More

    ಕುಸಿತ ಭೀತಿಯಲ್ಲಿ ಕಡಬ ಕಳಾರ ಅಂಗನವಾಡಿ ಅಂಗನವಾಡಿ

    ಪ್ರವೀಣ್‌ರಾಜ್ ಕಡಬ
    ಬೀಳುವ ಸ್ಥಿತಿಯಲ್ಲಿರುವ ಸುಮಾರು 30 ವರ್ಷ ಹಳೆಯದಾದ ಶಿಥಿಲ ಅಂಗನವಾಡಿ ಕಟ್ಟಡ… ಅದರೊಳಗೆ ಜೀವ ಭಯದಿಂದಲೇ ಇರುವ ಸುಮಾರು 40 ಪುಟಾಣಿಗಳು…
    -ಇದು ಕಳಾರ ಅಂಗನವಾಡಿ ಕಟ್ಟಡದ ದುಸ್ಥಿತಿ.

    ಪಕ್ಕದಲ್ಲಿ ಹೊಸ ಕಟ್ಟಡ ನಿರ್ಮಾಣವಾದರೂ ಗುತ್ತಿಗೆೆದಾರರ ವಿಳಂಬ ಧೋರಣೆಯಿಂದ ಕೆಲಸ ಪೂರ್ಣಗೊಂಡಿಲ್ಲ. ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹಳೆಯ ಕಟ್ಟಡ ಇನ್ನಷ್ಟು ಶಿಥಿಲಾವಸ್ಥೆಗೆ ತಲುಪಿದ್ದರಿಂದ ಪುಟಾಣಿಗಳನ್ನು ಸುರಕ್ಷತೆಯ ದೃಷ್ಟಿಯಿಂದ ಕಿರಿಯ ಪ್ರಾಥಮಿಕ ಶಾಲಾ ಕೊಠಡಿಯೊಂದಕ್ಕೆ ಸ್ಥಳಾಂತರಿಸಲಾಗಿದೆ. ಆದರೆ ಸ್ಥಳಾಂತರಗೊಂಡ ಕಟ್ಟಡದ ಛಾವಣಿಯೂ ಶಿಥಿಲವಾಗಿದ್ದು ಅಪಾಯದಲ್ಲಿದೆ.

    ಹೊಸ ಕಟ್ಟಡ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಬೇಡಿಕೆ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕಡಬ ಗ್ರಾಪಂ ಅವಧಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಿಂದ 5 ಲಕ್ಷ ರೂ. ಮತ್ತು ಎಂಆರ್‌ಪಿಎಲ್‌ನಿಂದ 5 ಲಕ್ಷ ರೂ. ಅನುದಾನದಿಂದ ಕಾಮಗಾರಿ ಪ್ರಾರಂಭಿಸಲಾಗಿದ್ದು, ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಟೈಲ್ಸ್ ಅಳವಡಿಕೆ, ಕಿಟಕಿ ಸೇರಿದಂತೆ ಕೆಲವೊಂದು ಸಣ್ಣ ಕೆಲಸಗಳು ಬಾಕಿ ಉಳಿದು ಹಲವು ಸಮಯ ಕಳೆದಿವೆ. ಕಾಮಗಾರಿ ಪೂರ್ಣಗೊಳ್ಳದೆ ವಿದ್ಯಾರ್ಥಿಗಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲು ಸಾಧ್ಯವಾಗುತ್ತಿಲ್ಲ.

    ಅಪಾಯಕಾರಿ ಹಳೆಯ ಕಟ್ಟಡ: 1991ರಲ್ಲಿ ಮಂಡಲ ಪಂಚಾಯಿತಿ ಅವಧಿಯಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲಾಗಿತ್ತು. ಇದಾಗಿ 30 ವರ್ಷಗಳೇ ಕಳೆದಿವೆ. ಸದ್ಯ ಮಕ್ಕಳನ್ನು ಸ್ಥಳಾಂತರಿಸಲಾಗಿರುವ ಶಾಲಾ ಕೊಠಡಿಯೂ ಬೀಳುವ ಸ್ಥಿತಿಯಲ್ಲಿರುವುದರಿಂದ ಹೊಸ ಅಂಗನವಾಡಿ ಕಟ್ಟಡವನ್ನು ಶೀಘ್ರ ಲೋಕಾರ್ಪಣೆಗೊಳಿಸಬೇಕು. ಬೀಳುವ ಸ್ಥಿತಿಯಲ್ಲಿರುವ ಹಳೇ ಕಟ್ಟಡವನ್ನು ನೆಲಸಮ ಮಾಡಬೇಕು ಎನ್ನುವುದು ಅಂಗನವಾಡಿ ಪುಟಾಣಿಗಳ ಪಾಲಕರ ಕೋರಿಕೆ.

    ಹೊಸ ಕಟ್ಟಡ ಕಾಮಗಾರಿ ವಿಳಂಬದಿಂದ ಸಮಸ್ಯೆಯಾಗಿದೆ. ವಾರದೊಳಗೆ ಕಾಮಗಾರಿ ಮುಗಿಸಿಕೊಡುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ. ಈ ಬಗ್ಗೆ ಮೇಲಧಿಕಾರಿ, ಇಂಜಿನಿಯರ್ ಗಮನಕ್ಕೂ ತರಲಾಗಿದೆ.
    -ಶ್ರೀಲತಾ, ಸಿಡಿಪಿಒ ಪುತ್ತೂರು

    ಮಕ್ಕಳ ಹಿತದೃಷ್ಟಿಯಿಂದ ಹೊಸ ಕಟ್ಟಡದ ಕಾಮಗಾರಿಯನ್ನು ಗುತ್ತಿಗೆದಾರರು ವಿಳಂಬ ಮಾಡದೆ ಕೆಲಸ ಮುಗಿಸಿಕೊಡಬೇಕು. 15 ದಿನದೊಳಗೆ ಅಂಗನವಾಡಿ ಹೊಸ ಕಟ್ಟಡದಲ್ಲಿ ಪ್ರಾರಂಭವಾಗದಿದ್ದರೆ ಪ್ರತಿಭಟಿಸಲಾಗುವುದು.
    -ಹನೀಫ್ ಕೆ.ಎಂ. ಕಡಬ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts