More

    ಕಗ್ಗದ ಬೆಳಕು: ಪ್ರಗತಿಯೆಂಬ ಮಾಯಾಮೃಗ…

    ಗಿರಿಯ ಮೇಲಕೆ ದೊಡ್ಡ ಬಂಡೆಯನು ಸಿಸಿಫಸನು |

    ಉರುಳಿಸಿರಲೊಂದೆರಡು ಮಾರು ಘಾಸಿಯಲಿ ||

    ಸರಿದು ಕೆಳಕದದೆಂತೊ ಜಾರುವುದು ಮರಮರಳಿ |

    ಪುರುಷಪ್ರಗತಿಯಂತು – ಮಂಕುತಿಮ್ಮ ||

    ‘ಸಿಸಿಫಸ ಎಂಬಾತನು ಬೆಟ್ಟದ ಮೇಲಕ್ಕೆ ದೊಡ್ಡ ಬಂಡೆಯನ್ನು ಕಷ್ಟಪಟ್ಟು ಉರುಳಿಸಿಕೊಂಡು ಹೋದ ಮರು ಗಳಿಗೆಯೇ ಅದು ಹೇಗೋ ಕೆಳಗೆ ಸರಿದು, ಮರಮರಳಿ ಜಾರಿ ಬೀಳುತ್ತಿತ್ತು. ಪುರುಷ ಪ್ರಗತಿಯೂ ಕೂಡಾ ಇದೇ ರೀತಿಯದು’ ಎನ್ನುತ್ತದೆ ಈ ಕಗ್ಗ.

    ಕಗ್ಗದ ಬೆಳಕು: ಪ್ರಗತಿಯೆಂಬ ಮಾಯಾಮೃಗ...ಗ್ರೀಕ್​ದೇಶದಲ್ಲಿ ಪ್ರಚಲಿತವಿರುವ ಕಥೆ ಹೀಗಿದೆ. ಆ ದೇಶದಲ್ಲಿ ಹಿಂದೆ ಸಿಸಿಫಸ ಎಂಬ ದೊರೆಯಿದ್ದ. ಆತ ಉಪಾಯವಾಗಿ ನಾಲ್ಕು ಬಾರಿ ಮೃತ್ಯುವಿನಿಂದ ತಪ್ಪಿಸಿಕೊಂಡ. ಇದರಿಂದ ಕೋಪಗೊಂಡ ಮೃತ್ಯು ಆತನಿಗೆ ವಿಚಿತ್ರ ಶಿಕ್ಷೆ ನೀಡಿತು. ಆತ ಬಂಡೆಗಲ್ಲೊಂದನ್ನು ಬೆಟ್ಟದ ತುದಿಗೆ ಉರುಳಿಸಿಕೊಂಡು ಹೋಗಬೇಕಿತ್ತು. ಅಂತೆಯೇ ಸಿಸಿಫಸನು ಬಹಳ ಕಷ್ಟಪಟ್ಟು ಬಂಡೆಯನ್ನು ಬೆಟ್ಟದ ತುದಿಗೆ ಒಯ್ಯತೊಡಗಿದ. ತುದಿಯನ್ನು ತಲುಪಿದ ಮರುಕ್ಷಣವೇ ಆ ಬಂಡೆ ಕೆಳಗುರುಳಿ ಬೆಟ್ಟದ ತಳವನ್ನು ಸೇರಿತು. ಸಿಸಿಫಸನು ಎಷ್ಟು ಬಾರಿ ಬಂಡೆಯನ್ನು ಬೆಟ್ಟದ ಶಿಖರದತ್ತ ಸಾಗಿದರೂ, ಬಂಡೆಯು ಮತ್ತೆ ಮತ್ತೆ ಬೆಟ್ಟದ ಬುಡಕ್ಕೆ ಉರುಳುತ್ತಿತ್ತು. ಮನುಷ್ಯನ ಅಭಿವೃದ್ಧಿಯೂ ಇದೇ ತೆರನಾದದ್ದು. ಮಾಡಿದ ಪ್ರಯತ್ನವು ಸಫಲವಾಯಿತು ಎಂದುಕೊಳ್ಳುತ್ತಿದ್ದಂತೆಯೇ, ಆಳ ಕಣಿವೆಗೆ ಮುಗ್ಗರಿಸಿರುತ್ತದೆ.

    ಸಮಾಜವು ಯಾವುದನ್ನು ಪ್ರಗತಿ ಎಂದು ಪರಿಗಣಿಸುತ್ತದೆ? ಬದುಕಿಗೆ ಐಷಾರಾಮಿ ಸುಖಸಾಧನಗಳನ್ನು ಹೊಂದುವುದು, ನೂತನ ಆವಿಷ್ಕಾರಗಳ ಮೂಲಕ ವೈಜ್ಞಾನಿಕ ಸಾಧನೆ ಮಾಡುವುದು, ಆರ್ಥಿಕವಾಗಿ ಸ್ವಾವಲಂಬಿಗಳಾಗುವುದು, ಸಂಪೂರ್ಣ ಸಾಕ್ಷರತೆ ಹೊಂದುವುದು, ಭಕ್ತಿ-ಆಚರಣೆಗಳಲ್ಲಿ ತೊಡಗಿಕೊಳ್ಳುವುದು – ಹೀಗೆ ಹತ್ತು ಹಲವು ಅಭಿಪ್ರಾಯಗಳಿವೆ. ಮನುಷ್ಯನು ಪ್ರತಿನಿತ್ಯ ಹೊಸದನ್ನು ಹುಡುಕುತ್ತ ಅಭಿವೃದ್ಧಿಯ ಪಥದಲ್ಲಿ ಮುನ್ನುಗ್ಗುತ್ತಿದ್ದಾನೆ. ಪೂರ್ತಿ ಜಗತ್ತು ಎಲ್ಲ ಕ್ಷೇತ್ರಗಳಲ್ಲೂ ಎಷ್ಟೋ ಹೊಸ ಅನ್ವೇಷಣೆಗಳನ್ನು ಮಾಡುತ್ತ ಜೀವನಶೈಲಿಯನ್ನು ಪರಿವರ್ತಿಸಿಕೊಳ್ಳುತ್ತಿದೆ. ಮನುಷ್ಯನು ತಾನು ಸಾಧಿಸಿದೆ, ಆಧುನಿಕನಾದೆ ಎಂದು ಬೀಗುತ್ತಿದ್ದಂತೆಯೇ ಎಲ್ಲಿಂದಲೋ ಒಂದು ಸಮಸ್ಯೆ ಎದುರಾಗಿರುತ್ತದೆ.

    ಆರೋಗ್ಯಕ್ಕಾಗಿ ಹಲವು ಚಿಕಿತ್ಸಾಪದ್ಧತಿ, ಔಷಧಗಳಿದ್ದರೂ ಹೊಸ ಕಾಯಿಲೆಗಳು ಹಬ್ಬುತ್ತಲೇ ಇವೆ. ವಿದ್ಯಾರ್ಥಿಗೆ ಎಲ್ಲ ಬಗೆಯ ಅರಿವು ಸಿಗುವಂಥ ಶಿಕ್ಷಣವ್ಯವಸ್ಥೆಯಿದ್ದರೂ, ಆಸ್ಥೆಯಿಂದ ಮಕ್ಕಳನ್ನು ಬೆಳೆಸಿದರೂ ಸಮಾಜದ ತುಂಬ ಮೋಸ, ವಂಚನೆಗಳು ಕಾಣುತ್ತಿವೆ. ಪ್ರಗತಿ ಹೊಂದಿದ ದೇಶಗಳ ನಡುವೆ ಯುದ್ಧಗಳು ಏರ್ಪಡುತ್ತವೆ. ಸಾಮಾನ್ಯ ಜನಜೀವನವಂತೂ ಭಾವನೆಗಳೇ ಇಲ್ಲದೆ ಯಾಂತ್ರಿಕವಾಗಿದೆ. ತುಳಿದು ಬಾಳುವ, ಹಿಂಸಿಸಿ ಸಂತೋಷಪಡುವ ಧೋರಣೆ ಎಲ್ಲೆಡೆ ಕಾಣುತ್ತಿದೆ. ಸ್ವಾರ್ಥವೇ ಬಾಳಿನ ಗುರಿಯಾಗಿದೆ.

    ಹೊಸ ತಂತ್ರಜ್ಞಾನ, ಹೊಸ ಬಗೆಯ ಯೋಚನೆ-ಯೋಜನೆಗಳು ಕಾರ್ಯಗತವಾದಾಗ ಅಭಿವೃದ್ಧಿ ಆಗಿಯೇಬಿಟ್ಟಿತು ಎಂಬ ಭ್ರಮೆಗೆ ಒಳಗಾಗುತ್ತೇವೆ. ಆತುರದ ಬುದ್ಧಿ ಪ್ರಯೋಜನಗಳನ್ನಷ್ಟೇ ಪರಿಗಣಿಸುವುದೇ ಹೊರತು, ಸಮಸ್ಯೆಗಳ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸುವುದೇ ಇಲ್ಲ. ಇದರಿಂದ ವಿನಾಶವು ನಿಧಾನವಾಗಿ ಆಕ್ರಮಿಸಿಕೊಳ್ಳುತ್ತದೆ. ಪ್ರಗತಿಯೆಂದು ಸ್ವೀಕಾರವಾದುದೇ ಅನಿಯಂತ್ರಿತವಾಗಿ, ಜನಜೀವನಕ್ಕೆ ಮಾರಕವಾಗುತ್ತದೆ. ಸಿಸಿಫಸನು ಬಂಡೆಯನ್ನು ಬೆಟ್ಟದೆತ್ತರಕ್ಕೆ ಹೊರಳಿಸಿಕೊಂಡು ಹೋದಂತೆ ಕಷ್ಟಪಟ್ಟು ಗುರಿ ತಲುಪಲು ಯತ್ನಿಸುತ್ತಾರೆ. ನಿರೀಕ್ಷೆಯನ್ನು ತಲುಪಿದಾಗ ಪೂರ್ತಿ ಯೋಜನೆ ನೆಲಕಚ್ಚುತ್ತದೆ. ಸೋಲನ್ನು ಒಪ್ಪಿಕೊಳ್ಳದೆ ಮತ್ತೆ ಪ್ರಯತ್ನಿಸಬೇಕು ಎಂಬುದು ಸತ್ಯ. ಜತೆಗೆ ಸೋಲಿನಿಂದ ಪಾಠ ಕಲಿತು, ಅದನ್ನು ತಿದ್ದಿಕೊಂಡು ಮುಂದೆ ಸಾಗಬೇಕಾದುದೂ ಮುಖ್ಯ. ಫಲಿತಾಂಶದ ಅರಿವಿಲ್ಲದ ಯೋಜನೆಗಳು ಸಮಸ್ಯೆಗಳಾಗುತ್ತವೆ. ಪ್ರಗತಿಯು ಮೊದಲು ಆಗಬೇಕಾದುದು ಆಂತರ್ಯದಲ್ಲಿ. ಅದು ಬಾಹ್ಯದಲ್ಲಿ ಪ್ರತಿಫಲಿಸಬೇಕು. ಆಗ ಸಮಾಜ ಸಹಜವಾಗಿ ಬಾಳುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts