More

    ಕಲ್ಲಾಣ್ಕಿ ಕುಂಜಳ್ಳಿ ಹೊಳೆಗೆ ಸೇತುವೆ, ಬೈಂದೂರು ಶಾಸಕರು ನೀಡಿದ ಭರವಸೆ ಪೂರ್ಣ

    ಕುಂಜಳ್ಳಿ: ಬೈಂದೂರು ತಾಲೂಕಿನ ಕಲ್ಲಾಣ್ಕಿ ಕುಂಜಳ್ಳಿ ಹೊಳೆಗೆ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಶೇ.90ರಷ್ಟು ಪೂರ್ಣಗೊಂಡಿದ್ದು, ಈ ಮಳೆಗಾಲದಲ್ಲಿ ಅಪಾಯಕಾರಿ ಕಾಲುಸಂಕದ ಬದಲು ಸುಸಜ್ಜಿತ ಸೇತುವೆ ಮೇಲೆ ಜನ ಸಂಚರಿಸಲಿದ್ದಾರೆ.

    ಯಡ್ತರೆ ಗ್ರಾಮ ಪಂಚಾಯಿತಿ ತೆಕ್ಕೆಯಲ್ಲಿರುವ ಕುಂಜಳ್ಳಿ ಗ್ರಾಮಸ್ಥರು ಸಣ್ಣ ವಸ್ತು ಬೇಕಿದ್ದರೂ ಬೈಂದೂರಿಗೆ ಬರಬೇಕು. ಕೇವಲ ಏಳು ಕಿ.ಮೀ ಇರುವ ಬೈಂದೂರಿಗೆ 150 ರೂ. ಆಟೋ ಬಾಡಿಗೆ ತೆತ್ತು 25 ರೂ. ಸಾಮಗ್ರಿ ತರಬೇಕಾದ ಸ್ಥಿತಿ ಇತ್ತು. ಬೈಂದೂರಿಗೆ ಹೋಗಿ ಬರಲು 300 ರೂ. ಆಟೋ ಬಾಡಿಗೆ ಕೊಡಬೇಕಿತ್ತು. ಪ್ರಸಕ್ತ ಸೇತುವೆ ನಿರ್ಮಾಣದಿಂದ ಈ ಸಮಸ್ಯೆಯಿಂದ ಜನ ಮುಕ್ತರಾಗಲಿದ್ದಾರೆ.

    ಕಳೆದ ಮಳೆಗಾಲದಲ್ಲಿ ಕಾಲುಸಂಕ ಕೊಚ್ಚಿಹೋಗಿ ಜನ ದಿಗ್ಬಂಧನಕ್ಕೆ ಒಳಗಾಗಿದ್ದರು. ಕಲ್ಲಾಣ್ಕಿ ಕುಂಜಳ್ಳಿ ಸಂಚಾರ ಸಮಸ್ಯೆ ಬಗ್ಗೆ ವಿಜಯವಾಣಿ ನಿರಂತರ ವರದಿ ಮಾಡಿತ್ತು. ಸ್ಥಳಕ್ಕೆ ಭೇಟಿ ನೀಡಿದ ಬೈಂದೂರು ಶಾಸಕ ಮುಂದಿನ ಮಳೆಗಾಲದೊಳಗೆ ಸೇತುವೆ ಮಾಡಿಕೊಡುವ ಭರವಸೆ ನೀಡಿದ್ದು, ಸೇತುವೆ ಕಾಮಗಾರಿ ಅಂತಿಮ ಹಂತದಲ್ಲಿದೆ.

    ಈ ವರ್ಷ ಮಳೆಗಾಲದಲ್ಲಿ ಭಯವಿಲ್ಲ: ಮದ್ದೋಡಿ, ಕಲ್ಲಾಣ್ಕಿ, ಕುಂಜಳ್ಳಿ, ತೋಕ್ತಿ, ಗಂಗಾನಾಡು ಸೇರಿ ಇಲ್ಲಿ ಸುಮಾರು 300ಕ್ಕೂ ಹೆಚ್ಚು ಕುಟುಂಬಗಳಿವೆ. ಹೆಚ್ಚಿನ ಜನ ಸಣ್ಣ ಹಿಡುವಳಿದಾರರು. ಕೃಷಿ ಹಾಗೂ ಕೂಲಿ ಕೆಲಸ ಅವಲಂಬಿತರು. ಬೇಸಿಗೆಯಲ್ಲಿ ಹೊಳೆ ಹರಿವು ಕಡಿಮೆಯಾದ ನಂತರ ದಾಟಿದರೆ, ಕಡು ಬೇಸಿಗೆಯಲ್ಲಿ ನದಿ ಹರಿವು ನಿಲ್ಲಿಸುತ್ತದೆ. ಜೋರು ಮಳೆ ಬಂದರೆ ಕೂಲಿ ಕೆಲಸಕ್ಕೆ ಕಡ್ಡಾಯ ರಜೆ. ಇನ್ನು ಮುಂದೆ ಕುಂಜಳ್ಳಿ ನಾಗರಿಕರಿಗೆ ಕಾಲಸಂಕದ ಭಯವಿಲ್ಲದೆ ಸರಾಗ ಸಂಚಾರವಾದರೆ ಮನೆ ಬಾಗಿಲು ತನಕ ವಾಹನ ಬರುವುದಕ್ಕೆ ಅಡ್ಡಿಯಿಲ್ಲ.

    ಕುಂಜಳ್ಳಿ ಕಲ್ಲಾಣ್ಕಿ ಹೊಳೆಗೆ ನಬಾರ್ಡ್ ಯೋಜನೆಯಲ್ಲಿ 70 ಲಕ್ಷ ರೂ. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಸೇತುವೆ ನಿರ್ಮಿಸಿತ್ತಿದೆ. ಕೆಲಸ ಶೇ.90ರಷ್ಟು ಸಂಪೂರ್ಣವಾಗಿದ್ದು, ಎರಡು ಸೈಡ್ ಮಣ್ಣು ತುಂಬುವುದು ಬಾಕಿಯಿದೆ. ಮಳೆಗಾಲದೊಳಗೆ ಸೇತುವೆ ಸಂಚಾರಕ್ಕೆ ಮುಕ್ತವಾಗಲಿದೆ.
    – ರಾಘವೇಂದ್ರ, ಸಹಾಯಕ ಇಂಜಿನಿಯರ್ ಲೋಕೋಪಯೋಗಿ ಇಲಾಖೆ, ಬೈಂದೂರು.

    ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆದರೆ, ಮಳೆಗಾದಲ್ಲಿ ಹೊಳೆ ನಮ್ಮೂರಿಗೆ ದಿಗ್ಬಂಧನ ವಿಧಿಸುತ್ತದೆ. ನಾವೆಲ್ಲ ಕೃಷಿ ಹಾಗೂ ಕೃಷಿ ಕೂಲಿ ನಂಬಿಕೊಂಡಿದ್ದು, ಕಾಲುಸಂಕವೇ ನಮ್ಮ ಜೀವನಾಧಾರ. ಮಳೆಗಾದಲ್ಲಿ ಹೊಳೆ ನಮ್ಮ ದುಡಿಮೆಗೂ ಕತ್ತರಿ ಹಾಕುತ್ತಿದ್ದು, ಕೆಲಸಕ್ಕೆ ಕಡ್ಡಾಯ ರಜೆ ಮಾಡಬೇಕಾಗುತ್ತದೆ. ಹೊಳೆಗೆ ಸೇತುವೆ ನಿರ್ಮಾಣದಿಂದ ನಮ್ಮ ಬಹುದಿನ ಕನಸು ಸಾಕಾರಗೊಳ್ಳುತ್ತಿದೆ.
    – ಹೆರಿಯಣ್ಣ ಶೆಟ್ಟಿ, ಸಾಮಾಜಿಕ ಹೋರಾಟಗಾರ, ಕುಂಜಳ್ಳಿ.

    ಕಲ್ಲಾಣ್ಕಿ ಕುಂಜಳ್ಳಿ ಹೊಳೆಗೆ ಸೇತುವೆ ಮಾತ್ರವಲ್ಲ 2.5 ಕೋಟಿ ರೂ. ವೆಚ್ಚದಲ್ಲಿ ಯಡಮೊಗೆ ಕುಬ್ಜಾ ನದಿಗೆ ಸೇತುವೆ 5 ಕೋಟಿ ರೂ. ವೆಚ್ಚದಲ್ಲಿ ಯಡಮೊಗೆ ರಸ್ತೆ ಕಾಮಗಾರಿ ನಡೆಯುತ್ತಿದೆ. ಬೈಂದೂರು ಕ್ಷೇತ್ರದಲ್ಲಿ ಸೇತುವೆ ರಸ್ತೆ ಅಷ್ಟೇ ಅಲ್ಲದೆ, ಕುಡಿಯುವ ನೀರು, ಮೂಲಸೌಲಭ್ಯ ಕೂಡ ಒದಗಿಸಲಾಗುವುದು. ಕುಂಜಳ್ಳಿ ಜನರಿಗೆ ಬರುವ ಮಳೆಗಾಲದೊಳಗೆ ಸೇತುವೆ ಮಾಡಿಕೊಡುತ್ತೇನೆ ಎಂದಿದ್ದು, ಈ ಮಳೆಗಾದಲ್ಲಿ ಜನ ಕಾಲುಸಂಕದ ಬದಲು ಸೇತುವೆ ಮೇಲೆ ಸಂಚಾರ ಮಾಡುತ್ತಾರೆ. ಸುತ್ತಿ ಬಳಸಿ ಬೈಂದೂರಿಗೆ ಹೋಗುವ ಶ್ರಮ ತಪ್ಪಲಿದೆ.
    – ಬಿ.ಎಂ.ಸುಕುಮಾರ ಶೆಟ್ಟಿ, ಶಾಸಕ, ಬೈಂದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts