More

    ದೇವರ ಒಲುಮೆಗೆ ಹಂಪಿಸಾವಿರದೇವರಮಠದ ವಾಮದೇವ ಶಿವಾಚಾರ್ಯರ ಆಶಯ

    ಕಂಪ್ಲಿ: ಲೌಕಿಕ ಜಂಜಾಟಗಳಿಗೆ ನೀಡುವ ಮನಸ್ಸನ್ನು ದೇವರ ಒಲುಮೆಗೆ ಕೊಟ್ಟಲ್ಲಿ ಮಾತ್ರ ಇಷ್ಟಾರ್ಥ ಸಿದ್ಧಿ ಸಾಧ್ಯ ಎಂದು ಎಮ್ಮಿಗನೂರು ಹಂಪಿಸಾವಿರದೇವರಮಠದ ವಾಮದೇವ ಶಿವಾಚಾರ್ಯರು ಹೇಳಿದರು.

    ತಾಲೂಕಿನ ಹೊಸನೆಲ್ಲೂಡಿ ಗ್ರಾಮದ ಶ್ರೀಈಶ್ವರ ದೇವಸ್ಥಾನದ ಗೋಪುರ ಕಳಸಾರೋಹಣ, ಶ್ರೀ ಗಣೇಶ, ಶ್ರೀ ಪಾರ್ವತಿ, ಶ್ರೀ ನಂದೀಶ್ವರ ಶಿಲಾಮೂರ್ತಿಗಳ ಪ್ರಾಣಪ್ರತಿಷ್ಠಾಪನೆ ನೆರವೇರಿಸಿ ಸೋಮವಾರ ಮಾತನಾಡಿದರು.

    ಮೌನದಿಂದ ಪುಣ್ಯದೊಂದಿಗೆ ಎಲ್ಲ ಸಿದ್ಧಿಗಳನ್ನು ಸಿದ್ಧಿಸಿಕೊಳ್ಳಲು ಸಾಧ್ಯವಿದೆ. ಮಂತ್ರ, ಗಂಟೆ, ಜಾಗಟೆಗಳ ಸದ್ದಿನಿಂದಾಗಿ ಮನೆ ಬಯಲಿಗಿಂತ ದೇವಸ್ಥಾನದ ಬಯಲು ಶ್ರೇಷ್ಠವಾಗಿರಲು ಸಾಧ್ಯವಾಗಿದೆ. ಪುಣ್ಯಕ್ಷೇತ್ರಗಳಲ್ಲಿ ಮಾತಿಗಿಂತ ಮೌನಕ್ಕೆ ಆದ್ಯತೆ ನೀಡಬೇಕಿದೆ. ದೇವಸ್ಥಾನದಲ್ಲಿ ಪಾವಿತ್ರ್ಯತೆ, ಪರಿಶುದ್ಧತೆ ಕಾಪಾಡಿಕೊಂಡಲ್ಲಿ ಮನಸ್ಸಿಗೆ ಶಾಂತಿ, ನೆಮ್ಮದಿ ಲಭಿಸಲಿದೆ ಎಂದರು.

    ಅರಳಿಹಳ್ಳಿ ರಾಜರಾಜೇಶ್ವರಿ ಬೃಹನ್ಮಠದ ಗವಿಸಿದ್ಧೇಶ್ವರ ತಾತನವರು ಮಾತನಾಡಿ, ನೆಮ್ಮದಿ, ತಾಳ್ಮೆಗಿಂತ ಮಿಗಿಲಾದ ಸಾಧನೆಯಿಲ್ಲ. ಮನಸ್ಸು ನೋಂದಾಗ, ಸಂಕಷ್ಟದಲ್ಲಿದ್ದಾಗ, ವಿರಕ್ತಭಾವನೆ ಮೂಡಿದಾಗ ದೇವಸ್ಥಾನ ನೆನಪಾಗುತ್ತದೆ. ಜಂಜಾಟಗಳಿಂದಾಗಿ ಬದುಕಿನಲ್ಲಿ ತೃಪ್ತಿ ಮಾಯವಾಗಿದೆ ಎಂದರು.

    ಎಂ.ಗುಡುದೂರಿನ ನೀಲಕಂಠಾರ್ಯ ಮಹಾಸ್ವಾಮೀಜಿ, ಹೆಬ್ಬಾಳ್ ರೇಣುಕ ಪುಣ್ಯಾಶ್ರಮದ ಶಿವಪ್ರಕಾಶ ಶರಣರು, ನೆಲ್ಲೂಡಿಯ ಕೊಟ್ರಯ್ಯಸ್ವಾಮಿ ತಾತನವರು, ಆನೆಗುಂದಿಯ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಾನಂದಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು.

    ನೆಲ್ಲೂಡಿಯ ವಕೀಲ ಎನ್.ಅಯ್ಯಪ್ಪ ಸೇರಿ ಸರ್ವ ಸಮುದಾಯಗಳ ಗಣ್ಯರು ಪಾಲ್ಗೊಂಡಿದ್ದರು. ದೇವಸಮುದ್ರದ ಎಚ್.ಎಂ.ದೊಡ್ಡಬಸಯ್ಯಸ್ವಾಮಿ, ಎಮ್ಮಿಗನೂರಿನ ಎಚ್.ಎಂ.ದೊಡ್ಡಬಸಯ್ಯಸ್ವಾಮಿ, ನಡವಿಯ ಎಚ್.ಎಂ.ಗುರುಲಿಂಗಯ್ಯಸ್ವಾಮಿ, ಕೆಸರಟ್ಟಿಯ ಎಚ್.ಎಂ.ಕುಮಾರಸ್ವಾಮಿ ಪೌರೋಹಿತ್ಯದಲ್ಲಿ ನೂತನ ಶಿಲಾಮೂರ್ತಿಗಳ ಪ್ರಾಣಪ್ರತಿಷ್ಠಾಪನೆ ಜರುಗಿತು. ನಂತರ ರುದ್ರಾಭಿಷೇಕ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಗಳಿಂದ ಜರುಗಿದವು. ಅನ್ನಸಂತರ್ಪಣೆ, ಭಜನಾ ಕಾರ್ಯಕ್ರಮಗಳು ಜರುಗಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts