More

    ವಿಶ್ರಾಂತ ನ್ಯಾ. ಮಿಟ್ಟಲಕೋಡ್ ಅಭಿಮತ; ಮಹಾತ್ಮರು ಜಾತಿಗೆ ಸೀಮಿತರಲ್ಲ

    ಧಾರವಾಡ: ಕಾನೂನಿಗಿಂತ ನೈತಿಕತೆ ಮತ್ತು ಪ್ರಾಮಾಣಿಕತೆ ದೊಡ್ಡದು. ಪ್ರತಿಯೊಬ್ಬ ವ್ಯಕ್ತಿ ಜೀವನದಲ್ಲಿ ಸತ್ಯದ ದಾರಿಯಲ್ಲಿ ನಡೆದು, ಸದ್ವಿಚಾರ ಗುಣ ಸಂಪನ್ನರಾಗಿ ಬಾಳಬೇಕು ಎಂದು ಎಂದು ವಿಶ್ರಾಂತ ಜಿಲ್ಲಾ ನ್ಯಾಯಮೂರ್ತಿ ಎಸ್.ಎಚ್. ಮಿಟ್ಟಲಕೋಡ್ ಹೇಳಿದರು.

    ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಹಾಗೂ ಧಾರವಾಡ ತಾಲೂಕು ಘಟಕದ ಸಹಯೋಗದಲ್ಲಿ ಗುರುವಾರ ನಗರದ ಸಾಹಿತ್ಯ ಭವನದಲ್ಲಿ ನಡೆದ ಕವಿಗೋಷ್ಠಿ, ಕನಕದಾಸರ ಕೀರ್ತನೆ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಅಂದು 12ನೇ ಶತಮಾನದ ಜಗಜ್ಯೋತಿ ಬಸವೇಶ್ವರರ ಸಮಾನತೆ ಕ್ರಾಂತಿ ಯಶಸ್ವಿ ಕಂಡಿದ್ದರೆ, 15ನೇ ಶತಮಾನದಲ್ಲಿ ಕನಕದಾಸರು ಪುನಃ ಕುಲಕುಲು ಎಂದು ಹೊಡೆದಾಡದಿರೆ, ಕುಲದ ನೆಲೆ ಬಲ್ಲಿರಾ! ಎಂದು ಹೇಳುವ ಹಾಗೂ ಸಂವಿಧಾನದಲ್ಲಿ ಕಲಂ 14ರ ಅಗತ್ಯ ಇರಲಿಲ್ಲ ಎಂದು ಹೇಳಿದರು.

    ಮಾನವ ಸಮಾನತೆ ಸಾರಿದ ಮತ್ತು ಸ್ವಾತಂತ್ರ್ಯ ಹೋರಾಟದ ಮಹಾನ್ ವ್ಯಕ್ತಿಗಳನ್ನೇ ಒಂದೊಂದು ಜಾತಿ-ಧರ್ಮಕ್ಕೆ ಸೀಮಿತಗೊಳಿಸಿರುವುದು ದುರುಂತ. ದೇವರು ನಿರಾಕಾರಿ. ಧರ್ಮ ಅಂದರೆ ಬಲೆ ಅಲ್ಲ, ಜ್ಞಾನದ ಸೆಲೆ. ಆದರೆ ಧರ್ಮ ಹೆಸರಲ್ಲಿ ಅನಾಚಾರ ನಡೆಯುತ್ತಿರುವುದಕ್ಕೆ ತೀವ್ರ ಖೇದ ವ್ಯಕ್ತಪಡಿಸಿದರು.

    ಉಪನ್ಯಾದ ನೀಡಿದ ವಕೀಲ ಎಸ್.ಎಚ್. ಕೋರಿಶೆಟ್ಟರ ಮಾತನಾಡಿ, ಕನಕದಾಸರು ಕಾಲಾತೀತ ಮತ್ತು ಜಾತ್ಯಾತೀತ. ಶರಣರ ವಚನಗಳು ಹಾಗೂ ದಾಸರ ಕೀರ್ತನೆಗಳು ಕನ್ನಡ ಸಾರಸತ್ವ ಲೋಕದ ಅಮೂಲ್ಯ ಆಸ್ತಿ. ಇವುಗಳ ಕುರಿತು ಜನತೆಗೆ ಅರಿವು ಮೂಡಿಸುವ ಕೈಂಕರ್ಯ ಆಗಾಗ್ಗೆ ನಡೆಯಬೇಕು ಎಂದು ಸಲಹೆ ನೀಡಿದರು.

    ಕನಕರಿಗೆ ದಾಸ ಸಂಬೋಧನೆ ಸಲ್ಲ. ಇವರಿಗೆ ಕನಕ ನಾಯಕ ಕರೆಯಬೇಕು. ಕನಕರ ಚಿಂತನೆ, ಬಸವಣ್ಣ ಚಿಂತನೆ, ಸಂವಿಧಾನ ಆಶಯ ಒಂದೇ. ಅದು ಸಮ ಸಮಾಜ ನಿರ್ಮಾಣ. ಆದರೆ, ಆಧುನಿಕ ಕಾಲದಲ್ಲಿ ಪ್ರತಿಭೆ ಆಧಾರದಡಿ ಅವಕಾಶ ನೀಡದೆ, ಜಾತಿ, ಧರ್ಮದ ಆಧಾರದ ಮೇಲೆ ಅವಕಾಶ ನೀಡುವುದು ಅತ್ಯಂತ ದುರಂತದ ಸಂಗತಿ ಎಂದು ಖೇದ ವ್ಯಕ್ತಪಡಿಸಿದರು.

    ವಕೀಲ ಎಸ್.ಎಸ್.ಯಡ್ರಾವಿ, ಜನಜೀವನ ಸುಧಾರಿಸಿದಂತೆ ಜಾತಿಯತೆ ಬೆಳೆದಿದೆ. ಸಹಬಾಳ್ವೆ ಕಣ್ಮರೆಯಾಗಿದೆ. ಸಂವಿಧಾನದ ಸಮಾನತೆ ಮೌಲ್ಯಗಳು 12ನೇ ಶತಮಾನದಲ್ಲಿ ಬಸವ, 15ನೇ ಶತಮಾನದಲ್ಲಿ ಕನಕರು ಎತ್ತಿ ಹಿಡಿದರು. ಕನಕರ ಜಾತ್ಯಾತೀತ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡ ಸಮ ಸಮಾಜ ನಿರ್ಮಾಣಕ್ಕೆ ಕರೆ ನೀಡಿದರು.

    ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಡಾ.ಲಿಂಗರಾಜ ಅಂಗಡಿ ಮಾತನಾಡಿ, ಕನಕರು ರಾಜರಾಗಿ, ವೈರಾಗ್ಯ ತಳೆದು, ಕೀರ್ತನೆಗಳಿಂದ ಸಮಾಜದ ಓರೆಕೋರೆ ತಿದ್ದಿದರು. ಸಂವಿಧಾನದ ಮೌಲ್ಯಗಳು ಅಳವಡಿಸಿಕೊಂಡು ಆರ್ಥಿಕ ಹಾಗೂ ಸಾಮಾಜಿಕ ಸಮಾನತೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

    ಕಾರ್ಯಕ್ರಮದಲ್ಲಿ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ವಿ.ಎಫ್. ಶೀಲವಂತ, ಉಪಾಧ್ಯಕ್ಷ ಸಂತೋಷ‌ ಮಲಗೋಡ, ಆನಂದ ಕೊಳ್ಳಿ, ಶಿವರಾಜ ಬೆಳ್ಳಕ್ಕಿ, ವಿಜಯ ಚಿನಿವಾಲ, ಪೂಜಾ ಸವದತ್ತಿ, ದೀಪಾ ದೊಡ್ಡಟ್ಟಿ, ಗಾಯತ್ರಿ ಎಸ್.ಆರ್, ಮನೋಜ ಬಿಕ್ಕಣ್ಣವರ, ಕೆ.ಎಸ್‌.ಕೋರಿಶೆಟ್ಟರ ಅವರಿಗೆ ಸನ್ಮಾನಿಸಿತು‌.

    ಬಸವರಾಜ ಗೊರವರ, ಪ್ರಮೀಳಾ ಜಕ್ಕಣ್ಣವರ, ಮೇಘಾ ಹುಕ್ಕೇರಿ, ಸುನಂದ ಯಡಾಳ, ಸುಮಂಗಲಾ ದಂಡಿನ‌, ವಿಜಯಲಕ್ಷ್ಮೀ ನಾಶಿ, ಸುವರ್ಣಾ ಸುರಕೋಡ, ವಿಜಯಲಕ್ಷ್ಮೀ ಶಿಂಧೆ, ಪ್ರೇಮಾನಂದ ಶಿಂಧೆ ಅವರು ಕನಕರ ಕೀರ್ತನೆ ಹಾಡಿದರು.

    ಕಾರ್ಯಕ್ರಮದಲ್ಲಿ ವಕೀಲ ಪ್ರಕಾಶ ಉಡಕೇರಿ, ಡಾ.ಶರಣಪ್ಪ ಕೊಟಗಿ ಇದ್ದರು. ಕಸಾಪ ಗೌರವ‌ ಕಾರ್ಯದರ್ಶಿ ಪ್ರೊ.ಕೆ.ಎಸ್.ಕೌಜಲಗಿ ಸ್ವಾಗತಿಸಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಕಸಾಪ ಧಾರವಾಡ ತಾಲೂಕಾಧ್ಯಕ್ಷ ಮಹಾಂತೇಶ ನರೇಗಲ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts