More

    ಕಳಸಾ-ಬಂಡೂರಿ ಮಹಾ ಹರ್ಷ

    ವಿಜಯವಾಣಿ ಸುದ್ದಿಜಾಲ ಗದಗ/ಹುಬ್ಬಳ್ಳಿ

    ಕಳಸಾ-ಬಂಡೂರಿ ಯೋಜನೆ ಜಾರಿಗಾಗಿ ರಾಜ್ಯ ಮುಂಗಡಪತ್ರದಲ್ಲಿ 500 ಕೋಟಿ ರೂ. ತೆಗೆದಿರಿಸುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉತ್ತರ ಕರ್ನಾಟಕದ ಹಲವು ದಶಕಗಳ ಬೇಡಿಕೆ ಈಡೇರಲಿದೆ, ತಾವು ಕೊಟ್ಟ ಮಾತಿಗೆ ತಪ್ಪುವುದಿಲ್ಲ ಎಂಬ ಗಟ್ಟಿ ಸಂದೇಶ ನೀಡಿದ್ದಾರೆ.

    ಮಹದಾಯಿ ನೀರನ್ನು ಬಳಸಿಕೊಳ್ಳಬೇಕೆಂಬುದು 40 ವರ್ಷಕ್ಕಿಂತ ಹಿಂದಿನ ಯೋಚನೆ. ಗೋವಾ-ಮಹಾರಾಷ್ಟ್ರದ ಕ್ಯಾತೆಯಿಂದಾಗಿ ಕಾಲ ಸರಿಯುತ್ತ ಹೋಗಿತ್ತು. ನ್ಯಾಯಾಧಿಕರಣ 13.42 ಟಿಎಂಸಿ ಅಡಿ ನೀರಿನ ಹಕ್ಕನ್ನು ರಾಜ್ಯಕ್ಕೆ ಖಾತ್ರಿಪಡಿಸಿದ್ದು, ಈ ವಿಷಯವನ್ನು ಇತ್ತೀಚೆಗೆ ಕೇಂದ್ರ ಸರ್ಕಾರ ಗೆಜೆಟ್​ನಲ್ಲಿ ಅಧಿಸೂಚನೆಯಾಗಿ ಪ್ರಕಟಿಸಿದೆ. ಹೀಗಾಗಿ, ಮುಂಗಡಪತ್ರದಲ್ಲಿ ಅನುದಾನ ನಿರೀಕ್ಷಿತವಾಗಿತ್ತು. ಎಷ್ಟು ಮೊತ್ತ ಎಂಬ ಪ್ರಶ್ನೆಯಷ್ಟೇ ಬಾಕಿ ಇತ್ತು.

    13.42 ಟಿಎಂಸಿ ಅಡಿ ನೀರಿನ ಬಳಕೆ ಸದ್ಯಕ್ಕೆ ಸಾಧ್ಯವಿಲ್ಲ. ಮಹದಾಯಿ ನದಿ ಸೇರುವ 5 ಹಳ್ಳಗಳ ನೀರನ್ನು ಪೂರ್ವಕ್ಕೆ ತಿರುಗಿಸಿ ಮಲಪ್ರಭೆ ಒಡಲಿಗೆ ಹರಿಸುವ ಯೋಜನೆ ಜಾರಿಗೆ ದಾರಿಯಾಗಿದೆ. 5 ಹಳ್ಳಗಳಲ್ಲಿ ಕಳಸಾ-ಬಂಡೂರಿಯ ನೀರು ಪಡೆಯುವುದು ಮೊದಲ ಹಂತ. ಅದರಲ್ಲಿ ಬಂಡೂರಿ ಹಳ್ಳದ ನೀರು ಪಡೆಯಲು ಯೋಜಿತ ಕಾಮಗಾರಿಯನ್ನು ಅರಣ್ಯ ಪ್ರದೇಶದಲ್ಲಿ ಮಾಡಬೇಕಿರುವುದರಿಂದ ತಾಂತ್ರಿಕ ಅಡಚಣೆಗಳಿವೆ. ಕಳಸಾ ಹಳ್ಳದ ನೀರನ್ನು ತಿರುಗಿಸುವ ಕಾಮಗಾರಿಗೆ ಹಿಂದೆ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು, ಮುಂಗಡಪತ್ರದಲ್ಲಿ ಪ್ರಸ್ತಾಪ ಇಲ್ಲದಿದ್ದರೂ ಅನುದಾನ ಒದಗಿಸಿದ್ದರು. ಒಂದಿಷ್ಟು ಕಾಮಗಾರಿಯೂ ಆಗಿತ್ತು.

    ಕಳಸಾ ಹಳ್ಳದಿಂದ ಸುಮಾರು 1.5 ಟಿಎಂಸಿ ಅಡಿ ನೀರು ಪಡೆಯುವ ಯೋಜನೆಗೆ ಈಗ ಹೊಸ ಡಿಪಿಆರ್ ಸಿದ್ಧಪಡಿಸಿ ಟೆಂಡರ್ ಕರೆಯಲು ಈಗ ಎಲ್ಲ ರೀತಿಯಿಂದ ಅನುಕೂಲವಾಗಿದೆ.

    ಅರಣ್ಯ ಪ್ರದೇಶದಲ್ಲಿ ನಡೆಯಬೇಕಿದ್ದ ಕಾಮಗಾರಿಗೆ ಕೇಂದ್ರ ಪರಿಸರ ಇಲಾಖೆ ಒಪ್ಪಿಗೆ ನೀಡಿ, ಅದನ್ನು ತಡೆ ಹಿಡಿದಿತ್ತು. ರಾಜ್ಯದ ಸಂಸದರು ಒತ್ತಡ ಹಾಕಿದಾಗ ಕೇಂದ್ರ ಸ್ವತಃ ಪರಿಸರ ಸಚಿವ ಪ್ರಕಾಶ ಜಾವಡೇಕರ ಅವರು, ಕುಡಿಯುವ ನೀರಿನ ಯೋಜನೆಗೆ ಯಾವ ಅಡ್ಡಿಯೂ ಇಲ್ಲ ಎಂದು ಸ್ಪಷ್ಟಪಡಿಸಿ ಆತಂಕ ನಿವಾರಿಸಿದ್ದರು. ಹೀಗಾಗಿ, ಈಗ ಡಿಪಿಆರ್ ಪ್ರತೀಕ್ಷೆ ಶುರುವಾಗಿದೆ.

    ಬಜೆಟ್​ನಲ್ಲಿ ಕೃಷಿ ಆಧಾರಿತ ಕೈಗಾರಿಕೆ ಸ್ಥಾಪನೆಗಿಲ್ಲ ಆದ್ಯತೆ: ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಘೋಷಣೆಯಾಗಿ ಮೂರು ವರ್ಷ ಕಳೆದರೂ ಪ್ರಾಧಿಕಾರಕ್ಕೆ ಸಂಬಂಧಿಸಿದ ಯಾವುದೇ ಕೆಲಸ ಕಾರ್ಯಗಳು ನಡೆದಿಲ್ಲ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ವಿಫುಲ ಅವಕಾಶಗಳಿದ್ದು, ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚು ಅನುದಾನ ಮೀಸಲಿಡಬೇಕೆಂಬ ಬೇಡಿಕೆ ಇತ್ತು. ಖಾಸಗಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯಕ್ಕೆ ನೂತನ ಕಟ್ಟಡ ನಿರ್ವಣವಾಗಬೇಕಿತ್ತು. ಜಿಲ್ಲೆಯ ವಿವಿಧೆಡೆ ಹೆಚ್ಚಾಗಿರುವ ಜಿಂಕೆ ಹಾವಳಿ ಕಡಿವಾಣಕ್ಕೆ ಈ ವರ್ಷವಾದರೂ ಜಿಂಕೆ ವನ ಘೊಷಣೆಯಾಗಬಹುದು ಎಂದು ಜನರು ನಿರೀಕ್ಷಿಸಿದ್ದರು. ಆದರೆ, ಇದ್ಯಾವುದೂ ಆಗಿಲ್ಲ. ಅಪೂರ್ಣಗೊಂಡಿರುವ ಗದಗ ನಗರದ ವರ್ತಲ ರಸ್ತೆಗಳನ್ನು ಪೂರ್ಣಗೊಳಿಸುವುದು, ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸಲು ಜಿಲ್ಲಾ ಕೌಶಲ ತರಬೇತಿ ಕೇಂದ್ರ ಸ್ಥಾಪನೆ ಮಾಡುವುದು, ಜಿಲ್ಲೆಯಲ್ಲಿ ಕೃಷಿ ಆಧಾರಿತ ಕೃಗಾರಿಕೆಗಳ ಸ್ಥಾಪನೆ, ರಸಗೊಬ್ಬರ ಕಾರ್ಖಾನೆ ಸೇರಿ ಬೃಹತ್ ಕೈಗಾರಿಕೆ ಸ್ಥಾಪನೆ ಮಾಡುವ ಕುರಿತು ಬಜೆಟ್​ನಲಲಿ ಯಾವುದೇ ಪ್ರಸ್ತಾಪ ಇಲ್ಲ. ಹೆಸರು, ಕಡಲೆ, ಗೋವಿನಜೋಳ, ಮೆಣಸಿನಕಾಯಿ ಹಾಗೂ ಉಳ್ಳಾಗಡ್ಡಿ ಸಂಸ್ಕರಣ ಘಟಕ ಸ್ಥಾಪನೆ ಮಾಡುವುದು, ಫುಡ್ ಪಾರ್ಕ್, ಮೇಜ್ ಪಾರ್ಕ್, ಪ್ರಿಂಟಿಂಗ್ ಕ್ಲಸ್ಟರ್ ಮತ್ತು ಜವಳಿ ಪಾರ್ಕ್ ಸ್ಥಾಪನೆ ಸ್ಥಾಪನೆ ಮಾಡುವುದು ಸೇರಿ ಜಿಲ್ಲೆಯ ಯಾವುದೇ ಬೇಡಿಕೆಗಳನ್ನು ಪುರಸ್ಕರಿಸಿಲ್ಲ.

    ಬಿಜೆಪಿ ಭರವಸೆ: ಕಳಸಾ-ಬಂಡೂರಿ ಯೋಜನೆ ಕುರಿತು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ ಹಲವರು ಖಚಿತ ಭರವಸೆ ನೀಡಿದ್ದರು. ಈಗ ಅದನ್ನು ಈಡೇರಿಸುವ ಸದವಕಾಶ ವನ್ನು ಸಿಎಂ ಬಿಎಸ್​ವೈ ಯಥೋ ಚಿತವಾಗಿಯೇ ಬಳಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts