More

    ಕೆ.ಎಸ್.ವಿಜಯಾನಂದ ವಿರುದ್ಧ ನಿವೃತ್ತಿ ಅಸ್ತ್ರ: ಶ್ರೀನಿವಾಸ್ ಕೆಂಗಣ್ಣಿಗೆ ಗುರಿಯಾದ ‘ಬಲಿ’ ಪದ

    ಮಂಡ್ಯ: ಜೆಡಿಎಸ್ ವರಿಷ್ಠರ ನಿರ್ಧಾರದಿಂದ ಬೇಸತ್ತ ನಿತ್ಯಸಚಿವ ಕೆ.ವಿ.ಶಂಕರಗೌಡ ಅವರ ಮೊಮ್ಮಗ, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಮಂಡ್ಯ ಕ್ಷೇತ್ರದ ಚುನಾವಣಾ ಕಣದ ಸ್ವರೂಪ ಬದಲಿಸಿದೆ. ಈ ಹಿನ್ನೆಲೆಯಲ್ಲಿ ಕಂಗೆಟ್ಟಿರುವ ಎದುರಾಳಿಗಳು ವಿಜಯಾನಂದ ಕಣದಿಂದ ನಿವೃತ್ತಿಯಾಗುತ್ತಾರೆನ್ನುವ ಗಾಳಿಸುದ್ದಿ ಹರಿಬಿಡುತ್ತಿದ್ದಾರೆ.
    ದಳಪತಿಗಳು ಮನವೊಲಿಸುತ್ತಾರೆನ್ನುವ ಮಾತಿನ ನಡುವೆಯೇ ವಿಜಯಾನಂದ ಸ್ವಾಭಿಮಾನಿ ಪಡೆಯ ಅಭ್ಯರ್ಥಿಯಾದರು. ಮಾತ್ರವಲ್ಲದೆ ಸದ್ದಿಲ್ಲದೆ ಕ್ಷೇತ್ರದಲ್ಲಿ ಬಿಡುವಿಲ್ಲದಂತೆ ಪ್ರಚಾರ ಮಾಡುತ್ತಿದ್ದಾರೆ. ಕೆವಿಎಸ್ ಕುಟುಂಬದ ಕುಡಿ ಎನ್ನುವ ಹಿನ್ನೆಲೆಯಲ್ಲಿ ಜನರಿಂದಲೂ ಕೂಡ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಜತೆಗೆ ಚುನಾವಣಾ ಖರ್ಚಿಗೆಂದು ದೇಣಿಗೆಯನ್ನು ನೀಡುತ್ತಿದ್ದಾರೆ. ಪ್ರಮುಖವಾಗಿ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸಿದರ ಹೊರತಾಗಿಯೂ ವಿರೋಧಿಗಳ ಕೊನೆಯ ಅಸ್ತ್ರ ‘ಅಪಪ್ರಚಾರ’ ಎನ್ನುವಂತೆ ನಿವೃತ್ತಿ ಅಸ್ತ್ರದ ಪ್ರಯೋಗಕ್ಕೆ ಮುಂದಾಗಿದ್ದಾರೆ.
    ಶಾಸಕ ಎಂ.ಶ್ರೀನಿವಾಸ್ ನಾಯಕತ್ವದಲ್ಲಿ ವಿಜಯಾನಂದ ನಾಮಪತ್ರ ಸಲ್ಲಿಸಿದಾಗ ಜೆಡಿಎಸ್ ಅದರಲ್ಲಿಯೂ ಎದುರಾಳಿಗಳು ಅಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ. ಜತೆಗೆ ನಾಮಪತ್ರ ವಾಪಸ್ ಪಡೆದುಕೊಳ್ಳುವಂತೆ ಮಾಡಲಾಗುತ್ತಿದೆ ಎಂದೇ ಹೇಳಲಾಗುತ್ತಿತ್ತು. ಆದರೆ ಅದ್ಯಾವುದಕ್ಕೂ ಸೊಪ್ಪು ಹಾಕದ ವಿಜಯಾನಂದ ಕಣದಲ್ಲಿ ಉಳಿದುಕೊಂಡರು.
    ಬಳಿಕ ಸ್ವಾಭಿಮಾನದ ಹೆಸರಿನಲ್ಲಿ ಜನರ ಬಳಿಗೆ ಹೋದಾಗ ಕೆವಿಎಸ್ ಕುಡಿಗೆ ನಿರೀಕ್ಷೆಗೂ ಮೀರಿದ ಸ್ವಾಗತ ಸಿಗಲಾರಂಭಿಸಿತು. ಇದರೊಂದಿಗೆ ಅಲ್ಲಿಯವರೆಗೆ ಕ್ಷೇತ್ರದಲ್ಲಿದ್ದ ಚುನಾವಣಾ ಚಿತ್ರಣ ಬದಲಾಯಿತು. ಈಗಾಗಲೇ ಕ್ಷೇತ್ರದಲ್ಲಿ ಮತಯಾಚನೆ ನಡೆಸುತ್ತಿದ್ದು, ಕೆ.ವಿ.ಶಂಕರಗೌಡ ಅವರ ವರ್ಚಸ್ಸು ವಿಜಯಾನಂದಗೆ ವರದಾನವಾಗಲಾರಂಭಿಸುತ್ತಿದೆ. ಅತ್ತ ಜನತಾ ಶಿಕ್ಷಣ ಸಂಸ್ಥೆ(ಪಿಇಟಿ)ಯಲ್ಲಿ ವ್ಯಾಸಂಗ ಮಾಡಿ ದೇಶ, ವಿದೇಶದಲ್ಲಿ ಉದ್ಯೋಗ ಮಾಡುತ್ತಿರುವ ಹಳೆಯ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದ ಮೂಲಕವೇ ವಿಜಯಾನಂದ ಪರ ಮತಯಾಚನೆ ಮಾಡುತ್ತಿರುವುದು ವಿರೋಧಿಗಳ ನಿದ್ದೆಗೆಡಿಸುವುದರ ಜತೆಗೆ ಹೆಚ್ಚಿನ ಸದ್ದು ಮಾಡುತ್ತಿದೆ.
    ಶಾಸಕರ ವಿರುದ್ಧ ‘ಬಲಿ’ ಟೀಕೆ: ಶಾಸಕ ಎಂ.ಶ್ರೀನಿವಾಸ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಟೀಕೆಗಳ ಸುರಿಮಳೆಗೈಯುತ್ತಿದ್ದಾರೆ. ಪ್ರಮುಖವಾಗಿ ತಮ್ಮ ಹಿತಾಸಕ್ತಿಗೆ ವಿಜಯಾನಂದ ಅವರನ್ನು ಬಲಿ ಕೊಡಲಾಗುತ್ತಿದೆ ಎನ್ನುವ ಮಾತು ಆಕ್ರೋಶಕ್ಕೆ ಕಾರಣವಾಗಿದೆ. ಪರಿಣಾಮ ಚುನಾವಣೆಯನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸಿರುವ ಶ್ರೀನಿವಾಸ್ ತಮ್ಮ ವಿರೋಧಿಗಳಿಗೆ ಟಕ್ಕರ್ ಕೊಡಲು ಸಜ್ಜಾಗಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರದಲ್ಲಿ ಸಂಚರಿಸುತ್ತಾ ಮತಬೇಟೆಯಾಡುತ್ತಿದ್ದಾರೆ. ಜತೆಗೆ ತಮ್ಮ ಚುನಾವಣಾ ತಂತ್ರಗಾರಿಕೆಯನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts