More

    ಪ್ರತಿ ಕೋಳಿ ಜಗಳಕ್ಕೆ ಲಕ್ಷಾಂತರ ರೂ. ಬೆಟ್ಟಿಂಗ್: ಹುಂಜ ಕಾಳಗದ ಸತ್ಯ ಬಗೆದಷ್ಟೂ ಬಯಲು

    ಕನಕಗಿರಿ: ತಾಲೂಕಿನಲ್ಲಿ ನಡೆಯುತ್ತಿರುವ ನಿಷೇಧಿತ ಕೋಳಿ(ಹುಂಜ) ಕಾಳಗದ ಸತ್ಯ ಬಗೆದಷ್ಟೂ ಬಯಲಾಗುತ್ತಿದ್ದು, ಪಂದ್ಯವೊಂದಕ್ಕೆ ಲಕ್ಷಗಟ್ಟಲೇ ಬೆಟ್ಟಿಂಗ್ ನಡೆಯುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

    ಕಳೆದ ಭಾನುವಾರ (ಡಿ.18) ಕೆ.ಮಲ್ಲಾಪುರದ ಗುಡ್ಡದ ಪ್ರದೇಶದಲ್ಲಿ ಸಾವಿರಾರು ಜನರನ್ನು ಸೇರಿಸಿ ಬಿಜೆಪಿ ಮುಖಂಡ ಕೋಳಿ ಪಂದ್ಯ ನಡೆಸಿದ್ದು, ಅದನ್ನು ಯುವಕನೊಬ್ಬ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ವೈರಲ್ ಆಗಿದೆ. ಮಾಧ್ಯಮಗಳಲ್ಲಿಯೂ ಪ್ರಸಾರವಾದ ಕಾರಣ ಸ್ಥಳೀಯ ಪೊಲೀಸರು, ಕೆಪಿ 78 ಕಾಯ್ದೆಯಡಿ ಕನಕಗಿರಿ ಬಿಜೆಪಿ ಮಂಡಲ ಎಸ್ಟಿ ಮೋರ್ಚಾ ಅಧ್ಯಕ್ಷ ನಾಗರಾಜ ಇದ್ಲಾಪುರ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಇವರೆಲ್ಲ ಕೆ.ಮಲ್ಲಾಪುರ, ನವಲಿ, ಕಾಟಾಪುರ ಸಾರ್ವಜನಿಕ ಪ್ರದೇಶದಲ್ಲಿ ಹುಂಜಗಳನ್ನು ಪಣಕ್ಕಿಟ್ಟು ಆಟವಾಡಿಸುತ್ತಿದ್ದರು. ಅಲ್ಲದೆ ರಾಯಚೂರು, ಯಾದಗಿರಿ ಸೇರಿದಂತೆ ಇತರ ಕಡೆಗಳಿಂದ ಜೂಜುಕೋರರು ಇಲ್ಲಿಗೆ ಬಂದು ಲಕ್ಷಾಂತರ ರೂ. ಬೆಟ್ಟಿಂಗ್ ಕಟ್ಟುತ್ತಾರೆ ಎನ್ನಲಾಗಿದೆ. ಆದರೆ, ಯಾರ ಭಯವೂ ಇಲ್ಲದೇ ಕೋಳಿ ಕಾಳಗ ನಡೆಸಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ತಾವರಗೇರಾ ಠಾಣೆ ಗಡಿ ಭಾಗದಲ್ಲಿ ಎರಡು ತಿಂಗಳ ಹಿಂದೆ ನಡೆಯುತ್ತಿದ್ದ ಕೋಳಿ ಪಂದ್ಯಾಟದ ಬಗ್ಗೆ ಕುಷ್ಟಗಿ ತಾಲೂಕಿನ ಯುವಕನೊಬ್ಬ ಪೊಲೀಸರಿಗೆ ತಿಳಿಸಿದ್ದ. ಸ್ಥಳಕ್ಕೆ ಬರುತ್ತಿದ್ದ ಪೊಲೀಸರನ್ನು ಮಾರ್ಗಮಧ್ಯೆ ತಡೆದ ನಾಗರಾಜ ಇದ್ಲಾಪುರ, ಯುವಕನ ಮಾಹಿತಿ ಪಡೆದು ಅವರ ಮನೆಗೆ ಹೋಗಿ ಹಲ್ಲೆಗೈದಿದ್ದ ಎನ್ನಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ನಾಗರಾಜನಿಗಾಗಿ ಹುಡುಕಾಟ ನಡೆಸಿದ್ದಾರೆ. ಅವರ ಸಂಬಂಧಿಕರು ಹಾಗೂ ಆತ್ಮೀಯರ ಗ್ರಾಮಗಳಲ್ಲೂ ಶೋಧ ಕಾರ್ಯಕೈಗೊಂಡಿದ್ದು, ಇನ್ನೂ ಸಿಕ್ಕಿಲ್ಲ.

    ಇನ್ನೊಂದೆಡೆ ಕಳೆದ ಒಂದು ವರ್ಷದಿಂದ ಗುಡ್ಡಗಾಡು ಪ್ರದೇಶದಲ್ಲಿ ಕಾಡು ಪ್ರಾಣಿಗಳಿಗೆ ತೊಂದರೆಯಾಗುವಂತಹ ಚಟುವಟಿಕೆಗಳು ನಡೆಸಿದ್ದರೂ ಅರಣ್ಯ ಇಲಾಖೆ ಗಮನಕ್ಕಿರಲಿಲ್ಲವೇ? ಎಂಬ ಪ್ರಶ್ನೆಯೂ ಮೂಡಿದೆ.

    ಪಂದ್ಯವೊಂದಕ್ಕೆ 10 ಸಾವಿರ ರೂ. ಕಮಿಷನ್?: ಕಾಳಗಕ್ಕೆ ಬಳಸುವ ಹುಂಜಗಳಿಗೆ ಭಾರಿ ಡಿಮಾಂಡ್ ಇದ್ದು, 5 ಸಾವಿರ ರೂ.ಯಿಂದ 50 ಸಾವಿರ ರೂ.ವರೆಗೆ ಬೆಲೆ ಬಾಳುತ್ತವೆ. ಕಾದಾಟಕ್ಕಾಗಿಯೇ ಹುಂಜಗಳನ್ನು ಪೌಷ್ಟಿಕ ಆಹಾರ ಕೊಟ್ಟು ಸಿದ್ಧಮಾಡುತ್ತಾರೆ. ಸ್ಥಳೀಯವಲ್ಲದೇ, ಸುರಪುರ, ಶಹಾಪುರ, ರಾಯಲಸೀಮಾಗಳಿಂದಲೂ ಇಂತಹ ಹುಂಜಗಳನ್ನು ಕಾದಾಟಕ್ಕಾಗಿಯೇ ತರುತ್ತಾರೆ. ಶಾಸಕರ ಆಪ್ತ ನಾಗರಾಜ್ ಇದ್ಲಾಪುರ ನಡೆಸುತ್ತಿರುವ ಕೋಳಿ ಕಾದಾಟದಲ್ಲಿ ಪ್ರತಿ ಪಂದ್ಯ 5 ರಿಂದ 10 ನಿಮಿಷದ್ದಾಗಿರುತ್ತದೆ. ಪಂದ್ಯವೊಂದಕ್ಕೆ ಒಂದು ಲಕ್ಷ ರೂ.ಯಿಂದ 2-3 ಲಕ್ಷ ರೂ.ವರೆಗೂ ಬೆಟ್ಟಿಂಗ್ ನಡೆಯುತ್ತದೆ. ಲಕ್ಷಕ್ಕೆ 10 ಸಾವಿರ ರೂ. ಕಮಿಷನ್ ಪಡೆದು ಆಟವಾಡಿಸುವ ನಾಗರಾಜ ದಿನಕ್ಕೆ 10ರಿಂದ 15 ಪಂದ್ಯ ನಡೆಸುತ್ತಾನೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts