More

    ನಾಳೆ ನೆರೆ ಸಂತ್ರಸ್ತರಿಗೆ ನೆರವು ಹಸ್ತಾಂತರ, ಕಾಳಜಿ ರಿಲೀಫ್ ಫಂಡ್ ಕಾರ್ಯದರ್ಶಿ ಧನಂಜಯ ರಾವ್ ಮಾಹಿತಿ

    ಬೆಳ್ತಂಗಡಿ: ತಾಲೂಕಿನಲ್ಲಿ ನೆರೆ ಬಂದು ಕುಟುಂಬಗಳ ಸ್ಥಿತಿ ಶೋಚನೀಯವಾದ ಸಂದರ್ಭ ಕಾಳಜಿ ರಿಲೀಫ್ ಫಂಡ್ ಪ್ರಾರಂಭಿಸಿ ದಾನಿಗಳ ನೆರವು ಯಾಚಿಸಿ ಈ ಕುಟುಂಬಗಳಿಗೆ ಶಕ್ತಿ ತುಂಬುವ ಕಾರ್ಯಕ್ಕೆ ಮುಂದಾಗಿದ್ದೆವು. ಇದಕ್ಕೆ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಆಶೀರ್ವದಿಸಿದ್ದು, ಶಾಸಕ ಹರೀಶ್ ಪೂಂಜ ಕೈಜೋಡಿಸಿ ದಾನಿಗಳನ್ನು ಸಂಪರ್ಕಿಸಿ ಶಕ್ತಿ ತುಂಬಿಸಿದ್ದಾರೆ. ನ.4ರಂದು ನೆರವು ಹಸ್ತಾಂತರ ನಡೆಯಲಿದ್ದು, ದಾನಿಗಳ ಸಹಕಾರ ಅಭಿನಂದನೀಯ ಎಂದು ಕಾಳಜಿ ರಿಲೀಫ್ ಫಂಡ್ ಕಾರ್ಯದರ್ಶಿ ಧನಂಜಯ ರಾವ್ ಹೇಳಿದರು.

    ಕಾಳಜಿ ರಿಲೀಫ್ ಫಂಡ್‌ನಲ್ಲಿ ಒಟ್ಟು 2,66,10,335.75 ರೂ. ಸಂಗ್ರಹವಾಗಿದ್ದು, 7,85,979.78 ರೂ. ಬಡ್ಡಿ ಬಂದಿದೆ. ಬ್ಯಾಂಕ್ ವೆಚ್ಚವಾಗಿ 1691.00 ಖರ್ಚಾಗಿದ್ದು, ಒಟ್ಟು 2,73,96,624.53 ರೂ. ನೀಡಲಾಗುವುದು. ಕಂದಾಯ ಇಲಾಖೆಯ ವರದಿಯಂತೆ 210 ಪೂರ್ಣ ಹಾನಿ, 58 ಸಾಧಾರಣ ಹಾನಿ, 31 ಭಾಗಶಃ ಹಾನಿಯಾದ ಮನೆಗಳನ್ನು ಗುರುತಿಸಿದ್ದು, 10 ಮನೆಗಳು ತಾಂತ್ರಿಕ ಕಾರಣದಿಂದ ಇಲಾಖಾ ವರದಿಯಲ್ಲಿ ಬಂದಿರಲಿಲ್ಲ. ಈಗ 10 ಮನೆಗಳಲ್ಲಿ 7 ಮನೆಗಳು ಪೂರ್ಣ ಪ್ರಮಾಣ ಹಾಗೂ 3 ಮನೆಗಳು ಭಾಗಶಃ ಹಾನಿ ಎಂಬ ವರದಿ ಬಂದಿದ್ದು, ಇದಕ್ಕೆ ಪರಿಹಾರ ನೀಡಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಪೂರ್ಣ ಹಾನಿಯಾದ ಮನೆಗಳಿಗೆ ತಲಾ 1 ಲಕ್ಷ ರೂ, ಸಾಧಾರಣ ಹಾನಿಯಾದ ಮನೆಗಳಿಗೆ 80 ಸಾವಿರ ರೂ, ಭಾಗಶಃ ಹಾನಿಯಾದ ಮನೆಗಳಿಗೆ 56,500 ರೂ. ಪರಿಹಾರ ನೀಡಲಾಗುವುದು. ಇದರಲ್ಲಿ 5,000 ರೂ. ಖಾತೆಯಲ್ಲಿ ಉಳಿಯಲಿದ್ದು, ಕಾರ್ಯಕ್ರಮದ ಕೊನೆಗೆ ಚೀಟಿ ಎತ್ತುವ ಮೂಲಕ ಅದೃಷ್ಟ ವಿಜೇತರಿಗೆ ನೀಡಲಾಗುವುದು ಎಂದರು.

    ಸುದ್ದಿಗೋಷ್ಠಿಯಲ್ಲಿ ಕೋಶಾಧಿಕಾರಿ ನಂದಕುಮಾರ್, ಸದಸ್ಯರಾದ ಮೋಹನ್ ಲಕ್ಷ್ಮೀ ಗ್ರೂಪ್ಸ್, ರಾಜೇಶ್ ಸಂಧ್ಯಾ ಟ್ರೇಡರ್ಸ್‌, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಜಯಕರ ಶೆಟ್ಟಿ ಉಪಸ್ಥಿತರಿದ್ದರು.

    ಸಚಿವ ಸಿ.ಟಿ.ರವಿ ಭಾಗಿ: ನೆರವು ಹಸ್ತಾಂತರ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಭಾಗವಹಿಸಲಿದ್ದಾರೆ ಎಂದು ಧನಂಜಯ ರಾವ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts