More

    ಜೋಡುಕರೆ ಕಂಬಳ ಋತು ಆರಂಭ: ಮೊದಲ ಕೂಟದಲ್ಲಿ 173 ಜೊತೆ ಕೋಣಗಳು ಭಾಗಿ

    ಮಂಗಳೂರು: ಕೋವಿಡ್-19ರ ರೂಪಾಂತರಿ ಒಮಿಕ್ರಾನ್ ಭೀತಿ ನಡುವೆಯೂ ಪ್ರಸಕ್ತ ಸಾಲಿನ ಜೋಡುಕರೆ ಕಂಬಳ ಕೂಟಕ್ಕೆ ಭಾನುವಾರ ಚಾಲನೆ ಸಿಕ್ಕಿದೆ. ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ ಬೆಳಗ್ಗೆ 10ಕ್ಕೆ ಆರಂಭಗೊಂಡಿದೆ.

    ಮೊದಲ ಕಂಬಳವಾಗಿರುವುದರಿಂದ ನಿರೀಕ್ಷೆಗೂ ಮೀರಿ ಕರಾವಳಿಯ ವಿವಿಧೆಡೆಗಳಿಂದ ಸಹಸ್ರಾರು ಕಂಬಳ ಪ್ರೇಮಿಗಳು ಆಗಮಿಸಿದ್ದರು. ಕೋವಿಡ್ ಭೀತಿ ಇರುವುದರಿಂದ 150 ಜೊತೆ ಕೋಣಗಳ ನಿರೀಕ್ಷೆ ಇತ್ತಾದರೂ, ಅದನ್ನೂ ಮೀರಿ 173 ಜೊತೆ ಕೋಣಗಳು ಭಾಗವಹಿಸಿವೆ. ನೇಗಿಲು ಕಿರಿಯ ವಿಭಾಗದಲ್ಲಿ 92, ಹಗ್ಗ ಕಿರಿಯ ವಿಭಾಗದಲ್ಲಿ 29, ನೇಗಿಲು ಹಿರಿಯ 29, ಅಡ್ಡ ಹಲಗೆ 7, ಹಗ್ಗ ಹರಿಯ 14 ಮತ್ತು ಕನೆ ಹಲಗೆ ವಿಭಾಗದಲ್ಲಿ 2 ಜೊತೆ ಕೋಣಗಳು ಇದ್ದವು. ಕಳೆದ ವರ್ಷ 167 ಜೊತೆ ಕೋಣಗಳು ಭಾಗವಹಿಸಿದ್ದವು.

    ಸೋಮವಾರ ಬೆಳಗ್ಗೆ 10 ಗಂಟೆಯೊಳಗೆ ಮುಗಿಸಿ, ಫಲಿತಾಂಶ ಪ್ರಕಟಿಸುವ ಉದ್ದೇಶ ಕಂಬಳ ಸಮಿತಿಯದ್ದು. ರಾತ್ರಿವರೆಗೆ ಎಲ್ಲ ಕೋಣಗಳು 0.9+ ಸೆಕೆಂಡ್ ವೇಗದಲ್ಲಿ ಓಟ ಪೂರ್ಣಗೊಳಿಸಿದ್ದರಿಂದ ಆರಂಭಿಕ ಹಂತದಲ್ಲಿ ಯಾವುದೇ ದಾಖಲೆಗಳು ಮೂಡಿ ಬಂದಿಲ್ಲ.
    ಕಳೆದ ವರ್ಷ ಕಂಬಳ ಕೂಟದಲ್ಲಿ ಭಾಗವಹಿಸಿದ್ದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ವೈಯಕ್ತಿಕ ದೇಣಿಗೆಯಾಗಿ ನೀಡಿದ 11 ಲಕ್ಷ ರೂ.ನಲ್ಲಿ ಶಾಶ್ವತ ಕರೆ ನಿರ್ಮಿಸಲಾಗಿದ್ದು, ಕಂಬಳಕ್ಕೆ ಹೊಸ ಮೆರುಗು ನೀಡಿದೆ.

    ಹೊಸ ಸೆನ್ಸರ್ ಬಳಕೆಯಾಗಿಲ್ಲ: ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಕಳೆದ ವರ್ಷ ಜಿಲ್ಲಾ ಕಂಬಳ ಸಮಿತಿಗೆ ಕೊಡುಗೆಯಾಗಿ ನೀಡಿದ್ದ ಹೊಸ ಸೆನ್ಸರನ್ನು ಈ ಕಂಬಳದಲ್ಲಿ ಬಳಕೆ ಮಾಡಿಲ್ಲ. ಹೊಸ ಸೆನ್ಸರ್ 0.01 ಸೆಕೆಂಡು(ಕೂದಲೆಳೆ ಅಂತರದ) ಫಲಿತಾಂಶವನ್ನೂ ಒದಗಿಸುವ ಸಾಮರ್ಥ್ಯ ಹೊಂದಿದೆ. ಮುಂದಿನ ವಾರದ (ಡಿ.11) ಮೂಡುಬಿದಿರೆ ಕಂಬಳದಲ್ಲಿ ಇದು ಬಳಕೆಯಾಗುವ ಸಾಧ್ಯತೆಯಿದೆ.

    ಪುನೀತ್‌ಗೆ ಗೌರವ: ಹೊಕ್ಕಾಡಿಗೋಳಿ ಕಂಬಳದಲ್ಲಿ ‘ಬೆಂಗಳೂರು ದೊಡ್ಮನೆ ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗ’ ಹೆಸರಿನಲ್ಲಿ ಪಾಲ್ಗೊಂಡ ಓಟದ ಕೋಣಗಳು ಗಮನ ಸೆಳೆದವು. ಕಿರಣ್ ಕುಮಾರ್ ಮಂಜಿಲ ಮತ್ತು ಯಶೋಧರ ಮಹಾಬಲ ಪೂಜಾರಿ ಸಹೋದರರು ನೇತೃತ್ವ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts