More

    ಗಾಯಕ ಡಾ.ಯೇಸುದಾಸ್ ಕೊಲ್ಲೂರು ಕ್ಷೇತ್ರದಲ್ಲಿ 80ನೇ ಹುಟ್ಟುಹಬ್ಬ ಆಚರಣೆ

    ಕೊಲ್ಲೂರು: ತೋರಿಕೆಗಷ್ಟೇ ದೇವರ ಭಕ್ತ ಎಂದು ಹೇಳಿದರೆ ಸಾಲದು. ಧರ್ಮವೆಂಬುದಿಲ್ಲ ಎಂದಾದರೆ ಅಲ್ಲಿ ಭಕ್ತಿಯೂ ಇರದು. ಇಂದಿನ ಯುವಪೀಳಿಗೆ ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಹಿರಿಯ ಗಾಯಕ ಡಾ.ಕೆ.ಜೆ.ಯೇಸುದಾಸ್ ಅಭಿಪ್ರಾಯಪಟ್ಟರು. ಕುಟುಂಬ ಸದಸ್ಯರೊಂದಿಗೆ ಶುಕ್ರವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿ, ಪ್ರತಿ ವರ್ಷದಂತೆ ವಿಶೇಷಪೂಜೆ ಮತ್ತು ಚಂಡಿಕಾಹೋಮ ನೆರವೇರಿಸಿ, ಸರಳವಾಗಿ 80ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

    ‘ವಿಜಯವಾಣಿ’ ಜತೆ ಮಾತನಾಡಿದ ಅವರು, ಅಧರ್ಮದ ಕೆಲಸ ಮಾಡಿ ಕ್ಷೇತ್ರಕ್ಕೆ ಬಂದು ಪೂಜೆ ಸಲ್ಲಿಸಿದರೆ ಯಾವ ದೇವರಿಗೂ ಪ್ರಿಯವಾಗದು. ಧರ್ಮದಿಂದ ನಡೆದಾಗ ಮಾತ್ರ ಸರ್ವಮಂಗಳೆಯ ಅನುಗ್ರಹ ಪಡೆಯಲು ಹಾಗೂ ದೇವರಿಗೆ ಹತ್ತಿರವಾಗಲು ಸಾಧ್ಯ. ಇದು ಎಲ್ಲರಿಗೂ ಅನ್ವಯಿಸುವ ಮಾತು ಎಂದರು. ಗುರುವಾರ ಸಾಯಂಕಾಲವೇ ಕೊಲ್ಲೂರಿಗೆ ಆಗಮಿಸಿದ್ದ ಅವರು ರಾತ್ರಿ ದೇವರ ದರ್ಶನ ಪಡೆದರು. ಶ್ರೀ ಕ್ಷೇತ್ರದ ಹಿರಿಯ ಅರ್ಚಕ ಕೆ.ಎನ್.ಗೋವಿಂದ ಅಡಿಗ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ವಿವಿಧ ಪೂಜಾವಿಧಿಗಳನ್ನು ನೆರವೇರಿಸಿದ ಯೇಸುದಾಸ್ ಹಾಗೂ ಕುಟುಂಬಿಕರು, ಬಳಿಕ ಶ್ರೀದೇವಿಯ ದರ್ಶನ ಪಡೆದು ಚಂಡಿಕಾಹೋಮ ಸೇವೆ ನೆರವೇರಿಸಿದರು. ಅಭಿಮಾನಿಗಳು ಅವರು ಹೋದ ಕಡೆಗಳಲ್ಲಿ ಫೋಟೋ ತೆಗೆಯಲು ಸುತ್ತುವರಿದ್ದಿದ್ದು, ಸುಸ್ತಾಗಿದ್ದ ಅವರಿಗೆ ಸ್ವಲ್ಪ ಕಿರಿಕಿರಿಯಾಯಿತು. ಪೊಲೀಸರು ರಕ್ಷಣೆ ನೀಡಿದರು.

    1972ರಿಂದ ನಿರಂತರ ಭೇಟಿ
    ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಿಯ ಅನನ್ಯ ಭಕ್ತರಾಗಿರುವ ಯೇಸುದಾಸ್ 1972ರಿಂದ ಪ್ರತೀ ವರ್ಷ ಜ.10ರಂದು ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಧಾರ್ಮಿಕ ಕಾರ್ಯಗಳು ಮುಗಿದ ಬಳಿಕ ಸಂಗೀತ ಸೇವೆ ನೀಡುವುದು ಪರಿಪಾಠ. ಆದರೆ ಈ ಬಾರಿ ಕೊಂಚ ಬಳಲಿದ್ದ ಅವರು ಸಂಗೀತ ಸೇವೆ ನೀಡಲಿಲ್ಲ. ತಮ್ಮ ನೆಚ್ಚಿನ ಗಾಯಕನ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗವಹಿಸಲು ಕೇರಳ ಹಾಗೂ ದೇಶದ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಅಭಿಮಾನಿಗಳು ಮುಂಚಿತವಾಗಿಯೇ ಕ್ಷೇತ್ರಕ್ಕೆ ಬಂದಿದ್ದರು. ಈ ವರ್ಷ ವಿದೇಶಿ ಅಭಿಮಾನಿಗಳೂ ಇದ್ದರು.

    ಶ್ರೀ ಕ್ಷೇತ್ರ ವತಿಯಿಂದ ಅಭಿನಂದನೆ
    ಯೇಸುದಾಸ್ ಅವರನ್ನು 80ನೇ ವರ್ಷದ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಭಿಲಾಷ್ ವಿ.ವಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಚ್.ಕೃಷ್ಣಮೂರ್ತಿ, ಅಧೀಕ್ಷಕ ಕೆ.ರಾಮಕೃಷ್ಣ ಅಡಿಗ, ಪ್ರಧಾನ ಅರ್ಚಕ ಕೆ.ಎನ್.ಗೋವಿಂದ ಅಡಿಗ ಅವರು ಕ್ಷೇತ್ರದ ವತಿಯಿಂದ ಗೌರವಿಸಿದರು.

    ದೇವರು ಕೇಳುವುದು ಭಕ್ತಿಯನ್ನೇ ಹೊರತು, ಹುಂಡಿಗೆ ಎಷ್ಟು ಹಣ ಹಾಕಿದ್ದೀರಿ ಎನ್ನುವುದನ್ನಲ್ಲ. ಮಾತು, ನಡೆ, ನುಡಿ ಶುದ್ಧವಾಗಿದ್ದರೆ ಸಾಧಕರಾಗಬಹುದು. ಈ ಸಾನ್ನಿಧ್ಯದಲ್ಲಿ ಶುದ್ಧವಾದ ಭಕ್ತಿಯನ್ನಿಟ್ಟು ಸಂಕಲ್ಪಿಸಿದಾಗ ಕಾರ್ಯ ನೆರವೇರುತ್ತದೆ. ಮೂಕಾಂಬಿಕೆಯ ಕೃಪೆಯಿಂದ ಇಷ್ಟು ವರ್ಷ ಸಂಗೀತ ಕ್ಷೇತ್ರದಲ್ಲಿ ಕಿರು ಸಾಧನೆ ಸಾಧ್ಯವಾಯಿತು. ಆ ನೆಲೆಯಲ್ಲಿ ಆಕೆಗೆ ಕೃತಜ್ಞತೆ ಸಲ್ಲಿಸಲು ವರ್ಷಕ್ಕೊಮ್ಮೆ ಇಲ್ಲಿಗೆ ಬರುತ್ತೇನೆ.
    ಡಾ.ಕೆ. ಜೆ.ಯೇಸುದಾಸ್, ಹಿರಿಯ ಗಾಯಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts