More

    ಗೌರಿಪುರ ಗ್ರಾಪಂಗೆ ಬೇಲಿ ಹಚ್ಚಿದ ನೌಕರ

    ಕನಕಗಿರಿ: ತಾಲೂಕಿನ ಗೌರಿಪುರ ಗ್ರಾಪಂನಲ್ಲಿ ಕಳೆದ 6 ತಿಂಗಳಿಂದ ಸ್ವಚ್ಛತಾಗಾರನಾಗಿ ಕೆಲಸ ಮಾಡುತ್ತಿದ್ದ ನೌಕರ ಸೇವೆ ಖಾಯಂಗೊಳಿಸಬೇಕು ಹಾಗೂ ತಡೆ ಹಿಡಿದಿದ್ದ ವೇತನ ಬಿಡುಗಡೆಗೊಳಿಸಬೇಕು ಎಂದು ಮಂಗಳವಾರ ಸಂಜೆ ಗ್ರಾಪಂಗೆ ಬೇಲಿ ಹಚ್ಚಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಸ್ವಚ್ಛತಾಗಾರನಾಗಿ ಸೇವೆ ಸಲ್ಲಿಸುತ್ತಿರುವ ಜಗದೀಶಗೌಡನ ಹಿರಿಯರು ದಾನ ರೂಪದಲ್ಲಿ ಗ್ರಾಪಂಗೆ ಜಾಗ ನೀಡಿದ್ದರು. 6 ತಿಂಗಳ ಹಿಂದೆ ಜಗದೀಶಗೌಡನನ್ನು ಸ್ವಚ್ಛತಾಗಾರನನ್ನಾಗಿ ಗ್ರಾಪಂ ಅಧಿಕಾರಿ, ಸದಸ್ಯರು ಸೇರಿ ಸ್ಥಳೀಯ ಮಟ್ಟದಲ್ಲಿ ಕೆಲಸಕ್ಕೆ ತೆಗೆದುಕೊಂಡಿದ್ದರು ಎನ್ನಲಾಗಿದೆ. ಆದರೆ, ಸದರಿ ಕೆಲಸ ಖಾಯಂ ಅಲ್ಲವಾಗಿದ್ದರಿಂದ ತನ್ನನ್ನು ಖಾಯಂಗೊಳಿಸಬೇಕೆಂದು ಗ್ರಾಪಂಗೆ ಬೇಲಿ ಹಚ್ಚಿದ್ದು, ಗ್ರಾಪಂ ಗೊಂದಲದ ಗೂಡಾಗಿತ್ತು.

    ತೆರೆಯದ ಗ್ರಾಪಂ ಬಾಗಿಲು: ಮಂಗಳವಾರ ಸಂಜೆ ಗ್ರಾಪಂ ಹಚ್ಚಲಾಗಿರುವ ಬೇಲಿ ತೆಗೆದಿದ್ದರೂ ಸಹ ಬುಧವಾರ ಬೆಳಿಗ್ಗೆ ಗ್ರಾಪಂ ಕಚೇರಿ ತೆಗೆದು ಸಿಬ್ಬಂದಿ ತಮ್ಮ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಿತ್ತು. ಆದರೆ, ಗೇಟ್‌ಗೆ ಹಾಕಿದ್ದ ಬೀಗ ಹಾಗೇ ಇದ್ದು, ಪಿಡಿಒ ಬಂದು ಸಮಸ್ಯೆ ಬಗೆಹರಿಸುವಂತೆ ನೌಕರ ಜಗದೀಶಗೌಡ ಪಟ್ಟು ಹಿಡಿದಿದ್ದರಿಂದ ಕಚೇರಿ ಸಮಯ 10 ಗಂಟೆಯಾದರೂ ತೆಗೆದಿರಲಿಲ್ಲ. ಇದರಿಂದ ಅಸಹಾಯಕರಾದ ಉಳಿದ ಸಿಬ್ಬಂದಿ ಹೊರಗಡೆಯೇ ನಿಂತುಕೊಂಡು ಹೈ ಡ್ರಾಮಾ ವೀಕ್ಷಿಸುತ್ತಿದ್ದರು. ಆದರೆ, ತಮ್ಮ ಕೆಲಸಗಳಿಗೆ ಗ್ರಾಪಂ ಕಚೇರಿಗೆ ಬಂದಿದ್ದ ಸಾರ್ವಜನಿಕರು ಮಾತ್ರ ತಮ್ಮ ಕೆಲಸವಾಗದಿದ್ದರಿಂದ ಅಧಿಕಾರಿಗಳ ವಿರುದ್ಧ ಹಿಡಿ ಶಾಪಹಾಕಿದರು.

    ಸಮಸ್ಯೆ ಅರಿತುಕೊಂಡು ಸ್ಥಳಕ್ಕೆ ತಾಪಂ ಇಒ ಚಂದ್ರಶೇಖರ ಕಂದಕೂರು, ಪಿಎಸ್‌ಐ ಖಾಸಿಂಸಾಬ್ ಅಕ್ರೊಳ್ಳಿ ಭೇಟಿ ನೀಡಿ ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿಸಿದ್ದಾರೆ. ಸಮಸ್ಯೆ ಬಗೆಹರಿಯುವುದರೊಳಗೆ 11.30 ಆಗಿದ್ದು, ನಂತರ ಗ್ರಾಪಂ ಕಚೇರಿಯನ್ನು ತೆರೆದು ಸಿಬ್ಬಂದಿ ತಮ್ಮ ಕೆಲಸದಲ್ಲಿ ತೊಡಗಿದರು. ಗ್ರಾಪಂ ಇರುವ ಜಾಗದ ದಾಖಲೆಗಳನ್ನು ತರುವಂತೆ ಜಗದೀಶಗೌಡಗೆ ತಿಳಿಸಿದ್ದು, ಗುರುವಾರ ಅಧ್ಯಕ್ಷ, ಸಿಬ್ಬಂದಿಯವರೊಂದಿಗೆ ಈ ಕುರಿತು ಸಭೆ ನಡೆಸಲು ಇಒ ಮುಂದಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts