More

    ಕೈಕಂಬಕ್ಕೆ ಬೇಕಿದೆ ಶೌಚಗೃಹ

    -ಧನಂಜಯ ಗುರುಪುರ
    ಮೂಡುಬಿದಿರೆ ಮತ್ತು ಬಜ್ಪೆಗೆ ನೇರ ಸಂಪರ್ಕ ಹೊಂದಿರುವ ಗುರುಪುರ ಕೈಕಂಬ ಪ್ರಗತಿ ಹೊಂದುತ್ತಿರುವ ನಗರ. ಕೈಕಂಬ ಜಂಕ್ಷನ್‌ನಲ್ಲಿ ಬಿ.ಸಿ.ರೋಡ್, ಮಂಗಳೂರು, ಬಜ್ಪೆ, ಮೂಡುಬಿದಿರೆಯ ಸಾವಿರಾರು ಪ್ರಯಾಣಿಕರ ಓಡಾಟವಿರುತ್ತದೆ. ಇಷ್ಟಿದ್ದರೂ ಇಲ್ಲಿ ಸುಸಜ್ಜಿತ ಸಾರ್ವಜನಿಕ ಶೌಚಗೃಹವಿಲ್ಲ ಎಂಬುದು ಬೇಸರದ ಸಂಗತಿ.

    ಪೆರಾರ ಗ್ರಾಮ ಪಂಚಾಯಿತಿಗೆ ಸೇರಿರುವ ಈ ಜಂಕ್ಷನ್‌ನಲ್ಲಿ ಹಿಂದೆ ಸಾರ್ವಜನಿಕ ಶೌಚಗೃಹವಿತ್ತು. ಗುತ್ತಿಗೆ ಸಮಸ್ಯೆಯಿಂದ ಇದು ವರ್ಷದಲ್ಲಿ ಒಂದು ತಿಂಗಳು ಮಾತ್ರ ತೆರೆದಿರುವುದೇ ಅಪೂರ್ವವಾಗಿತ್ತು. ಒಂದೂವರೆ ವರ್ಷದಿಂದ ಶೌಚಗೃಹ ಮುಚ್ಚಲಾಗಿದ್ದು, ಪ್ರಸಕ್ತ ಅದು ತ್ಯಾಜ್ಯದ ಕೊಂಪೆಯಾಗಿದೆ. ಮದ್ಯ ಸೇವನೆ ಮಾಡಿ ಅಲ್ಲೇ ಬಿದ್ದು ನಿದ್ರಿಸುವ ಕುಡುಕರು, ಭಿಕ್ಷುಕರ ತಾಣವಾಗಿದೆ.

    ಎರಡು ವರ್ಷದ ಹಿಂದೆ ‘ವಿಜಯವಾಣಿ’ ಪತ್ರಿಕೆಯಲ್ಲಿ ಈ ಶೌಚಗೃಹ ದುರವಸ್ಥೆ ವರದಿ ಪ್ರಕಟಗೊಂಡಿದ್ದು, ಆಗ ಎಚ್ಚೆತ್ತುಕೊಂಡಿದ್ದ ಪಂಚಾಯಿತಿ ಶೌಚಗೃಹ ಸ್ವಚ್ಛಗೊಳಿಸಿ ಒಂದಷ್ಟು ದಿನ ಸೂಕ್ತ ನಿರ್ವಹಣೆಗೆ ಆದ್ಯತೆ ನೀಡಿತ್ತಾದರೂ, ಬಳಿಕ ಮುಚ್ಚಲಾದ ಶೌಚಗೃಹ ಇನ್ನೂ ತೆರೆದಿಲ್ಲ.
    ಗಂಜಿಮಠ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೈಕಂಬದ ಪೊಂಪೈ ದ್ವಾರದ ಎದುರಿರುವ ಮತ್ತೊಂದು ಶೌಚಗೃಹ ತೆರೆದಿರುವ ದಿನಗಳೇ ಕಡಿಮೆ! ಇಷ್ಟು ದೊಡ್ಡ ಪೇಟೆಯಲ್ಲಿ ಸಾರ್ವಜನಿಕ ಶೌಚಗೃಹವಿಲ್ಲದ ಕಾರಣ ರಸ್ತೆ ಬದಿಯೇ ಮಲಮೂತ್ರ ವಿಸರ್ಜನೆ ಮಾಡುತ್ತಾರೆ. ಜಂಕ್ಷನ್‌ನ ಬಾಡಿಗೆ ರಿಕ್ಷಾ ಚಾಲಕರು ಇಲ್ಲಿ ಶೌಚಗೃಹವಿಲ್ಲ ಎಂದು ಪಂಚಾಯಿತಿಗೆ ದೂರು ನೀಡಿದ್ದರು. ಆದರೆ ಈವರೆಗೆ ಶೌಚಗೃಹ ನಿರ್ಮಿಸುವ ಗೋಜಿಗೆ ಹೋಗಿಲ್ಲ.

    ಗುರುಪುರ ಕೈಕಂಬ ಜಂಕ್ಷನ್‌ಗೆ ಒಂದು ಸುಸಜ್ಜಿತ ಶೌಚಗೃಹದ ಅಗತ್ಯವಿದೆ. ಈಗಿರುವ ಶೌಚಗೃಹ ಸ್ವಚ್ಛಗೊಳಿಸಲಾಗಿದ್ದು, ಇನ್ನೆರಡು ದಿನದಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಪಂಚಾಯಿತಿಯಲ್ಲಿ ಹೊಸ ಸದಸ್ಯ ಮಂಡಳಿ ಆಡಳಿತಕ್ಕೆ ಬರುವ ಮುಂಚೆಯೇ ಸಾರ್ವಜನಿಕರ ಉಪಯೋಗಕ್ಕೆ ಶೌಚಗೃಹ ಲಭ್ಯವಾಗಲಿದೆ. ಇದಕ್ಕಾಗಿ ಈಗಾಗಲೇ ಹೊಸ ಗುತ್ತಿಗೆ ವ್ಯಕ್ತಿಯನ್ನು ಗುರುತಿಸಲಾಗಿದೆ.
    – ಮನೋಹರ ಗೌಡ, ಪೆರಾರ ಗ್ರಾಪಂ ಪಿಡಿಪಿ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts