‘ತೂಫಾನ್’, ‘ಬಳ್ಳಾರಿ ದರ್ಬಾರ್’, ’18 ಟು 25′, ‘ಓ ಮೈ ಲವ್’ ಸೇರಿ ಕನ್ನಡವಲ್ಲದೆ ತೆಲುಗಿನಲ್ಲೂ ಸಿನಿಮಾ ನಿರ್ದೇಶಿಸಿರುವ ಸ್ಮೈಲ್ ಶ್ರೀನು ಇದೀಗ ‘ಮೈರಾ’ ಎಂಬ ಪ್ಯಾನ್ ಇಂಡಿಯಾ ಚಿತ್ರದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಈಗಾಗಲೇ ಈ ಬಹುಭಾಷಾ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದ್ದು, ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಚಿತ್ರೀಕರಣವಾಗಿ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಡಬ್ ಆಗಲಿದೆ. ಶೀಘ್ರದಲ್ಲೇ ನಿರ್ದೇಶಕ ಶ್ರೀನು, ಕಲಾವಿದರು ಹಾಗೂ ತಾಂತ್ರಿಕವರ್ಗದ ಅಪ್‌ಡೇಟ್ ಕೊಡಲಿದ್ದಾರೆ. ಅದಕ್ಕೂ ಮುನ್ನ ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಸ್ಮೈಲ್ ಶ್ರೀನು ಜತೆ ಕೈ ಜೋಡಿಸಲಿದ್ದಾರೆ ಎನ್ನಲಾಗಿದೆ. ಅದಕ್ಕೆ ಪೂರಕ ಎಂಬಂತೆ ಇತ್ತೀಚೆಗಷ್ಟೆ ಶ್ರೀನು, ಪೂರಿ ಜಗನ್ನಾಥ್ರನ್ನು ಭೇಟಿಯಾಗಿದ್ದಾರೆ. ಈ ಭೇಟಿಯ ಬಗ್ಗೆ ಬಗ್ಗೆ ಹೆಚ್ಚೇನೂ ಹೇಳದ ಶ್ರೀನು, ‘ಪೂರಿ ಜಗನ್ನಾಥ್ ಅವರ ಜತೆ ಮಾತುಕತೆ ನಡೆದಿದೆ. ಅದರ ಕುರಿತು ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ನೀಡುವೆ’ ಎನ್ನುತ್ತಾರೆ.
‘ಮೈರಾ’ ಬಗ್ಗೆ ಮಾಹಿತಿ ನೀಡುವ ಶ್ರೀನು, ‘ಕನ್ನಡದಲ್ಲಿ ಕಂಟೆಂಟ್ ಸಿನಿಮಾಗಳಿಗೆ ಬೇಡಿಕೆ ಹೆಚ್ಚಿದೆ. ಹಾಗೆಯೇ ಕನ್ನಡದ ತಂತ್ರಜ್ಞರು, ನಿರ್ದೇಶಕರು ಪರಭಾಷೆಯಲ್ಲೂ ದೊಡ್ಡ ಛಾಪು ಮೂಡಿಸುತ್ತಿದ್ದಾರೆ. ನಾನು ಈಗಾಗಲೇ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡಿರುವ ಕಾರಣ ತೆಲುಗು ಇಂಡಸ್ಟ್ರಿಗೂ ಪರಿಚಿತನಾಗಿದ್ದೇನೆ. ‘ಮೈರಾ’ ಕಂಪ್ಲೀಟ್ ಹೊಸ ಸ್ಟೈಲ್, ಈಗಿನ ಟ್ರೆಂಡ್‌ಗೆ ಹೊಂದುವಂಥ ಕಾನ್ಸೆಪ್ಟ್ ಒಳಗೊಂಡ ಬಿಗ್ ಬಜೆಟ್ ಚಿತ್ರ. ಬೃಹತ್ ತಾರಾಗಣದ ಜೊತೆಗೆ ತಾಂತ್ರಿಕ ವರ್ಗವೂ ಅದ್ಧೂರಿಯಾಗಿರಲಿದೆ. ಚಿತ್ರವೀಗ ಸ್ಕ್ರಿಪ್ಟ್ ಹಂತದಲ್ಲಿದ್ದು ಹಂತ ಹಂತವಾಗಿ ಎಲ್ಲ ಮಾಹಿತಿ ತಿಳಿಸುವೆ’ ಎಂದು ಹೇಳಿಕೊಳ್ಳುತ್ತಾರೆ.