More

    ಮಹಿಳಾ ಸಾಹಿತ್ಯದಲ್ಲಿ ನೋವು ಅಡಕವಾಗಿದೆ

    ನರಗುಂದ: ನೊಂದ ಜೀವವನ್ನು ನೊಂದವರೇ ಬಲ್ಲರು ಎಂಬಂತೆ ಹೆಣ್ಣು ತನ್ನ ಒಳ ಸಂಕಟಗಳನ್ನು ಸಾರ್ವಜನಿಕವಾಗಿ ಹೇಳಿಕೊಳ್ಳಲು ಸಾಧ್ಯವಾಗದಂತಹ ಅದೆಷ್ಟೋ ನೋವುಗಳು ಮಹಿಳಾ ಸಾಹಿತ್ಯದಲ್ಲಿ ಅಡಗಿವೆ ಎಂದು ಗದಗ ಜಿಲ್ಲಾ ಲೇಖಕಿಯರ ಸಂಘದ ಸದಸ್ಯೆ ಕಲಾಶ್ರೀ ಹಾದಿಮನಿ ಹೇಳಿದರು.

    ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕನ್ನಡೋತ್ಸವ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ಎಂಬ ವಿಷಯದ ಕುರಿತು ಅವರು ಮಾತನಾಡಿದರು. ಕನ್ನಡ ಮೊಟ್ಟ ಮೊದಲ ಕವಿಯಿತ್ರಿ 12 ನೇ ಶತಮಾನದ ಅಕ್ಕಮಹಾದೇವಿ ಅವರು ಅಂದಿನ ಸಮಾಜದಲ್ಲಿ ಬೇರೂರಿದ್ದ ಮೌಢ್ಯ, ಕಂದಾಚಾರ ಮತ್ತು ಜಾತೀಯತೆಯ ವಿರುದ್ಧ ತಮ್ಮ ಬರವಣಿಗೆಯ ಮೂಲಕ ದನಿಯೆತ್ತಿದ್ದರು. ಮಹಿಳೆಯರು ಪುರುಷರಷ್ಟೇ ಸರಿಸಮಾನ ಎಂದು ತೋರಿಸಿಕೊಟ್ಟು ಸಾವಿರಾರು ವರ್ಷಗಳ ಹಿಂದೆಯೇ ಸ್ತ್ರೀ ಸ್ವಾತಂತ್ರ್ಯ್ಕೆ ನಾಂದಿ ಹಾಡಿದ ಮಹಾನ್ ವೈರಾಗ್ಯನಿಧಿ ಹಾಗೂ ಅನುಭವ ಜ್ಞಾನರತ್ನ ಅಕ್ಕಮಹಾದೇವಿ ಇತಿಹಾಸದ ಪುಟಗಳಲ್ಲಿ ಎಂದಿಗೂ ಅಜರಾಮರ ಎಂದರು.

    ಶಿಕ್ಷಕಿ ಜ್ಯೋತಿ ಕಲ್ಲಾಪೂರ ಮಾತನಾಡಿ, ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳ ಬಾಯಿಂದ ಬರುವ ಜಾನಪದ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯವೂ ಶ್ರೀಮಂತವಾಗಿದೆ. ಅಕ್ಕ ಮಹಾದೇವಿಯಿಂದ ಹಿಡಿದು ಈವರೆಗಿನ ಎಲ್ಲ ಮಹಿಳಾ ಸಾಹಿತಿಗಳು ತಮ್ಮ ಕೃತಿಗಳಲ್ಲಿ ಸ್ತ್ರೀ ಸಮಾನತೆಯನ್ನು ಪ್ರತಿಪಾದಿಸಿದ್ದಾರೆ. 12 ನೇ ಶತಮಾನದ ವಚನ ಸಾಹಿತ್ಯ ಮಹಿಳಾ ಸಾಹಿತ್ಯಕ್ಕೆ ನಾಂದಿ ಹಾಡಿದರೆ, 20 ನೇ ಶತಮಾನದ ಸಾಹಿತ್ಯ ಅದಕ್ಕೆ ಹೊಸ ಮೆರುಗು ತಂದು ಕೊಟ್ಟಿದೆ. ಮಹಿಳೆಯರು ಎದುರಿಸುತ್ತಿರುವ ಸಾಮಾಜಿಕ, ಆರ್ಥಿಕ ಸವಾಲುಗಳ ಬಗ್ಗೆ ಹಲವಾರು ಆಯಾಮಗಳಲ್ಲಿ ಚಿಂತನ-ಮಂಥನ ನಡೆಬೇಕಿದೆ ಎಂದು ತಿಳಿಸಿದರು.

    ಶಾಂತಲಿಂಗ ಶ್ರೀಗಳು, ಕೊಣ್ಣೂರಿನ ಅನ್ನಪೂರ್ಣಾ ಕರಿಗಾರ ಮಾತನಾಡಿದರು. ಸಿದ್ದಲಿಂಗಮ್ಮ ಗದ್ದನಕೇರಿ, ರಮ್ಯಾ ವೆಂಕಟರೆಡ್ಡಿಯವರ, ಶ್ವೇತಾ ಜಿನಗಾ, ಪ್ರೊ. ಪಿ.ಎಸ್. ಅಣ್ಣಿಗೇರಿ, ಶಿಕ್ಷಕ ದೇವರಾಜ ಗದ್ದನಕೇರಿ, ನಾಗಪ್ಪ ಮಣ್ಣೇರಿ, ಕೆ.ಟಿ. ಪಾಟೀಲ ಉಪಸ್ಥಿತರಿದ್ದರು. ರೇಣುಕಾ ನರಸಾಪೂರ ಕಾರ್ಯಕ್ರಮ ನಿರ್ವಹಿಸಿದರು.

    ಹೆಣ್ಣು ಭ್ರೂಣಹತ್ಯೆ ತೊಲಗಲಿ: ಸರ್ಕಾರಿ ಶಾಲೆಗಳನ್ನು ಮುಚ್ಚುವುದರಿಂದ ನೇರವಾಗಿ ಹೆಣ್ಣು ಮಕ್ಕಳ ಮೇಲೆಯೇ ಸಾಕಷ್ಟು ಪರಿಣಾಮ ಬೀರುತ್ತದೆ. ಇಂದಿನ ಸಮಾಜದಲ್ಲಿ ಮಹಿಳೆಯರನ್ನು ಕೇವಲ ಒಂದು ವಸ್ತುವನ್ನಾಗಿ ನೋಡಲಾಗುತ್ತಿದೆ. ಸರ್ಕಾರ ಅದೆಷ್ಟೇ ಕಾನೂನು ಜಾರಿಗೆ ತಂದರೂ, ಹೆಣ್ಣು ಭ್ರೂಣಹತ್ಯೆ ಸದ್ದಿಲ್ಲದೆ ನಡೆಯುತ್ತಿದೆ. ಇದಕ್ಕೆ ಸರ್ಕಾರ ತಿಲಾಂಜಲಿ ಇಡಬೇಕು ಎಂದು ಲೇಖಕಿ ಕಲಾಶ್ರೀ ಹಾದಿಮನಿ ಹೇಳೀದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts