More

    ಕಾಳಿಮದಗ ಕೆರೆಗೆ ಹೊಸ ಲುಕ್: ಮಿಷನ್ ಅಮೃತ್ ಸರೋವರ ಯೋಜನೆಗೆ ಆಯ್ಕೆ ಸಮಗ್ರ ಅಭಿವೃದ್ಧಿ

    ಅನಂತ ನಾಯಕ್ ಮುದ್ದೂರು

     ಜಲಮೂಲಗಳನ್ನು ಸಂರಕ್ಷಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಿಷನ್ ಅಮೃತ್ ಸರೋವರ ಯೋಜನೆಗೆ ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮದ ಕಾಳಿಮದಗ ಆಯ್ಕೆಯಾಗಿದ್ದು, ಈ ಕೆರೆಯನ್ನು ಅಭಿವೃದ್ಧಿಪಡಿಸಿ ಹೊಸ ಲುಕ್ ನೀಡಲು ಕಾರ್ಯಯೋಜನೆ ಸಿದ್ಧಗೊಂಡಿದೆ.

    ನಾಲ್ಕೂರು ಗ್ರಾಮದ ನಂಚಾರಿನ ಕಾಳಿಮದಗ ಕೆರೆಯನ್ನು ಆ.15ರೊಳಗೆ ಅಭಿವೃದ್ಧಿಗೊಳಿಸಲು ಉದ್ದೇಶಿಸಲಾಗಿತ್ತು. ಆದರೆ ಮಳೆ ಅಧಿಕವಾದ ಕಾರಣ ಸದ್ಯದ ಪರಿಸ್ಥಿತಿಯಲ್ಲಿ ಕೆರೆಯ ಜೀರ್ಣೋದ್ಧಾರ ಸಾಧ್ಯವಿಲ್ಲ.ಹೀಗಾಗಿ ಕೆರೆಯ ಪಕ್ಕದಲಿ ಅಮೃತ್ ಸರೋವರ ಯೋಜನೆಯ ಫಲಕ ಅಳವಡಿಸಿ, ಕೆರೆ ಸುತ್ತಲಿನ ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲು ನಿರ್ಧರಿಸಲಾಗಿದೆ.ಮಳೆ ಕಡಿಮೆಯಾದ ಬಳಿಕ ಹೂಳು ತೆರವು ಸೇರಿದಂತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಕೇಂದ್ರ ಸರಕಾರ ಗ್ರಾಮೀಣ ಪ್ರದೇಶಕ್ಕೆ ಸಂಬಂಧಿಸಿದ ವಿವಿಧ ಇಲಾಖೆಗಳ ಅಡಿಯಲ್ಲಿ ಕೆರೆ ಅಭಿವೃದ್ಧಿಪಡಿಸಲು ಸೂಚಿಸಿದ್ದು, ಇದನ್ನು ರಾಜ್ಯ ಸರ್ಕಾರ ನರೇಗಾ ವ್ಯಾಪ್ತಿಯಲ್ಲಿ ತಂದಿದೆ.

    1.5 ಎಕರೆ ವಿಶಾಲ ಕೆರೆ: ಕಾಳಿಮದಗ ಕೆರೆ ಸುಮಾರು 1.5 ಎಕರೆ ವಿಸ್ತೀರ್ಣ ಹೊಂದಿದ್ದು ನಾಲ್ಕೂರು- ನಂಚಾರು ಮುಖ್ಯ ರಸ್ತೆಯ ಬದಿಯಲ್ಲಿಯೆ ಇದೆ. ಬಂಡೆಕಲ್ಲಿನಿಂದ ಆವೃತ್ತವಾಗಿ ಮನೋಹರವಾಗಿದೆ. ಈ ಪ್ರದೇಶವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶವಿದೆ. ಜಲ ಮೂಲಗಳನ್ನು ಸಂರಕ್ಷಿಸಿ ಅಂತರ್ಜಲ ಮಟ್ಟ ಹೆಚ್ಚಿಸುವುದು ಮಿಷನ್ ಅಮೃತ್ ಸರೋವರದ ಮುಖ್ಯ ಉದ್ದೇಶ. ಸ್ವಾತಂತ್ರೃದ ಅಮೃತ ಮಹೋತ್ಸವ ಯೋಜನೆ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಇದನ್ನು ಜಾರಿಗೊಳಿಸಿದ್ದಾರೆ.
    ಕಾಳಿಮದಗದ ಅಭಿವೃದ್ಧಿ, ಕೆರೆ ಪಕ್ಕದಲ್ಲಿ ಸೋಲಾರ್ ದೀಪದ ವ್ಯವಸ್ಥೆ, ಪಾರ್ಕ್ ನಿರ್ಮಾಣ,ಸ್ವಚ್ಛತೆ ಮುಂತಾದ ಯೋಜನೆಗಳನ್ನು ರೂಪಿಸಲಾಗಿದೆ. ಮಳೆ ಕಡಿಮೆಯಾದ ಕೂಡಲೇ ಕೆಲಸ ಪ್ರಾರಂಭವಾಗಲಿದೆ.

    ಅನುದಾನ ವಿವರ: ಗ್ರಾಮಪಂಚಾಯತಿಯ ನರೇಗಾ ಯೋಜನೆಯಡಿ 6 ಲಕ್ಷ ರೂ., ತಾಲೂಕು ಪಂಚಾಯಿತಿಯಿಂದ 75 ಸಾವಿರ ರೂ., ಜಿಲ್ಲಾ ಪಂಚಾಯತ್‌ನಿಂದ 10 ಲಕ್ಷ ರೂ., ಹಾಗೂ ಹದಿನೈದನೇ ಹಣಕಾಸು ವಿವಿಧ ಯೋಜನೆಯಡಿ ಒಟ್ಟು ಈ ಕಾಮಗಾರಿಗೆ 50 ಲಕ್ಷ ರೂ. ವೆಚ್ಚವಾಗಲಿದೆ.ಕಾಮಗಾರಿ ಪೂರ್ಣಗೊಂಡ ಬಳಿಕ ಕೆರೆ ಹೊಸ ರೂಪ ಪಡೆದುಕೊಂಡು ನಳನಳಿಸಲಿದೆ.
    ಮುಖ್ಯಾಂಶ: ನಾಲ್ಕೂರು ಗ್ರಾಮದ ನೆಂಚಾರು ಕಾಳಿಮದಗ ಅಮೃತ್ ಸರೋವರ ಯೋಜನೆ ಅಡಿಯಲ್ಲಿ ಆಯ್ಕೆ ಮತ್ತು ನಾಲ್ಕೂರು ಗ್ರಾಮಪಂಚಾಯಿತಿ ಅಮೃತ್ ಪಂಚಾಯಿತಿ ಯೋಜನೆಯಲ್ಲಿ ಆಯ್ಕೆ

    ನಾಲ್ಕೂರು ಗ್ರಾಮಪಂಚಾಯಿತಿ ಅಮೃತ್ ಸರೋವರ ಯೋಜನೆ ಹಾಗೂ ಅಮೃತ್ ಪಂಚಾಯಿತಿ ಯೋಜನೆಗೂ ಆಯ್ಕೆಯಾಗಿದ್ದು, ಹಲವಾರು ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ.ಸ್ವಚ್ಛ ಮಿಷನ್ ಯೋಜನೆಯಡಿ ಅಂಗನವಾಡಿ,ಶಾಲೆ ಮುಂತಾದ ಕಡೆಗಳಲ್ಲಿ ಇಂಗುಗುಂಡಿಗಳನ್ನು ರಚಿಸಿ ಸರ್ಕಾರದ ಸಕಲ ಯೋಜನೆಗಳನ್ನು ಬಳಸಿ ಇನ್ನು ಐದು ವರ್ಷಗಳಲ್ಲಿ ನಾಲ್ಕೂರು ಪಂಚಾಯಿತಿ ಎಲ್ಲಾ ರೀತಿಯಲ್ಲೂ ಅಭಿವೃದ್ಧಿಗೊಳ್ಳಲಿದೆ.ಇದಕ್ಕೆ ಜನಪ್ರತಿನಿಧಿಗಳು,ಅಧಿಕಾರಿ ವರ್ಗ,ಸಾರ್ವಜನಿಕರು ಸಹಕಾರ ನೀಡಿದ್ದಾರೆ.
    ಸೀತರಾಮ ಆಚಾರ್, ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ.

    ಉದ್ಯೋಗ ಖಾತರಿ ಮತ್ತು ಹಲವು ಅನುದಾನಗಳ ಮೂಲಕ ಕೆರೆ ಅಭಿವೃದ್ಧಿ ಯೋಜನೆ ಕಾರ್ಯಗತಗೊಳ್ಳಲಿದೆ. ನೀರಿನ ಸಂರಕ್ಷಣೆಗೆ ಉತ್ತಮ ಯೋಜನೆಯಾಗಿದೆ.ನಾಲ್ಕೂರು ಗ್ರಾಮದ ಎಲ್ಲಾ ಮದಗ, ಕೆರೆಗಳ ಪುನಶ್ಚೇತನಕ್ಕೆ ಗಮನ ಹರಿಸಲಾಗುವುದು.
    ಪ್ರತಾಪ್ ಹೆಗ್ಡೆ ಮಾರಾಳಿ ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts