More

    ಒಂದೇ ಕಂಬಳದಲ್ಲಿ ನಾಲ್ಕು ದಾಖಲೆ

    ವಿಜಯವಾಣಿ ಸುದ್ದಿಜಾಲ ಮಂಗಳೂರು
    ಕಂಬಳದ ಇತಿಹಾಸದಲ್ಲೇ ಒಂದೇ ಋತುವಿನಲ್ಲಿ ಅತ್ಯಧಿಕ ಪದಕ ಬಾಚಿಕೊಂಡ ಹೆಗ್ಗಳಿಕೆ ಅಶ್ವತ್ಥಪುರ ಶ್ರೀನಿವಾಸ ಗೌಡರಿಗಾದರೆ, ಅತಿ ವೇಗದ ಓಟಗಾರರೆಂಬ ದಾಖಲೆ ಹಕ್ಕೇರಿ ಸುರೇಶ್ ಶೆಟ್ಟಿ ಮತ್ತು ಇರ್ವತ್ತೂರು ಆನಂದ್ ಪಾಲಾಗಿದೆ.
    ಐಕಳ ಕಂಬಳದಲ್ಲಿ 142.5 ಮೀ. ಉದ್ದದ ಕರೆಯಲ್ಲಿ 13.62 ಸೆಕೆಂಡ್‌ಗಳಲ್ಲಿ ಓಡುವ ಮೂಲಕ (100ರಲ್ಲಿ 9.55 ಸೆಕೆಂಡ್) ಶ್ರೀನಿವಾಸ ಗೌಡ ದಾಖಲೆ ಓಟಗಾರ ಎಂಬ ಬಿರುದು ಪಡೆದಿದ್ದರು. ವೇಣೂರು ಕಂಬಳದಲ್ಲಿ ಬಜಗೋಳಿ ನಿಶಾಂತ್ ಶೆಟ್ಟಿ 143 ಮೀ. ದೂರವನ್ನು 13.61 ಸೆಕೆಂಡ್‌ಗಳಲ್ಲಿ ಕ್ರಮಿಸುವ (100ರಲ್ಲಿ 9.52 ಸೆಕೆಂಡ್) ಮೂಲ ಹೊಸ ದಾಖಲೆ ನಿರ್ಮಿಸಿದ್ದರು. ಈಗ ಪೈವಳಿಕೆ ಬೋಳಂಗಳ ಅಣ್ಣತಮ್ಮ ಜೋಡುಕರೆ ಕಂಬಳದಲ್ಲಿ ಈ ಇಬ್ಬರ ದಾಖಲೆಗಳನ್ನೂ ಅಳಿಸಿ ಹಾಕಿರುವವರು ಇರ್ವತ್ತೂರು ಆನಂದ್ ಮತ್ತು ಹಕ್ಕೇರಿ ಸುರೇಶ್ ಶೆಟ್ಟಿ.

    ಹಕ್ಕೇರಿ ಸುರೇಶ್: ನೇಗಿಲು ಹಿರಿಯ ವಿಭಾಗದ ಫೈನಲ್‌ನಲ್ಲಿ ಬೋಳದಗುತ್ತು ಸತೀಶ್ ಶೆಟ್ಟಿ ‘ಎ’ ಕೋಣಗಳನ್ನು ಓಡಿಸಿ ಚಿನ್ನದ ಪದಕ ಪಡೆದ ಹಕ್ಕೇರಿ ಸುರೇಶ್ ಶೆಟ್ಟಿ 131.5 ಮೀ. ದೂರವನ್ನು 12.45 ಸೆಕೆಂಡ್‌ಗಳಲ್ಲಿ (100ರಲ್ಲಿ 9.47) ಕ್ರಮಿಸಿರುವುದು ಇನ್ನೊಂದು ದಾಖಲೆ. ಸುಮಾರು 34 ವರ್ಷ ವಯಸ್ಸಿನ ಇವರು 12 ವರ್ಷಗಳಿಂದ ಕಂಬಳ ಓಟಗಾರರಾಗಿ ಹೆಸರು ಮಾಡಿದವರು. 2013-14ರಲ್ಲಿ 35 ಪದಕ ಗೆದ್ದು ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಪಡೆದಿದ್ದರು.

    ಇರ್ವತ್ತೂರು ಆನಂದ: ನೇಗಿಲು ಹಿರಿಯ ವಿಭಾಗದ ಪರೀಕ್ಷಾರ್ಥ ಓಟ (ಚಾನ್ಸ್)ದಲ್ಲಿ ಆನಂದ್ 131.5 ಮೀ. ಉದ್ದದ ಕರೆಯಲ್ಲಿ 12.41 ಸೆಕೆಂಡ್‌ಗಳಲ್ಲಿ ಓಡುವ ಮೂಲಕ (100ರಲ್ಲಿ 9.44 ಸೆಕೆಂಡ್) ಹೊಸ ದಾಖಲೆ ನಿರ್ಮಿಸಿದ್ದಾರೆ. ಇದು ಇದುವರೆಗಿನ ಅತಿ ವೇಗದ ಓಟ ಎಂಬ ಗೌರವಕ್ಕೆ ಪಾತ್ರವಾಗಿದೆ. ತೋಡಾರು ಪಂಚಶಕ್ತಿ ಬಾರ್ದಿಲ ರಂಜಿತ್ ಪೂಜಾರಿ ಅವರ ಕೋಣಗಳನ್ನು ಇವರು ಓಡಿಸಿದ್ದರು. ಚಾನ್ಸ್‌ಗೆ ಸೀಮಿತವಾಗಿ ಓಡಿದಾಗ ಈ ದಾಖಲೆ ನಿರ್ಮಾಣವಾಗಿದ್ದು, ಸ್ಪರ್ಧೆಯಲ್ಲಿ ಪುನರಾವರ್ತಿಸಲು ಸಾಧ್ಯವಾಗಿಲ್ಲ.
    47 ವರ್ಷ ವಯಸ್ಸಿನ ಇವರು 22ನೇ ವಯಸ್ಸಿನಲ್ಲೇ ಕಂಬಳ ಓಟಗಾರನಾಗಿದ್ದು, 25 ವರ್ಷಗಳಿಂದ ಸ್ಥಿರ ನಿರ್ವಹಣೆ ತೋರುತ್ತಿರುವುದು ವಿಶೇಷ. ನೂರಾರು ಪದಕಗಳೂ ಇವರ ಮಡಿಲಿಗೆ ಬಿದ್ದಿವೆ.

    ಶ್ರೀನಿವಾಸ ಗೌಡ: ಇದೇ ಕಂಬಳದಲ್ಲಿ ಶ್ರೀನಿವಾಸ ಗೌಡ ಅವರೂ ವೈಯಕ್ತಿಕ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ ಅವರ ಗರಿಷ್ಠ ವೇಗ 100 ಮೀ.ನಲ್ಲಿ 9.55 ಆಗಿತ್ತು. ಪೈವಳಿಕೆ ಕಂಬಳದ ನೇಗಿಲು ಹಿರಿಯ ವಿಭಾಗದಲ್ಲಿ ಅವರು 131.5 ಮೀ. ದೂರವನ್ನು 12.51 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದಾರೆ. ಅದರೆ ಅವರ ವೇಗ 100 ಮೀ.ಗಳಲ್ಲಿ 9.51ಕ್ಕೆ ಜಿಗಿದಿದೆ.

    ಶ್ರೀನಿವಾಸ ಗೌಡ 39 ಪದಕ: ಪೈವಳಿಕೆ ಕಂಬಳದಲ್ಲಿ ಎರಡು ಚಿನ್ನ, ಎರಡು ಬೆಳ್ಳಿ ಸಹಿತ ನಾಲ್ಕು ಪದಕ ಗೆಲ್ಲುವ ಮೂಲಕ ಒಂದು ಕಂಬಳ ಋತುವಿನಲ್ಲಿ ಅತಿ ಹೆಚ್ಚು ಪದಕ ಗೆದ್ದಿರುವ ದಾಖಲೆ ಶ್ರೀನಿವಾಸ ಗೌಡರ ಮುಡಿಯೇರಿದೆ. 30 ಪ್ರಥಮ, 9 ದ್ವಿತೀಯ ಸಹಿತ 39 ಪದಕಗಳನ್ನು ಕೇವಲ 13 ಕಂಬಳಗಳಲ್ಲಿ ಪಡೆದುಕೊಂಡಿರುವುದು ಇವರ ಹೆಗ್ಗಳಿಕೆ. ಇವರು ಬಾರಾಡಿ ಕಂಬಳದಲ್ಲೂ ನಾಲ್ಕು ಪದಕ ಗೆದ್ದಿದ್ದರು. ಇದುವರೆಗೆ ಅತ್ಯಧಿಕ ಪದಕ ದಾಖಲೆ ಹಕ್ಕೇರಿ ಸುರೇಶ್ ಶೆಟ್ಟಿ ಹೆಸರಿನಲ್ಲಿತ್ತು. ಅವರು 2013-14ರ ಸಾಲಿನಲ್ಲಿ 35 ಪದಕ ಗೆದ್ದಿದ್ದರು. ಈ ದಾಖಲೆಯನ್ನು ಶ್ರೀನಿವಾಸ ಗೌಡ ವೇಣೂರು ಕಂಬಳದಲ್ಲಿ ಸರಿಗಟ್ಟಿದ್ದರು.

    ಇನ್ನು ಎರಡೇ ಕಂಬಳ:
    ಫೆ.29ರಂದು ಉಪ್ಪಿನಂಗಡಿ ಹಾಗೂ ಮಾರ್ಚ್ 7ರಂದು ಬಂಗಾಡಿ ಕಂಬಳದೊಂದಿಗೆ ಈ ಬಾರಿಯ ಕಂಬಳ ಋತು ಮುಕ್ತಾಯಗೊಳ್ಳಲಿದೆ.

    ಪೈವಳಿಕೆ ಕಂಬಳದಲ್ಲಿ ಆರಂಭದಲ್ಲೂ (ಗಂತ್) ಸೆನ್ಸರ್ ಅಳವಡಿಸಿದ್ದರಿಂದ ನಿಖರ ಫಲಿತಾಂಶ ಪಡೆಯುವುದು ಸಾಧ್ಯವಾಗಿದೆ. ಗಂತ್‌ನಿಂದ 7 ಮೀ. ಎದುರಿನಲ್ಲಿ ಲೇಸರ್ ಸೆನ್ಸರ್ ಅಳವಡಿಸಿದ್ದರಿಂದ ಉತ್ತಮ ವೇಗವೂ ದಾಖಲಾಗಿದೆ. ಕೋಣಗಳು ಮತ್ತು ಓಟಗಾರರ ಬೆಸ್ಟ್ ಪರ್ಫಾರ್ಮೆನ್ಸ್ 131.5 ಮೀ. ಒಳಗೆ ಲಭಿಸಿದ್ದರಿಂದ ಉತ್ತಮ ವೇಗ ದಾಖಲೆಗೆ ಲಭಿಸಿದೆ. ಪ್ರಾಯೋಗಿಕವಾಗಿ ಯಶಸ್ಸು ಕಂಡಿರುವುದರಿಂದ ಇದು ಮುಂದುವರಿಯುತ್ತದೆ.
    – ವಿಜಯಕುಮಾರ್ ಜೈನ್ ಕಂಗಿನಮನೆ, ಕಂಬಳ ತೀರ್ಪುಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts