More

    ಕನ್ನಡ ಕೇವಲ ಭಾಷೆಯಲ್ಲ, ಇಲ್ಲಿನ ಜನರ ಜೀವ ಧ್ವನಿ; ಹಿರಿಯ ಸಾಹಿತಿ ಎನ್.ಎಂ.ರವಿಕುಮಾರ ವ್ಯಾಖ್ಯಾನ

    ಕಾನಾಹೊಸಹಳ್ಳಿ: ಸಾವಿರಾರು ವರ್ಷಗಳ ಪುರಾತನ ಇತಿಹಾಸವಿರುವ ಕನ್ನಡವು ಕೇವಲ ಭಾಷೆಯಾಗಿರದೆ, ಈ ನೆಲದ ಪರಂಪರೆಯಾಗಿದ್ದು, ಕನ್ನಡಿಗರ ಜೀವ ಧ್ವನಿಯಾಗಿದೆ ಎಂದು ಹಿರಿಯ ಸಾಹಿತಿ ಎನ್.ಎಂ.ರವಿಕುಮಾರ ತಿಳಿಸಿದರು.

    ಪಟ್ಟಣದ ಮದಕರಿ ವೃತ್ತದ ಬಳಿ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಕಲಾ ಸಂಘ ತಿಮ್ಮನಹಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್‌ರಾಜಕುಮಾರ್ ಸ್ಮರಣಾಥ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸಂಭ್ರಮ 2022’ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ಕನ್ನಡ ನಾಡು, ನುಡಿ, ನೆಲ, ಜಲ, ಸಂಸ್ಕೃತಿಯ ವೈವಿಧ್ಯತೆಯ ರಕ್ಷಣೆಯು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ. ವಷರ್ಕ್ಕೊಮ್ಮೆ ರಾಜ್ಯೋತ್ಸವದ ಹೆಸರಿನಲ್ಲಿ ಹಬ್ಬ ಆಚರಿಸಿದ ಮಾತ್ರಕ್ಕೆ ಭಾಷೆ ಉಳಿಯುವುದಿಲ್ಲ. ಪ್ರತಿಯೊಬ್ಬರೂ ಕನ್ನಡವನ್ನೇ ಮಾತನಾಡಬೇಕು. ಕನ್ನಡದಲ್ಲೇ ವ್ಯವಹರಿಸಬೇಕು. ಅಂದಾಗ ಮಾತ್ರ ಭಾಷೆ ಉಳಿಯುವುದು ಎಂದರು.

    ಚಿತ್ರದುರ್ಗ ಜಿಲ್ಲಾ ಕಲಾವಿದರ ಒಕ್ಕೂಟದ ಕಾರ್ಯದರ್ಶಿ ಡಿ.ಒ.ಮುರಾರ್ಜಿ ಮಾತನಾಡಿ, ಭಾಷೆ ಒಂದೇಯಾದರೂ ಪ್ರಾದೇಶಿಕವಾಗಿ ಭಿನ್ನತೆ ಪಡೆದುಕೊಂಡಿದೆ ಅಲ್ಲದೆ ಪ್ರಾದೇಶಿಕವಾಗಿಯೇ ಜಾನಪದ ಪ್ರಕಾರವಾಗಿ ನೆಲದ ಧ್ವನಿಯ ಮೂಲಕ ಗ್ರಾಮೀಣ ಭಾಗದಲ್ಲಿ ಜೀವಂತಿಕೆ ಉಳಿಸಿಕೊಂಡಿದೆ. ಆದರೆ, ಪಟ್ಟಣ ಪ್ರದೇಶದಲ್ಲಿನ ಜನರು ಪರಭಾಷೆಯ ವ್ಯಾಮೋಹಕ್ಕೆ ಒಳಗಾಗಿದ್ದಾರೆ. ಇಂದಿಗೂ ಜನಪದ ಮತ್ತು ಗ್ರಾಮೀಣ ಜನರರಿಂದಾಗಿ ಕನ್ನಡ ಭಾಷೆ ಶ್ರೀಮಂತವಾಗಿದೆ ಎಂದರು.

    ಇದೇ ವೇಳೆ ಅಂಜಲಿ ನೃತ್ಯ ಕೇಂದ್ರದವರು ಭರತನಾಟ್ಯ ಮತ್ತು ಜಾನಪದ ನೃತ್ಯವನ್ನು, ಭೀಮಸಮುದ್ರ ರಾಜು ವೀರಗಾಸೆ ಕುಣಿತವನ್ನು ಪ್ರದರ್ಶಿಸಿದರು. ಗ್ರಾಪಂ ಅಧ್ಯಕ್ಷೆ ನೀಲಮ್ಮ ಬೊಮ್ಮಣ್ಣ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬೋರಣ್ಣ, ಶರಣಗೌಡ್ರು, ಎಳನೀರು ಗಂಗಣ್ಣ, ಕೆ.ವೀರೇಶ, ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಕಲಾ ಸಂಘದ ಸಂಸ್ಥಾಪಕರ ತಿಮ್ಮನಹಳ್ಳಿ ನಿಂಗರಾಜು, ತತ್ವಪದ ಗಾಯಕ ಜಿ.ಬೋರಪ್ಪ, ಕೆ.ಗಂಗಾಧರ, ಸುಮಯಲ್ಲಪ್ಪ, ನರಸಿಂಹಮೂರ್ತಿ, ನಾಗರಹುಣಸೆ ದುರುಗೇಶ, ಹಿಮಂತ್, ರಾಜು, ಮೈಲಾರಿ, ಕುರಿಹಟ್ಟಿ ರಾಜು, ಮಲಿಯಪ್ಪ . ಪ್ಯಾಡ್ ಮಹಾಂತೇಶ, ಬಣವಿಕಲು ಮಂಜು ಇದ್ದರು. ತಿಮ್ಮನಹಳ್ಳಿ ಡಿ.ಬಿ.ನಿಂಗರಾಜು ಪ್ರಾರ್ಥಿಸಿದರು. ನಾಗರಹುಣಸೆ ದುರುಗೇಶಿ ಸ್ವಾಗತಿಸಿದರು. ಕೆ. ಗಂಗಾಧರ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts