More

    ಸಮೃದ್ಧ ಮಾಹಿತಿಯತ್ತ ಕನ್ನಡ ವಿಕಿಪೀಡಿಯಾ

    ವೇಣುವಿನೋದ್ ಕೆ.ಎಸ್.

    ಮಂಗಳೂರು: ಇಲ್ಲಿ ಬರಹಗಾರನಿಗೆ ಹೆಸರು ಸಿಗದು, ಹಣವೂ ಸಿಗದು, ಆದರೂ ಕನ್ನಡದ ಮಹತ್ವದ ಸೇವೆ ಮಾಡುತ್ತಿರುವುದು ಕನ್ನಡ ವಿಕಿಪೀಡಿಯಾ. ಸಮೃದ್ಧ ಮಾಹಿತಿಯನ್ನು ಸುಲಭವಾಗಿ ಅಂತರ್ಜಾಲದಲ್ಲಿ ಹರಡುವುದು ವಿಕಿಪೀಡಿಯಾ ಹೆಗ್ಗಳಿಕೆ. ಇದು ಜನರಿಂದ ಜನರಿಗಾಗಿ ಜನರೇ ನಡೆಸುವ ಲಾಭರಹಿತ ವ್ಯವಸ್ಥೆ. ಸುಮಾರು 300 ಭಾಷೆಗಳಲ್ಲಿ ಮಾಹಿತಿ ವಸ್ತು ಲಭ್ಯ. ಅದರಲ್ಲೊಂದು ಕನ್ನಡ ಕೂಡ. 2003 ಜೂನ್ 12ರಂದು ಶುರುವಾದ ಕನ್ನಡ ವಿಕಿಪೀಡಿಯಾ ವಾರ್ಷಿಕೋತ್ಸವ ಇಂದು.

    ಪ್ರಸ್ತುತ ಹಲವಾರು ಸ್ವಯಂಸೇವಕರು ಮುಂದಾಗಿ ಕನ್ನಡ ವಿಕಿಯ ಬೆನ್ನೆಲುಬಾಗಿ ಅಂತರ್ಜಾಲದಲ್ಲಿ ಕನ್ನಡದಲ್ಲಿ ಮಾಹಿತಿ ಜಾಲಾಡುವವರಿಗೆ ನೆರವಾಗುತ್ತಿದ್ದಾರೆ. ಒಂದು ದಶಕದ ಕಾಲ 2013ರ ವರೆಗೂ ಕುಂಟುತ್ತಾ ಸಾಗುತ್ತಿದ್ದ ಕನ್ನಡ ವಿಕಿ ಆ ಬಳಿಕ ಚುರುಕು ಪಡೆಯಿತು. ಸೆಂಟರ್ ಫಾರ್ ಇಂಟರ್‌ನೆಟ್ ಆ್ಯಂಡ್ ಸೊಸೈಟಿ ಸಂಸ್ಥೆ ವಿಕಿಪೀಡಿಯಾ ಫೌಂಡೇಶನ್‌ನ ಅನುದಾನ ಪಡೆದು ಕೆಲಸ ನಡೆಸಿತು. ಅದರಲ್ಲಿ ಸೇರಿದ್ದ ಮಾಹಿತಿ ತಂತ್ರಜ್ಞಾನ ತಜ್ಞ, ಕನ್ನಡಿಗ ಡಾ.ಯು.ಬಿ.ಪವನಜ ನಾಲ್ಕು ವರ್ಷ ಕನ್ನಡ ವಿಕಿಪೀಡಿಯಾ ಅಭಿವೃದ್ಧಿಗೆ ಶ್ರಮಿಸಿದರು. ಆ ಬಳಿಕ ಸಂಸ್ಥೆಯನ್ನು ಬಿಟ್ಟರೂ ಸಂಪಾದನೆ ರಹಿತವಾಗಿ ಕನ್ನಡ ವಿಕಿಪೀಡಿಯಾ ಸಮೃದ್ಧಿಗಾಗಿ ಅಲ್ಲಲ್ಲಿ ಸಂಪಾದನೋತ್ಸವ ಹಮ್ಮಿಕೊಳ್ಳುತ್ತಾ, ಅನೇಕ ವೃತ್ತಿಪರ ಸ್ವಯಂಸೇವಕರನ್ನು ಹಿಡಿದು ವಿಕಿಪೀಡಿಯಾ ಸಮೃದ್ಧಗೊಳಿಸುತ್ತಿದ್ದಾರೆ.

    ವಿಕಿಪೀಡಿಯಾಕ್ಕೆ ಮಾಹಿತಿ ತುಂಬುವುದಕ್ಕೆ ತರಬೇತಿ ಬೇಕಾಗುತ್ತದೆ, ಅದಕ್ಕೆ ಒಂದು ಶಿಷ್ಟತೆ ಇದೆ, ಹೊಗಳುವ-ತೆಗಳುವ ಭಾಷೆಯಲ್ಲ, ಅಂತಹ ತರಬೇತಿಯನ್ನು ರಾಜ್ಯಾದ್ಯಂತ ನೀಡಲಾಗುತ್ತಿದೆ.
    ಯಾರು ಬೇಕಾದರೂ ಇದರಲ್ಲಿ ಸಂಪಾದಕರಾಗಿ ಲೇಖನ ಸೇರಿಸಬಹುದು. ಇರುವ ಲೇಖನ ತಿದ್ದಬಹುದು. ಇನ್ನೊಬ್ಬರು ಬರೆದ ಲೇಖನದಲ್ಲಿ ಏನಾದರೂ ತಪ್ಪುಗಳು ಕಂಡುಬಂದರೆ ಅಥವಾ ಮಾಹಿತಿ ಕೊರತೆ ಇದ್ದಲ್ಲಿ ಆ ಮಾಹಿತಿ ನಿಮ್ಮಲ್ಲಿ ಇದ್ದಲ್ಲಿ ಅದನ್ನು ತಿದ್ದಬಹುದು ಮತ್ತು ಹೆಚ್ಚಿನ ಮಾಹಿತಿ ಸೇರಿಸಬಹುದು. ನಮಗೆ ಗೊತ್ತಿರುವ ವಿಚಾರ ವಿಕಿಪೀಡಿಯಾದಲ್ಲಿ ಇಲ್ಲವಾದರೆ ನಾವೇ ಬರೆದು ಸೇರಿಸಬಹುದು. ಆ ಮೂಲಕ ಕನ್ನಡ ಬೆಳೆಯುತ್ತದೆ.
    2003ರಿಂದ 2013ರ ವರೆಗೆ ಕನ್ನಡ ವಿಕಿಪೀಡಿಯಾದಲ್ಲಿ ಸುಮಾರು 12 ಸಾವಿರ ಲೇಖನಗಳಿದ್ದರೆ, ಆ ಬಳಿಕ ಇದುವರೆಗೆ 7 ವರ್ಷಗಳಲ್ಲಿ 14 ಸಾವಿರ ಲೇಖನಗಳು ಸೇರ್ಪಡೆಯಾದವು, ಹೀಗೆ ಒಟ್ಟು 26 ಸಾವಿರ ಲೇಖನಗಳು ಲಭ್ಯವಿವೆ. ಕನ್ನಡಕ್ಕಿಂತ ಒಂದು ವರ್ಷ ಮೊದಲು ಪ್ರಾರಂಭಗೊಂಡ ಮಲಯಾಳಂ ವಿಕಿಪೀಡಿಯಾದಲ್ಲಿ ಸದ್ಯ 70 ಸಾವಿರಕ್ಕೂ ಮಿಕ್ಕಿ ಲೇಖನಗಳಿದ್ದರೆ ತಮಿಳಿನಲ್ಲಿ 1.40 ಲಕ್ಷದಷ್ಟು ಲೇಖನಗಳಿವೆ ಎನ್ನುವುದು ಉಲ್ಲೇಖನೀಯ.

    ಕವಿಗಳು, ಸಾಹಿತಿಗಳಿಗೆ ಕತೆ ಕವನ ಲೇಖನಗಳಿಗೆ ಸಂಭಾವನೆ ಇದೆ. ಆದರೆ ವಿಕಿಪೀಡಿಯಾದಲ್ಲಿ ಕನ್ನಡವನ್ನು ಶ್ರೀಮಂತಗೊಳಿಸಲು ಸ್ವಯಂಸೇವಕರಾಗಿ ಅನೇಕ ಮಂದಿ ಅನಾಮಧೇಯರಾಗಿ ದುಡಿಯುತ್ತಿದ್ದಾರೆ.
    -ಡಾ.ಯು.ಬಿ.ಪವನಜ, ವಿಕಿಪೀಡಿಯಾ ಹಿರಿಯ ಸಂಪಾದಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts