More

    ಕನ್ನಡ ನಾಮಫಲಕ- ನಗರಸಭೆಯಿಂದ 235 ನೋಟಿಸ್‌ ಜಾರಿ

    ಕಾರವಾರ: ಸರ್ಕಾರಿ ಹಾಗೂ ಖಾಸಗಿ ವ್ಯಾಪಾರ ಮಳಿಗೆಗಳು, ಸಂಸ್ಥೆಗಳು ಸೇರಿ ಎಲ್ಲ ರೀತಿಯ ನಾಮ ಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಭಾಷೆ ಇರಬೇಕು ಎಂದು ಕಾಯ್ದೆಯನ್ನು ರಾಜ್ಯ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿದ್ದು, ಸ್ಥಳೀಯ ಸಂಸ್ಥೆಗಳು ಅದನ್ನು ಜಾರಿ ಮಾಡಲು ಮುಂದಾಗಿವೆ.
    ಕಾರವಾರ ನಗರಸಭೆಯು ಈ ನಿಯಮದಂತೆ ನಾಮಫಲಕಗಳನ್ನು ಅಳವಡಿಸುವಂತೆ ನಗರದ 235 ಕ್ಕೂ ಅಧಿಕ ಅಂಗಡಿ, ಬ್ಯಾಂಕ್ ಹಾಗೂ ಇತರ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ನಗರಸಭೆಯ ಕಸದ ವಾಹನಗಳಲ್ಲಿ ಧ್ವನಿ ಪ್ರಚಾರ ಮಾಡಲಾಗಿದೆ. ಅದರಂತೆ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿವೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಗ್ರಾಪಂಗಳು ಈ ಕಾಯ್ದೆ ಜಾರಿಯ ಜವಾಬ್ದಾರಿ ಹೊತ್ತಿದ್ದು, ಇನ್ನಷ್ಟೇ ಜಾರಿಯಾಗಬೇಕಿದೆ. ಕಾಯ್ದೆಯನ್ನು ಶೀಘ್ರ ಜಾರಿ ಮಾಡುವಂತೆ ಕರವೇ ಈಗಾಗಲೇ ಪ್ರತಿಭಟನೆ ನಡೆಸಿತ್ತು.
    ಜಾರಿ ಮಾಡದಿದ್ದರೆ ದಂಡ:
    ಕನ್ನಡ ಭಾಷಾ ಸಮಗ್ರ ಅಭಿವೃದ್ದಿ ಅಽನಿಯಮ 2024 ಎಂಬ ಕಾಯ್ದೆ ಇದಾಗಿದ್ದು, ಪ್ರತಿ ಜಿಲ್ಲೆಯಲ್ಲಿ ನಾಮಫಲಕಗಳ ನಿಯಮ ಜಾರಿ ಮಾಡುವ ಜವಾಬ್ದಾರಿಯನ್ನು ಜಿಲ್ಲಾ ಮಟ್ಟದ ಕನ್ನಡ ಭಾಷಾ ಸಮಗ್ರ ಅಭಿವೃದ್ದಿ ಸಮಿತಿಗೆ ವಹಿಸಲಾಗಿದೆ. ಜಿಲ್ಲಾಧಿಕಾರಿ ಅದರ ಅಧ್ಯಕ್ಷೆಯಾಗಿರುವರು.
    ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಇಲ್ಲದಿದ್ದಲ್ಲಿ ಸಂಬಂಧಪಟ್ಟ ಸಂಸ್ಥೆಯ ಮಾಲೀಕ ಅಥವಾ ಅದರ ಉಸ್ತುವಾರಿ ವ್ಯಕ್ತಿಗಳು ಮೊದಲನೆಯ ಅಪರಾಧಕ್ಕಾಗಿ 5 ಸಾವಿರ ರೂ.ವರೆಗೆ ದಂಡ ವಿಧಿಸಬಹುದಾಗಿದೆ. ಎರಡನೇಯ ಅಪರಾಧಕ್ಕೆ 10 ಸಾವಿರ ರೂ. ನಂತರ ಪ್ರತಿಯೊಂದು ಅಪರಾಧಕ್ಕೆ ತಲಾ 20 ಸಾವಿರ ರೂ.ವರೆಗೆ ವಿಸ್ತರಿಸಬಹುದಾದ ದಂಡ ವಿಧಿಸಬಹುದು ಮತ್ತು ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದು ಕಾಯ್ದೆ ಹೇಳುತ್ತದೆ.
    ನಾಮಫಲಕ ಮಾತ್ರವಲ್ಲ.
    ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಸಂಸ್ಥೆಗಳು, ಟ್ರಸ್ಟ್ ಸೇರಿ ಎಲ್ಲ ಹೆಸರನ್ನು ಪ್ರದರ್ಶಿಸುವ ಫಲಕಗಳ ಮೇಲಿನ ಶೇ. 60 ಭಾಗವು ಕನ್ನಡದಲ್ಲಿ ಇರತಕ್ಕದ್ದು ಮತ್ತು ಕೆಳಗಿನ ಶೇ.40 ರಷ್ಟು ಭಾಗವು ಬೇರೆ ಯಾವುದೇ ಭಾಷೆಯಲ್ಲಿ ಇರಬಹುದು ಎಂದು ಕಾಯ್ದೆಯಲ್ಲಿ ತಿಳಿಸಲಾಗಿದೆ.
    ಅಲ್ಲದೆ, ಸರ್ಕಾರಿ, ಅರೆ ಸರ್ಕಾರಿ ಇಲಾಖೆಗಳು ಉದ್ಯಮಗಳು, ಶೈಕ್ಷಣಿಕ ಸಂಸ್ಥೆಗಳು, ಬ್ಯಾಂಕ್‌ಗಳು, ಇತರ ಹಣಕಾಸು ಸಂಸ್ಥೆಗಳು, ಖಾಸಗಿ ಕೈಗಾರಿಕೆಗಳು, ಮತ್ತು ವಿಶ್ವವಿದ್ಯಾಲಯಗಳ ಫಲಕಗಳಲ್ಲಿರುವ ಹೆಸರುಗಳು, ಮತ್ತು ಆ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ಪದನಾಮ ಸೂಚಿಸುವ ಫಲಕಗಳು ಕನ್ನಡದಲ್ಲಿ ಇರತಕ್ಕದ್ದು. ರಸ್ತೆಗಳು ಮತ್ತು ಬಡಾವಣೆ ಪ್ರದೇಶಗಳ ಹೆಸರುಗಳೂ ಸೇರಿದಂತೆ ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳ ಮತ್ತು ಸ್ಥಳೀಯ ಪ್ರಾಧಿಕಾರಗಳ ಮೇಲ್ವಿಚಾರಣೆಯಲ್ಲಿ ಹಾಕಲಾಗಿರುವ ಫಲಕಗಳ ಮೇಲೆ ಪ್ರದರ್ಶಿಸಲಾಗುವ ವಿವರಗಳು ಪ್ರಮುಖವಾಗಿ ಕನ್ನಡದಲ್ಲಿ ಇರತಕ್ಕದ್ದು ಎಂದು ಸೂಚಿಸಿದ್ದಾರೆ.
    ಸಾದ್ಯವಾದಷ್ಟು ಮಟ್ಟಿಗೆ ರಾಜ್ಯದೊಳಗೆ ತಯಾರಿಸಿದ ಮತ್ತು ಮಾರಾಟವಾಗುವ ಎಲ್ಲ ಕೈಗಾರಿಕಾ ಮತ್ತು ಇತರ ಗ್ರಾಹಕ ಉತ್ಪನ್ನಗಳ ಹೆಸರು ಮತ್ತು ಅವುಗಳ ಬಳಕೆಯ ಕುರಿತಾದ ನಿರ್ದೇಶನಗಳು ಇತರ ಭಾಷೆಯ ಜತೆಗೆ ಕನ್ನಡದಲ್ಲಿ ಇರತಕ್ಕದ್ದು, ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾದ ಜಾಹೀರಾತು ಮತ್ತು ಸೂಚನೆಗಳನ್ನು ಪ್ರದರ್ಶಿಸುವ ಎಲ್ಲ ಫಲಕಗಳಲ್ಲಿ ವಿಷಯಗಳ ನಿಗದಿತ ಶೇಕಡಾವಾರು ಪ್ರಮಾಣವು ಕನ್ನಡ ಭಾಷೆಯಲ್ಲಿರತಕ್ಕದ್ದು ಎಂದು ಕಾಯ್ದೆಯಲ್ಲಿ ಹೇಳಲಾಗಿದೆ.

    ಇದನ್ನೂ ಓದಿ: ವಿಜಯವಾಣಿಯ ವಿಶೇಷ ಪುರವಣಿ “ಶಿರಸಿಯ ಸಿರಿದೇವಿ” ಬಿಡುಗಡೆ


    ಕನ್ನಡ ಭಾಷಾ ಸಮಗ್ರ ಅಭಿವೃದ್ದಿ ಅಧಿನಿಯಮ ಜಾರಿಗೆ ಈಗಾಗಲೇ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಮೊದಲು ಅವರು ಜಾಗೃತಿ ಮೂಡಿಸಲಿದ್ದಾರೆ. ನಂತರ ದಂಡ ವಿಧಿಸುವ ಕ್ರಮ ವಹಿಸಲಾಗುವುದು. ಎಲ್ಲ ವ್ಯಾಪಾರಸ್ಥರು, ಸಂಸ್ಥೆಗಳ ಮುಖ್ಯಸ್ಥರು ಕಾಯ್ದೆಯನ್ನು ಅರ್ಥ ಮಾಡಿಕೊಂಡು ಜಾರಿ ಮಾಡಬೇಕು.
    ಗಂಗೂಬಾಯಿ ಮಾನಕರ್
    ಜಿಲ್ಲಾಧಿಕಾರಿ, ಉತ್ತರ ಕನ್ನಡ
    …………

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts