More

    ಎಲ್ಲ ಕಂಬಳಗಳಿಗೂ ಸಿಗಲಿ ಪ್ರೋತ್ಸಾಹಧನ

    ಬೈಂದೂರು: ಬಹುವರ್ಷದ ಬೇಡಿಕೆಯ ಮೇರೆಗೆ ರಾಜ್ಯ ಸರ್ಕಾರ ಕರಾವಳಿಯ ಉಭಯ ಜಿಲ್ಲೆಗಳ ಕಂಬಳಗಳಿಗೆ 1 ಕೋಟಿ ರೂ. ಪ್ರೋತ್ಸಾಹಧನ ಬಿಡುಗಡೆ ಮಾಡಿದೆ. ಈ ಬೆಳವಣಿಗೆಯ ಜತೆಗೆ ಕಂಬಳ ಆಚರಣೆಯ ತಾರತಮ್ಯ ಮಾಡದೆ ತಲೆ ತಲಾಂತರಗಳಿಂದ ನಡೆಸಿಕೊಂಡು ಬಂದಿರುವ ಕರಾವಳಿ ಭಾಗದ ಎಲ್ಲ ಕಂಬಳಗಳಿಗೆ ಮಾನ್ಯತೆ ದೊರೆಯಬೇಕು ಎನ್ನುವ ಆಗ್ರಹ ಬೈಂದೂರು ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ಕೇಳಿಬರುತ್ತಿದೆ.
    ಸರ್ಕಾರ ಬಿಡುಗಡೆ ಮಾಡಿರುವ ಪ್ರೋತ್ಸಾಹಧನ ಕೇವಲ ಜೋಡುಕೆರೆ ಕಂಬಳಗಳಿಗೆ ಅನ್ವಯಿಸುತ್ತಿದೆ ಎನ್ನುವ ಮಾತು ಕೇಳಿಬರುತ್ತಿದ್ದಂತೆ ಸಾಂಪ್ರದಾಯಿಕ ಹಾಗೂ ಧಾರ್ಮಿಕ ಆರಾಧನೆಯ ಕಂಬಳ ಸಮಿತಿಯವರು ತಮ್ಮ ಬೇಡಿಕೆಗಳಿಗೆ ಸರ್ಕಾರ ಮತ್ತು ಜಿಲ್ಲಾಧಿಕಾರಿ ಸ್ಪಂದಿಸಬೇಕೆನ್ನುವ ಬೇಡಿಕೆ ಇಟ್ಟಿದ್ದಾರೆ. ಪ್ರಸ್ತುತ ಕಂಬಳಗಳಿಗೆ ನೀಡಿರುವ ಪ್ರೋತ್ಸಾಹಧನ ಯೋಜನೆಯಲ್ಲಿ ಸಮಿತಿ ರಚನೆ ಸೇರಿದಂತೆ ಹಲವು ನಿಯಮಗಳಿವೆ. 1 ಕೋಟಿ ರೂ. ಅನುದಾನದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ತಲಾ 50 ಲಕ್ಷ ರೂ. ವಿಂಗಡಿಸಲಾಗಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಧಾರ್ಮಿಕ ಮತ್ತು ಸಾಂಪ್ರದಾಯಿಕ ಆಚರಣೆಯ ಕಂಬಳಗಳು ಹೆಚ್ಚಿನ ಸಂಖ್ಯೆಯಲ್ಲಿದೆ. ಬೈಂದೂರು ಸೇರಿದಂತೆ 40ಕ್ಕೂ ಅಧಿಕ ಸ್ಥಳಗಳಲ್ಲಿ ಪಾರಂಪರಿಕ ಕಂಬಳ ನಡೆಯುತ್ತಿದೆ. ಹೀಗಾಗಿ ಪ್ರೋತ್ಸಾಹಧನ ವಿಸ್ತಾರಗೊಳ್ಳಬೇಕಿದೆ ಎನ್ನುವುದು ಜಿಲ್ಲೆಯ ಕಂಬಳ ಸಮಿತಿ ಆಶಯವಾಗಿದೆ.

    ಕರಾವಳಿ ಭಾಗದಲ್ಲಿ ನಾಗಾರಾಧನೆ, ವಿಶೇಷ ಪೂಜೆ, ಸಂಪ್ರದಾಯದ ಚೌಕಟ್ಟಿನಲ್ಲಿ ಕಂಬಳ ನಡೆಯುತ್ತಿದೆ. ಕೇವಲ ಮನರಂಜನೆ ಮಾತ್ರವಲ್ಲದೆ ಈ ಆಚರಣೆಗೆ ಧಾರ್ಮಿಕ ಹಿನ್ನೆಲೆಯಿದೆ. ಹೀಗಾಗಿ ಎಲ್ಲರಿಗೂ ಪ್ರೋತ್ಸಾಹ ದೊರೆಯಬೇಕು. ತಾರತಮ್ಯ ಮಾಡದೆ ನಿಯಮದ ಪ್ರಕಾರ ಇರುವ ಎಲ್ಲ ಗ್ರಾಮೀಣ ಭಾಗದ ಕಂಬಳಗಳನ್ನು ಗಣನೆಗೆ ತೆಗೆದುಕೊಂಡು ಪ್ರೋತ್ಸಾಹಧನ ವಿತರಣೆ ಮಾಡುವ ಕುರಿತು ಜಿಲ್ಲಾಧಿಕಾರಿಗಳು ಗಮನಹರಿಸಬೇಕು.
    ವೆಂಕಟ ಪೂಜಾರಿ ಸಸಿಹಿತ್ಲು, ಬೈಂದೂರು ವಲಯ ಕಂಬಳ ಸಮಿತಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts