More

    ಕಲ್ಸಂಕ ಸೇತುವೆ ಶೀಘ್ರ ಪೂರ್ಣ, ಭರದಿಂದ ಸಾಗುತ್ತಿದೆ ಕಾಮಗಾರಿ

    ಹೇಮನಾಥ ಪಡುಬಿದ್ರಿ

    ಬಾಕಿ ಉಳಿದಿದ್ದ ಪಡುಬಿದ್ರಿ ಕಲ್ಸಂಕ ಭಾಗದ ರಾಷ್ಟ್ರೀಯ ಹೆದ್ದಾರಿ 66ರ ಒಂದು ಪಾರ್ಶ್ವದ ಸೇತುವೆ ಸಹಿತ ರಸ್ತೆ ಕಾಮಗಾರಿ ಭರದಿಂದ ಸಾಗುತ್ತಿದ್ದು, ಮಳೆಗಾಲಕ್ಕೂ ಮೊದಲು ಪೂರ್ಣಗೊಳ್ಳುವ ನಿರೀಕ್ಷೆ ಇದೆ.

    ಬೈಪಾಸ್, ಚತುಷ್ಪಥಕ್ಕೆ ಪರ -ವಿರೋಧದ ಮಧ್ಯೆ ಹಲವು ವರ್ಷಗಳ ರಾಜಕೀಯ ಹೊಯ್ದಟ ಬಳಿಕ 2015ರಲ್ಲಿ ಪಡುಬಿದ್ರಿ ಪೇಟೆಯಲ್ಲೇ ಚತುಷ್ಪಥ ಕಾಮಗಾರಿಗೆ ಚಾಲನೆ ದೊರೆತರೂ, ನಿಧಾನಗತಿ ಕೆಲಸದಿಂದ ಜನ ಸಾಕಷ್ಟು ತೊಂದರೆ ಅನುಭವಿಸಿದ್ದರು.ಪ್ರಸಕ್ತ ಪೇಟೆಯಲ್ಲಿನ ಕೆಲಸ ಮುಕ್ತಾಯದ ಹಂತ ತಲುಪಿದ್ದರೂ, ಕಲ್ಸಂಕ ಭಾಗದ ರಸ್ತೆ ಸಹಿತ ಸೇತುವೆ ನಿರ್ಮಾಣ ಪೂರ್ಣವಾಗಿಲ್ಲ. ಲಾಕ್‌ಡೌನ್‌ನಿಂದ ಕಳೆದ ಮಳೆಗಾಲದಲ್ಲಿ 2 ಸೇತುವೆ ನಿರ್ಮಾಣಕ್ಕೆ ತೊಡಕಾಗಿತ್ತು. ಇದರಿಂದ ಈ ಭಾಗದಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಮಳೆಗಾಲ ಮುಗಿದ ಬಳಿಕ ಒಂದು ಪಾರ್ಶ್ವದ ಸೇತುವೆ ಸಂಪರ್ಕ ರಸ್ತೆ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಪ್ರಸಕ್ತ ಇನ್ನೊಂದು ಪಾಶ್ವರ್ದ ಸೇತುವೆ ಸಹಿತ ರಸ್ತೆ ಕಾಮಗಾರಿಯೂ ಭರದಿಂದ ಸಾಗುತ್ತಿದೆ.

    ತೋಡುಗಳ ಹೂಳೆತ್ತಿ ಕೃತಕ ನೆರೆಗೆ ಪರಿಹಾರ: ಹೆದ್ದಾರಿಯ ಎರಡೂ ಕಡೆ ತೋಡುಗಳಲ್ಲಿ ಹೂಳು ತುಂಬಿ ಕಳೆದ ಮಳೆಗಾಲದಲ್ಲಿ ಪಡುಬಿದ್ರಿ ಪೇಟೆ ಭಾಗದಲ್ಲಿ ಕೃತಕ ನೆರೆಗೆ ಕಾರಣವಾಗಿತ್ತು. ಸದ್ಯ ಹೆದ್ದಾರಿಗೆ ಹೊಂದಿಕೊಡೇ ಇರುವ ಮಳೆ ನೀರು ಹರಿಯುವ ತೋಡುಗಳ ಹೂಳೆತ್ತುವ ಕಾರ್ಯ ಭರದಿಂದ ನಡೆಯುತ್ತಿದೆ. ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆ ಭಾಗದಲ್ಲಿ ಚರಂಡಿ ಸಹಿತ ಸರ್ವೀಸ್ ರಸ್ತೆ ಅರ್ಧದಲ್ಲಿ ನಿಂತಿದೆ. ಈ ಭಾಗದಲ್ಲಿ ಮಳೆ ನೀರು ನಿಂತು ಜನ ಹಾಗೂ ವಾಹನ ಸಂಚಾರಕ್ಕೂ ತೊಡಕಾಗುತ್ತಿದೆ. ಬಾಕಿ ಉಳಿದಿರುವ ಎಲ್ಲ ಕೆಲಸ ಈ ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರ ನವಯುಗ ಕಂಪನಿ ತಿಳಿಸಿದೆ.

    ಇನ್ನೂ ನಿರ್ಮಾಣವಾಗದ ಬಸ್ ನಿಲ್ದಾಣ: ಮಂಗಳೂರು ಹಾಗೂ ಕಾರ್ಕಳ, ಉಡುಪಿಗೆ ತೆರಳುವ ಪ್ರಯಾಣಿಕರು ಬಸ್ ನಿಲ್ದಾಣವಿಲ್ಲದೆ ಬಿಸಿಲಿನಲ್ಲಿ ನಿಂತು ಬಸ್ ಕಾಯುವ ದಯನೀಯ ಸ್ಥಿತಿ ಇಲ್ಲಿದೆ. ಬಸ್ ನಿಲ್ದಾಣ ಎಲ್ಲಿ ನಿರ್ಮಾಣವಾಗಬೇಕು ಎಂಬ ಗೊಂದಲ ಇನ್ನೂ ಮುಗಿದಿಲ್ಲ. ಅಲ್ಲದೆ ಆಟೋರಿಕ್ಷಾ, ಟೂರಿಸ್ಟ್ ಕಾರು, ಟೆಂಪೋ ನಿಲುಗಡೆಗೂ ನಿಲ್ದಾಣಗಳಿಲ್ಲ. ರಿಕ್ಷಾ ಹಾಗೂ ಖಾಸಗಿ ವಾಣಿಜ್ಯ ಮಳಿಗೆಗಳಿಗೆ ಬರುವವರು ವಾಹನಗಳನ್ನು ಸರ್ವೀಸ್ ರಸ್ತೆಯಲ್ಲೇ ನಿಲ್ಲಿಸುವುದರಿಂದ ಬಸ್‌ಗಳು ಹೆದ್ದಾರಿಯಲ್ಲೇ ಪ್ರಯಾಣಿಕರನ್ನು ಹತ್ತಿ ಇಳಿಸುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

    ಪಡುಬಿದ್ರಿ ವ್ಯಾಪ್ತಿಯಲ್ಲಿನ ಮಳೆ ನೀರು ಹರಿಯುವ ತೋಡುಗಳ ಹೂಳೆತ್ತುವ ಕಾರ್ಯ ಮಾಡಲಾಗುತ್ತಿದೆ. ಕಲ್ಸಂಕ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಮಳೆಗಾಲಕ್ಕೂ ಮೊದಲು ಪೂರ್ಣಗೊಳ್ಳಲಿದೆ. ಪಡುಬಿದ್ರಿ ಪೇಟೆಯ ಬಸ್ ನಿಲ್ದಾಣಕ್ಕೆ ಇನ್ನೂ ಸೂಕ್ತ ಸ್ಥಳ ಗುರುತಿಸಲಾಗಿಲ್ಲ.
    ಶಶಿಕಾಂತ ಪಡುಬಿದ್ರಿ
    ಜಿಲ್ಲಾ ಪಂಚಾಯಿತಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts