More

    ಕಾಗಡಿಕಟ್ಟೆ ಗ್ರಾಮಕ್ಕಿಲ್ಲ ಸೌಕರ್ಯ

    ಸೋಮವಾರಪೇಟೆ: ಕಾರ್ಮಿಕರು ಮತ್ತು ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುತ್ತಿರುವ ಕಾಗಡಿಕಟ್ಟೆ ಗ್ರಾಮಕ್ಕೆ ಮೂಲಸೌಕರ್ಯ ಒದಗಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇನ್ನೂ ಮನಸ್ಸು ಮಾಡಿಲ್ಲ.

    ರಸ್ತೆಗಾಗಿ 25 ವರ್ಷಗಳಿಂದ ಇಲ್ಲಿನ ಸ್ಥಳೀಯರು ಕಾಯುತ್ತಿದ್ದು, ಈವರೆಗೂ ಬಹುತೇಕ ಕಡೆ ರಸ್ತೆ ಡಾಂಬರೀಕರಣ ಮಾಡಿಲ್ಲ. ಜತೆಗೆ ಚರಂಡಿ ವ್ಯವಸ್ಥೆಯೂ ಸರಿಯಿಲ್ಲ. ಇನ್ನು ದೊಡ್ಡಮಳ್ತೆ ಹಿರಿಯ ಪ್ರಾಥಮಿಕ ಶಾಲೆಗೆ ಆಗಮಿಸುವ ಮಕ್ಕಳು ಈ ಗ್ರಾಮದ ರಸ್ತೆಯಲ್ಲೇ ಬರಬೇಕಿದ್ದು, ಮಳೆಗಾಲದಲ್ಲಿ ಮಕ್ಕಳು ಜಾರಿದರೆ ಗುಂಡಿಯೊಳಕ್ಕೆ ಬೀಳುವುದು ಮಾತ್ರ ಗ್ಯಾರಂಟಿ. ಬೈಕ್ ಸವಾರರು ಈ ಮಾರ್ಗದಲ್ಲಿ ತೆರಳಲು ಸರ್ಕಸ್ ಮಾಡಬೇಕಾಗಿದ್ದು, ಕೃಷಿಕರು ತಮ್ಮ ವಾಹನಗಳನ್ನು ಹೊಂಡದೊಳಗೆ ಇಳಿಸಿ ತೆರಳಬೇಕಾದ ಪರಿಸ್ಥಿತಿ ಇದೆ. ಅಲ್ಲದೆ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡುತ್ತಿರುವ ಕಾರಣ ಸರ್ಕಾರದಿಂದ ಅನುದಾನ ಬಿಡುಗಡೆಯಾಗುತ್ತಿಲ್ಲವೇ ಎಂಬ ಅನುಮಾನ ಕಾಡುತ್ತಿದೆ ಎಂಬುದು ಹಲವರ ಅಭಿಪ್ರಾಯ.

    ದಿ.ಎ.ಎಂ.ಬೆಳ್ಳಿಯಪ್ಪ ಕಾಂಗ್ರೆಸ್ ಶಾಸಕರಾಗಿದ್ದ ಅವಧಿಯಲ್ಲಿ ರಸ್ತೆ ಡಾಂಬರೀಕರಣ ಆಗಿದ್ದು ಬಿಟ್ಟರೆ ಈವರೆಗೆ ರಸ್ತೆ ಅಭಿವೃದ್ಧಿಯಾಗಿಲ್ಲ ಎಂಬ ಮಾತು ಬಲವಾಗಿ ಕೇಳಿ ಬಂದಿದೆ. ಗ್ರಾಮದಲ್ಲಿ 85 ಮುಸ್ಲಿಂ ಕುಟುಂಬವಿದ್ದು, ಇತರ ಸಮುದಾಯದ 55 ಕುಟುಂಬಗಳು ವಾಸ ಮಾಡುತ್ತಿವೆ. ಶೇ.95ರಷ್ಟು ಕೂಲಿ ಕಾರ್ಮಿಕರು ಇಲ್ಲಿ ವಾಸ ಮಾಡುತ್ತಿದ್ದು, ಗ್ರಾಮದ ನಿವಾಸಿಗಳ ಬೇಡಿಕೆಯನ್ನು ಕೇಳುವವರು ಇಲ್ಲದಂತಾಗಿದೆ. ರಾಜಕೀಯ ಒತ್ತಡ ತಂದು ಅಭಿವೃದ್ಧಿ ಮಾಡಿಸಿಕೊಳ್ಳುವಷ್ಟು ಪ್ರಭಾವಿಗಳು ಯಾರೂ ಗ್ರಾಮದಲ್ಲಿ ಇಲ್ಲ ಎಂದು ನಿವಾಸಿಗಳು ನೋವು ತೋಡಿಕೊಂಡರು.

    ಗ್ರಾಮದ ಜನರು ಪ್ರತಿಯೊಂದಕ್ಕೂ ಗ್ರಾಮ ಪಂಚಾಯಿತಿಯನ್ನೇ ಅವಲಂಬಿಸಬೇಕಿದೆ. ಕೆಲ ಕಡೆ ಚರಂಡಿ ಇಲ್ಲದಂತಾಗಿದೆ. ಇನ್ನು ಕೆಲವೆಡೆ ಚರಂಡಿ ಆಗಿದ್ದರೂ ಸರಿಯಿಲ್ಲ. ಚರಂಡಿಯಾಗಿರುವ ಕಡೆ ಕಸಕಡ್ಡಿಗಳು ತುಂಬಿ ರಸ್ತೆಯಲ್ಲೇ ನೀರು ಹರಿಯುತ್ತಿದ್ದು, ಅಶುಚಿತ್ವ ಹೆಚ್ಚಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಇನ್ನು ಕಾಗಡಿಕಟ್ಟೆ ಜಂಕ್ಷನ್‌ನಿಂದ ರಸ್ತೆ ಪ್ರಾರಂಭವಾಗಲಿದ್ದು, ಹಾರಳ್ಳಿ ಮಾರ್ಗವಾಗಿ ತಣ್ಣೀರುಹಳ್ಳ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಹಾಳಾಗಿದೆ. ರಸ್ತೆ ಮಾರ್ಗದಲ್ಲಿ ನೂರು ಎಕರೆಯಷ್ಟು ಕಾಫಿ ತೋಟಗಳಿದ್ದು, ದಿನಂಪ್ರತಿ ವಾಹನಗಳು ಸಂಚರಿಸುತ್ತದೆ. ಕೆಲವೊಮ್ಮೆ ಟಿಂಬರ್ ಲಾರಿಗಳೂ ಸಂಚರಿಸುತ್ತವೆ. ಮಳೆಗಾಲದಲ್ಲಿ ಗುಂಡಿಗಳನ್ನು ತಪ್ಪಿಸಿ ರಸ್ತೆ ಹುಡುಕುವುದು ಕಷ್ಟಸಾಧ್ಯ.

    ಪ್ರತಿ ವರ್ಷ ಮಳೆಗಾಲದಲ್ಲಿ ಇಲ್ಲಿನ ಗುಂಡಿಗಳಿಗೆ ಮಣ್ಣು ಹಾಕುತ್ತೇವೆ. ಆ ಬಳಿಕ ಮಳೆಯಲ್ಲಿ ಮಣ್ಣು ಕೊಚ್ಚಿ ಹೋಗುತ್ತದೆ. ಈ ಸಂಬಂಧ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಪ್ರಯೋಜನ ಇಲ್ಲದಂತಾಗಿದೆ. ಹೋರಾಟ ಮೂಲಕ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರಸ್ತೆ ಕಾಮಗಾರಿಗೆ ಸರ್ಕಾರ ವಿಶೇಷ ಅನುದಾನ ಕಲ್ಪಿಸುವ ಮೂಲಕ ಕನಿಷ್ಠ ಸೌಕರ್ಯ ಕಲ್ಪಿಸಬೇಕು ಎಂಬುದು ಇಲ್ಲಿನ ಜನರ ಆಗ್ರಹ.

    ವಾಹನ ಓಡಿಸಲು ಹರಸಾಹಸ: ಇಪ್ಪತ್ತು ವರ್ಷಗಳಿಂದ ರಸ್ತೆಗಾಗಿ ಮನವಿ ಮಾಡಲಾಗುತ್ತಿದೆ. ಗ್ರಾಮದೊಳಗಿನ ರಸ್ತೆಯಲ್ಲಿ ವಾಹನ ಓಡಿಸಲು ಹರಸಾಹಸ ಪಡಬೇಕು. ಮಳೆಗಾಲದಲ್ಲಿ ಕಾಲ್ನಡಿಗೆಯಲ್ಲೂ ತೆರಳಲು ಸಾಧ್ಯವಾಗುವುದಿಲ್ಲ. ನಾವೂ ತೆರಿಗೆ ಕಟ್ಟುತ್ತೇವೆ. ಮೂಲ ಸೌಕರ್ಯ ಕೊಡುವುದು ಸರ್ಕಾರದ ಕರ್ತವ್ಯ. ಆದರೆ ಸಂಬಂಧಪಟ್ಟವರು ಮಾತ್ರ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಹಾಗಾಗಿ ಮಳೆ ಬಿದ್ದ ನಂತರ ರಸ್ತೆಯಲ್ಲೇ ಬಾಳೆಗಿಡ ನೆಡುತ್ತೇವೆ.
    ಫಾರೂಕ್ ಕಾಗಡಿಕಟ್ಟೆ ನಿವಾಸಿ

    ಬೀದಿ ದೀಪವಿಲ್ಲದೆ ತೊಂದರೆ
    ಗ್ರಾಮದಲ್ಲಿ ರಸ್ತೆ ಮಾತ್ರವಲ್ಲ ಚರಂಡಿಯೂ ಇಲ್ಲ. ಮಳೆ ನೀರು ರಸ್ತೆಯಲ್ಲೇ ಹರಿಯುತ್ತದೆ. ಹೀಗಾದರೆ ಇನ್ನು ಕೆಲವೇ ವರ್ಷಗಳಲ್ಲಿ ಇರುವ ರಸ್ತೆಯೂ ಕಣ್ಮರೆಯಾಗುತ್ತದೆ. ರಸ್ತೆ ರಾಜಕಾಲುವೆಯಾಗಿ ಮಾರ್ಪಾಡಾಗುವ ಸಾಧ್ಯತೆಯಿದೆ. ನಮ್ಮ ಮನೆಯಿಂದ ಮುಂದಕ್ಕೆ ಬೀದಿದೀಪವೂ ಇಲ್ಲದಂತಾಗಿದೆ. ರಾತ್ರಿ ರಸ್ತೆಯಲ್ಲಿ ನಡೆದುಕೊಂಡು ಹೋಗಲು ಭಯವಾಗುತ್ತದೆ.
    ಕೆ.ಎ.ಕಾಶಿಂ ಹಿರಿಯ ನಾಗರಿಕ, ಕಾಗಡಿಕಟ್ಟೆ ಗ್ರಾಮ

    ಸರ್ಕಾರಕ್ಕೆ ತಟ್ಟಲಿದೆ ಜನರ ಶಾಪ
    ಸರ್ಕಾರಕ್ಕೆ ದುಪ್ಪಟ್ಟು ತೆರಿಗೆ ಕಟ್ಟುತ್ತೇವೆ. ನಮಗೆ ಒಂದು ರಸ್ತೆ ಮಾಡಿಕೊಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಗ್ರಾಮದೊಳಗೆ ಶಾಲಾ ವಾಹನಗಳು ಬರುತ್ತಿಲ್ಲ. ನಮ್ಮ ಬೈಕ್, ಸ್ಕೂಟರ್‌ನಲ್ಲಿ ಮಕ್ಕಳನ್ನು ಕೂರಿಸಿಕೊಂಡು ಮುಖ್ಯರಸ್ತೆಗೆ ಹೋಗಲು ಭಯವಾಗುತ್ತದೆ. ರಸ್ತೆ ಮಾಡಿಕೊಡದೆ ಸರ್ಕಾರಕ್ಕೆ ಜನರ ಶಾಪ ತಟ್ಟಲಿದೆ.
    >ಆರೀಫ್, ಕಾಗಡೀಕಟ್ಟೆ ನಿವಾಸಿ

    ಅನುದಾನ ಕಡಿಮೆ ಎಂದು ಸಬೂಬು
    ಪಂಚಾಯಿತಿಗೆ ಅನುದಾನ ಕಡಿಮೆ ಇರುವುದರಿಂದ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಪಂಚಾಯಿತಿಯವರು ಸಬೂಬು ಹೇಳುತ್ತಾರೆ. ಶಾಸಕರ ನಿಧಿಯಿಂದ ರಸ್ತೆ ಮಾಡಿಸಲು ಪ್ರಯತ್ನ ಪಡಬಹುದು. ಮಳೆಹಾನಿ ಪರಿಹಾರ, ಜಿಲ್ಲಾ ಪಂಚಾಯಿತಿ ಅನುದಾನದಕ್ಕೂ ಪಂಚಾಯಿತಿಯಿಂದ ಅರ್ಜಿ ಸಲ್ಲಿಸಬಹುದು. ಯಾರೂ ಮನಸ್ಸು ಮಾಡುತ್ತಿಲ್ಲ.
    ಕೆ.ಇ.ಇಸ್ಮಾಯಿಲ್
    ವ್ಯಾಪಾರಿ, ಕಾಗಡಿಕಟ್ಟೆ ನಿವಾಸಿ

    ಗ್ರಾಮೀಣಾಭಿವೃದ್ಧಿಗೆ ಸಿಗಲಿ ಆದ್ಯತೆ
    ಕಾಗಡಿಕಟ್ಟೆ ಗ್ರಾಮದ ಮೂಲಕವೇ ಮಳ್ತೆ, ಹಾರೋಹಳ್ಳಿ, ದೊಡ್ಡಮಳ್ತೆ ಗ್ರಾಮಕ್ಕೆ ತೆರಳಬೇಕು. ಪ್ರಾರಂಭದಲ್ಲೇ ರಸ್ತೆ ಗುಂಡಿ ಬಿದ್ದಿದೆ. ಮಳೆಗಾಲದಲ್ಲಿ ಈ ಮಾರ್ಗದಲ್ಲಿ ಸಂಚಾರ ತ್ರಾಸದಾಯಕ. ರಸ್ತೆ, ಚರಂಡಿ, ಬೀದಿದೀಪ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲೇ ಬೇಕು. ಸರ್ಕಾರ ಮೊದಲು ಗ್ರಾಮೀಣ ಭಾಗದ ಅಭಿವೃದ್ಧಿಗೆ ಸೂಕ್ತ ಅನುದಾನ ಕಲ್ಪಿಸಬೇಕು. ಆ ಮೂಲಕ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕು.
    ಲೋಕೇಶ್
    ಕೃಷಿಕ, ಹಾರಳ್ಳಿ ಗ್ರಾಮ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts