More

    ಕನಕಗಿರಿ ಉತ್ಸವ ಆಚರಣೆ ಭರವಸೆ ಹುಸಿ

    ಕನಕಗಿರಿ: ಶ್ರೀ ಕನಕಾಚಲಪತಿ ಜಾತ್ರೆಯೊಳಗೆ ಕನಕಗಿರಿ ಉತ್ಸವ ಮಾಡುವುದಾಗಿ ಶಾಸಕ ಬಸವರಾಜ ದಢೇಸುಗೂರು ನೀಡಿದ್ದ ಭರವಸೆ ಹುಸಿಯಾಗಿದೆ ಎಂದು ಡಿಸಿಸಿ ಅಧ್ಯಕ್ಷ, ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದರು.

    ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಪಕ್ಷ ಸೇರ್ಪಡೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ಮೊದಲ ಬಾರಿ ಶಾಸಕನಾದಾಗ ಈ ಭಾಗದ ಜನರ ಬಹುದಿನಗಳ ಬೇಡಿಕೆ ಕನಕಗಿರಿ ಉತ್ಸವ ಅದ್ದೂರಿಯಾಗಿ ಆಚರಿಸಿದೆ. ಅಲ್ಲದೆ, ಪ್ರತಿ ವರ್ಷ ಉತ್ಸವಕ್ಕೆಂದು ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಲು ಶ್ರಮಿಸಿದ್ದೆ. ಮೂರು ಬಾರಿ ಉತ್ಸವ ಮಾಡುವ ಮೂಲಕ ಇಲ್ಲಿನ ಸಾಂಸ್ಕೃತಿಕ, ಐತಿಹಾಸಿಕ ಪರಂಪರೆಯನ್ನು ಇಡೀ ನಾಡಿಗೆ ಪರಿಚಯಿಸಿದ್ದೆ. ಆದರೆ, ಬಸವರಾಜ ದಢೇಸುಗೂರು ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ 5 ವರ್ಷವಾಗುತ್ತಾ ಬಂದರೂ ಒಂದು ಬಾರಿ ಸಹ ಕನಕಗಿರಿ ಉತ್ಸವಕ್ಕೆ ಇಚ್ಛಾಶಕ್ತಿ ತೋರರಲಿಲ್ಲ. ಕನಕಾಚಲಪತಿ ಜಾತ್ರೆಯೂ ಮುಗಿದಿದ್ದು, ಕೆಲವೇ ದಿನಗಳಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾಗಲಿದೆ. ಶಾಸಕರು ಇನ್ಯಾವಾಗ ಉತ್ಸವ ಮಾಡುತ್ತಾರೆ ಎಂದು ಪ್ರಶ್ನಿಸಿದರು.

    ನಾನು ತೋಟಗಾರಿಕೆ ಪಾರ್ಕ್ ತಂದಿದ್ದೇನೆ ಎಂದು ಹೇಳುವ ಶಾಸಕರು ಆ ಪಾರ್ಕ್ ಎಲ್ಲಿದೆ ಎಂದು ತೋರಿಸಲಿ? ಬಡವರು ಆಶ್ರಯ ಮನೆ ದೊರೆಯದೆ ಪರದಾಡುತ್ತಿದ್ದಾರೆ. ನನ್ನ ಅವಧಿಯಲ್ಲಿ ಪಟ್ಟಣಕ್ಕೆ ಮಂಜೂರಾಗಿದ್ದ ಡಿಪ್ಲೊಮಾ ಕಾಲೇಜನ್ನು ತಮ್ಮದೇ ಸರ್ಕಾರದಲ್ಲಿ ಉಳಿಸಿಕೊಳ್ಳುವಲ್ಲಿ ಶಾಸಕ ದಢೇಸುಗೂರು ವಿಫಲರಾಗಿದ್ದಾರೆ. ತಾಲೂಕಾಗಿ 5 ವರ್ಷವಾದರೂ ಎಲ್ಲ ಇಲಾಖೆ ಕಚೇರಿಗಳಾಗದೆ ಸಾರ್ವಜನಿಕರು ಗಂಗಾವತಿಗೆ ಅಲೆದಾಡಬೇಕಾಗಿದೆ. ಇದುವರೆಗೂ ಶಾಸಕರಿಗೆ ವೈಯಕ್ತಿಕ ಚಿಂತೆಗಳೇ ಹಲವಿದ್ದು, ಇದೀಗ ಟಿಕೆಟ್ ದೊರೆಯುತ್ತದೋ ಇಲ್ಲವೋ ಎನ್ನುವ ಆತಂಕ ಕಾಡುತ್ತಿದೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕೆ., ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ, ಪ್ರಮುಖರಾದ ರವಿ ಪಾಟೀಲ್, ಶರಣೇಗೌಡ, ಅನಿಲ್ ಬಿಜ್ಜಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts