More

    ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಧರಣಿ

    ಮುದ್ದೇಬಿಹಾಳ: ತಾಲೂಕಿನ ಕಾಳಗಿ ಗ್ರಾಪಂನಲ್ಲಿ ನಡೆದಿರುವ ಹಣಕಾಸಿನ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿ ತಾಲೂಕಿನ ಕಾಳಗಿಯ ಮಹಾಂತೇಶ ಕಾಳಗಿ ಹಾಗೂ ಅವರ ಸಹವರ್ತಿಗಳು ಗುರುವಾರ ತಾಪಂ ಕಚೇರಿ ಎದುರು ಧರಣಿ ಸತ್ಯಾಗ್ರಹ ಆರಂಭಿಸಿದರು.
    ಪಟ್ಟಣದ ತಾಪಂ ಕಚೇರಿ ಎದುರಿಗೆ ಹಾಕಿರುವ ಟೆಂಟ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೂರುದಾರ ಮಹಾಂತೇಶ ಕಾಳಗಿ, ಗ್ರಾಪಂನಲ್ಲಿ ನಡೆದಿರುವ ಅವ್ಯವಹಾರ ಪ್ರಕರಣ ಸಾಬೀತಾದ ಕಾರಣ ಹಿಂದಿನ ಪಿಡಿಒ ಎಸ್.ಎಸ್.ಗಣಾಚಾರಿ ಅವರನ್ನು ತಾತ್ಕಾಲಿಕವಾಗಿ ತೆಗೆದುಹಾಕಲಾಗಿತ್ತು. ಆದರೆ ಇನ್ನುಳಿದ ಆರೋಪಿಗಳಾದ ಗ್ರಾಪಂ ಅಧ್ಯಕ್ಷ ಜಾವೇದ ಇನಾಮದಾರ ಅವರ ಮೇಲೆ ಪಂಚಾಯತ್ ರಾಜ್ ಅಧಿನಿಯಮ 1993ರ ನಿಯಮ 157(2) ಮತ್ತು 246(8)ರ ಅಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು 2019ರ ಡಿ.13ರಂದೇ ಅನುಮತಿ ನೀಡಿದ್ದರೂ ತನಿಖಾಧಿಕಾರಿಗಳು ಅವರ ವಿರುದ್ಧ ದೂರು ದಾಖಲಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು.
    ದೌರ್ಜನ್ಯ ತಡೆ ಸಮಿತಿ ಸದಸ್ಯ ಬಸವರಾಜ ಪೂಜಾರಿ (ಸಿದ್ದಾಪುರ) ಮಾತನಾಡಿ, ಒಬ್ಬರು ಅವ್ಯವಹಾರ ನಡೆದಿದೆ ಎಂದು ಸಾಬೀತಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧೀನ ಕಾರ್ಯದರ್ಶಿ ರಮೇಶ ಆದೇಶಿಸಿದ್ದಾರೆ. ಅವ್ಯವಹಾರ ನಡೆದೇ ಇಲ್ಲ, ಇದೊಂದು ವಯಕ್ತಿಕ ದ್ವೇಷಕ್ಕೆ ಪ್ರಕರಣ ದಾಖಲಿಸಲಾಗಿದೆ ಎಂದು ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ ಬಿ.ನವೀನಕುಮಾರ್ ಅವರು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ)ರಡಿ ನಡೆಸಿರುವ ವಿಚಾರಣೆಯಲ್ಲಿ ಗ್ರಾಪಂ ಅಧ್ಯಕ್ಷ ಜಾವೇದ ಇನಾಮದಾರ ಮೇಲೆ ಮಾಡಲಾದ ಆರೋಪಗಳು ಸಾಬೀತಾಗಿಲ್ಲದ ಕಾರಣ ಅವರ ಮೇಲಿದ್ದ ಪ್ರಕರಣವನ್ನು ವಜಾಗೊಳಿಸಿ ಸದಸ್ಯತ್ವ ಮುಂದುವರೆಸಲು ಆದೇಶ ಮಾಡಿದ್ದಾರೆ. ಹಾಗಿದ್ದರೆ ಹಿಂದೆ ಸರ್ಕಾರದ ಅಧಿಕಾರಿಗಳೆ ತನಿಖೆ ಮಾಡಿ ದುರುಪಯೋಗವಾದ ಹಣ ಸರ್ಕಾರಕ್ಕೆ ಕಟ್ಟಬೇಕು. ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಮಾಡಿದ ಆದೇಶ ಈ ಅಧಿಕಾರಿ ಗಮನಕ್ಕೆ ಬರಲಿಲ್ಲವೇ? ಎಂದು ಪ್ರಶ್ನಿಸಿದರು.
    ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಧರಣಿ ಮುಂದುವರೆಸುವುದಾಗಿ ಹೇಳಿದರು. ಅಂಬೇಡ್ಕರ್ ಸೇನೆ ತಾಲೂಕಾಧ್ಯಕ್ಷ ಪ್ರಕಾಶ ಚಲವಾದಿ, ರಾಮು ತಂಬೂರಿ, ಬಸವರಾಜ ಗೊಳಸಂಗಿ, ರಾವುತ ಕಾಳಗಿ, ಪ್ರಕಾಶ ಕಾಳಗಿ, ತುಕಾರಾಂ ಲಮಾಣಿ, ಹರೀಶ ಮ್ಯಾಗೇರಿ, ಸಿದ್ದು ಜೈನಾಪುರ ಇತರರು ಇದ್ದರು.

    ರಾಜ್ಯಪಾಲರಿಗೆ ದೂರು

    ಸರ್ಕಾರದ ಅಧಿಕಾರಿಗಳೇ ತನಿಖೆ ನಡೆಸಿ ಗ್ರಾಪಂನಲ್ಲಿ ಆಗಿರುವ ಅವ್ಯವಹಾರದ ಕುರಿತು ಸ್ಪಷ್ಟ ಆದೇಶ ನೀಡಿ ದುರುಪಯೋಗ ಆಗಿರುವ ಹಣವನ್ನು ಸರ್ಕಾರಕ್ಕೆ ಕಟ್ಟಲು ಆದೇಶಿಸಿದ್ದರೂ ಏಕಾಏಕಿ ಫೆ.24ರಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧೀನ ಕಾರ್ಯದರ್ಶಿ ಬಿ.ನವೀನ್‌ಕುಮಾರ್ ಅವರ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಸುವುದಾಗಿ ಧರಣಿ ನಿರತರು ತಿಳಿಸಿದರು.

    ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಧರಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts