More

    ಕನ್ನಡ ವಿಶ್ವವಿದ್ಯಾಲಯ ತಾತ್ಕಾಲಿಕ ಸಿಬ್ಬಂದಿ ವೇತನ ದುರ್ಬಳಕೆ ?, ಲೆಕ್ಕಕ್ಕೆ ಸಿಗದ 70 ಲಕ್ಷ ರೂ.

    ಪ್ರಭು ಹಂಪಾಪಟ್ಟಣ ಹೊಸಪೇಟೆ

    ಕನ್ನಡ ವಿಶ್ವವಿದ್ಯಾಲಯದ ತಾತ್ಕಾಲಿಕ ಅಧ್ಯಾಪಕರು, ಬೋಧಕತೇರ ಸಿಬ್ಬಂದಿ ವೇತನಕ್ಕಾಗಿ ಸರ್ಕಾರ ಬಿಡುಗಡೆ ಮಾಡಿದ್ದ 3.52 ಕೋಟಿ ರೂ.ಗಳಲ್ಲಿ ಲೆಕ್ಕಕ್ಕೆ ಸಿಗದ 70 ಲಕ್ಷ ರೂ. ಬಗ್ಗೆ ಹಲವು ಅನುಮಾನ ವ್ಯಕ್ತವಾಗಿದೆ.

    ವಿವಿಯಲ್ಲಿ 18 ತಾತ್ಕಾಲಿಕ ಅಧ್ಯಾಪಕರು, 85 ಬೋಧಕೇತರ ಸಿಬ್ಬಂದಿ, 57 ಭದ್ರತೆ ಮತ್ತು ಸ್ವಚ್ಛತಾ ಸಿಬ್ಬಂದಿ ಸೇರಿದಂತೆ 160 ಜನರಿದ್ದಾರೆ. ಕಳೆದ ಸಾಲಿನ ಬಾಕಿ ವೇತನ ಸೇರಿ ಮುಂದಿನ ಆರ್ಥಿಕ ವರ್ಷದ ವೇತನಕ್ಕಾಗಿಯೇ ಸರ್ಕಾರ 2020-21ರಲ್ಲಿ 3.52 ಕೋಟಿ. ರೂ. ವಿಶೇಷ ಅನುದಾನ ಬಿಡುಗಡೆ ಮಾಡಿತ್ತು. ಇದರಲ್ಲಿ ಅಧ್ಯಾಪಕರಿಗೆ ಫೆಬ್ರವರಿವರೆಗೆ ಹಾಗೂ ಬೋಧಕೇತರ ಸಿಬ್ಬಂದಿಗೆ ಮಾರ್ಚ್‌ವರೆಗೆ ವೇತನ ನೀಡಲಾಗಿದೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ವಾರ್ಷಿಕ 1.60 ಕೋಟಿ ರೂ., ಹಾಗೂ ಭದ್ರತೆ ಮತ್ತು ಸ್ವಚ್ಛತಾ ಸಿಬ್ಬಂದಿಗೆ 1.21 ಕೋಟಿ ರೂ. ಸಂಬಳ ನೀಡಲಾಗಿದೆ. ಒಟ್ಟು 2.81 ಕೋಟಿ ರೂ. ಖರ್ಚಾಗಿದೆ. ಈ ಪ್ರಕಾರ 3.52 ಕೋಟಿ ರೂ.ನಲ್ಲಿ 70 ಲಕ್ಷ ರೂ. ಉಳಿಯಬೇಕು. ಈ ಹಣ ಯಾವುದಕ್ಕೆ ಖರ್ಚಾಗಿದೆ ಅಥವಾ ಉಳಿದಿದೆಯೇ ಎಂಬ ಮಾಹಿತಿ ಇಲ್ಲ. ಆದರೆ, 3.10 ಕೋಟಿ ರೂ. ನೀಡಿರುವುದಾಗಿ ಹೇಳಿ ತಪ್ಪು ಲೆಕ್ಕ ನೀಡಲಾಗಿದೆ. ಉಳಿದ ಹಣ ಎಲ್ಲಿ ಹೋಯಿತು ಎಂಬುದನ್ನು ದಾಖಲೆ ಸಮೇತ ಸ್ಪಷ್ಟನೆ ನೀಡಬೇಕೆಂದು ತಾತ್ಕಾಲಿಕ ಸಿಬ್ಬಂದಿ ಪಟ್ಟು ಹಿಡಿದ್ದಾರೆ.

    ಗೊಂದಲದ ಹೇಳಿಕೆ: ಎರಡು ದಿನದ ಹಿಂದೆ ಬೋಧಕ, ಬೋಧಕೇತರ ಸಿಬ್ಬಂದಿ ಧರಣಿ ನಡೆಸಿದ ಸಂದರ್ಭ ತಾತ್ಕಾಲಿಕ ಸಿಬ್ಬಂದಿಗೆ ಪ್ರತ್ಯೇಕ ಅನುದಾನ ಬಿಡುಗಡೆಯಾಗಿದ್ದರೂ ಸಿಬ್ಬಂದಿಗೆ ಏಕೆ ನೀಡಿಲ್ಲವೆಂದು ಕುಲಪತಿಯನ್ನು ದೂರ ಶಿಕ್ಷಣ ವಿಭಾಗದ ಅಧೀಕ್ಷಕ ಶಿವಕುಮಾರ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ.ಸ.ಚಿ.ರಮೇಶ್, ಈಗಾಗಲೇ 3.10 ಕೋಟಿ. ರೂ. ಪಾವತಿಸಲಾಗಿದೆ. ಉಳಿದ ಹಣ ವಿದ್ಯುತ್ ಬಿಲ್ ಪಾವತಿಸಲಾಗಿದೆ ಎಂದು ಉತ್ತರಿಸಿದರು. ಇದೇ ವೇಳೆ ಹಣಕಾಸು ಅಧಿಕಾರಿ ಆ ಹಣ ವಿದ್ಯುತ್ ಬಿಲ್‌ಗೆ ಬಳಸಿಲ್ಲ, ಅನುದಾನ ಬರುವುದಕ್ಕೂ ಮುಂಚೆ ತಾತ್ಕಾಲಿಕ ಸಿಬ್ಬಂದಿಗೆ ಅಭಿವೃದ್ಧಿ ಅನುದಾನದಿಂದ ನೀಡಿದ್ದ ನಾಲ್ಕು ತಿಂಗಳ ವೇತನಕ್ಕೆ ಬಳಸಿಕೊಳ್ಳಲಾಗಿದೆ ಎಂದು ಹೇಳಿಕೆ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಪ್ರತ್ಯೇಕ ಅನುದಾನ ಬರುವುದಕ್ಕೂ ಮುನ್ನ ವಿವಿ ಅಭಿವೃದ್ಧಿ ಅನುದಾನದಲ್ಲಿ ತಾತ್ಕಾಲಿಕ ಸಿಬ್ಬಂದಿಗೆ ನಾಲ್ಕು ತಿಂಗಳ ವೇತನ ನೀಡಲಾಗಿತ್ತು. ಇದನ್ನು ಸರಿದೂಗಿಸಲು ನಾಲ್ಕು ತಿಂಗಳು ನೀಡಲಾಗಿದ್ದ ವೇತನದ ಹಣವನ್ನು ಅಭಿವೃದ್ಧಿ ಸಂಪನ್ಮೂಲಕ್ಕೆ ವರ್ಗಾಯಿಸಲಾಗಿದೆ.
    | ಡಾ.ರಮೇಶ್ ನಾಯಕ ಹಣಕಾಸು ಅಧಿಕಾರಿ, ಕನ್ನಡ ವಿವಿ

    ವಿವಿಯ ತಾತ್ಕಾಲಿಕ ಸಿಬ್ಬಂದಿ ವೇತನಕ್ಕಾಗಿ ಸರ್ಕಾರದಿಂದ ಬಿಡುಗಡೆಯಾದ 3.52 ಕೋಟಿ ರೂ.ಅನ್ನು ಅವರ ವೇತನಕ್ಕಾಗಿಯೇ ಬಳಸಲಾಗಿದೆ. ಈ ಬಗ್ಗೆ ದಾಖಲೆಗಳನ್ನು ನ.20 ರಂದು ಬೆಂಗಳೂರಿನಲ್ಲಿ ನಡೆಯುವ ಸಿಂಡಿಕೇಟ್ ಸಭೆಗೆ ಹಾಗೂ ಸರ್ಕಾರಕ್ಕೂ ನೀಡುತ್ತೇನೆ.
    | ಡಾ.ಸ.ಚಿ.ರಮೇಶ ಕುಲಪತಿ, ಕನ್ನಡ ವಿವಿ

    ವೇತನಕ್ಕಾಗಿ ಸರ್ಕಾರ 3.52 ಕೋಟಿ ರೂ. ಬಿಡುಗಡೆ ಮಾಡಿದ್ದು, ಆ ವೇತನಾನುದಾನದ ಬಳಕೆ ಪ್ರಮಾಣ ಪತ್ರ ನೀಡುವಂತೆ ಉನ್ನತ ಶಿಕ್ಷಣ ಇಲಾಖೆಯಿಂದ ವಿವಿಗೆ ಕೇಳಲಾಗಿದೆ. ಇದರ ಬಳಿಕ ಖಚಿತತೆ ತಿಳಿಯಲಿದೆ.
    | ಹೆಸರು ಹೇಳಲಿಚ್ಛಿಸದ ತಾತ್ಕಾಲಿಕ ನೌಕರ ಕನ್ನಡ ವಿವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts