ಕಳೆದುಕೊಂಡರು. ‘ನಮ್ಮ ತಾಯಿಗೂ ಇಬ್ಬರು ಹೆಣ್ಣು ಮಕ್ಕಳು, ನನಗೂ ಇಬ್ಬರು ಹೆಣ್ಣುಮಕ್ಕಳು. ವ್ಯವಸಾಯವನ್ನೇ ನಂಬಿ ಬದುಕುತ್ತಿದ್ದ ನಮಗೆ ಗಾಯದ ಮೇಲೆ ಬರೆ ಎಳೆದಂತೆ, ಸರ್ಕಾರ ಜಾರಿಗೊಳಿಸಿದ ‘ಉಳುವವನೇ ಭೂ ಒಡೆಯ’ ಕಾಯ್ದೆಯಿಂದಾಗಿ ಇರುವ ಜಮೀನನ್ನು ಕಳೆದುಕೊಂಡು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುವಂತಾಯಿತು’ಎನ್ನುತ್ತಾರೆ ಕಾಂತಿ. ಶಿಕ್ಷಣಕ್ಕೆ ಪ್ರೋತ್ಸಾಹ ಮತ್ತು ಬೆಂಬಲ ನೀಡುವವರು ಯಾರೂ ಇಲ್ಲದಿದ್ದಾಗ ಎಸ್ಸೆಸ್ಸೆಲ್ಸಿ ಓದುವ ವೇಳೆಯೇ ಟೈಪಿಂಗ್ ಮಾಡಿಕೊಂಡು ಕಾಮತ್ ಎಂಟರ್​ಪ್ರೖೆಸಸ್​ನಲ್ಲಿ ಕೆಲಸ ಮಾಡುತ್ತಿದ್ದರು. ರಜೆ ದಿನಗಳಲ್ಲಿ ಟ್ಯಾಕ್ಸ್ ಕನ್ಸಲ್ಟೆಂಟ್ (ತೆರಿಗೆ ಸಲಹೆಗಾರರು) ಬಳಿ ಅರೆಕಾಲಿಕ ಉದ್ಯೋಗ ಮಾಡಿ, ಪಿಯುಸಿವರೆಗೂ ರೆಗ್ಯುಲರ್ ತರಗತಿಗಳಲ್ಲಿ ಓದಿದರು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬೆಂಗಳೂರಿಗೆ ಬಂದ ಅವರು ‘ಕ್ಯಾನ್ ಕಾಫಿ’ ಎಂಬ ಮಳಿಗೆಯೊಂದರಲ್ಲಿ ಕೆಲಸ ಮಾಡಿಕೊಂಡು ಮುಕ್ತ ವಿಶ್ವವಿದ್ಯಾಲಯದಲ್ಲಿ ಪದವಿ ಮುಗಿಸಿದರು. ಸದ್ಯ ತುಳು ಭಾಷೆಯಲ್ಲಿ ಎಂ.ಎ. ಪದವಿಯನ್ನು ಕೂಡ ದೂರ ಶಿಕ್ಷಣದಲ್ಲೇ ಪಡೆಯುತ್ತಿದ್ದಾರೆ.

    ಏರ್​ಕಾಮ್ ಸಲ್ಯೂಷನ್ಸ್ ಪ್ರೖೆ.ಲಿ. ಫ್ಯಾಷನ್ ಡಿಸೈನಿಂಗ್, ಸಿನಿಮಾ: ಬೆಂಗಳೂರಿನ ಕನ್ನಿಂಗ್​ಹ್ಯಾಮ್ ರಸ್ತೆಯಲ್ಲಿ ಏರ್​ಕಾಮ್ ಸಲ್ಯೂಷನ್ಸ್ ಪ್ರೖೆವೇಟ್ ಲಿ. ಎಂಬ ಸಂಸ್ಥೆಯನ್ನು 2000 ಇಸವಿಯಲ್ಲಿ ಆರಂಭಿಸಿ ಈಗ ವ್ಯವಸ್ಥಾಪಕ ನಿರ್ದೇಶಕಿಯಾಗಿರುವ ಕಾಂತಿ ಶೆಟ್ಟಿ ಅವರ ನಿರಂತರ ಶ್ರಮ ಫಲ ನೀಡಿದೆ. 2001ರಲ್ಲಿ ಗಂಡ ತೀರಿಕೊಂಡ ಬಳಿಕ ಫ್ಯಾಷನ್ ಡಿಸೈನ್ ಮತ್ತು ಬ್ಯೂಟಿ ಪಾರ್ಲರ್ ನಡೆಸಿ ಜೀವನ ಸಾಗಿಸುತ್ತಿದ್ದರು. ಗ್ರಾಹಕರನ್ನು ಆಕರ್ಷಿಸಲು ಮತ್ತು ಅವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಬೆಳಗ್ಗೆ 6ಕ್ಕೆ ಪಾರ್ಲರ್ ತೆರೆಯುತ್ತಿದ್ದರು. ಅವರ ಈ ಕಾರ್ಯಪ್ರವೃತ್ತಿಯು ಬಾಲಿವುಡ್ ಚಿತ್ರ ನಿರ್ದೇಶಕಿ ಏಕ್ತಾ ಕಪೂರ್ ಅವರೊಂದಿಗೆ ಒಂದು ದಶಕಗಳ ಕಾಲ ಕೆಲಸ ಮಾಡುವ ಅವಕಾಶ ಕಲ್ಪಿಸಿತು. ಕನ್ನಡ ಮತ್ತು ತಮಿಳು ಸಿನಿಮಾಗಳನ್ನು ನೋಡಿಕೊಳ್ಳುತ್ತಿದ್ದ ಬಾಲಾಜಿ ಫಿಲ್ಮ್್ಸಲ್ಲಿ 10 ವರ್ಷಗಳ ಫ್ಯಾಷನ್ ಡಿಸೈನರ್ ಆಗಿ ಕಾಂತಿಶೆಟ್ಟಿ ಕಾರ್ಯ ನಿರ್ವಹಿಸಿದ್ದರು. ಬಳಿಕ ಚಿತ್ರ ನಿರ್ವಣದಲ್ಲಿ ತೊಡಗಿಸಿಕೊಂಡ ಅವರು, ಸಹ ನಿರ್ಮಾಪಕಿಯಾಗಿ ಕನ್ನಡ ಚಲನಚಿತ್ರ ಕೇಸ್ ನಂ. 18/9 ಹಾಗೂ ಸುವರ್ಣ ಚಾನೆಲ್​ಗೆ ‘ಚೆಲುವೆ’ ಎಂಬ ಧಾರಾವಾಹಿ ಕೂಡ ನಿರ್ವಿುಸಿದ್ದಾರೆ.

    Kanthi Shetty

    ಅನಿರೀಕ್ಷಿತವಾಗಿ ಬಿಜೆಪಿ ಸೇರ್ಪಡೆ: 2012ರಲ್ಲಿ ಅನಿರೀಕ್ಷಿತವಾಗಿ ಬಿಜೆಪಿ ಸೇರುವ ಸಂದರ್ಭ ಎದುರಾಯಿತು. ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ರಾಮಕುಮಾರ್ ಬಿಸ್ಮಿಲ್ಲ ಅವರ ಕುಟುಂಬಸ್ಥರೊಬ್ಬರು ಬಿಜೆಪಿ ಸೇರ್ಪಡೆಯಾಗುತ್ತಿದ್ದರು. ಅಖಿಲ ಭಾರತ ಗ್ರಾಮೀಣ ಪರಿಷತ್ತಿನಲ್ಲಿ ಸದಸ್ಯೆಯಾಗಿದ್ದ ಕಾಂತಿಶೆಟ್ಟಿ ಅವರನ್ನು ಬಿಸ್ಮಿಲ್ಲ ಅವರು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ವಿವಿಧ 4 ರಾಜ್ಯಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದರು. ಕರ್ನಾಟಕದಿಂದ ಕಾಂತಿಶೆಟ್ಟಿ ಪ್ರತಿನಿಧಿಸಿದ್ದರು. ಈಗಿನ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಅಂದು ಕಚೇರಿ ಕಾರ್ಯದರ್ಶಿಯಾಗಿದ್ದರು. ಅಂದಿನ ಕಾರ್ಯಕ್ರಮದಲ್ಲಿ ಕೇಂದ್ರ ಮಾಜಿ ಸಚಿವ ದಿವಂಗತ ಅನಂತಕುಮಾರ್ ಕಾರ್ಯಕ್ರಮದಲ್ಲಿದ್ದರು. ರಾಜ್ಯದಿಂದ ಪಾಲ್ಗೊಂಡಿದ್ದ ಕಾಂತಿ ಶೆಟ್ಟಿ ಸೇರಿ ಇತರರಿಗೂ ಅನಂತಕುಮಾರ್ ಪಕ್ಷದ ಶಾಲು ಹೊದಿಸಿ ಸನ್ಮಾನಿಸಿದ ಕಾರಣ ಅನಿರೀಕ್ಷಿತವಾಗಿ ಪಕ್ಷ ಸೇರುವ ಸಂದರ್ಭ ಕೂಡಿ ಬಂತು.

    ಸವಾಲುಗಳನ್ನು ಮೆಟ್ಟಿನಿಂತ ಛಲಗಾತಿ: ಮದುವೆಗೂ ಮೊದಲೇ ಬೆಂಗಳೂರಿನ ಮಲ್ಲೇಶ್ವರದಲ್ಲಿ ಕ್ಯಾನ್ ಕಾಫಿಯಲ್ಲಿ 3 ಸಾವಿರ ರೂಪಾಯಿಗೆ ಕೆಲಸಕ್ಕೆ ಸೇರಿಕೊಂಡಿದ್ದರು. ಹಂಚಿಕೆದಾರರ ಬಳಿ ಮಸಾಲೆ ಪದಾರ್ಥಗಳ ಮಾರಾಟಗಾರರ ಬಳಿ ಕೆಲಸ ಮಾಡಿದ್ದಾರೆ. 1997ರಲ್ಲಿ ತಿಂಗಳೆ ಮಲ್ಲಿಕಾರ್ಜುನ ಹೆಗ್ಡೆ ಅವರನ್ನು ಮದುವೆಯಾದರು. ದಂಪತಿಗೆ 2 ಹೆಣ್ಣುಮಕ್ಕಳು. ದುರದೃಷ್ಟವಶಾತ್ 2001ರ ಮಾರ್ಚ್ 26ರಂದು ಪತಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು. ಪುಟ್ಟ ಮಕ್ಕಳನ್ನು ಮಡಿಲಿನಲ್ಲಿಟ್ಟುಕೊಂಡು ಗಂಡ ಮತ್ತು ತಂದೆ ಇಲ್ಲದ ಸಮಯದಲ್ಲಿ ಜೀವನ ನಿರ್ವಹಣೆ ಸವಾಲಾಗಿತ್ತು. ಹಠ ಮತ್ತು ಛಲದಿಂದ ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಇಂದು ಸಮಾಜದಲ್ಲಿ ಗೌರವಯುತ ಬದುಕು ಕಟ್ಟಿಕೊಂಡಿದ್ದಾರೆ. ನನ್ನ ಮತ್ತು ಮಕ್ಕಳ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಪತಿ ಮರಣದ ವಿಷಯವನ್ನು ತೀರಾ ಹತ್ತಿರದ ಸಂಬಂಧಿಕರನ್ನು ಹೊರತುಪಡಿಸಿ ಬೇರೆಲ್ಲೂ ಹೇಳಿಕೊಂಡಿಲ್ಲ. ಮಕ್ಕಳಿಗೆ ಶಾಲೆಯಲ್ಲಿ ಕೂಡ ತಂದೆ ಇದ್ದಾರೆ ಎಂದೇ ಬರೆಸಿದ್ದೇನೆ. ಲೇಟ್ ಎಂದು ಬರೆಸಿದರೆ ಮಕ್ಕಳಿಗೆ ವಿಚಾರ ತಿಳಿಯಲಿದೆ ಎಂಬ ಕಾರಣದಿಂದ ತಿಳಿಸಿರಲಿಲ್ಲ. ಎಸ್ಸೆಸ್ಸೆಲ್ಸಿ ಬಳಿಕ ಕೌನ್ಸೆಲಿಂಗ್ ಮಾಡಿಸಿ ಮಕ್ಕಳಿಗೆ ಅವರ ತಂದೆ ತೀರಿಕೊಂಡಿರುವ ವಿಷಯ ತಿಳಿಸಿದೆ. ನನ್ನೆಲ್ಲ ಕೆಲಸಗಳಿಗೆ ಅಮ್ಮ ಬೆನ್ನೆಲುಬಾಗಿ ನಿಂತಿದ್ದಾರೆ. ‘ಮದರ್ ಈಸ್ ಸುಪ್ರೀಂ ಪವರ್ ಆಫ್ ಅರ್ಥ್’ ಎಂಬ ಮಾತನ್ನು ಹೆಮ್ಮೆಯಿಂದ ಹೇಳುತ್ತಾರೆ.

    ಮಕ್ಕಳಿಬ್ಬರೂ ಕರ್ನಾಟಕ ರಾಜ್ಯ ಬಾಸ್ಕೆಟ್​ಬಾಲ್ ಪ್ಲೇಯರ್ಸ್: ದೊಡ್ಡ ಮಗಳು ಲಿಪಿಕಾ ಏರೋಸ್ಪೇಸ್ ಇಂಜಿನಿಯರ್ ಆಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಜತೆಗೆ ಬಾಸ್ಕೆಟ್ ಬಾಲ್ ಪ್ಲೇಯರ್ ಆಗಿದ್ದಾರೆ. ಚಿಕ್ಕ ಮಗಳು ಲೇಖನಾ ಕೂಡ ಬಾಸ್ಟೆಟ್ ಬಾಲ್​ನಲ್ಲಿ 15 ಬಾರಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಇಬ್ಬರೂ ಮಕ್ಕಳಿಗೆ ನಾನು ಬಾಸ್ಟೆಟ್​ಬಾಲ್ ಕಲಿಸಲಿಲ್ಲ. ಕೆಲಸದ ಒತ್ತಡದಿಂದ ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು ಬರಲು ತಡವಾಗಿ ಹೋಗುತ್ತಿದ್ದೆ. ಈ ವೇಳೆಯಲ್ಲಿ ಆಟ ಕಲಿತು ಇಂದು ರಾಜ್ಯವನ್ನು ಪ್ರತಿನಿಧಿಸುತ್ತಿರುವುದಕ್ಕೆ ಖುಷಿಯಾಗುತ್ತದೆ ಎನ್ನುತ್ತಾರೆ ಕಾಂತಿಶೆಟ್ಟಿ.

    Kanthi Shetty

    ವೃದ್ಧಾಶ್ರಮ ಕಟ್ಟುವ ಗುರಿ: ನಮ್ಮ ಕುಟೀರವನ್ನು ಅಂಗವಿಕಲ ಮಕ್ಕಳ ಜತೆಗೆ ಹಿರಿಯರಿಗೂ ಆಶ್ರಯ ನೀಡುವ ಉದ್ದೇಶವಿದ್ದು, ವಯಸ್ಸಾದವರಿಗೆ ವೃದ್ಧಾಶ್ರಮ ನಿರ್ವಿುಸುವ ಕನಸು ಹೊತ್ತಿದ್ದಾರೆ. ಸಮಾಜದಲ್ಲಿ ಎದುರಾಗುವ ಹಲವು ಸಮಸ್ಯೆಗಳಿಂದ ಎನ್​ಜಿಒಗಳ ಧ್ಯೇಯೋದ್ದೇಶಗಳು ಸರಿಯಾಗಿ ಅನುಷ್ಠಾನ ಮಾಡಲು ಸಾಧ್ಯವಾಗುತ್ತಿಲ್ಲ. ಇದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿದರೆ, ವಿಶೇಷವಾಗಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅನುಕೂಲವಾಗಲಿದೆ. ಜನರಿಗೆ ಆರೋಗ್ಯ ಮತ್ತು ಶಿಕ್ಷಣವನ್ನು ಸುಲಭವಾಗಿ ದೊರೆಯುವಂತಾಗಬೇಕು. ಈ ಕಾರ್ಯಗಳಿಗೆ ನನ್ನಿಂದ ಏನೇನು ಮಾಡಲು ಸಾಧ್ಯವಾಗುವುದೋ ಅದನ್ನೆಲ್ಲಾ ಮಾಡುತ್ತೇನೆ ಎನ್ನುತ್ತಾರೆ ಕಾಂತಿ ಶೆಟ್ಟಿ.

    ಕರೊನಾದಲ್ಲಿ ಮಾನವೀಯತೆ: ಇಡೀ ಮನುಕುಲವನ್ನು ಕಾಡಿದ ಕರೊನಾ ಸಮಯದಲ್ಲಿ ಅಸಹಾಯಕ ಒಂದು ಲಕ್ಷ ಜನರಿಗೆ ಮಾಸ್ಕ್ ಮತ್ತು ಸತತ ಮೂರು ತಿಂಗಳ ಕಾಲ ಊಟ, ಫುಡ್ ಕಿಟ್, ಸ್ಯಾನಿಟೈಸರ್, ಔಷಧಗಳನ್ನು ವಿತರಿಸಿ ಕಾಂತಿಶೆಟ್ಟಿ ಮಾನವೀಯತೆ ಮೆರೆದಿದ್ದಾರೆ. ಈ ಕುರಿತು ಮಾತನಾಡಿದ ಅವರು, ‘ನಾನೊಬ್ಬ ನಾಗರಿಕಳಾಗಿ ಕರೊನಾ ಸಂದರ್ಭವನ್ನು ಎದುರಿಸುವ ಜತೆಗೆ ಸಮಾಜ ಸೇವೆ ಸಲ್ಲಿಸುವ ಗುಣ ನನ್ನನ್ನು ಸುಮ್ಮನೆ ಕುಳಿತುಕೊಳ್ಳಲು ಬಿಟ್ಟಿಲ್ಲ. ಆರಂಭದಲ್ಲಿ ಸಿಟಿಜನ್ ಸ್ಕಾ್ವಡ್ ಆಗಿ ಪ್ರಾಥಮಿಕ ಸಂಪರ್ಕ ಪತ್ತೆ ಹಚ್ಚಲು ಶುರು ಮಾಡಿದೆ. ನಂತರ ಜನರು ಅನ್ನ, ಚಿಕಿತ್ಸೆಗಾಗಿ ಪರದಾಡುವ ದೃಶ್ಯಗಳು ಮನ ಕಲಕುವಂತಿತ್ತು. ಇದರಿಂದ 10 ದಿನಗಳ ಮಟ್ಟಿಗೆ ನನ್ನಲ್ಲಿದ್ದ ಹಣದಿಂದ ಜನರಿಗೆ ಊಟ ಹಂಚುವ ನಿರ್ಧಾರ ಮಾಡಿದೆ. ಇದಕ್ಕೆ ನನ್ನ ಹಿರಿಯ ಮಗಳು ಲಿಪಿಕಾ ಕೂಡ ಸಾಥ್ ನೀಡಿದಳು. ಹೀಗೆ ನಮ್ಮ ಖುಷಿಗಾಗಿ ಮಕ್ಕಳೊಂದಿಗೆ ಸೇರಿ ನಮ್ಮ ಸೇವೆಯನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡೆವು. ಇದಕ್ಕೆ ಸಕಾರಾತ್ಮಕ ಸ್ಪಂದನೆ ಸಿಕ್ಕಿತು. ಹತ್ತಾರು ಜನ ಕೈಜೋಡಿಸಿದರು. ಮುಖ್ಯವಾಗಿ ಸ್ವಾತಿ ಹೋಟೆಲ್ ಗ್ರೂಪಿನ ಮುಖ್ಯಸ್ಥರಾದ ಗೋಪಾಲ್ ಶೆಟ್ಟಿ ಅವರು, ದುಬೈನ ಜಯರಾಮ್ ಅವರು ಹಾಗೂ ನಮ್ಮಕುಟೀರ ಫೌಂಡೇಷನ್​ನ 15 ಜನರ ತಂಡ ಇದರಲ್ಲಿ ಜೊತೆಯಾಗಿ ಕೈ ಜೋಡಿಸಿದ್ದಾರೆ. ಜನರು ಕೂಡ ಅವಶ್ಯವಿರುವ ಕಡೆ ಊಟ ಒದಗಿಸುವಂತೆ ಫೇಸ್​ಬುಕ್​ನಲ್ಲಿ ಮನವಿ ಮಾಡಿದರು. ಹೀಗೆ ಒಬ್ಬೊಬ್ಬರೇ ನಮ್ಮ ತಂಡವನ್ನು ಸೇರಿಕೊಂಡಾಗ ನನ್ನ ಆತ್ಮವಿಶ್ವಾಸ ಹೆಚ್ಚಿತು. ನಮ್ಮ ಮನೆಗೆ ಅಕ್ಕಿ ಮೂಟೆಗಳ ರಾಶಿಯೇ ಬಂದು ಬಿತ್ತು. ಇದನ್ನು ಮಲ್ಲೇಶ್ವರದಲ್ಲಿ ಫುಡ್ ಕಿಟ್ ಮೂಲಕ ಬಿಬಿಎಂಪಿ ಪೌರ ಕಾರ್ವಿುಕರು ಹಾಗೂ ಜನರಿಗೆ ವಿತರಿಸಿದೆವು. ಜನರ ಪಾಲ್ಗೊಳ್ಳುವಿಕೆಯಿಂದ ಯಶಸ್ವಿಯಾಗಿ ಸಾಗಿತು ಎಂದು ಸ್ಮರಿಸುತ್ತಾರೆ.

    ಬಿಜೆಪಿ ಮಾಧ್ಯಮ ವಿಭಾಗದ ಜಿಲ್ಲಾ ಸಂಯೋಜಕಿ: 2016ರಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆಯಾಗಿ ನೇಮಕಗೊಂಡು ಎರಡು ಬಾರಿ ವಿಧಾನಸಭೆ ಚುನಾವಣೆ, ಎರಡು ಉಪ ಚುನಾವಣೆ ಮತ್ತು 2019ರಲ್ಲಿ ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ಮಾಧ್ಯಮ ವಿಭಾಗದ ಜಿಲ್ಲಾ ಮಾಧ್ಯಮ ಸಂಯೋಜಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಬೆಂಗಳೂರು ಉತ್ತರ ಜಿಲ್ಲೆಯ ವಕ್ತಾರರಾಗಿದ್ದಾರೆ. ಪಕ್ಷ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರ ಜತೆಗೆ, ಇಂದು ವಿವಿಧ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಸುದ್ದಿ ವಾಹಿನಿಗಳಲ್ಲಿ ರಾಜಕೀಯ ಚರ್ಚೆಗಳಲ್ಲಿ 1026ಕ್ಕೂ ಹೆಚ್ಚು ಬಾರಿ ಬಿಜೆಪಿ ವಕ್ತಾರೆಯಾಗಿ ಪಾಲ್ಗೊಂಡು ಪಕ್ಷದ ನಿಲುವುಗಳನ್ನು ಯಶಸ್ವಿಯಾಗಿ ಸಮರ್ಥಿಸಿಕೊಳ್ಳುವಲ್ಲಿ ತಮ್ಮದೇ ಪಾತ್ರ ವಹಿಸಿದ್ದಾರೆ.

    Kanthi Shetty

    ಸಮಾಜ ಸೇವೆಗೆ ಸಂದ ಪ್ರಶಸ್ತಿಗಳು: ಜನಸಾಮಾನ್ಯರ ಪರ ಕಾಳಜಿ ವಹಿಸಿರುವುದನ್ನು ಗುರುತಿಸಿ 2018ರಲ್ಲಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ, 2019ರಲ್ಲಿ ತುಳುನಾಡ ಸೌಗಂಧಿಕ ಪ್ರಶಸ್ತಿ, 2020ರಲ್ಲಿ ಅರಬ್ ದೇಶದ ಚೇಂಬರ್ ಆಫ್ ಕಾಮರ್ಸ್ ನೀಡುವ ಕರೊನಾ ವಾರಿಯರ್ಸ್ ಆಫ್ ಇಂಡಿಯಾ ಪ್ರಶಸ್ತಿ, 2021ರಲ್ಲಿ ನಾರಿ ಶಕ್ತಿ ಪ್ರಶಸ್ತಿ, ಸಮಾಜ ಸೇವಾ ರತ್ಮ ಪ್ರಶಸ್ತಿ, ಸ್ವಸ್ತಿಶ್ರೀ ರಾಜ್ಯ ಪ್ರಶಸ್ತಿ, ಮಹಿಳಾ ವಾರಿಯರ್ ಪ್ರಶಸ್ತಿ 2021-22 ಸೇರಿ ಹಲವು ಪ್ರಶಸ್ತಿಗಳು ಕಾಂತಿ ಶೆಟ್ಟಿ ಅವರನ್ನು ಅರಸಿ ಬಂದಿವೆ. ಇದರ ಜತೆಗೆ ಹತ್ತಾರು ಸಂಸ್ಥೆಗಳು, ಸಂಘಟನೆಗಳು ಪ್ರಶಂಸಾ ಪತ್ರಗಳನ್ನು ನೀಡಿವೆ. ಇಂಡಿಯನ್ ಎಂಷೈರ್ ಯೂನಿವರ್ಸಿಟಿ ವತಿಯಿಂದ ಸಾಮಾಜಿಕ ಸೇವೆಗಾಗಿ ಗೌರವ ಡಾಕ್ಟರೇಟ್ ಕೂಡ ಲಭಿಸಿದೆ. ಇದನ್ನೆಲ್ಲ ಸ್ವೀಕರಿಸಿರುವ ಕಾಂತಿ ಶೆಟ್ಟಿ ಅವರು ಹೇಳುವುದೊಂದೇ, ನಾನು ಪ್ರಶಸ್ರಿಗಾಗಿ ಖಂಡಿತವಾಗಿಯೂ ಕೆಲಸ ಮಾಡಿಲ್ಲ. ಸಮಾಜಕ್ಕಾಗಿ ಕೆಲಸ ಮಾಡಿದ್ದಕ್ಕೆ ಜನರೇ ಗುರುತಿಸಿ ನೀಡಿರುವ ಪ್ರಶಸ್ತಿಗಳಿವು ಎಂಬುದು ಅವರ ಮಾತು.

    ಬಂಟರ ಸಂಘ, ಕಸಾಪದಲ್ಲಿ ಸೇವೆ: ತಮ್ಮ ಮನಸ್ಸು ವಿಚಲಿತರಾಗಬಾರದು ಎಂಬ ಉದ್ದೇಶದಿಂದ ಪ್ರತಿದಿನ ಏನಾದರೂ ಒಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಿಜಿಯಾಗಿರುತ್ತಿದ್ದರು. ಇದರಿಂದ ಹಲವಾರು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಅವಕಾಶ ದೊರೆಯಿತು. ಬೆಂಗಳೂರು ಬಂಟರ ಸಂಘದಲ್ಲಿ ಸಕ್ರಿಯ ಸದಸ್ಯೆಯಾಗಿ ಮತ್ತು ಚುನಾಯಿತ ಪದಾಧಿಕಾರಿಯಾಗಿ ಹಲವು ಆಯಕಟ್ಟಿನ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಮನು ಬಳಿಗಾರ್ ಕನ್ನಡ ಸಾಹಿತ್ತ ಪರಿಷತ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ದೆಹಲಿಯಲ್ಲಿ ನಡೆದ ಹೊರನಾಡ ಕನ್ನಡಿಗರ ಪ್ರಥಮ ರಾಷ್ಟ್ರೀಯ ಸಮಾವೇಶದ ಸಹ ಸಂಚಾಲಕಿಯಾಗಿ ಸಮಾವೇಶವನ್ನು ಯಶಸ್ವಿಯಾಗಿ ನಿರ್ವಹಿದ ಹೆಮ್ಮೆ ಕಾಂತಿ ಶೆಟ್ಟಿಯವರದ್ದಾಗಿದೆ. ನಂತರ ಕಸಾಪದಲ್ಲಿ ಉದ್ಯೋಗ ಸಮಿತಿ ರಾಜ್ಯ ಸಹ ಸಂಚಾಲಕರಾಗಿ 796 ಕನ್ನಡಿಗರಿಗೆ ವಿವಿಧ ಕಂಪನಿಗಳಲ್ಲಿ ಕೆಲಸ ಕೊಡಿಸಿರುವ ಹೆಗ್ಗಳಿಕೆ ಅವರದು. 2019ರಿಂದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯೆಯಾಗಿ ತುಳುನಾಡು, ತುಳು ಭಾಷೆ, ತುಳುಸಂಸ್ಕೃತಿ ಕಂಬಳ ಮತ್ತು ತುಳುವರಿಗಾಗಿ ಬೆಂಗಳೂರಿನಲ್ಲಿ ತುಳು ಭವನ ನಿರ್ವಿುಸುವ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ಇತ್ತೀಚೆಗೆ ನಡೆದ ಐತಿಹಾಸಿಕ ‘ನಮ್ಮ ಬೆಂಗಳೂರು ಕಂಬಳ’ದ ಸಮಿತಿಯ ಸಂಚಾಲಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

    ಮಹಿಳಾ ಸಬಲೀಕರಣಕ್ಕೆ ಯೋಜನೆ: ಮಹಿಳೆಯರು ಸ್ವಾವಲಂಬಿಗಳಾಗಿ ಕಾರ್ಯನಿರ್ವಹಿಸುವ ಉದ್ದೇಶದಿಂದ ಮಹಿಳೆಯರಿಗಾಗಿ ಏನನ್ನಾದರೂ ಕೊಡುಗೆ ನೀಡುವ ಗುರಿ ಇದೆ. ಸಮಾಜದಲ್ಲಿ ಸಿಂಗಲ್ ಪೇರೆಂಟ್ ಮಹಿಳೆಯರು ಉತ್ತಮ ಜೀವನ ರೂಢಿಸಿಕೊಳ್ಳಲು ಯೋಜನೆಗಳನ್ನು ಕೈಗೊಳ್ಳುವ ಆಲೋಚನೆ ಹೊಂದಿದ್ದೇನೆ ಎನ್ನುತ್ತಾರೆ ಕಾಂತಿಶೆಟ್ಟಿ.

    ‘ನಮ್ಮ ಕುಟೀರ’ದಲ್ಲಿ ಅಂಗವಿಕಲರ ಸೇವೆ: ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಬಳಿಕ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ 2012ರಲ್ಲಿ ವಿಕಲಚೇತನ ಮಕ್ಕಳಿಗಾಗಿ ‘ನಮ್ಮ ಕುಟೀರ’ ಹೆಸರಿನಲ್ಲಿ ಸರ್ಕಾರೇತರ ಸಂಸ್ಥೆಯನ್ನು ಆರಂಭಿಸಿದರು. ಎನ್​ಜಿಒ ಅನ್ನು ಕೂಡ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದು, ಹಲವಾರು ವಿಶೇಷ ಮಕ್ಕಳಿಗೆ ದಾರಿದೀಪವಾಗಿದ್ದಾರೆ.

    Kanthi Shetty

    ಮುಂದಿನ ರಾಜಕೀಯ ಜೀವನ ಹೇಗಿರಲಿದೆ?: ನಿಜ ಹೇಳಬೇಕೆಂದರೆ, ರಾಜಕೀಯದಲ್ಲಿ ಗಾಡ್ ಫಾದರ್ ಇರಬೇಕು. ಬೇರು ಮಟ್ಟದಿಂದ ಬಂದಿರುವುದರಿಂದ ಯಾರೂ ಇಲ್ಲವಾಗಿದೆ. ಪಕ್ಷ ಹೇಳಿದ ಕೆಲಸವನ್ನು ಮಾಡುತ್ತಾ ಬಂದಿದ್ದೇನೆ ಅಷ್ಟೇ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಶೇ.33 ಮೀಸಲಾತಿ ನೀಡಿರುವುದರಿಂದ ಪಕ್ಷವು ನನ್ನನ್ನು ಗುರುತಿಸಲಿದೆ ಎಂಬ ನಂಬಿಕೆ ಇದೆ ಎನ್ನುತ್ತಾರೆ ಕಾಂತಿಶೆಟ್ಟಿ.

    ಜನರ ಆಶೋತ್ತರಗಳಿಗೆ ಮತ್ತು ಜನರ ಅಹವಾಲು, ಸಮಸ್ಯೆಗಳಿಗೆ ವಿಜಯವಾಣಿ ಸದಾ ಸ್ಪಂದಿಸಿ ಕಾಳಜಿ ವಹಿಸಲಿದೆ. ಇದಕ್ಕಾಗಿ ವಿಜಯವಾಣಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾವು ಮಾಡಿದ ಕೆಲಸ ಗುರುತಿಸಿ ‘ಬೆಂಗಳೂರು ರತ್ನ’ ಪ್ರಶಸ್ತಿಯನ್ನು ನೀಡಿ ಸಮಾಜಕ್ಕೆ ಮತ್ತಷ್ಟು ಕೆಲಸ ಮಾಡಬೇಕೆಂಬ ಹುಮ್ಮಸ್ಸು ತುಂಬಿದೆ.

    | ಕಾಂತಿ ಶೆಟ್ಟಿ ಸಮಾಜ ಸೇವಕಿ

    ಅಮ್ಮನೇ ಪ್ರೇರಣೆ

    ಅಮ್ಮ ಪ್ರತಿದಿನ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಕೆಲಸ ಮಾಡುತ್ತಾರೆ. ಅವರ ಎನರ್ಜಿಗೆ ನಾನು ಫಿದಾ ಆಗುವ ಜತೆಗೆ ಪ್ರೇರಣೆಯಾಗಿ ಪಡೆದಿದ್ದೇನೆ. ಏರೋಸ್ಪೇಸ್ ಇಂಜಿನಿಯರಿಂಗ್ ಆಗಿ ಅಮೆರಿಕ ಮೂಲದ ಕಂಪನಿಯಲ್ಲಿ ಕಾರ್ಯನಿರ್ವಹಿ ಸುತ್ತಿದ್ದೇನೆ. ಅಮ್ಮನ ಸಮಾಜಸೇವೆ ಗುಣವನ್ನು ನಾನು ಕೂಡ ಅಳವಡಿಸಿ ಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಗೋ ಶಾಲೆಯನ್ನು ತೆರೆಯಬೇಕೆಂಬ ಕನಸು ಹೊಂದಿದ್ದೇನೆ. ‘ಬೆಂಗಳೂರು ರತ್ನ’ ಪ್ರಶಸ್ತಿ ಬಂದಿರುವುದು ತುಂಬಾ ಖುಷಿಯಾಗುತ್ತಿದೆ.

    | ಲಿಪಿಕಾ ಎಂ. ಕಾಂತಿ ಶೆಟ್ಟಿ ಮಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts