More

    ಕಮಲ್​ನಾಥ್ ಸರ್ಕಾರಕ್ಕೆ ವಿಶ್ವಾಸಮತ ಸಂಕಷ್ಟ: ಬಿಜೆಪಿ ನಾಯಕರಿಂದ ಸಿದ್ಧತೆ, 16ರಂದು ಆರಂಭವಾಗುವ ಬಜೆಟ್ ಅಧಿವೇಶನದಲ್ಲಿ ಪ್ರಸ್ತಾಪ ಮಂಡನೆ

    ನವದೆಹಲಿ: ಕಾಂಗ್ರೆಸ್​ನ 22 ಶಾಸಕರ ರಾಜೀನಾಮೆಯಿಂದ ಮಧ್ಯಪ್ರದೇಶದ ಕಮಲ್​ನಾಥ್ ಸರ್ಕಾರ ಅಲ್ಪಮತಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ, ಮಾರ್ಚ್ 16ರಂದು ವಿಶ್ವಾಸಮತ ಸಾಬೀತು ಮಾಡುವಂತೆ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ. ಆದರೆ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸುವವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗದು ಎಂದು ಮುಖ್ಯಮಂತ್ರಿ ಕಮಲ್​ನಾಥ್ ಹೇಳಿದ್ದಾರೆ. ಹೀಗಾಗಿ ಕಳೆದ ವರ್ಷ ಕರ್ನಾಟಕದಲ್ಲಿ ನಡೆದ ವಿದ್ಯಮಾನವೇ ಮಧ್ಯಪ್ರದೇಶದಲ್ಲಿ ಪುನರಾವರ್ತನೆಯಾಗುವ ಲಕ್ಷಣ ಗೋಚರಿಸುತ್ತಿದೆ.

    ಬಜೆಟ್ ಅಧಿವೇಶನ 16ರಂದು ಆರಂಭವಾಗಲಿದ್ದು ಅಂದೇ ಬಲ ಪರೀಕ್ಷೆ ನಡೆಯಬೇಕೆಂಬುದು ಬಿಜೆಪಿ ಅಭಿಪ್ರಾಯವಾಗಿದೆ. ಸದನದಲ್ಲಿ ಬಲಾಬಲ ಪರೀಕ್ಷೆ ನಡೆಸುವಂತೆ ರಾಜ್ಯಪಾಲರು ಮತ್ತು ಸ್ಪೀಕರ್​ಗೆ ಮನವಿ ಮಾಡುತ್ತೇವೆ ಎಂದು ಮಧ್ಯಪ್ರದೇಶ ವಿಧಾನಸಭೆಯ ಬಿಜೆಪಿ ಮುಖ್ಯ ಸಚೇತಕ ನರೋತ್ತಮ್ ಮಿಶ್ರಾ ಗುರುವಾರ ಭೋಪಾಲ್​ನಲ್ಲಿ ಹೇಳಿದರು. ಈ ನಡುವೆ, ಖುದ್ದಾಗಿ ತಮ್ಮ ಮುಂದೆ ಹಾಜರಾಗುವಂತೆ ರಾಜೀನಾಮೆ ಸಲ್ಲಿಸಿರುವ ಶಾಸಕರಿಗೆ ಸ್ಪೀಕರ್ ಸೂಚಿಸಿದ್ದಾರೆ.

    ಬಲಾಬಲ ಲೆಕ್ಕಾಚಾರ: 228 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಕಾಂಗ್ರೆಸ್​ಗೆ ಬಹುಮತವಿತ್ತು. 22 ಶಾಸಕರ ಬಂಡಾಯಕ್ಕೂ ಮೊದಲು ಕಾಂಗ್ರೆಸ್ 114 ಶಾಸಕರನ್ನು ಹೊಂದಿತ್ತು. ಬಿಎಸ್​ಪಿಯ ಇಬ್ಬರು, ಸಮಾಜವಾದಿ ಪಕ್ಷದ ಒಬ್ಬರು ಹಾಗೂ ನಾಲ್ವರು ಪಕ್ಷೇತರ ಬೆಂಬಲವೂ ಇತ್ತು. 22 ಶಾಸಕರ ರಾಜೀನಾಮೆ ಬಳಿಕ ಕಮಲ್​ನಾಥ್ ಸರ್ಕಾರ ಬಹುಮತ ಸಾಬೀತುಪಡಿಸುವುದು ಕಷ್ಟ. ಒಂದು ವೇಳೆ 22 ಕಾಂಗ್ರೆಸ್ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿದರೆ ವಿಧಾನಸಭೆಯ ಬಲ 206ಕ್ಕೆ ಕುಸಿಯಲಿದೆ. ಆಗ ಸರಳ ಬಹುಮತಕ್ಕೆ 104 ಶಾಸಕರ ಬೆಂಬಲ ಸಾಕಾಗಲಿದೆ. ಕಾಂಗ್ರೆಸ್ ಸ್ವಂತ ಬಲ 92ಕ್ಕೆ ಇಳಿಯಲಿದೆ. 107 ಸದಸ್ಯರನ್ನು ಹೊಂದಿರುವ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಿದೆ.

    ಸ್ಪೀಕರ್ ನೋಟಿಸ್

    ರಾಜೀನಾಮೆ ಸಲ್ಲಿಸಿರುವ ಆರು ಸಚಿವರು ಸಹಿತ 22 ಶಾಸಕರು ಶುಕ್ರವಾರದೊಳಗೆ ಖುದ್ದಾಗಿ ತಮ್ಮ ಮುಂದೆ ಹಾಜರಾಗುವಂತೆ ಸೂಚಿಸಿ ಸ್ಪೀಕರ್ ಎನ್.ಪಿ. ಪ್ರಜಾಪತಿ ಗುರುವಾರ ನೋಟಿಸ್ ನೀಡಿದ್ದಾರೆ. ರಾಜೀನಾಮೆ ನೀಡಿದ್ದು ಸ್ವಯಂಪ್ರೇರಣೆಯಿಂದಲೋ ಅಥವಾ ಯಾರದೇ ಒತ್ತಡದಿಂದಲೋ ಎಂದು ಸ್ಪಷ್ಟಪಡಿಸುವಂತೆ ಅವರಿಗೆ ಸೂಚಿಸಿದ್ದಾರೆ.

    ಸ್ಪೀಕರ್ ಭೇಟಿಗೆ ಭಯವೇಕೆ?

    ರಾಜೀನಾಮೆ ಬಗ್ಗೆ ಸ್ಪೀಕರ್ ನಿರ್ಧಾರ ಕೈಗೊಂಡ ನಂತರವಷ್ಟೆ ಸದನದಲ್ಲಿ ಬಲಪರೀಕ್ಷೆ ಎದುರಿಸಲು ಸಿದ್ಧ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ. ರಾಜೀನಾಮೆ ಸಲ್ಲಿಸಿದ ಶಾಸಕರು ಸ್ಪೀಕರ್​ರನ್ನು ಖುದ್ದಾಗಿ ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸುತ್ತಿಲ್ಲವೇಕೆ ಎಂದು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಿದೆ ಎಂದು ದೂರಿದ್ದಾರೆ. ಶಾಸಕರು ಒಬ್ಬೊಬ್ಬರಾಗಿಯೇ ಸ್ಪೀಕರ್​ರನ್ನು ಭೇಟಿ ಮಾಡಿದಾಗ ರಾಜೀನಾಮೆ ಪತ್ರದಲ್ಲಿನ ಸಹಿಯನ್ನು ಪರಿಶೀಲಿಸಲಾಗುತ್ತದೆ. ಯಾರದೇ ಒತ್ತಡವಿಲ್ಲದೆ ಸಹಿ ಹಾಕಿರುವುದೆಂದು ದೃಢಪಡಿಸಿಕೊಂಡ ನಂತರ ರಾಜೀನಾಮೆ ಅಂಗೀಕರಿಸಲಾಗುತ್ತದೆ. ಆನಂತರ ಸದನದಲ್ಲಿ ಬಲಪರೀಕ್ಷೆ ನಡೆಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

    ಬಿಜೆಪಿಗೆ ಬೋನಸ್?

    ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶದಲ್ಲಿ ಒಂದರ ಬದಲು ಎರಡು ರಾಜ್ಯಸಭಾ ಸ್ಥಾನಗಳನ್ನು ಗೆಲ್ಲುವ ಬಗ್ಗೆ ಬಿಜೆಪಿ ಲೆಕ್ಕಾಚಾರ ಹಾಕುತ್ತಿದೆ. ಪಕ್ಷಾಂತರ ಮಾಡಿರುವ ಸಿಂಧಿಯಾಗೆ ಒಂದು ಟಿಕೆಟ್ ಘೋಷಿಸಿರುವ ಬಿಜೆಪಿ ಇನ್ನೊಬ್ಬ ಅಭ್ಯರ್ಥಿಯನ್ನೂ ಘೋಷಿಸಿದೆ. ಮಧ್ಯಪ್ರದೇಶದಿಂದ ರಾಜ್ಯಸಭೆಯ ಮೂರು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕೆಲವೇ ದಿನಗಳ ಹಿಂದಿನ ಬಲಾಬಲದ ಪ್ರಕಾರ ಕಾಂಗ್ರೆಸ್ ಎರಡು, ಬಿಜೆಪಿ ಒಂದರಲ್ಲಿ ಅನಾಯಾಸವಾಗಿ ಗೆಲ್ಲುವುದು ಖಚಿತವಾಗಿತ್ತು. ಈಗ ಚಿತ್ರಣ ಬದಲಾಗಿದೆ. ಒಂದೆಡೆ ಕಮಲ್​ನಾಥ್ ಸರ್ಕಾರ ಉರುಳುವುದಲ್ಲದೆ, ಸಂಸತ್ತಿನ ಮೇಲ್ಮನೆಯಲ್ಲಿ ಬಿಜೆಪಿಗೆ ಒಂದು ಹೆಚ್ಚುವರಿ ಸ್ಥಾನ ಲಭ್ಯವಾಗುವ ಸಾಧ್ಯತೆ ಇದೆ.

    ಎಚ್ಚರಿಕೆ ನಿರ್ಲಕ್ಷಿಸಿದ ಕಮಲ್​ನಾಥ್

    ಹಲವು ದಿನಗಳಿಂದ 30ರಿಂದ 35 ಶಾಸಕರಲ್ಲಿ ತೀವ್ರ ಅತೃಪ್ತಿ ಹೊಗೆಯಾಡುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದ್ದರೂ ಮುಖ್ಯಮಂತ್ರಿ ಕಮಲ್​ನಾಥ್ ಅದನ್ನು ಕಿವಿಗೆ ಹಾಕಿಕೊಂಡಿರಲಿಲ್ಲ. ಕೆಲವು ಸಚಿವರ ಹಾಗೂ ರಾಜಕೀಯ ನಾಯಕರ ವರ್ತನೆಯಲ್ಲಿನ ಬದಲಾವಣೆಯ ನಿರ್ದಿಷ್ಟ ಉದಾಹರಣೆಗಳನ್ನು ಕೊಟ್ಟರೂ ಅದನ್ನು ನಿರ್ಲಕ್ಷಿಸಿದ್ದರು ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ. ಎಚ್ಚರಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ್ದರೆ ಸಿಂಧಿಯಾರನ್ನು ಉಳಿಸಿಕೊಳ್ಳಲು ಗಾಂಧಿ ಕುಟುಂಬ ಸಹಿತ ಹಿರಿಯ ನಾಯಕರು ಸೂಕ್ತ ಕ್ರಮ ಕೈಗೊಳ್ಳಬಹುದಿತ್ತು ಎಂದು ಪಕ್ಷದಲ್ಲಿ ಹಲವರು ಮಾತನಾಡಲು ಆರಂಭಿಸಿದ್ದಾರೆ. ವಿಶೇಷವಾಗಿ ಮಾಳ್ವಾ-ನಿರ್ವರ್ ಮತ್ತು ಗ್ವಾಲಿಯರ್-ಚಂಬಲ್ ಪ್ರದೇಶಗಳ ಕಾಂಗ್ರೆಸ್ ಕಾರ್ಯಕರ್ತರು ನಾಯಕರ ವರ್ತನೆ ಬಗ್ಗೆ ದೂರು ನೀಡಿದ್ದರು. ಈಗ ರಾಜೀನಾಮೆ ನೀಡಿರುವವರಲ್ಲಿ 15 ಶಾಸಕರು ಇದೇ ಪ್ರದೇಶಗಳಿಗೆ ಸೇರಿದವರು.

    ಸುಪ್ರೀಂಗೆ ಅರ್ಜಿ

    ಈಗ ಬೆಂಗಳೂರಿನಲ್ಲಿರುವ ಕಾಂಗ್ರೆಸ್ ಶಾಸಕರನ್ನು ಒತ್ತೆಸೆರೆಯಾಗಿ ಇರಿಸಲಾಗಿದೆ. ಅವರನ್ನು ಬಿಡುಗಡೆ ಮಾಡದಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಕಾಂಗ್ರೆಸ್ ಎಚ್ಚರಿಸಿದೆ. ತಂತ್ರ ಹೂಡಿಯೋ, ಲಂಚ ನೀಡಿಯೋ ಪಕ್ಷದ ಶಾಸಕರನ್ನು ಬೆಂಗಳೂರಿಗೆ ತೆರಳುವಂತೆ ಮಾಡಿ ಅಲ್ಲಿ ಅವರನ್ನು ಒತ್ತೆಸೆರೆ ಇರಿಸಿಕೊಳ್ಳಲಾಗಿದೆ. ಈ ಶಾಸಕರು ಕಾಂಗ್ರೆಸ್​ಗೆ ಮರಳಲು ಸಿದ್ಧರಿದ್ದಾರೆ ಎಂದು ನವದೆಹಲಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರು ಹೇಳಿದರು.

    ಮಧ್ಯಪ್ರದೇಶದ ಇಬ್ಬರು ಸಚಿವರನ್ನು ವಶಕ್ಕೆ ಪಡೆದ ಪೊಲೀಸರು

    ಮಧ್ಯಪ್ರದೇಶದ ಇಬ್ಬರು ಸಚಿವರನ್ನು ಬೆಂಗಳೂರು ಪೊಲೀಸರು ಗುರುವಾರ ಬಂಧಿಸಿ, ಹಲ್ಲೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಸಚಿವರಾದ ಜಿತು ಪಟ್ವಾರಿ ಮತ್ತು ಲಖನ್ ಸಿಂಗ್ ಬೆಂಗಳೂರಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ ಎಂದು ಕಾಂಗ್ರೆಸ್ ಸಂಸದ ವಿವೇಕ್ ತನ್ಖಾ ಹೇಳಿದರು. ಕರ್ನಾಟಕದ ರೆಸಾರ್ಟ್​ವೊಂದರಲ್ಲಿ ಬಿಜೆಪಿ ‘ಬಂಧಿಯಾಗಿಟ್ಟಿರುವ’ ಶಾಸಕ ಮನೋಜ್ ತಿವಾರಿಯ ತಂದೆ ಜೊತೆ ಈ ಇಬ್ಬರು ಸಚಿವರು ಹೋಗಿದ್ದಾಗ ಪೊಲೀಸರು ಹಲ್ಲೆ ಮಾಡಿದರು ಎಂದು ಸುಪ್ರೀಂ ಕೋರ್ಟ್ ವಕೀಲರೂ ಆಗಿರುವ ತನ್ಖಾ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

    ವಾಸ್ತವವಾಗಿ ಸಿಂಧಿಯಾಗೆ ಬಿಜೆಪಿಯಲ್ಲಿ ಏನು ಸಿಗಲಿದೆ?: ರಾಹುಲ್​ ಗಾಂಧಿ ಹೇಳಿದ್ದು ಹೀಗೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts