More

    ಇಂಗ್ಲಿಷ್ ಫಲಕಗಳ ವಿರುದ್ಧ ಸಮರ ಸಾರಿದ ಕನ್ನಡ ಹೋರಾಟಗಾರರು

    ಬೆಂಗಳೂರು: ಮಾಲ್‌ಗಳು ಹಾಗೂ ವಾಣಿಜ್ಯ ಮಳಿಗೆಗಳ ಮುಂಭಾಗ ಅಳವಡಿಸಿರುವ ಇಂಗ್ಲಿಷ್ ನಾಮಫಲಕಗಳನ್ನು ಧ್ವಂಸಗೊಳಿಸುವ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ಸಂದರ್ಭದಲ್ಲಿ ಕೆಲವೆಡೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಬಿರುಸಿನ ಮಾತಿನ ಚಕಮಕಿ ಏರ್ಪಟ್ಟ ಹಿನ್ನೆಲೆಯಲ್ಲಿ ಆತಂಕದ ಪರಿಸ್ಥಿತಿ ಉದ್ಬವಿಸಿತ್ತು.

    ರಾಜ್ಯದಲ್ಲಿ ಕನ್ನಡ ನಾಮಫಲಕ ಕಡ್ಡಾಯ, ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರವೇ ಅಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ಬೆಂ.ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಟೋಲ್ ಸಮೀಪದಿಂದ ಬೆಳಗ್ಗೆ ಬೃಹತ್ ಪ್ರತಿಭಟನಾ ಜಾಥ ಆರಂಭವಾಯಿತು. ಕಾಲ್ನಡಿಗೆ ಜಾಥ ಮುಂದುವರಿದಂತೆ ಪ್ರತಿಭಟನೆಯ ಕಾವು ಏರತೊಡಗಿತು. ಕರವೇ ಕಾರ್ಯಕರ್ತರ ಕಿಚ್ಚುನಿಂದಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕೆಲ ಕಾಲ ಆತಂಕ ಉಂಟಾಯಿತು. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಹರಸಾಹಸಪಟ್ಟರು. ರ್ಯಾಲಿಯಿಂದಾಗಿ ವಾಹನ ಸಂಚಾರ ಅಸ್ತವ್ಯಸ್ಥಗೊಂಡು ಸವಾರರು ಪರದಾಡುವಂತಾಯಿತು. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಕರವೇ ಮುಖಂಡರನ್ನು ಬಂಧಿಸಿ ಬಿಎಂಟಿಸಿ ಬಸ್‌ನಲ್ಲಿ ಕರೆತಂದು ತಹಬಂದಿಗೆ ತರುವಲ್ಲಿ ಸಫಲವಾದರು.

    ಎಲ್ಲಿ ಏನಾಯ್ತು?
    ಮುಂಜಾನೆ ಸಾದಹಳ್ಳಿ ಟೋಲ್ ಬಳಿ ಕರವೇ ಕಾರ್ಯಕರ್ತರು ಜಮಾವಣೆಗೊಂಡು ಅಲ್ಲಿಂದಲೇ ಆಂಗ್ಲ ನಾಮಕಗಳನ್ನು ಧ್ವಂಸಗೊಳಿಸಲು ಆರಂಭಿಸಿದರು. ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ, ನಾಕಾಬಂಧಿಯಿಂದ ಕರವೇ ಕಾರ್ಯಕರ್ತರನ್ನು ತಡೆಯಲು ಪ್ರಯತ್ನಿಸಿದರು. ಈ ವೇಳೆ ಮಾತಿನ ಚಕಮಕಿ ನಡೆದು ತಳ್ಳಾಟ ನೂಕಾಟವೂ ನಡೆಯಿತು. ಟೋಲ್ ಸಮೀಪದಲ್ಲಿನ ಅಂಗಡಿ, ಹೋಟೆಲ್‌ಗಳ ಮುಂದಿದ್ದ ಆಂಗ್ಲ ಭಾಷೆಯ ನಾಮಫಲಕಗಳು ಧ್ವಂಸಗೊಂಡವು. ಯಲಹಂಕದ ಮಾಲ್ ಆ್ ಏಷಿಯಾ ಮುಂಭಾಗ ಕರವೇ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬ್ಯಾರಿಕೇಡ್ ತಳ್ಳಿ ಮಾಲ್‌ಗೆ ನುಗ್ಗಲೆತ್ನಿಸಿದರು. ಈ ವೇಳೆ ಖಾಕಿ ಪಡೆ ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ರ್ಯಾಲಿ ವೇಳೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಡಿಸಿಪಿ ಲಕ್ಷ್ಮೀಪ್ರಸಾದ್ ನೇತೃತ್ವದಲ್ಲಿ ಎಸಿಪಿ, 6 ಇನ್ಸ್‌ಪೆಕ್ಟರ್, 12 ಸಬ್ ಇನ್ಸ್‌ಪೆಕ್ಟರ್ ಸೇರಿ 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಕರವೇ ಕಾರ್ಯಕರ್ತರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.

    ಬಾಯಿಗೆ ಬಂದಂತೆ ಮಾತನಾಡುವವರಿಗೆ ಬೀಗ ಹಾಕಿ ; ಸದಾನಂದಗೌಡ ಸಲಹೆ

    ಪೊಲೀಸ್ ಬಂದೋಬಸ್ತ್
    ಟ್ರ್ಯಾಕ್ಟರ್‌ಗಳಲ್ಲಿ ಬ್ಯಾರಿಕೇಡ್ ತರಿಸಿದ ಪೊಲೀಸರು, ವಿಮಾನ ನಿಲ್ದಾಣದ ಟೋಲ್‌ನಿಂದ 1 ಕಿ.ಮೀ ದೂರದವರೆಗೂ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ವಿವಿಧ ಭಾಗದಿಂದ ಜಮಾವಣೆಗೊಂಡ ಕರವೇ ಕಾರ್ಯಕರ್ತರನ್ನು ನಿಯಂತ್ರಿಸಲು ಟೋಲ್ ಬಳಿ ಕೆಲ ಸಮಯ ಏಕ ಮುಖ ಸಂಚಾರ ವ್ಯವಸ್ಥೆ ಮಾಡಲಾಯಿತು. ಇದರಿಂದ ಸಂಚಾರ ಅಸ್ತವ್ಯಸ್ಥಗೊಂಡು ವಾಹನ ಸವಾರರು ಪರದಾಡುವಂತಾಯಿತು. ವಿಮಾನ ನಿಲ್ದಾಣ ಸೇರಿ ಹೈದರಾಬಾದ್, ಬಳ್ಳಾರಿ, ಚಿಕ್ಕಬಳ್ಳಾಪುರ ಮಾರ್ಗವಾಗಿ ಸಂಚಾರ ಮಾಡುತ್ತಿದ್ದ ವಾಹನ ಸವಾರರು ಟ್ರಾಫಿಕ್ ಜಾಮ್‌ನಿಂದಾಗಿ ಗಂಟೆಗಟ್ಟಲೆ ಕಾಯುವಂತಾಯಿತು.

    ಪೊಲೀಸರಿಂದಲೇ ಹಿಂಸೆ
    ‘ಕನ್ನಡ ನಾಡಿನಲ್ಲಿನ ಕನ್ನಡಿಗರನ್ನು ಹಾಗೂ ಕನ್ನಡ ಭಾಷೆಯನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ. ಕನ್ನಡದ ಉಳಿವಿಗಾಗಿ ಹೋರಾಟ ಅನಿವಾರ್ಯವಾಗಿದೆ ಪ್ರತಿಭಟನೆ ಹಿಂಸೆಗೆ ತಿರುಗಲು ಪೊಲೀಸರೇ ಕಾರಣವಾಗಿದ್ದಾರೆ. ನಾವು ಶಾಂತಿಯುತಾಗಿ ಜಾಗೃತಿ ಮೂಡಿಸುವ ಆಂದೋಲನಕ್ಕೆ ಮುಂದಾಗಿದ್ದೆವು, ಆದರೆ ಪೊಲೀಸರ ವರ್ತನೆಯಿಂದಾಗಿ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ ಎಂದು ಕರವೇ ಅಧ್ಯಕ್ಷ ನಾರಾಯಣಗೌಡ, ಪೊಲೀಸರ ವಿರುದ್ಧ ಕಿಡಿಕಾರಿದರು. 35 ವರ್ಷದಿಂದ ಹೋರಾಟ ಮಾಡುತ್ತಿದೆ. ಎಂದಿಗೂ ಹಿಂಸಾತ್ಮಕವಾಗಿ ಯಾರಿಗೂ ತೊಂದರೆ ನೀಡಿಲ್ಲ, ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳು ಹಿಂದಿವಾಲಗಳಾಗಿದ್ದು, ಅವರ ಪ್ರಚೋದನೆಯಿಂದಾಗಿ ಕಾರ್ಯಕರ್ತರು ಈ ರೀತಿ ವರ್ತಿಸಿದ್ದಾರೆ ಎಂದರು. ವಿಧಾನಸೌಧದಲ್ಲಿ ಕುಳಿತಿರುವ ರಣಹೇಡಿಗಳ ನಿರ್ಲಕ್ಷ್ಯದಿಂದಾಗಿ ಕನ್ನಡ ನಾಡಿನಲ್ಲೇ ನಾವು ಕನ್ನಡದ ಬಗ್ಗೆ ಹೋರಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡದ ಬಗ್ಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ನಾವು ಕೊಟ್ಟ ಗಡುವು ಮುಗಿಯುವುದರ ಒಳಗೆ ಕ್ರಮ ತೆಗೆದುಕೊಂಡರೆ ಒಳ್ಳೆಯದು. ಇಲ್ಲದಿದ್ದರೆ ಕಾನೂನನ್ನು ಕೈಗೆತ್ತಿಕೊಂಡು ಸರ್ಕಾರ ಮಾಡುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಟಿ.ಎ ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.

    ಫೆ.28ರವರೆಗೆ ಗುಡುವು
    ರಾಜಧಾನಿಯಲ್ಲಿರುವ ವಾಣಿಜ್ಯ ಮಳಿಗೆಗಳು ಹಾಗೂ ಮಾಲ್‌ಗಳು ಫೆ.28ರೊಳಗೆ ಕನ್ನಡದಲ್ಲಿ ನಾಮಫಲಕ ಅಳವಡಿಸುವಂತೆ ಬಿಬಿಎಂಪಿ ಗುಡುವು ಕೊಟ್ಟಿದೆ. ನಗರದಲ್ಲಿ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳು ಸೇರಿ ಒಟ್ಟು 1,400 ಕಿ.ಮೀ. ಉದ್ದವಿದೆ. ಈ ರಸ್ತೆಗಳಲ್ಲಿ ಬರುವ ಎಲ್ಲ ವಾಣಿಜ್ಯ ಮಳಿಗೆಗಳನ್ನು ವಲಯವಾರು ಸರ್ವೇ ಮಾಡಿಸಲಾಗುವುದು. ಆ ಬಳಿಕವೂ ನಾಮಲಕಗಳಲ್ಲಿ ಶೇ.60 ಭಾಗ ಕನ್ನಡ ಬಳಸದ ಮಳಿಗೆಗಳಿಗೆ ನೋಟಿಸ್ ನೀಡಲಾಗುವುದು. ಬಳಿಕ ಫೆ.28ರವರೆಗೆ ಸಮಯಾವಕಾಶ ನೀಡಿ ಕಡ್ಡಾಯವಾಗಿ ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸಿ ಅನುಷ್ಠಾನಗೊಳಿಸಿ ಆಯಾ ವಲಯ ಆಯುಕ್ತರಿಗೆ ಅನುಪಾಲನಾ ವರದಿ ಸಲ್ಲಿಸುವಂತೆ ಪಾಲಿಕೆ ಸೂಚಿಸಿದೆ. ಗಡುವಿನೊಳಗೆ ಕನ್ನಡ ನಾಮಫಲಕಗಳನ್ನು ಅಳವಡಿಕೊಳ್ಳದ ಅಂಗಡಿ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಕನ್ನಡ ಬಳಸದ ಅಂಗಡಿ ಮುಂಗಟ್ಟುಗಳನ್ನು ಕಾನೂನಿನ ಪ್ರಕಾರ ಅಮಾನತಿನಲ್ಲಿಟ್ಟು, ಪರವಾನಗಿ ರದ್ದುಗೊಳಿಸಲಾಗುವುದು.ಸೂಕ್ತವಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳ ಮೇಲೂ ಶಿಸ್ತುಕ್ರಮ ತೆಗೆದುಕೊಳ್ಳುವುದಾಗಿ ಪಾಲಿಕೆ ಎಚ್ಚರಿಕೆ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts