More

    ಫಸಲು ಕಟಾವು ಯಂತ್ರಗಳ ಸದ್ದು: ಕನಕಗಿರಿಯಲ್ಲಿ ತೊಗರಿ, ಹುರಿಗಡಲೆ ಒಕ್ಕಣೆ ಜೋರು

    ಮಧುಸೂದನ ಎಚ್.ಮಾದಿನಾಳ ಕನಕಗಿರಿ

    ನೀರಾವರಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದ ಫಸಲು ಕಟಾವು ಯಂತ್ರಗಳು, ಇದೀಗ ಒಣ ಬೇಸಾಯ ಕ್ಷೇತ್ರವಾದ ಕನಕಗಿರಿ ತಾಲೂಕಿನಲ್ಲೂ ಸದ್ದು ಮಾಡುತ್ತಿವೆ.

    ನೆರೆಯ ಕಾರಟಗಿ, ಗಂಗಾವತಿ, ಸಿಂಧನೂರು ತಾಲೂಕುಗಳಲ್ಲಿ ಭತ್ತ ಕಟಾವಿಗೆ ಬರುತ್ತಿದ್ದ ಯಂತ್ರಗಳು, ಇದೀಗ ತಾಲೂಕಿನಲ್ಲಿ ಬೆಳೆದ ತೊಗರಿ, ಹುರಿಗಡಲೆ ಕಟಾವಿಗೂ ಲಗ್ಗೆಯಿಟ್ಟಿವೆ. ಕಾರ್ಮಿಕರ ಕೊರತೆ, ಸಿಕ್ಕರೂ ಕೂಲಿ ಹೆಚ್ಚಳದಿಂದ ಫಸಲು ರಾಶಿ ಮಾಡಲು ರೈತರು ಕಷ್ಟಪಡುತ್ತಿದ್ದರು. ಕಾರ್ಮಿಕರು, ರಾಶಿ ಯಂತ್ರಕ್ಕಾಗಿ ಕಾದು, ಫಸಲನ್ನು ಸ್ವಚ್ಛಗೊಳಿಸಿ ಮನೆಗೆ ತರಲು ಹಲವು ದಿನಗಳೇ ಬೇಕಾಗುತ್ತಿತ್ತು. ಆದರೀಗ ದಿನಕ್ಕೆ 50 ರಿಂದ 100 ಎಕರೆ ಫಸಲು ಕಟಾವು ಮಾಡಿ, ಸ್ವಚ್ಛಗೊಳಿಸಿ ನೀಡುವ ಯಂತ್ರಗಳ ಆಗಮನದಿಂದ ಕೃಷಿಕರು ಖುಷಿಯಾಗಿದ್ದಾರೆ.

    ತೊಗರಿ ಕಟಾವಿಗೆ ಆಗಮನ: ತಾಲೂಕಿನ ಮೂರು ಹೋಬಳಿಗಳಲ್ಲಿ 5420.09 ಹೆಕ್ಟೇರ್‌ನಲ್ಲಿ ತೊಗರಿ ಬೆಳೆದಿರುವುದೇ ಫಸಲು ಕಟಾವು ಯಂತ್ರಗಳು ತಾಲೂಕಿಗೆ ಬರಲು ಕಾರಣವಾಗಿದೆ. ಈ ಭಾಗದಲ್ಲಿ ಉತ್ತಮ ಮಸಾರಿ ಭೂಮಿ ಇರುವುದರಿಂದ ಅನ್ಯ ತಾಲೂಕಿನವರು ಬಂದು ನೂರಾರು ಎಕರೆ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಿದ್ದಾರೆ. ಇವರು, ಕೃಷಿ ಚಟುವಟಿಕೆಗೆ ಹೆಚ್ಚಾಗಿ ಕೂಲಿ ಕಾರ್ಮಿಕರನ್ನು ನೆಚ್ಚಿಕೊಳ್ಳದೆ, ಭತ್ತದ ಕಟಾವು ಯಂತ್ರಗಳನ್ನು ತರಿಸಿ ತೊಗರಿ ಮತ್ತು ಹುರಿಗಡಲೆ ಒಕ್ಕಣೆ ಮಾಡಿಸುತ್ತಿದ್ದಾರೆ. ಈ ಯಂತ್ರಗಳ ವೇಗದ ಕೆಲಸ ಗಮನಿಸಿರುವ ಸ್ಥಳೀಯ ರೈತರೂ ಹತ್ತಾರು ಎಕರೆ ಫಸಲನ್ನು ಕೆಲವೇ ಗಂಟೆಗಳಲ್ಲಿ ಕಟಾವು ಮಾಡಿ ರಾಶಿ ಮಾಡಿಕೊಡುವ ಯಂತ್ರಗಳಿಗೆ ಮೊರೆ ಹೋಗಿದ್ದಾರೆ. ಈಗಾಗಲೇ 1 ಸಾವಿರ ಹೆಕ್ಟೇರ್‌ಗೂ ಹೆಚ್ಚು ಫಸಲನ್ನು ಯಂತ್ರಗಳು ಕಟಾವು ಮಾಡಿವೆ.

    ಕಡಿಮೆ ಖರ್ಚು: ಒಂದು ಎಕರೆ ಫಸಲನ್ನು ಕಟಾವು ಮಾಡಿ, ರಾಶಿ ಮಾಡಿ ಮನೆಗೆ ತರುವಷ್ಟರಲ್ಲಿ ಸಾವಿರಾರು ರೂ. ಖರ್ಚಿನ ಜತೆಗೆ ಹೆಚ್ಚು ಸಮಯ ಬೇಕಾಗುತ್ತಿತ್ತು. ಆದರೆ, ಕಟಾವು ಯಂತ್ರಗಳು ಒಂದು ಗಂಟೆಯಲ್ಲಿ ಎಕರೆಗೆ 1000-1200 ರೂ.ನಲ್ಲಿ ಪೂರ್ತಿ ಕೆಲಸ ಮುಗಿಸಿಕೊಟ್ಟು ಶ್ರಮ ಮತ್ತು ಖರ್ಚನ್ನು ಉಳಿಸಿಕೊಡುತ್ತಿವೆ ಎನ್ನುತ್ತಾರೆ ರೈತರು.

    ಅಲ್ಪ ಸ್ವಲ್ಪ ಜಮೀನಿನಲ್ಲಿ ಬೆಳೆದ ಬೆಳೆ ಕಟಾವಿಗೆ ಯಂತ್ರಗಳು ಬರುತ್ತಿರಲಿಲ್ಲ. ಈ ಬಾರಿ ಕನಕಗಿರಿ ತಾಲೂಕಿನ ನೂರಾರು ಎಕರೆಯಲ್ಲಿ ತೊಗರಿ ಬೆಳೆದ ರೈತರು ಯಂತ್ರಗಳನ್ನು ತರಿಸಿದ್ದು, ಸಣ್ಣ ಪುಟ್ಟ ಹಿಡುವಳಿದಾರರಿಗೂ ಸಹಕಾರಿಯಾಗಿದೆ. ಸಮಯ ಉಳಿತಾಯದ ಜತೆಗೆ ರೈತನ ಖರ್ಚು ಹಾಗೂ ಶ್ರಮವೂ ಕಡಿಮೆಯಾಗಿದೆ.
    | ಪ್ರಲ್ಹಾದರೆಡ್ಡಿ, ರೈತ,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts