More

    ಕನಕಗಿರಿ ಕನಕಾಚಲಪತಿ ಹುಂಡಿಯಲ್ಲಿ 7.81 ಲಕ್ಷ ರೂ.ಕಾಣಿಕೆ

    ಕನಕಗಿರಿ: ಸ್ಥಳೀಯ ಶ್ರೀ ಕನಕಾಚಲಪತಿ ದೇವಸ್ಥಾನದ ಕಾಣಿಕೆ ಪೆಟ್ಟಿಗೆಯಲ್ಲಿನ ಹಣವನ್ನು ತಹಸೀಲ್ದಾರ ರವಿ ಅಂಗಡಿ ನೇತೃತ್ವದಲ್ಲಿ ಮಂಗಳವಾರ ಎಣಿಕೆ ಮಾಡಲಾಗಿದ್ದು, 7,81,150 ರೂ. ಸಂಗ್ರಹವಾಗಿದೆ.

    ಈ ಕುರಿತು ತಹಸೀಲ್ದಾರ್ ರವಿ ಅಂಗಡಿ ಮಾತನಾಡಿ, ಪ್ರತಿ ವರ್ಷದಂತೆ ಜಾತ್ರೆಯ ಪೂರ್ವದಲ್ಲಿ ಕಾಣಿಕೆ ಪೆಟ್ಟಿಗೆಯನ್ನು ಎಣಿಕೆ ಮಾಡಲಾಗಿದೆ. ಕರೊನಾ ಸಂಕಷ್ಟದಲ್ಲೂ ಐದು ತಿಂಗಳು ಇಪ್ಪತ್ತು ದಿನಗಳಲ್ಲಿ ದೇವಸ್ಥಾನದ 6 ಕಾಣಿಕೆ ಪೆಟ್ಟಿಗೆಯಲ್ಲಿ ಇಷ್ಟೊಂದು ಕಾಣಿಕೆ ಸಂಗ್ರಹವಾಗಿದೆ. ಇದರಲ್ಲಿ 7,56,780 ರೂ. ನೋಟುಗಳಿದ್ದರೆ, 24,730 ರೂ. ನಾಣ್ಯಗಳಾಗಿವೆ. ನಿಯಮಾವಳಿಗಳ ಪ್ರಕಾರ ಕಾಣಿಕೆ ಪೆಟ್ಟಿಗೆಗಳನ್ನು ತೆಗೆದು ವಿಡಿಯೋ ಚಿತ್ರೀಕರಣ ಮಾಡಿಸಿ ಎಣಿಕೆ ಮಾಡಲಾಗಿದೆ. ಈ ಕಾಣಿಕೆ ಹಣವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿರುವ ದೇವಸ್ಥಾನದ ಖಾತೆಗೆ ಜಮಾ ಮಾಡಲಾಗಿದೆ ಎಂದು ತಿಳಿಸಿದರು.

    2 ವಿದೇಶಿ ನೋಟು ಪತ್ತೆ : ಕಾಣಿಕೆ ಪೆಟ್ಟಿಗೆ ಎಣಿಕೆಯಲ್ಲಿ ಎರಡು ವಿದೇಶಿ ನೋಟುಗಳು ಪತ್ತೆಯಾಗಿವೆ. ಯುಎಸ್‌ಎಗೆ ಸೇರಿದ ಒಂದು ಡಾಲರಿನ ಒಂದು ನೋಟು ಹಾಗೂ ನೇಪಾಳಕ್ಕೆ ಸೇರಿದ 10ರೂ. ನೋಟು ಹುಂಡಿಯಲ್ಲಿದ್ದವು.

    ಪ್ರಮುಖರಾದ ನಾಗರಾಜ ತೆಗ್ಯಾಳ, ಸುದರ್ಶನರೆಡ್ಡಿ, ಕೀರ್ತೀ ಸೋನಿ, ಬಿ.ವಿ ಜೋಷಿ, ಕರಿಬಸಪ್ಪ ಉಡುಮಕಲ್, ಸೋಮು, ಶಿರಸ್ತೇದಾರ ಶಿವಕುಮಾರ, ಕಂದಾಯ ಇಲಾಖೆಯ ಸಿಬ್ಬಂದಿ ಕವಿತಾ, ಶಿರಿಷಾ, ಮುತ್ತಣ್ಣ, ದೇವಸ್ಥಾನದ ಕಾರ್ಯದರ್ಶಿ ಸಿದ್ದಲಿಂಗಯ್ಯ ಸ್ವಾಮಿ ಇತರರಿದ್ದರು.

    ಎಸ್‌ಡಿಎ ಹುದ್ದೆ ಬಯಸಿ ಭಕ್ತನ ಚೀಟಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬಯಸಿ ಭಕ್ತರು ಕಾಣಿಕೆ ಪೆಟ್ಟಿಗೆಯಲ್ಲಿ ಚೀಟಿ ಬರೆದು ಹಾಕುತ್ತಿರುವುದು ಸಾಮಾನ್ಯವಾಗಿದೆ. ಆದರೆ, ಅದರಂತೆ ಈ ಬಾರಿಯ ಕಾಣಿಕೆ ಪೆಟ್ಟಿಗೆಯಲ್ಲಿ ಅನಾಮಧೇಯ ವ್ಯಕ್ತಿಯೊಬ್ಬ ಕಾಣಿಕೆ ಪೆಟ್ಟಿಗೆಯಲ್ಲಿ ದೇವರೇ, ನನ್ನದು ಎಸ್‌ಡಿಎ ನೌಕರಿ ಆಗುವಂತೆ ಮಾಡಪ್ಪ ಎಂದು ತನ್ನ ಕೋರಿಕೆಯನ್ನು ಚೀಟಿಯಲ್ಲಿ ಬರೆದು ಕಾಣಿಕೆ ಪೆಟ್ಟಿಗೆಯಲ್ಲಿ ಹಾಕಿರುವುದು ವಿಶೇಷವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts