More

    ಭತ್ತದ ಕಣಜದಲ್ಲಿ ಒಕ್ಕಲಿಗರು, ಕುರುಬರದೇ ಸದ್ದು

    ಮೈಸೂರು: ‘ಭತ್ತದ ಕಣಜ’ ಕೆ.ಆರ್.ನಗರ ಕ್ಷೇತ್ರದಲ್ಲಿ ಪ್ರತಿ ಚುನಾವಣೆಯಲ್ಲೂ ಹೆಚ್ಚು ಸದ್ದು ಮಾಡುವುದು ‘ಒಕ್ಕಲಿಗ’ ಮತ್ತು ‘ಕುರುಬ’ ಸಮುದಾಯ. ಕೇತ್ರದಲ್ಲಿ ಗೆಲುವು ಪಡೆಯುವ ಮತ್ತು ಸ್ಪರ್ಧೆ ಮಾಡುವ ಬಹುತೇಕ ಅಭ್ಯರ್ಥಿಗಳು ಈ ಎರಡು ಸಮುದಾಯದವರೇ ಆಗಿರುವುದು ವಿಶೇಷ.


    ಕ್ಷೇತ್ರದಲ್ಲಿ ಬಹುಸಂಖ್ಯಾತರಾದ ಒಕ್ಕಲಿಗರು ಹಾಗೂ ಕುರುಬರ ನಡುವೆ ಯಾವುದೇ ಚುನಾವಣೆಯಲ್ಲೂ ಪೈಪೋಟಿ ಕಾಣುತ್ತದೆ. ದಲಿತರು, ಲಿಂಗಾಯತರು, ನಾಯಕರು, ಉಪ್ಪಾರರು ಹಾಗೂ ಮುಸ್ಲಿಂ ಸಮುದಾಯದ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತವೆ.
    ಈ ಕ್ಷೇತ್ರದಿಂದ ಒಮ್ಮೆ ಮಾತ್ರ ವೀರಶೈವ ಲಿಂಗಾಯತ ಸಮುದಾಯದ ಎಚ್.ಎಂ.ಚನ್ನಬಸಪ್ಪ ಗೆಲುವು ಸಾಧಿಸಿದ್ದರು. ಅವರ ಹೊರತಾಗಿ ಇಲ್ಲಿ ಗೆಲುವು ಸಾಧಿಸಿದವರೆಲ್ಲ ಒಕ್ಕಲಿಗ ಅಥವಾ ಕುರುಬ ಸಮುದಾಯದವರೇ ಆಗಿದ್ದಾರೆ.

    ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ 1952ರಿಂದ ಈವರೆಗೆ 15 ಚುನಾವಣೆಗಳು ನಡೆದಿದ್ದು, 9 ಜನ ಶಾಸಕರನ್ನು ಕಂಡಿದೆ. ಈ ಪೈಕಿ ವೀರಶೈವ ಲಿಂಗಾಯತ ಸಮುದಾಯದ ಎಚ್.ಎಂ.ಚನ್ನಬಸಪ್ಪ, ಒಕ್ಕಲಿಗ ಸಮುದಾಯದ ಎಸ್.ಎಚ್. ತಮ್ಮಯ್ಯ ಅಲಿಯಾಸ್ ಹನುಮಂತೇಗೌಡರ ತಮ್ಮಯ್ಯ, ಕೆ.ಎಸ್.ಗೌಡಯ್ಯ, ಎಚ್.ಬಿ.ಕೆಂಚಪ್ಪಗೌಡ, ಎಸ್.ನಂಜಪ್ಪ, ಸಾ.ರಾ.ಮಹೇಶ್ ಹಾಗೂ ಕುರುಬ ಸಮುದಾಯದ ಎಂ.ಬಸವರಾಜು, ಎಚ್.ವಿಶ್ವನಾಥ್, ಮಂಚನಹಳ್ಳಿ ಮಹದೇವು ಶಾಸಕರಾಗಿದ್ದಾರೆ.
    ಈ ಪೈಕಿ ಎಚ್.ವಿಶ್ವನಾಥ್ 8 ಬಾರಿ ಸ್ಪರ್ಧಿಸಿ 3 ಬಾರಿ ಗೆಲುವು ಪಡೆದಿದ್ದಾರೆ. ಇನ್ನು ನಂಜಪ್ಪ 5 ಬಾರಿ ಸ್ಪರ್ಧಿಸಿ 3 ಬಾರಿ ಗೆಲುವು ಪಡೆದಿದ್ದಾರೆ. ಸಾ.ರಾ.ಮಹೇಶ್ ಕೂಡ 4 ಬಾರಿ ಸ್ಪರ್ಧಿಸಿ 3 ಬಾರಿ ಗೆದ್ದಿದ್ದಾರೆ.

    1952ರಲ್ಲಿ ಪಕ್ಷೇತರರಾಗಿ ಹನುಮಂತೇಗೌಡರ ತಮ್ಮಯ್ಯ ಮೊದಲ ಬಾರಿಗೆ ಕ್ಷೇತ್ರದ ಶಾಸಕರಾದರು. 1957ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಚ್.ಎಂ.ಚನ್ನಬಸಪ್ಪ(18,615 ಮತ) ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದ ಕೆ.ಎಸ್.ಗೌಡಯ್ಯ (12,659 ಮತ) ವಿರುದ್ಧ ಜಯ ಪಡೆದು ವಿಧಾನಸೌಧ ಪ್ರವೇಶಿಸಿದ್ದರು. 1962ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಕೆ.ಎಸ್.ಗೌಡಯ್ಯ (20976 ಮತ) ಅವರು ಎಚ್.ಎಂ.ಚನ್ನಬಸಪ್ಪ(18,557 ಮತ) ಅವರನ್ನು ಸೋಲಿಸಿ ಶಾಸಕರಾದರು. 1967ರ ಚುನಾವಣೆಯಲ್ಲಿ ಎಂ.ಬಸವರಾಜು ಆಯ್ಕೆಯಾದರೆ, 1972ರಲ್ಲಿ ಕಾಂಗ್ರೆಸ್‌ನ ಎಚ್.ಬಿ. ಕೆಂಚೇಗೌಡ ಶಾಸಕರಾದರು.

    ಭತ್ತದ ಕಣಜದಲ್ಲಿ ನಂಜಪ್ಪ-ವಿಶ್ವನಾಥ್ ಮುಖಾಮುಖಿ

    nanjappa
    nanjappa

    1978ರ ಚುನಾವಣೆಯ ವೇಳೆ ಕ್ಷೇತ್ರದ ರಾಜಕಾರಣಕ್ಕೆ ಘಟಾನುಘಟಿ ರಾಜಕಾರಣಿಗಳಾದ ಎಚ್.ವಿಶ್ವನಾಥ್ ಮತ್ತು ಎಸ್.ನಂಜಪ್ಪ ಪ್ರವೇಶ ಪಡೆದರು. ಈ ಇಬ್ಬರು ನಾಯಕರು ಕ್ಷೇತ್ರದಲ್ಲಿ 2 ದಶಕಗಳ ಕಾಲ ಜಿದ್ದಾಜಿದ್ದಿನ ಸ್ಪರ್ಧೆ ಮಾಡಿದರು.
    ಹಿಂದುಳಿದ ವರ್ಗಗಳ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಹಾಗೂ ಯುವ ವಕೀಲರಾಗಿದ್ದ ಎಚ್.ವಿಶ್ವನಾಥ್ ಅವರನ್ನು ಗುರುತಿಸಿದ ಡಿ.ದೇವರಾಜ ಅರಸ್ ಅವರು 1978ರಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿದರು. ಆಗ ಜನತಾ ಪಕ್ಷದಿಂದ ಎಸ್.ನಂಜಪ್ಪ ಸ್ಪರ್ಧಿಸಿದ್ದರು. ಆ ವೇಳೆ 33,571 ಮತ ಪಡೆದು ಎಚ್.ವಿಶ್ವನಾಥ್ ಶಾಸಕರಾದರು. 24,441 ಮತ ಪಡೆದ ನಂಜಪ್ಪ ಸೋಲು ಅನುಭವಿಸಿದರು. ಬಳಿಕ ನಡೆದ 1983 ಮತ್ತು 1985ರ ಚುನಾವಣೆಗಳಲ್ಲೂ ಮತ್ತೆ ಎಚ್.ವಿಶ್ವನಾಥ್ ಹಾಗೂ ನಂಜಪ್ಪ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟು, ಎರಡೂ ಬಾರಿ ನಂಜಪ್ಪ ಗೆದ್ದರು. 1989ರಲ್ಲಿ ವಿಶ್ವನಾಥ್ ಮತ್ತು ನಂಜಪ್ಪ ಪುನಃ ಮುಖಾಮುಖಿಯಾದಾಗ ವಿಶ್ವನಾಥ್ ಜಯಗಳಿಸಿದರು. ಈ ಅವಧಿಯಲ್ಲಿ ಅವರಿಗೆ ಕನ್ನಡ ಮತ್ತು ಸಂಸ್ಕೃತಿ, ಅರಣ್ಯ ಖಾತೆ ಸಚಿವ ಸ್ಥಾನವೂ ದೊರೆಯಿತು. 1994ರಲ್ಲಿ ಮತ್ತೆ ಎಸ್.ನಂಜಪ್ಪ ಗೆದ್ದು, ಸಚಿವರಾದರು. ಅಷ್ಟರಲ್ಲಿ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಅವರು 1999ರ ಚುನಾವಣೆಯಿಂದ ದೂರ ಸರಿದರು. ಆ ಚುನಾವಣೆಯಲ್ಲಿ ಮಂಚನಹಳ್ಳಿ ಮಹದೇವ್ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆಗಲೂ, ಕಾಂಗ್ರೆಸ್‌ನ ಎಸ್.ವಿಶ್ವನಾಥ್ ಗೆಲುವು ಪಡೆದು ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಸಹಕಾರ, ಶಿಕ್ಷಣ ಸಚಿವರಾಗಿ ಕೆಲಸ ನಿರ್ವಹಿಸಿದರು.

    vishwanath
    vishwanath

    ಭತ್ತದ ಕಣಜಕ್ಕೆ ಸಾ.ರಾ.ಮಹೇಶ್ ಪ್ರವೇಶ

    2004ರಲ್ಲಿ ಜೆಡಿಎಸ್‌ನಿಂದ ಸ್ಪ್ಪರ್ಧಿಸಿದ್ದ ಮಂಚನಹಳ್ಳಿ ಮಹದೇವ್(40341) ಅವರು ಎಚ್.ವಿಶ್ವನಾಥ್(40018) ವಿರುದ್ಧ ಕೇವಲ 323 ಮತಗಳ ಅಂತರದಿಂದ ಜಯ ಪಡೆದರು. ಆ ಚುನಾವಣೆಯಲ್ಲಿ ಸಾ.ರಾ.ಮಹೇಶ್ ಬಿಜೆಪಿಯಿಂದ ಸ್ಪರ್ಧಿಸಿ ಮೂರನೇ ಸ್ಥಾನ ಪಡೆದಿದ್ದರು. 2008ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ ಸಾ.ರಾ.ಮಹೇಶ್(77322 ಮತ), ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಚ್.ವಿಶ್ವನಾಥ್ ವಿರುದ್ಧ (56774) 20 ಸಾವಿರ ಮತಗಳ ಅಂತರದಲ್ಲಿ ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. 2013 ಹಾಗೂ 2018ರ ಚುನಾವಣೆಯಲ್ಲೂ ಜೆಡಿಎಸ್‌ನಿಂದ ಸಾ.ರಾ.ಮಹೇಶ್ ಆಯ್ಕೆಯಾದರು.
    2013ರ ಚುನಾವಣೆಯಲ್ಲಿ ಜೆಡಿಎಸ್‌ನ ಸಾ.ರಾ.ಮಹೇಶ್ 81,457, ಕಾಂಗ್ರೆಸ್‌ನ ದೊಡ್ಡಸ್ವಾಮೇಗೌಡ 66,405, ಕೆಜೆಪಿಯ ಕೆ.ಎನ್.ಬಸಂತ್ 3,827, ಬಿಜೆಪಿಯ ಎಂ.ಪಿ.ಕುಮಾರ್ 1859 ಮತಗಳನ್ನು ಪಡೆದಿದ್ದರು.


    ಕಳೆದ ಬಾರಿ ಸಾ.ರಾ.ಮಹೇಶ್ 1,779 ಮತಗಳ ಅಂತರದಿಂದ ಪ್ರಾಯಾಸದ ಜಯ ಗಳಿಸಿದ್ದು ವಿಶೇಷ. ಒಟ್ಟು 85,011 ಮತಗಳನ್ನು ಪಡೆದು ವಿಜಯದ ನಗೆ ಬೀರಿದ್ದರು. ಕಾಂಗ್ರೆಸ್ ಅಭ್ಯರ್ಥಿ ಡಿ.ರವಿಶಂಕರ್ 83232 ಮತ ಪಡೆದು ತೀವ್ರ ಪೈಪೋಟಿ ನೀಡಿಯೂ ಪರಾಭವಗೊಂಡರು.

    sa ra mahesh
    sa ra mahesh

    ಹ್ಯಾಟ್ರಿಕ್ ಸಾಧನೆಗೈದ ಸಾ.ರಾ.

    1985ರವರೆಗೂ ಕ್ಷೇತ್ರದಿಂದ ಯಾರೂ ಸತತ ಎರಡು ಬಾರಿ ಶಾಸಕರಾಗಿ ಆಯ್ಕೆ ಆಗಿರಲಿಲ್ಲ. ಆದರೆ 1983 ಮತ್ತು 1985 ಈ ಎರಡೂ ಚುನಾವಣೆಗಳಲ್ಲಿ ಗೆಲುವು ಪಡೆದ ನಂಜಪ್ಪ ದಾಖಲೆ ನಿರ್ಮಿಸಿದರು. ಬಳಿಕ 2008, 2013 ಹಾಗೂ 2018ರ ಚುನಾವಣೆಗಳಲ್ಲಿ ಸತತವಾಗಿ ಗೆದ್ದಿರುವ ಸಾ.ರಾ.ಮಹೇಶ್ ನಂಜಪ್ಪ ಅವರ ದಾಖಲೆಯನ್ನು ಮುರಿದರಲ್ಲದೆ, ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಪ್ರಸಕ್ತ 2023ರ ಚುನಾವಣೆಯಲ್ಲಿ ಗೆದ್ದರೆ ಸತತ ನಾಲ್ಕನೇ ಬಾರಿಗೆ ಹಾಗೂ ಕ್ಷೇತ್ರದಲ್ಲಿ ಹೆಚ್ಚು ಬಾರಿ ಗೆಲುವು ಪಡೆದ ದಾಖಲೆಯನ್ನು ಸಾ.ರಾ.ಮಹೇಶ್ ತಮ್ಮದಾಗಿಸಿಕೊಳ್ಳಲಿದ್ದಾರೆ. ಆದರೆ, ಅವರ ದಾಖಲೆಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ಸಜ್ಜಾಗಿದೆ.

    ಒಂದಾಗಿ ಮತ್ತೆ ವಿರೋಧ

    2004 ಹಾಗೂ 2008ರ ಚುನಾವಣೆಗಳಲ್ಲಿ ಪರಸ್ಪರ ಮುಖಾಮುಖಿಯಾಗಿದ್ದ ಎಚ್.ವಿಶ್ವನಾಥ್ ಹಾಗೂ ಸಾ.ರಾ.ಮಹೇಶ್ 2018ರಲ್ಲಿ ಒಂದಾಗಿದ್ದರು. ಕಳೆದ ಬಾರಿ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರ್ಪಡೆಗೊಂಡಿದ್ದ ವಿಶ್ವನಾಥ್ ಹುಣಸೂರು ಕ್ಷೇತ್ರದಿಂದ ಆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಸಾಧಿಸಿದ್ದರು. ಕೆ.ಆರ್.ನಗರದಲ್ಲಿ ಸಾ.ರಾ.ಮಹೇಶ್ ಪರವೂ ಪ್ರಚಾರ ಕೈಗೊಂಡಿದ್ದರು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ವಿಶ್ವನಾಥ್ ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದರು. ಇದೀಗ ಮತ್ತೆ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಒಟ್ಟಿನಲ್ಲಿ ಒಂದಾಗಿದ್ದ ವಿರೋಧಿಗಳು ಈಗ ಮತ್ತೆ ವಿರೋಧಿಗಳಾಗಿದ್ದಾರೆ. ಸದ್ಯ ಕಾಂಗ್ರೆಸ್‌ನಿಂದ ಮತ್ತೊಮ್ಮೆ ಡಿ.ರವಿಶಂಕರ್ ಸ್ಪರ್ಧಿಸಲು ಸಿದ್ಧರಾಗುತ್ತಿದ್ದಾರೆ. ಈ ಬಾರಿಯೂ ಶಾಸಕ ಸಾ.ರಾ.ಮಹೇಶ್ ಅವರೇ ಜೆಡಿಎಸ್ ಹುರಿಯಾಳಾಗಿದ್ದಾರೆ. ಬಿಜೆಪಿ ಸೂಕ್ತ ಅಭ್ಯರ್ಥಿಗಾಗಿ ಇನ್ನೂ ಕಾಯುತ್ತಿದೆ.

    ಎಂಪಿಗೆ ಮಂಡ್ಯ ಕ್ಷೇತ್ರ!

    ಕೆ.ಆರ್.ನಗರ ವಿಧಾನಸಭಾ ಕ್ಷೇತ್ರ ಮೈಸೂರು ಜಿಲ್ಲೆಗೆ ಒಳಪಟ್ಟರೂ ಲೋಕಸಭೆಯಲ್ಲಿ ಮಂಡ್ಯ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಮೊದಲ ಸಾರ್ವತ್ರಿಕ ಚುನಾವಣೆಯಿಂದಲೂ ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿದ್ದ ಕೆ.ಆರ್.ನಗರ, ಕ್ಷೇತ್ರಗಳ ಮರು ವಿಂಗಡಣೆಯಿಂದಾಗಿ 2009ರ ಚುನಾವಣೆ ವೇಳೆ ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬಂದಿತು.

    ಕ್ಷೇತ್ರಕ್ಕೆ ಸೇರಿಕೊಂಡ ಚುಂಚನಕಟ್ಟೆ ಹೋಬಳಿ

    ಚುಂಚನಕಟ್ಟೆ ಹೋಬಳಿ ಕೆ.ಆರ್.ನಗರ ತಾಲೂಕಿನ ವ್ಯಾಪ್ತಿಗೆ ಬಂದರೂ ಈ ಪ್ರದೇಶ 2004ರ ಚುನಾವಣೆವರೆಗೂ ಪಿರಿಯಾಪಟ್ಟಣ ಕ್ಷೇತ್ರಕ್ಕೆ ಸೇರಿತ್ತು. ಕ್ಷೇತ್ರಗಳ ಮರು ವಿಂಗಡಣೆ ಬಳಿಕ 2008ರ ಚುನಾವಣೆಯಿಂದ ಚುಂಚನಕಟ್ಟೆ ಹೋಬಳಿಯನ್ನು ಕೆ.ಆರ್.ನಗರ ಕ್ಷೇತ್ರಕ್ಕೆ ಸೇರಿಸಲಾಯಿತು.

    (ವರದಿ: ಅವಿನಾಶ್ ಜೈನಹಳ್ಳಿ)


    ಭತ್ತದ ಕಣಜದ ಈವರೆಗಿನ ಶಾಸಕರಾದವರು

    • ಹನುಮಂತೇಗೌಡರ ತಮ್ಮಯ್ಯ (1952)
    • ಎಚ್.ಎಂ.ಚನ್ನಬಸಪ್ಪ(1957)
    • ಕೆ.ಎಸ್.ಗೌಡಯ್ಯ (1962)
    • ಎಂ.ಬಸವರಾಜು ( 1967 )
    • ಎಚ್.ಬಿ. ಕೆಂಚೇಗೌಡ(1972)
    • ಎಚ್.ವಿಶ್ವನಾಥ್(1978)
    • ಎಸ್.ನಂಜಪ್ಪ (1983)
    • ಎಸ್.ನಂಜಪ್ಪ (1985)
    • ಎಚ್.ವಿಶ್ವನಾಥ್ (1989)
    • ಎಸ್.ನಂಜಪ್ಪ (1994)
    • ಎಚ್.ವಿಶ್ವನಾಥ್ (1999)
    • ಮಂಚನಹಳ್ಳಿ ಮಹದೇವ (2004)
    • ಸಾ.ರಾ.ಮಹೇಶ್ (2008)
    • ಸಾ.ರಾ.ಮಹೇಶ್ (2013)
    • ಸಾ.ರಾ.ಮಹೇಶ್ (2018)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts