More

    ಬಾಯಿಗೆ ಬಂದಂತೆ ಮಾತನಾಡುವವರಿಗೆ ಬೀಗ ಹಾಕಿ ; ಸದಾನಂದಗೌಡ ಸಲಹೆ

    ಬೆಂಗಳೂರು: ಬಿಜೆಪಿಯಲ್ಲಿದ್ದು ಬಾಯಿಗೆ ಬಂದಂತೆ ಮಾತಾಡುವವರ ಬಾಯಿಗೆ ಬೀಗ ಹಾಕಬೇಕಾದ ಅವಶ್ಯಕತೆ ಇದೆ ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

    ಆಶಿಸ್ತು ಎಂದು ಗೊತ್ತಿದ್ದೂ ಮಾತಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮ ರಾಜ್ಯ ನಾಯಕರಿಗೆ ತಾಕತ್ತು ಇಲ್ಲ ಎಂದು ಅನ್ನಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದಷ್ಟು ಶೀಘ್ರ ಇದಕ್ಕೆ ಉತ್ತರ ಕಂಡುಕೊಳ್ಳದೇ ಇದ್ದರೆ ಪಕ್ಷದ ಚಟುವಟಿಕೆಗಳನ್ನು ಸರಾಗವಾಗಿ ಮುಂದುವರಿಸುವುದು ಕಷ್ಟ ಎಂದು ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

    ಪಕ್ಷದಲ್ಲಿ ನಡೆಯುತ್ತಿರುವ ಇಂತಹ ವಿದ್ಯಮಾನಗಳ ಬಗ್ಗೆ ಕಾರ್ಯಕರ್ತರಿಗೆ ನೋವುಂಟಾಗಿದೆ. ಪಾರ್ಟಿ ವಿತ್ ಡಿಫರೆನ್ಸಸ್ ಎಂಬುದು ಕರ್ನಾಟಕದ ಸ್ಥಿತಿ ಆಗಿದೆ ಎಂದರು.

    ಹೊಸ ಟೀಮ್ ಮಾಡುವಾಗ ನಿಮ್ಮಲ್ಲಿ ಮಾತನಾಡಿದ್ದರೆ ಎಂದು ಕಾರ್ಯಕರ್ತರು ನಮ್ಮನ್ನು ಕೇಳುತ್ತಿದ್ದಾರೆ. ರಾಜ್ಯಾಧ್ಯಕ್ಷರಿಗೆ ಮಾತನಾಡುವ ಅವಕಾಶ ಇದ್ದರೂ ನಮ್ಮ ಜತೆ ಮಾತನಾಡಲಿಲ್ಲವಲ್ಲಾ ಎಂಬ ಭಾವನೆ ಕೂಡ ಇದೆ. ಪದಾಧಿಕಾರಿಗಳಾಗಿ ನೇಮಕವಾದವರ ಮೇಲೆ ವಿಶ್ವಾಸವಿಲ್ಲದಂತೆ ಮಾತಾಡುವುದು ಕೂಡ ಸರಿಯಲ್ಲ. ಅವಕಾಶ ಸಿಕ್ಕು, ಸ್ಥಾನಮಾನ ಅನುಭವಿಸಿದವರೂ ಪಕ್ಷ/ನಾಯಕರ ವಿರುದ್ಧ ಮಾತಾಡುವುದು ತಪ್ಪು ಎಂದು ಹೇಳಿದರು.

    ಕೇಂದ್ರ ನಾಯಕರೂ ಮಧ್ಯಪ್ರವೇಶಿಸಬೇಕು

    ಕೇಂದ್ರದವರು ಒಂದು ಸಲ ಬಂದು ಯಾರು ಯಾರು ಏನೇನು ಹೇಳಲಿಕ್ಕಿದೆಯೋ ಅವರಿಗೊಂದು ವೇದಿಕೆ ಕೊಡಬೇಕು. ನಾಯಕರು, ಪಕ್ಷದ ವಿರುದ್ಧ ಹೇಳುವುದನ್ನು ನಿಲ್ಲಿಸಲು ವೇದಿಕೆ ಸೃಷ್ಟಿಸುವ ಕೆಲಸವನ್ನು ರಾಜ್ಯಾಧ್ಯಕ್ಷರು ಕೂಡಲೇ ಮಾಡಬೇಕು ಎಂದು ಸಲಹೆ ನೀಡಿದರು.

    ಸಮಾಲೋಚನೆ ಮಾಡಿ ತೀರ್ಮಾನ

    ಸರ್ವಾಧಿಕಾರಿ ಮನೋಭಾವದ ಬದಲು ಸಮಾಲೋಚನೆ ಮಾಡಿ ತೀರ್ಮಾನ ತೆಗೆದುಕೊಳ್ಳಬೇಕು.
    ಕೋರ್ ಕಮಿಟಿ ಸಭೆಯಲ್ಲಿ ನಾವು ಇದನ್ನು ಪ್ರಸ್ತಾಪ ಮಾಡುತ್ತೇವೆ. ವರಿಷ್ಠರೇ ಸದಾನಂದ ಗೌಡ ಸೇರಿ ಯಾರೇ ಶಿಸ್ತು ಉಲ್ಲಂಘಿಸಿದರೂ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಿ ಎಂದು ನಾನು ವರಿಷ್ಠರು ಮತ್ತು ರಾಜ್ಯದ ಅಧ್ಯಕ್ಷರಿಗೆ ನಾನು ಮನವಿ ಮಾಡುತ್ತೇನೆ ಎಂದು ತಿಳಿಸಿದರು.

    ನಾನು ಮಾಡಿದ್ದು, ಇವರಿಗೇಕೆ ಆಗುತ್ತಿಲ್ಲ?

    ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ಡಜನ್ ಗಟ್ಟಲೇ ನಾಯಕರು ಪಕ್ಷದ ವಿರುದ್ಧ ಮಾತಾಡುತ್ತಿದ್ದಾರೆ. ನಾನು ರಾಜ್ಯಾಧ್ಯಕ್ಷ ಆಗಿದ್ದ ವೇಳೆ ಅಂದಿನ ಸಿಎಂ ಕುಮಾರಸ್ವಾಮಿ ವಿರುದ್ಧ ಜನಾರ್ದನರೆಡ್ಡಿ ಆರೋಪ ಮಾಡಿದಾಗ ಒಂದೇ ಗಂಟೆಯಲ್ಲಿ ನೋಟೀಸ್ ಕೊಟ್ಟು ಸಸ್ಪೆಂಡ್ ಮಾಡಿದ್ದೆ. ಯತ್ನಾಳ್‌ರನ್ನು ನಾನು ಸಸ್ಪೆಂಡ್ ಮಾಡಿದ್ದೆ. ಯಡಿಯೂರಪ್ಪ ಮತ್ತೆ ಒತ್ತಡ ಹಾಕಿದರು. ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡು ಈಗ ಅನುಭವಿಸುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ರೇಣುಕಾಚಾರ್ಯರನ್ನು ನಾನು ಸಸ್ಪೆಂಡ್ ಮಾಡಿದ್ದಾಗ ಸಿದ್ದೇಶ್ವರ, ಯಡಿಯೂರಪ್ಪ ಹೇಳಿದ್ದರಿಂದ ಮತ್ತೆ ಸೇರಿಸಿಕೊಂಡಿದ್ದೆ. ನನ್ನ ಕಾಲದಲ್ಲಿ ನಾನು ಈ ರೀತಿ ಮಾಡಿದ್ದೆ. ಈಗ ಯಾಕೆ ಶಿಸ್ತು ಕ್ರಮ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.

    ಕುಲಗೆಟ್ಟ ವ್ಯವಸ್ಥೆ ಎಂದೂ ಕಂಡಿರಲಿಲ್ಲ

    ಬಿಜೆಪಿಯನ್ನು ಕುಲಗೆಡಿಸಲು ಪಕ್ಷದ ಒಳಗಿರುವವರೇ ಸಾಕು. ಹಿಂದೆಂದೂ ಈ ರೀತಿ ಕುಲಗೆಟ್ಟ ವ್ಯವಸ್ಥೆ ನೋಡಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಸಂದರ್ಭದಲ್ಲಿ 40,000 ಕೋಟಿ ಮೌಲ್ಯದ ಹಗರಣದ ನಡೆದಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಯತ್ನಾಳ್‌ಗೆ ಕನಿಷ್ಟ ನೋಟೀಸ್ ಆದರೂ ಜಾರಿ ಮಾಡಬೇಕು. ಇಲ್ಲದಿದ್ದರೆ ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸದಾನಂದಗೌಡ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts