More

    ಬದಲಾವಣೆ ನಿರೀಕ್ಷೆಯಲ್ಲಿದೆ ಕಡೂರು ಕ್ಷೇತ್ರ

    ಬೀರೂರು: ಕ್ಷೇತ್ರದಲ್ಲಿ ಉದ್ಯೋಗಾವಕಾಶ, ಕುಡಿಯುವ ನೀರಿನ ಸಮಸ್ಯೆ, ಅಡಕೆ ಮತ್ತು ತೆಂಗು ಕೊಳೆ, ನುಸಿ ರೋಗ ಮತ್ತು ಮೂಲ ಸೌಲಭ್ಯಗಳಿಗೆ ಶೀಘ್ರ ಪರಿಹಾರ ಕಲ್ಪಿಸಲಾಗುವುದು ಎಂದು ಹಾಸನ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಹೇಳಿದರು.
    ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್‌ರವರ ನಿವಾಸಕ್ಕೆ ಸೋಮವಾರ ರಾತ್ರಿ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಜನತೆ ಬದಲಾವಣೆ ತವಕದಲ್ಲಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಪ್ರತಿ ಮನೆ, ಮನವನ್ನು ಮುಟ್ಟಿದೆ ಆದ್ದರಿಂದ ಈ ಬಾರಿ ಕಾಂಗ್ರೆಸ್‌ಗೆಲ್ಲಿಸುವ ಅಭಿಲಾಷೆ ಹೊಂದಿದ್ದಾರೆ ಎಂದರು.
    ಜನತೆ ನಿರೀಕ್ಷೆಗೆ ತಕ್ಕಂತೆ ಕೆಲಸ ನಿರ್ವಹಿಸದ ಸಂಸದರು ಈಗ ಸುಳ್ಳು ಪ್ರಚಾರ ನಡೆಸುತ್ತಾ ಮತ್ತೆ ಬಿಜೆಪಿ ಜತೆ ಸೇರಿ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್‌ಗೆ ರಾಜ್ಯ ಸರ್ಕಾರದ ಕಾರ್ಯಕ್ರಮಗಳೇ ಶ್ರೀರಕ್ಷೆಯಾಗಿದೆ. ಈಗಾಗಲೇ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕರ್ತರು, ಮುಖಂಡರನ್ನು ಭೇಟಿ ಮಾಡಿದ್ದು, ಮುಂದಿನ ದಿನಗಳಲ್ಲಿ ಹೋಬಳಿ ಮತ್ತು ಪಂಚಾಯಿತಿವಾರು ಕಾರ್ಯಕರ್ತರು, ಮುಖಂಡರು, ಮತದಾರರನ್ನು ಭೇಟಿಯಾಗಲಾಗುವುದು. ಸಿಎಂ ಸಿದ್ದರಾಮಯ್ಯ ಅವರು, ಕಡೂರು ಮತ್ತು ಹಾಸನ ಲೋಕಸಭಾ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದರು.
    ಕ್ಷೇತ್ರದ ಬಡ, ಹಿಂದುಳಿದ ವರ್ಗಗಳ ಜನರ ಒಲವು ಕಾಂಗ್ರೆಸ್ ಪರವಾಗಿದೆ. ರಾಜ್ಯ ಸರ್ಕಾರದ ಯೋಜನೆಗಳ ಲಾನುಭವಿಯಾಗಿರುವ ಶೇ.90ರಷ್ಟು ಮಹಿಳೆಯರು ನನ್ನನ್ನು ಬೆಂಬಲಿಸುವ ಭರವಸೆ ಇದೆ. ಸಂಸದರಾಗಿ ಆಯ್ಕೆಯಾದರೆ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಕ್ಷೇತ್ರದಲ್ಲಿ ನೀರಾವರಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಆಶ್ವಾಸನೆ ನೀಡಿದರು.
    ಶಾಸಕ ಕೆ.ಎಸ್.ಆನಂದ್, ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್, ಕಾಂಗ್ರೆಸ್ ಮುಖಂಡರಾದ ಬೀರೂರು ಎನ್.ದೇವರಾಜ್, ಭಂಡಾರಿ ಶ್ರೀನಿವಾಸ್, ಕೆ.ಜಿ.ಶ್ರೀನಿವಾಸ್ ಮೂರ್ತಿ, ಶರತ್‌ಕೃಷ್ಣಮೂರ್ತಿ, ಕಡೂರು ಮತ್ತು ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ, ಆಸಂದಿ ಕಲ್ಲೇಶ್, ಜಾವಗಲ್ ಮಂಜಣ್ಣ, ದಾಸಯ್ಯನಗುತ್ತಿ ಚಂದ್ರಪ್ಪ, ಲಕ್ಷ್ಮಣ್, ರಂಗಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts