More

    ಕನಕಗಿರಿ ಬಿಜೆಪಿಯಲ್ಲಿ ಮತ್ತೊಮ್ಮೆ ಭಿನ್ನಮತ : ಶಾಸಕರಿಗೆ ಟಿಕೆಟ್ ಇಲ್ಲ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್

    ಪಂಪಾರಡ್ಡಿ ಅರಳಹಳ್ಳಿ ಕಾರಟಗಿ

    ಸಾರ್ವತ್ರಿಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕನಕಗಿರಿ ಕ್ಷೇತ್ರದ ಬಿಜೆಪಿಯಲ್ಲಿ ಆಂತರಿಕವಾಗಿ ಯಾವುದು ಸರಿಯಲ್ಲ ಎನ್ನುವುದು ಪದೇಪದೆ ಸಾಬೀತಾಗುತ್ತಲೇ ಇದೆ. ಇದೀಗ ಶಾಸಕ ಬಸವರಾಜ ದಢೇಸುಗೂರುಗೆ ಮುಂದಿನ ಚುನಾವಣೆಯಲ್ಲಿ ಪಕ್ಷದ ಬಿ-ಫಾರ್ಮ್ ಸಿಗಲ್ಲ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

    ಕಾರಟಗಿ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಮುಖಂಡ ಶಿವಶರಣೇಗೌಡ ಯರಡೋಣಾ, ‘ಬಿಜೆಪಿ ಕನಕಗಿರಿ ಕ್ಷೇತ್ರ’ ಎನ್ನುವ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಅ.15ರಂದು ‘ಬ್ರೇಕಿಂಗ್ ನ್ಯೂಸ್, ಪಕ್ಷದ ಮುಖಂಡರು, ಅಧ್ಯಕ್ಷ, ಕಾರ್ಯಕರ್ತರು ಹಾಗೂ ಕ್ಷೇತ್ರದ ಜನತೆಗೆ ಶುಭ ಸುದ್ದಿ. ಕೇಂದ್ರ ಮತ್ತು ರಾಜ್ಯದಿಂದ ಬಂದ ಬಲ್ಲ ಮಾಹಿತಿ ಪ್ರಕಾರ ಶಾಸಕರಿಗೆ ಟಿಕೆಟ್ ತಪ್ಪಿದ್ದು ಹೊಸಮುಖಕ್ಕೆ ಟಿಕೆಟ್ ಕೊಡಬೇಕೆಂದು ತಿರ್ಮಾನಿಸಲಾಗಿದೆ. ಕಾರಣ ಶಾಸಕರ ನಡತೆ ಬಗ್ಗೆ ಮುನಿಸಿಕೊಂಡವರು ಬಿಜೆಪಿ ತೊರೆದು ಹೋಗುವ ಅವಶ್ಯಕತೆ ಇಲ್ಲ. ಇಷ್ಟರಲ್ಲೇ ಶಾಸಕರು ಪಾಪದ ಹೊರೆ ಹೊತ್ತುಕೊಂಡು ನಮ್ಮಿಂದ ದೂರ ಹೋಗುತ್ತಿದ್ದಾರೆ’ ಎನ್ನುವ ಬರಹವುಳ್ಳ ಪೋಸ್ಟ್ ಕನಕಗಿರಿ ಕ್ಷೇತ್ರದಲ್ಲಿ ಸಂಚಲನ ಉಂಟು ಮಾಡಿದೆ. ಈ ಕುರಿತು ವಾಟ್ಸ್‌ಆ್ಯಪ್‌ನಲ್ಲಿ ಕೆಲವರು ಶಾಸಕರಿಗೇ ಟಿಕೆಟ್ ಎಂದಿದ್ದರೆ, ಬಹುತೇಕರು ಮೌನಕ್ಕೆ ಶರಣಾಗಿದ್ದಾರೆ. 500ಕ್ಕೂ ಹೆಚ್ಚು ಬಿಜೆಪಿಯ ಕಾರ್ಯಕರ್ತರು, ಪೋಸ್ಟ್ ಹಾಕಿದ ಶಿವಶರಣೇಗೌಡಗೆ ಕರೆ ಮಾಡಿ ಸತ್ಯವನ್ನೇ ತಿಳಿಸಿದ್ದೀರೆಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆಂದು ಹೇಳಲಾಗುತ್ತಿದೆ.

    ಪಟ್ಟಣದ ಬಿಜೆಪಿ ಮುಖಂಡರೊಬ್ಬರ ಮನೆಯಲ್ಲಿ ಇತರ ಮೂವರು ನಾಯಕರ ನೇತೃತ್ವದಲ್ಲಿ ಅ.16ರ ಸಂಜೆ ಶಾಸಕ ಬಸವರಾಜ ದಢೇಸುಗೂರು ಜತೆ ಚರ್ಚಿಸಲು ಶಿವಶರಣೇಗೌಡರನ್ನು ಆಹ್ವಾನಿಸಲಾಗಿತ್ತು. ಪಕ್ಷದ ನಾಯಕರು ಕರೆದಿದ್ದರಿಂದ ಸಭೆಗೆ ಬರುತ್ತೇನೆ. ಆದರೆ, ಸಭೆಯಲ್ಲಿ ಶಾಸಕರಿದ್ದರೆ ಹಾಜರಾಗಲ್ಲ ಎಂದಿದ್ದಾರೆ. ಶಾಸಕರು ತೆರಳಿದ ಬಳಿಕ ಮೂವರು ನಾಯಕರ ನೇತೃತ್ವದಲ್ಲಿ ಸಭೆ ನಡೆಯಿತು. ಯಾವ ಆಧಾರದ ಮೇಲೆ ಈ ಪೋಸ್ಟ್ ಹಾಕಿದ್ದೀರಿ ಎನ್ನುವ ಪ್ರಶ್ನೆಗೆ ‘ಪಕ್ಷದ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್, ಸಚಿವ ಹಾಲಪ್ಪ ಆಚಾರ್, ಸಂಸದ ಸಂಗಣ್ಣ ಕರಡಿ, ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸುಗೂರು, ಜಿಲ್ಲಾಪ್ರಧಾನ ಕಾರ್ಯದರ್ಶಿಗಳಾದ ನವೀನ್ ಗುಳಗಣ್ಣನವರ್, ರಮೇಶ ನಾಡಿಗೇರ್, ನರಸಿಂಹರಾವ್ ಕುಲಕರ್ಣಿ, ಬಳ್ಳಾರಿ ವಿಭಾಗೀಯ ಪ್ರಭಾರ ಸಿದ್ದೇಶ ಯಾದವ್, ಸಹಪ್ರಭಾರಿ ಚಂದ್ರಶೇಖರ ಹಲಗೇರಿ, ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ ನೇತೃತ್ವದ ಜಿಲ್ಲಾ ಕೋರ್ ಕಮೀಟಿ ಸಭೆ ಕರೆಯಿರಿ. ಅವರ ಅನುಮತಿಯ ಮೇರೆಗೆ ನೀವು ಸಭೆಯಲ್ಲಿ ಹಾಜರಾಗಿ. ಆಗ ಈ ಕುರಿತು ವಿಸ್ತೃತವಾಗಿ ಸತ್ಯವನ್ನೇ ಹೇಳುವುದಾಗಿ ತಿಳಿಸಿದ್ದಾರೆ. ನಾಯಕರು ಹಿರಿಯರೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಜಿಲ್ಲಾ ಕೋರ್ ಕಮಿಟಿ ಸಭೆ ಕರೆಯುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

    ಪಕ್ಷ ಮುಖ್ಯವೇ ಹೊರತು ವ್ಯಕ್ತಿಯಲ್ಲ: ಶ್ರೀರಾಮನಗರದ ಪಕ್ಷದ ಮಾಜಿ ಅಧ್ಯಕ್ಷ ಕರಟೂರಿ ಶ್ರೀನಿವಾಸ್ ಬಿಜೆಪಿ ತೊರೆಯುವುದಾಗಿ ಇತ್ತೀಚೆಗೆ ತಿಳಿಸಿದ್ದಾರೆ. ಕನಕಗಿರಿ ಮಂಡಲದ ಪ್ರಧಾನಕಾರ್ಯದರ್ಶಿ ವಿರುಪಣ್ಣ ಕಲ್ಲೂರು ನವಲಿ, ಬಿಜೆಪಿ ಬೆಂಬಲಿತ ನವಲಿ ಗ್ರಾಪಂ ಸದಸ್ಯ ನಾಗರಾಜ ತಳವಾರ್ ಪಕ್ಷ ತೊರೆದು ಈಗಾಗಲೇ ಕಾಂಗ್ರೆಸ್ ಸೇರಿದ್ದಾರೆ. ಇತ್ತೀಚೆಗೆ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ಶಾಸಕರ ಆಡಳಿತ ವೈಖರಿಯಿಂದ ಬೇಸತ್ತು ಪಕ್ಷ ತೊರಿಯುತ್ತಿದ್ದಾರೆ. ಪಕ್ಷ ಮುಖ್ಯವೇ ಹೊರತು ವ್ಯಕ್ತಿಯಲ್ಲ. ಹಾಗಾಗಿ ಕಾರ್ಯಕರ್ತರು ಪಕ್ಷ ತೊರೆಯುವ ಅಗತ್ಯವಿಲ್ಲ ಎನ್ನುವ ಸಂದೇಶ ಸಾರುವ ಸದುದ್ದೇಶವನ್ನು ಈ ಪೋಸ್ಟ್ ಹೊಂದಿದೆಯೆಂದು ಶಿವಶರಣೇಗೌಡ ಯರಡೋಣಾ ಎಲ್ಲೆಡೆ ಹೇಳುತ್ತಿದ್ದಾರೆ.

    ಜೆಡಿಎಸ್‌ನತ್ತ ಪ್ರಯಾಣ?: ಆಪರೇಷನ್ ಕಮಲದ ಮೂಲಕ ಬಿಜೆಪಿ ಅಧಿಕಾರದ ಗದ್ದುಗೆ ಏರಲು ಕಸರತ್ತು ನಡೆಸುವ ವೇಳೆ ಅದಕ್ಕೆ ತಿರುಗೇಟು ನೀಡಲು ಕಾಂಗ್ರೆಸ್ ಮತ್ತು ಜೆಡಿಎಸ್, ತಾವರೆ ಪಡೆಯ ಶಾಸಕರ ಆಪರೇಷನ್‌ಗೆ ಮುಂದಾಗಿದ್ದವು. ಆಗ ಕೇತ್ರದ ಶಾಸಕ ಬಸವರಾಜ ದಢೇಸುಗೂರು ಜೆಡಿಎಸ್ ಗಾಳಕ್ಕೆ ಬಿದ್ದಿದ್ದರು ಎನ್ನುವ ಮಾತು ವ್ಯಾಪಕವಾಗಿ ಕೇಳಿಬಂದಿತ್ತು. ಈ ಪೋಸ್ಟ್‌ನಲ್ಲಿಯೂ ಸಹ ಶಾಸಕರು ‘ಪಾಪದ ಹೊರೆ ಹೊತ್ತುಕೊಂಡು ನಮ್ಮಿಂದ ದೂರ ಹೋಗುತ್ತಾರೆ’ ಎನ್ನುವ ಸಂದೇಶ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಭವಿಷ್ಯದಲ್ಲಿ ಶಾಸಕರು ಜೆಡಿಎಸ್‌ನತ್ತ ತೆರಳಲಿದ್ದಾರೆಯೇ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts