More

    ಕಡುಬಿನಕೆರೆ ಅಭಿವೃದ್ಧಿಗೆ ಮೊರೆ, ಹೂಳು ಸಮಸ್ಯೆಯಿಂದ ಅವಧಿಗೆ ಮುನ್ನವೇ ಬರಿದು

    ಗಂಗೊಳ್ಳಿ: ಹೊಸಾಡು ಗ್ರಾಮದ ಕಡುಬಿನ ಕೆರೆ ಕಳೆದ ಎರಡು ದಶಕಗಳಿಂದ ಅಭಿವೃದ್ಧಿ ಕಾಣದೆ ಸೊರಗಿ ಹೋಗಿದೆ. ಕೆರೆಯಲ್ಲಿ ಹೂಳು ತುಂಬಿದ್ದು, 7.30 ಎಕರೆ ವಿಸ್ತೀರ್ಣದ ಕೆರೆ ಸಂಪೂರ್ಣ ಬರಡು ಭೂಮಿಯಾಗಿ ಮಾರ್ಪಟ್ಟಿದೆ.
    ಕೊಪ್ಪರಿಗೆ, ಕಮ್ಮಾರಕೊಡ್ಲು, ಮೂಗಿನಬೈಲು, ಕೋಟೆಮಕ್ಕಿ, ಮೈರ್‌ಮನೆ ಪ್ರದೇಶದ 400 ಎಕರೆಗೂ ಅಧಿಕ ಕೃಷಿ ಭೂಮಿಗೆ ಕಡುಬಿನ ಕೆರೆ ಜಲಮೂಲವಾಗಿದ್ದು, ಕೆರೆ ನೀರಿನಾಶ್ರಯದಲ್ಲಿ ಕೃಷಿಕರು ಕೃಷಿ ಚಟುವಟಿಕೆ ನಡೆಸುತ್ತಿದ್ದರು. ಪ್ರಸ್ತುತ ಕೆರೆಯಲ್ಲಿ ಅಗಾಧ ಹೂಳು ತುಂಬಿಕೊಂಡಿದ್ದು ಅವಧಿಗೆ ಮುನ್ನವೇ ನೀರು ಬರಿದಾಗುತ್ತಿದೆ. ಪರಿಣಾಮ ಈ ವ್ಯಾಪ್ತಿಯ ಕೃಷಿಕರು ಭತ್ತದ ಬೆಳೆಯಿಂದ ಹಿಂದೆ ಸರಿಯುತ್ತಿದ್ದಾರೆ. ಈ ಭಾಗದಲ್ಲಿ ವರ್ಷದಿಂದ ವರ್ಷಕ್ಕೆ ಕೃಷಿ ಭೂಮಿ ಹಡೀಲು ಬೀಳುತ್ತಿರುವ ಪ್ರಮಾಣ ಅಧಿಕವಾಗಿದೆ.

    ಫೆಬ್ರವರಿಯಲ್ಲೇ ಬರಿದು: ಕೆರೆ ನೀರನ್ನು ಬಳಸಿಕೊಂಡು ರೈತರು ದಶಕಗಳ ಹಿಂದೆ ಮೂರು ಬೆಳೆ ಬೆಳೆಯುತ್ತಿದ್ದರು. ಮೇ ಕೊನೆಯ ತನಕವೂ ನೀರು ತುಂಬಿರುತ್ತಿದ್ದ ಕಡುಬಿನ ಕೆರೆ ಇತ್ತೀಚಿನ ವರ್ಷಗಳಲ್ಲಿ ಫೆಬ್ರವರಿಯಲ್ಲೇ ಬರಿದಾಗುತ್ತಿದೆ. ವಿಶಾಲ ಆಟದ ಮೈದಾನದಂತೆ ಗೋಚರಿಸುವ ಕೆರೆಯಲ್ಲಿ ಬೇಸಿಗೆಯಲ್ಲಿ ಹಕ್ಕಿಗಳಿಗೂ ಕುಡಿಯಲು ನೀರಿರುವುದಿಲ್ಲ. ಸಣ್ಣ ನೀರಾವರಿ ಇಲಾಖೆ ಅಧೀನಕ್ಕೆ ಒಳಪಟ್ಟ ಕಡುಬಿನ ಕೆರೆ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಅಭಿವೃದ್ಧಿ ಕಾಣದೆ ಎರಡು ದಶಕಗಳೇ ಕಳೆದು ಹೋಗಿವೆ ಎಂದು ಹೊಸಾಡು ಗ್ರಾಮದ ಕೃಷಿಕರು ದೂರಿದ್ದಾರೆ.

    ಶಿಥಿಲಾವಸ್ಥೆಯಲ್ಲಿ ಕೆರೆ ದಂಡೆ: ಕೆರೆ ದಂಡೆಯ ಮೇಲೆ ಮುಳ್ಳಿನ ಪೊದೆ, ಗಿಡಗಂಟಿ ಬೃಹತ್ ಮರಗಳು ಬೆಳೆದುಕೊಂಡಿದ್ದು ಇಲ್ಲಿ ನಡೆದಾಡಲೂ ಸಾಧ್ಯವಿಲ್ಲದ ಸ್ಥಿತಿಯಿದೆ. ದಂಡೆಯ ಎರಡು ಬದಿಯ ಕಲ್ಲುಗಳು ಜಾರಿದ್ದು ಶಿಥಿಲಾವಸ್ಥೆಗೆ ತಲುಪಿದೆ. ಕೆರೆ ದಂಡೆಯನ್ನು ಮರು ನಿರ್ಮಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

    ಕೆರೆ ಅಭಿವೃದ್ಧಿ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾರೂ ಇತ್ತ ಗಮನಹರಿಸುತ್ತಿಲ್ಲ. ಸಂಬಮಧಿಸಿದ ಇಲಾಖೆ ನಿರ್ಲಕ್ಷೃದಿಂದ ಸುಮಾರು 400 ಎಕರೆಗೂ ಅಧಿಕ ಕೃಷಿ ಭೂಮಿಗೆ ನೀರುಣಿಸುವ ಕಡುಬಿನ ಕೆರೆ ಸೊರಗಿ ಹೋಗಿದೆ. ಇನ್ನಾದರೂ ಕೆರೆಯ ಹೂಳೆತ್ತಿ ಸಮಗ್ರವಾಗಿ ಅಭಿವೃದ್ಧಿ ಪಡಿಸಬೇಕು.
    ಸೀತಾರಾಮ ಶೆಟ್ಟಿ ಕೇರಿಕೊಡ್ಲು, ಗ್ರಾಪಂ ಮಾಜಿ ಸದಸ್ಯ, ಹೊಸಾಡು

    ಕೆರೆಗಳ ಆಧುನೀಕರಣ ಯೋಜನೆಯಡಿ ಕಡುಬಿನ ಕೆರೆ ಪುನಶ್ಚೇತನಗೊಳಿಸುವ ಕುರಿತು ಸಚಿವ ಮಾಧುಸ್ವಾಮಿ ಬೈಂದೂರಿಗೆ ಭೇಟಿ ನೀಡಿದ ಸಂದರ್ಭ ಅವರ ಗಮನಕ್ಕೆ ತರಲಾಗಿದೆ. ಬಜೆಟ್ ನಂತರ ನೀರಾವರಿ ಸಚಿವರನ್ನು ಮತ್ತೊಮ್ಮೆ ಭೇಟಿಯಾಗಿ ಕಡುಬಿನ ಕೆರೆ ಅಭಿವೃದ್ಧಿ ಬಗ್ಗೆ ಚರ್ಚಿಸಲಾಗುವುದು. ಕಡುಬಿನ ಕೆರೆ ಅಭಿವೃದ್ಧಿಗೆ ಗಮನಹರಿಸಲಾಗುವುದು.
    ಬಿ.ಎಂ.ಸುಕುಮಾರ್ ಶೆಟ್ಟಿ, ಬೈಂದೂರು ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts