More

  ಕಾದು ಓದು| ಅಕ್ಷರಲೋಕದ ಸ್ನೇಹಸೇತುವೆಯ ಅನಾವರಣ

  ಒಬ್ಬ ಅನುಭವಿ ಕವಿ ಬರೆದದ್ದು ಮಾತ್ರ ಕಾವ್ಯವಲ್ಲ, ಅವನಾಡುವ ಮಾತು ಸಹ ಕಾವ್ಯದ ಝುರಿಯೇ ಆಗಿ ಧರೆಗಿಳಿದುಬಿಡುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿ ನಿಲ್ಲುವವರು ನಮ್ಮತುಂಟ ಕವಿ ಬಿ.ಆರ್. ಲಕ್ಷ್ಮಣರಾವ್. ‘ಲಿಬಿಡೊ ಬಿಡುವುದಿಲ್ಲ’ ಎಂಬ ಬಿಡಿಬರಹಗಳ ಪುಸ್ತಕದಲ್ಲಿ ಅವರು ತಮ್ಮ ಅನೇಕ ರಸಾನುಭವ ಮತ್ತು ಕಹಿ ಅನುಭವಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ಓದುಗರಿಗೆ ಉಣಬಡಿಸಿದ್ದಾರೆ. ವಿಚಾರ, ಒಡನಾಟ, ಮಾತುಕತೆ, ಮುನ್ನುಡಿ ಮತ್ತು ಸ್ಪಂದನಗಳೆಂಬ ಐದು ಭಾಗಗಳು ಇದರಲ್ಲಿವೆ. ಸಿಹಿಪಾಕ, ಹುಳಿಮಜ್ಜಿಗೆ, ಹದವಾದ ಹಿತಮಿತವಾದ ಖಾರ ಒಗರುಗಳ ರಸದೌತಣದಂತೆ ಅವರದೇ ಆದ ಶೈಲಿಯಲ್ಲಿ ಬರಹಗಳನ್ನು ಓದುಗರ ಮಸ್ತಕಕ್ಕೆ ಇಳಿಸುತ್ತಾರೆ.

  ನಾಡಿನ ಹಿರಿಯ ಕವಿಗಳ ಸಾಲಿನಲ್ಲಿ ನಿಲ್ಲುವ ಬಿಆರೆಲ್, ‘ಲಿಬಿಡೊ’ದಲ್ಲಿ ಬರೆಯುತ್ತಾ ಬರೆಯುತ್ತಾ ಸಣ್ಣ ಮಕ್ಕಳಿಗೂ, ಯುವಕವಿಗಳಿಗೂ ಇನ್ನಷ್ಟು ಹತ್ತಿರವಾಗಿಬಿಡುತ್ತಾರೆ. ಅದೃಷ್ಟಕ್ಕೆ ಸಿಕ್ಕ ಅಡಿಗರು, ಲಂಕೇಶ್, ವೈಎನ್ಕೆ, ಅನಂತಮೂರ್ತಿಯಂತಹ ಗುರು ಮತ್ತು ಮಾರ್ಗದರ್ಶಕರನ್ನು, ಹಾಡು-ಹರಟೆ-ಗಂಭೀರತೆಗಳಲ್ಲಿ ನಿಷ್ಠುರ ವಸ್ತುನಿಷ್ಠ ವಿಮರ್ಶಕರಾಗಿ ಉಳಿದ ಎಚ್.ಎಸ್. ವೆಂಕಟೇಶಮೂರ್ತಿ, ನರಹಳ್ಳಿ ಬಾಲಸುಬ್ರಮಣ್ಯರಂತಹ ಗೆಳೆಯರನ್ನು ‘ಲಿಬಿಡೊ’ ಕಡೆಯವರೆಗೂ ಸ್ಮರಿಸುತ್ತಲೇ ಹೋಗುತ್ತದೆ.

  ಇದರ ಮಧ್ಯೆ ನೇರ ನುಡಿಯ ನಾಡಿಗರ ನಿಧನ, ಜೀವದ ಗೆಳೆಯ ವ್ಯಾಸರಾವ್ ಅವರನ್ನು ಕಳೆದುಕೊಂಡ ವ್ಯಾಕುಲತೆ, ಎರಡು ಪೆಗ್ ವಿಸ್ಕಿಯೊಂದಿಗೆ ವಿದಾಯ ಹೇಳಿದ ಅವರ ಪ್ರಿಯ ಗೆಳೆಯ ಗೌರಿ ಮುಂತಾದವರ ಅಳಿಸಲಾಗದ ನೆನಪುಗಳನ್ನು ಲಕ್ಷ್ಮಣರಾವ್ ಮೌನದ ಅಳಲಿನಲ್ಲಿ ಮೀಯಿಸುತ್ತಾರೆ. ಕೆ.ಎಸ್. ನಿಸಾರ್ ಅಹಮದ್, ಜಯಂತ್ ಕಾಯ್ಕಿಣಿ, ರಾಮಚಂದ್ರ ಶರ್ಮ, ಲಕ್ಷ್ಮಿನಾರಾಯಣ ಭಟ್ಟ, ಟಿ.ಎನ್. ಸೀತಾರಾಂ, ಡುಂಡಿರಾಜ್​ರಂತಹ ಅನೇಕರ ಒಡನಾಟವನ್ನು ಅಲ್ಲಲ್ಲಿ ನೆನಪಿಸುವ ಕೆಲಸವೂ ಇದರೊಟಿಗೇ ಆಗಿರುವುದು ಈ ಪುಸ್ತಕವನ್ನು ಆಸಕ್ತಿಕರ ಓದನ್ನಾಗಿಸುತ್ತದೆ.

  ಭಾವಗೀತೆಯ ಸುಗಮ ಸಂಗೀತದ ನಾಡಿಯೂ ಇಲ್ಲಿ ವಿಶೇಷವಾಗಿ ಮಿಡಿದಿದೆ. ನವೋದಯ ಕಾಲದಲ್ಲಿ ಉದಯಿಸಿ ಬಂದ ಭಾವಗೀತೆಗಳನ್ನು ಮತ್ತು ಅದೇ ಕಾಲದಲ್ಲಿ ಬೇಂದ್ರೆ, ಕುವೆಂಪು, ಪುತಿನ, ಕಣವಿ ಮುಂತಾದವರು ಗೇಯ ಗೀತೆ ಬರೆದಿರುವುದನ್ನು ಮನದಟ್ಟು ಮಾಡುವ ಮೂಲಕ ಹೆಸರಾಂತ ಹಿರಿಯ ಕವಿಗಳ ಕೈಂಕರ್ಯವನ್ನು ನೆನಪಿಸಿದ್ದಾರೆ. ಭಾವಗೀತೆ ಹೇಗಿರಬೇಕು, ಪದ ಬಳಕೆ ಯಾವ ರೀತಿ ಆಗಬೇಕೆಂಬುದನ್ನು ತಿಳಿಸುತ್ತಾ ಇಂದಿನ ಉದಯೋನ್ಮುಖ ಕವಿಗಳಿಗೆ ಮೇಷ್ಟ್ರೇ ಆಗಿಬಿಡುತ್ತಾರೆ.

  ಬಿ.ಆರ್.ಎಲ್. ಅವರ ವಿವಾಹಪೂರ್ವ ಗುಟ್ಟನ್ನು ರಟ್ಟು ಮಾಡುವ ಲೇಖನ ಗಮನ ಸೆಳೆಯುತ್ತದೆ. ಕಾಮ ಕ್ರೀಡೆಯ ಕರಾಮತ್ತನ್ನು ಹೇಳುತ್ತಲೇ ಸಮಾಜ ವಿರೋಧಿ ಚಟುವಟಿಕೆಗಳನ್ನು ಕುಟುಕುತ್ತಾ ಲೇಖಕರು ತಾವು ಪಾಲಿಸಿಕೊಂಡು ಮರ್ಯಾದೆಯ ಜತೆಗೆ ರಹಸ್ಯ ಪುಸ್ತಕಗಳನ್ನು ಕಂಡಿದ್ದು, ಬರೆದದ್ದನ್ನು ಯಾವ ಮುಲಾಜಿಗೂ ಒಳಪಡದೆ ಬಿಚ್ಚಿಡುತ್ತಾರೆ. ಅಷ್ಟಕ್ಕೆ ನಿಲ್ಲದೆ ಹದಿಹರೆಯದ ಮಕ್ಕಳನ್ನು ಪೋರ್ನ್ ಸೈಟ್​ಗಳ ಬಳಕೆಯ ವಿಷಯದಲ್ಲಿ ಹೇಗೆ ನಡೆಸಿಕೊಳ್ಳಬೇಕೆಂದು ತಿಳಿಸಿಹೇಳುತ್ತಾರೆ. ಕಾನೂನು ನ್ಯಾಯಾಲಯಗಳ ಕಡೆ ಬೆರಳು ಮಾಡದೆ ಮಕ್ಕಳನ್ನು ವೀಣೆಯ ತಂತಿಯಂತೆ ಹೆಚ್ಚು ಸಡಿಲವೂ ಬಿಡದೆ ತೀರ ಬಿಗಿಯೂ ಮಾಡದೆ ಹದವರಿತು ಶ್ರುತಿ ಮಾಡುವ ವಿದ್ಯೆಯನ್ನು ಪೋಷಕರಿಗೆ ಬಹಳ ನಾಜೂಕಾಗಿ ತಿಳಿಸಿಕೊಡುತ್ತಾರೆ.

  ಕವಿತೆಗಳು ನೀರ್ಗಳ್ಳೆಗಳಂತೆ ಒಡೆದುಹೋಗದಂತೆ ಅಂತಃಸತ್ವ ಇರುವ ಕಾವ್ಯಗಳನ್ನು ಬರೆಯಲು ಉದಯೋನ್ಮುಖ ಕವಿಗಳಿಗೆ ಕಿವಿಮಾತು ಹೇಳಲು ಮರೆಯುವುದಿಲ್ಲ. ಇಂಗ್ಲೀಷು ಕಲಿತ ಮಕ್ಕಳು ರೆಕ್ಕೆಪುಕ್ಕ ಬಲಿತ ಮೇಲೆ ಪುರ್ರಂತ ವಿದೇಶಕ್ಕೆ ಹಾರಿ ಬಿಳಿಯರ ಹಂಗಿನಲ್ಲಿ ಬಾಳಲು ಹೋಗುವುದನ್ನು ವಿರೋಧಿಸುತ್ತಾರೆ. ಕನ್ನಡ ನೆಲದಲ್ಲೇ ಆಳಕ್ಕೆ ಬೇರೂರಿ ಹೆಮ್ಮರವಾಗಿ ಬೆಳೆಯಬೇಕೆಂಬ ತಮ್ಮ ಇಂಗಿತವನ್ನು ಮುದ್ದಾದ ಮಾತುಗಳಲ್ಲೇ ಮನದಟ್ಟು ಮಾಡುತ್ತಾರೆ. ಜತನದಿಂದ ಸ್ನೇಹ ವಲಯವನ್ನು ಕಟ್ಟಿ ಕಾಪಾಡಿಕೊಂಡು ಬಂದಿರುವ ಬಿ.ಆರ್.ಎಲ್., ಸಂಬಂಧಗಳು ಕಾಲಪ್ರವಾಹದಲ್ಲಿ ಕೊಚ್ಚಿಹೋಗದಂತೆ ಸಾಹಿತ್ಯ ವೃತ್ತದೊಳಗಿನ ಅಷ್ಟೂ ಗೆಳೆಯರನ್ನು ತಮ್ಮ ಪ್ರೀತಿಯಲ್ಲಿ ಕಟ್ಟಿಹಾಕಿ ಸ್ನೇಹಸೇತುವೆಯನ್ನು ನಿರ್ವಿುಸಿಕೊಂಡಿರುವುದು ಈ ಪುಸ್ತಕವನ್ನು ಓದುವಾಗ ಅನುಭವಕ್ಕೆ ಬರದೇ ಇರದು.

  ಪೊ›. ಬಸವರಾಜ ಕೊಣ್ಣೂರ್, ಎಂ.ಎಸ್. ನರಸಿಂಹಮೂರ್ತಿ, ಜಿ.ಬಿ. ಹೊಂಬಳ, ಡಾ. ನಾ. ಸೋಮೇಶ್ವರ, ಶ್ರೀಪತಿ ಮಂಜನಬೈಲು, ವಿಶ್ವೇಶ್ವರ ಭಟ್ ಮುಂತಾದವರ ಒಡನಾಟವನ್ನು ದಾಖಲಿಸಿದ್ದಾರೆ. ಗಾಯಕ ಪಂಚಮ್ ಹಳಿಬಂಡಿ, ಉಪಾಸನಾ ಮೋಹನ್ ಅವರೊಂದಿಗಿನ ಮಾತುಕತೆ, ಭಾವಗೀತೆಗಳ ಕುರಿತ ಚರ್ಚೆ ಆಸಕ್ತಿಕರವಾಗಿವೆ. ಇದೆಲ್ಲವನ್ನೂ ಮೀರಿ ವಾಚಕರಿಗೆ ಕಡೆಯಲ್ಲಿ ವಿದ್ಯಾರ್ಥಿ ಭವನದ ಮಸಾಲೆ ದೋಸೆ ಸವಿಯನ್ನು ತಿಳಿಸದೆ ಬಿಡುವುದಿಲ್ಲ ಅವರ ಲಿಬಿಡೊ.

  ಕೃತಿ: ಲಿಬಿಡೊ ಬಿಡುವುದಿಲ್ಲ ಬಿಡಿ ಬರಹಗಳು

  ಲೇಖಕರು: ಬಿ.ಆರ್. ಲಕ್ಷ್ಮಣರಾವ್

  ಪ್ರಕಾಶನ: ಸಪ್ನ ಬುಕ್​ಹೌಸ್, ಬೆಂಗಳೂರು

  ಪುಟ: 156 ಬೆಲೆ: -ಠಿ; 120

  ರವೀಂದ್ರ ಸಿಂಗ್ ಕೋಲಾರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts