More

    ಸಕಾಲಕ್ಕೆ ಬಸ್ ಬಿಡಲು ಒತ್ತಾಯಿಸಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ನೌಕರರಿಂದ ಪ್ರತಿಭಟನೆ

    ಕಂಪ್ಲಿ: ಶಾಲೆ-ಕಾಲೇಜು, ಕೆಲಸಕ್ಕಾಗಿ ಹೊಸಪೇಟೆಗೆ ತೆರಳಲು ಸಕಾಲಕ್ಕೆ ಬಸ್‌ಗಳು ಇಲ್ಲದ್ದಕ್ಕಾಗಿ ಆಕ್ರೋಶಗೊಂಡ ವಿದ್ಯಾರ್ಥಿಗಳು ಹಾಗೂ ನೌಕರರು ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಶುಕ್ರವಾರ ಬೇರೆಡೆಗೆ ಹೊರಡುತ್ತಿದ್ದ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದರು.

    ಪ್ರತಿಭಟನಾನಿರತ ವಿದ್ಯಾರ್ಥಿಗಳಾದ ಕಿಶೋರ್, ಸಂತೋಷ್, ತೌಷಿಫ್ ಮಾತನಾಡಿ, ಪ್ರತಿದಿನ ಬೆಳಗ್ಗೆ 8.45 ರಿಂದ 9.15ರ ವರೆಗೆ ಪ್ರತಿ ಹದಿನೈದು ನಿಮಿಷಕ್ಕೆ ಒಂದು ಬಸ್ ಕಂಪ್ಲಿಯಿಂದಲೇ ಹೊಸಪೇಟೆಗೆ ಬಿಡಬೇಕು. ಶಿವಮೊಗ್ಗ, ಕುಂದಾಪುರ, ಮೂಡಿಗೆರೆಗಳಿಂದ ಬರುವ ಬಸ್‌ಗಳಲ್ಲಿ ನಿಲ್ಲಲು ಸ್ಥಳ ಇರುವುದಿಲ್ಲ. ಇಂದು 9.30 ಆದರೂ ಹೊಸಪೇಟೆಗೆ ಒಂದೂ ಬಸ್ ಬಂದಿಲ್ಲ. ಇದರಿಂದ ಶಾಲೆ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಕೆಲಸಕ್ಕಾಗಿ ತೆರಳುವ ಉದ್ಯೋಗಿಗಳು, ರೋಗಿಗಳಿಗೆ ತುಂಬಾ ತೊಂದರೆಯಾಗಿದೆ. ಇದು ನಿತ್ಯದ ಸಮಸ್ಯೆಯಾಗಿದೆ. ಈ ಬಗ್ಗೆ ಕುರುಗೋಡು ಡಿಟಿಒ ಗಮನಕ್ಕೆ ತಂದರೆ ಬಸ್ ಬಿಡುವುದಿಲ್ಲ, ಬೇಕಾದ್ದು ಮಾಡಿಕೊಳ್ಳಿ ಎನ್ನುತ್ತಾರೆ. ಸಾರಿಗೆ ಸಚಿವರು ನಮ್ಮ ಜಿಲ್ಲೆಯವರಾದರೂ ಉಪಯೋಗವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ವಿಷಯ ತಿಳಿದು ಪೊಲೀಸರು ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು. ಹೊಸಪೇಟೆಗೆ ಬಸ್ಸುಗಳು ಬಂದ ನಂತರವೇ ಪ್ರತಿಭಟನೆ ಮೊಟಕುಗೊಂಡಿತು.

    ಸಂಚಾರ ನಿಯಂತ್ರಕ ಆದಿಶೇಷ ಪ್ರತಿಕ್ರಿಯಿಸಿ, ಬಳ್ಳಾರಿ, ಕುರುಗೋಡು ಡಿಪೋಗಳಿಂದಲೇ ಬಸ್‌ಗಳು ಬರಬೇಕು. ಇಂದು ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಬಸ್‌ಗಳು ಹೊರಟಿದ್ದರಿಂದ ಕೊರತೆಯಾಗಿದೆ. ರೂಟ್ ನಂ47ರ ಲೋಕಲ್ ಬಸ್ ಹೊಸಪೇಟೆಯಿಂದ ಬಂದಿಲ್ಲ. ರೂಟ್ ನಂ.23 ಮತ್ತು 24ರ ರಾಯಚೂರು-ಸಾಗರ ಬಸ್ಸೂ ಬಂದಿಲ್ಲ. ಪ್ರತಿಭಟನಾಕಾರರ ಬೇಡಿಕೆಯಂತೆ ಅಗತ್ಯ ಬಸ್ಸುಗಳನ್ನು ಒದಗಿಸುವಂತೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts