More

    ಟೊಮ್ಯಾಟೋ ಬೆಲೆ ಕೇಳಿ ದಂಗಾದ ಗ್ರಾಹಕರು

    ಕಲಘಟಗಿ: ಪಟ್ಟಣದಲ್ಲಿ ಮಂಗಳವಾರ ವಾರದ ಸಂತೆಯಲ್ಲಿ ಟೊಮ್ಯಾಟೊ ಬೆಲೆ ಪ್ರತಿ ಕೆಜಿಗೆ 140 ರೂಪಾಯಿ ಆಗಿತ್ತು. ಗ್ರಾಹಕರು ದರ ಕೇಳಿ ಕೆಲ ಹೊತ್ತು ದಂಗಾದರೂ ಅನಿವಾರ್ಯವಾಗಿ ಚೌಕಾಸಿ ಮಾಡಿ ಖರೀದಿ ಮಾಡಿದರು. ಕೆಲವರು ಟೊಮ್ಯಾಟೋ ಬದಲು ಹುಣಸೆ ಹಣ್ಣು ಖರೀದಿಸಿದರು.
    ಪ್ರತಿ ಮಂಗಳವಾರ ನಡೆಯುವ ಕಲಘಟಗಿ ವಾರದ ಸಂತೆಗೆ ಜಿಲ್ಲೆಯ ಸುತ್ತಮುತ್ತಲಿನ ರೈತರು ತರಕಾರಿಗಳನ್ನು ತಂದು ಮಾರಾಟ ಮಾಡುತ್ತಾರೆ. ಅಂದಾಜು 40ಕ್ಕೂ ಹೆಚ್ಚು ಹಳ್ಳಿಗಳ ಜನರು ಸಂತೆಗೆ ಬರುತ್ತಾರೆ. ಆದರೆ, ವಾರದ ಸಂತೆಯಲ್ಲಿ ಎಲ್ಲ ತರಕಾರಿ ಬೆಲೆ ಕೂಡ ಏರಿಕೆಯಾಗಿದ್ದು, ಖರೀದಿಸಲು ಜನರು ಹಿಂದೇಟು ಹಾಕಿದರು.

    ಕಳೆದ ತಿಂಗಳು ಟೊಮ್ಯೊಟೋ ಬೆಲೆ 50 ರೂಪಾಯಿ ಒಳಗಡೆ ಇದ್ದಾಗ ಭಾರಿ ಬೇಡಿಕೆ ಇತ್ತು. ವಾರದ ಸಂತೆಯಲ್ಲಿ 2ರಿಂದ 3 ಕ್ವಿಂಟಾಲ್ ಟೊಮ್ಯಾಟೊ ಮಾರಾಟವಾಗುತ್ತಿತ್ತು. ಆದರೆ, ಮಂಗಳವಾರದ ಸಂತೆಯಲ್ಲಿ ಕೆಜಿಗೆ 140 ರೂಪಾಯಿ ಆಗಿದ್ದರಿಂದ ಬೆಳಗ್ಗೆಯಿಂದ ಸಂಜೆವರೆಗೆ 25 ಕೆಜಿ ಕೂಡ ಮಾರಾಟವಾಗಿಲ್ಲ. ಹೀಗಾದರೆ ತರಕಾರಿ ವ್ಯಾಪಾರ ಬಿಟ್ಟು ಕೂಲಿ ಮಾಡುವ ಪರಿಸ್ಥಿತಿ ಬರೋದು ಗ್ಯಾರಂಟಿ ಎಂದು ತರಕಾರಿ ವ್ಯಾಪಾರಿಗಳು ಅಳಲು ತೋಡಿಕೊಂಡರು. ಹುಬ್ಬಳ್ಳಿ ಎಪಿಎಂಸಿಯಲ್ಲಿ ಟೊಮ್ಯಾಟೊ ಖರೀದಿಸಿ ಸಂತೆಗಳಲ್ಲಿ ವ್ಯಾಪಾರ ಮಾಡುತ್ತೇವೆ. ಪ್ರತಿ ಸಂತೆಯಲ್ಲಿ ಮನೆ ಮಂದಿಯೆಲ್ಲ ಕುಳಿತು ವ್ಯಾಪಾರ ಮಾಡುತ್ತೇವೆ. ಕಲಘಟಗಿ ಸಂತೆಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ 1,000 ರೂಪಾಯಿ ವ್ಯಾಪಾರ ಆಗಿಲ್ಲ ಎನ್ನುತ್ತಾರೆ ವ್ಯಾಪರಿ ಮೌಲಾಲಿ ಗಂಜಿಗಟ್ಟಿ. ಇಷ್ಟು ದಿನ ಗ್ಯಾಸ್, ಪೆಟ್ರೋಲ್, ಡಿಸೇಲ್, ಹಾಲು, ವಿದ್ಯುತ್ ಬಿಲ್‌ಗಳ ಬೆಲೆಗಳಿಂದ ರೋಸಿಹೋಗಿದ್ದ ಜನರಿಗೆ ಈಗ ತರಕಾರಿ ಬೆಲೆಗಳ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

    ಪ್ರತಿ ವಾರ 500 ರೂಪಾಯಿಗಳಲ್ಲಿ ವಾರಪೂರ್ತಿ ಆಗುವಷ್ಟು ತರಕಾರಿ ಸೇರಿ ಇತರ ವಸ್ತುಗಳನ್ನು ಖರೀದಿಸಿಕೊಂಡು ಹೋಗುತ್ತಿದ್ದೆವು. ಈ ವಾರ ತರಕಾರಿ ಸೊಪ್ಪುಗಳ ಬೆಲೆ ಕೂಡ ಹೆಚ್ಚಾಗಿದೆ. ಮನೆಗೆ ಟೊಮ್ಯಾಟೊ ತೆಗೆದುಕೊಂಡು ಹೋಗೋ ಬದಲು ಹುಣಸೇ ಹಣ್ಣು ತೆಗೆದುಕೊಂಡು ಹೋಗುತ್ತಿದ್ದೇನೆ.
    ನೀಲವ್ವ ಕಟ್ಟಿ ಕಲಘಟಗಿ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts