More

    ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಅವ್ಯವಸ್ಥೆಗೆ ನ್ಯಾಯಮೂರ್ತಿ ಗರಂ: ಪೊರಕೆ ಹಿಡಿದು ಆವರಣ ಸ್ವಚ್ಛತೆ ನಡೆಸಿದ ಬಿ.ವೀರಪ್ಪ

    ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳ ಪತ್ರ ಚಳವಳಿ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಶನಿವಾರ ಭೇಟಿ ನೀಡಿದ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ, ನ್ಯಾಯಮೂರ್ತಿ ಬಿ.ವೀರಪ್ಪ ಅವರು ಅವ್ಯವಸ್ಥೆ ಮತ್ತು ಮೂಲ ಸೌಕರ್ಯ ಒದಗಿಸುವಲ್ಲಿ ಜಿಲ್ಲಾ ಡಳಿತದ ನಿರ್ಲಕ್ಷ್ಯ ಧೋರಣೆಗೆ ಕಿಡಿಕಾರಿದರು.
    ಎರಡು ತಿಂಗಳೊಳಗೆ ಹೊಸ ಕಾಲೇಜಿನ ಕಟ್ಟಡ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿ, ಅಧಿಕಾರಿಗಳನ್ನು ನ್ಯಾಯಾಲಯದ ಮೆಟ್ಟಿಲು ಹತ್ತಿಸುವುದಾಗಿ ಎಚ್ಚರಿಕೆಯನ್ನೂ ನೀಡಿದರು. ಇದಕ್ಕೂ ಮೊದಲು ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ಸಮಸ್ಯೆಗಳು, ವ್ಯಾಸಂಗಕ್ಕೆ ಅನುಭವಿಸುತ್ತಿರುವ ಕಿರಿಕಿರಿ ಬಗ್ಗೆ ಅಳಲು ತೋಡಿಕೊಂಡರು. ಸುಸಜ್ಜಿತ ಕಾಲೇಜು, ಮೂಲಸೌಕರ್ಯಗಳ ಅಗತ್ಯತೆ ಬಗ್ಗೆ ಗಮನ ಸೆಳೆದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲಕ್ಷ್ಮೀಕಾಂತ್ ಜೆ.ಮಿಸ್ಕಿನ್, ವಕೀಲ ಮಂಜುನಾಥರೆಡ್ಡಿ ಮತ್ತಿತರರು ಇದ್ದರು.

    ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಅವ್ಯವಸ್ಥೆಗೆ ನ್ಯಾಯಮೂರ್ತಿ ಗರಂ: ಪೊರಕೆ ಹಿಡಿದು ಆವರಣ ಸ್ವಚ್ಛತೆ ನಡೆಸಿದ ಬಿ.ವೀರಪ್ಪ

    ವಿದ್ಯಾರ್ಥಿನಿಯರಿಂದ ಪತ್ರ ಚಳವಳಿ
    ಕಳೆದ 10 ವರ್ಷಗಳಿಂದಲೂ ಕಾಲೇಜಿನ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ. ತಾತ್ಕಾಲಿಕ ವ್ಯವಸ್ಥೆಯ ಸಿಟಿಜನ್ ಕ್ಲಬ್ ಕಟ್ಟಡದಲ್ಲಿ ತಾಂಡವಾಡುತ್ತಿರುವ ಅವ್ಯವಸ್ಥೆಗೆ ವಿದ್ಯಾರ್ಥಿನಿಯರು ತೊಂದರೆ ಅನುಭವಿಸುವಂತಾಗಿದೆ. 500 ಮಕ್ಕಳಿಗೆ ಒಂದೇ ಶೌಚಗೃಹ, ಕಿರಿದಾದ ಕೊಠಡಿಗಳು, ಇಕ್ಕಟ್ಟಿನಲ್ಲಿ ಪಾಠ ಪ್ರವಚನ, ಅಸಮರ್ಪಕ ವಿದ್ಯುತ್ ಸೇರಿದಂತೆ ಹಲವು ಸಮಸ್ಯೆಗಳು ಕಾಡುತ್ತಿದ್ದು, ಇದರ ಬಗ್ಗೆ ರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ವಿದ್ಯಾರ್ಥಿಗಳು ಸಾಮೂಹಿಕವಾಗಿ ಪತ್ರ ಬರೆಯುವ ಚಳವಳಿ ನಡೆಸಿದ್ದು, ಇದಕ್ಕೆ ನ್ಯಾಯಾಧೀಶರು ಕಾಲೇಜಿಗೆ ಭೇಟಿ ನೀಡಿ, ವಾಸ್ತವಾಂಶ ತಿಳಿದುಕೊಂಡರು.

    ಜಿಲ್ಲಾಡಳಿತ ಧೋರಣೆಗೆ ಆಕ್ರೋಶ
    ಸ್ಥಳಕ್ಕೆ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಎಸ್ಪಿ ಡಿ.ಎಲ್.ನಾಗೇಶ್, ಕಾಲೇಜಿನ ನಿರ್ಮಾಣದ ಗುತ್ತಿಗೆ ಜವಾಬ್ದಾರಿ ಹೊಂದಿರುವ ಕೆಆರ್‌ಡಿಐಎಲ್ ಇಂಜಿನಿಯರ್‌ಗಳನ್ನು ಕರೆಸಿಕೊಂಡು ನ್ಯಾಯಮೂರ್ತಿ ಬಿ.ವೀರಪ್ಪ ತರಾಟೆಗೆ ತೆಗೆದುಕೊಂಡರು. ಉತ್ತಮ ಸ್ವಚ್ಛತೆ ನಿರ್ವಹಣೆಯಲ್ಲಿ ವಿಫಲವಾಗಿರುವ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಗರಂ ಆದರು. ಎರಡು ತಿಂಗಳೊಳಗಾಗಿ ಅರ್ಧಕ್ಕೆ ನಿಂತಿರುವ ಕಾಲೇಜಿನ ಹೊಸ ಕಟ್ಟಡ ನಿರ್ಮಾಣ ಕೆಲಸ ಪೂರ್ಣಗೊಳಿಸಬೇಕು. ಇಲ್ಲದಿದ್ದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಪ್ರಕರಣ ಎದುರಿಸಬೇಕಾಗುತ್ತದೆ. ಅಧಿಕಾರಿಗಳು ಹಾಗೂ ಸರ್ಕಾರವನ್ನು ನ್ಯಾಯಾಲಯಕ್ಕೆ ಎಳೆಯಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಸ್ವಚ್ಛತೆಗೆ ಮುಂದಾದ ನ್ಯಾಯಾಧೀಶರು
    ಕಾಲೇಜಿನ ಆವರಣದಲ್ಲಿ ತ್ಯಾಜ್ಯ ಗಿಡಗಳು ದಟ್ಟವಾಗಿ ಬೆಳೆದಿದ್ದವು. ಇದನ್ನು ಕಂಡ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಸೂಟು ಬೂಟು ಟೈ ತೆಗೆದು, ಸ್ವತಃ ಸನಿಕೆ, ಪೊರಕೆ ಹಿಡಿದು ಸ್ವಚ್ಛತೆಗೆ ಮುಂದಾದರು. ಶಿಕ್ಷಣ ಸಂಸ್ಥೆಯ ನಿರ್ವಹಣೆ ಈ ರೀತಿ ಇರುವುದೇ? ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮಕ್ಕಳನ್ನು ಇಂತಹ ಅವ್ಯವಸ್ಥೆಯ ಕಾಲೇಜಿಗೆ ಸೇರಿಸುತ್ತಾರೆಯೇ? ಬಡ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ಇಲ್ಲವೇ ಎಂದು ಕಿಡಿಕಾರಿದರು.

    ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಅವ್ಯವಸ್ಥೆಗೆ ನ್ಯಾಯಮೂರ್ತಿ ಗರಂ: ಪೊರಕೆ ಹಿಡಿದು ಆವರಣ ಸ್ವಚ್ಛತೆ ನಡೆಸಿದ ಬಿ.ವೀರಪ್ಪ

    ಉಪವಾಸ ಸತ್ಯಾಗ್ರಹ ಮಾಡುವೆ
    ಸುಸಜ್ಜಿತ ಕಾಲೇಜು ನಿರ್ಮಾಣವಾಗದಿದ್ದಲ್ಲಿ ವಿದ್ಯಾರ್ಥಿಗಳೊಂದಿಗೆ ಉಪವಾಸ ಸತ್ಯಾಗ್ರಹ ಹೋರಾಟ ನಡೆಸುವೆ ಎಂದು ನ್ಯಾಯಮೂರ್ತಿ ಬಿ.ವೀರಪ್ಪ ತಿಳಿಸಿದರು. ಈಗಾಗಲೇ ಹಲವು ಬಾರಿ ಅನೇಕರು ಭೇಟಿ ನೀಡಿ ಕಾಲೇಜಿನ ಸಮಸ್ಯೆಗಳ ಬಗ್ಗೆ ತಿಳಿದುಕೊಂಡರೂ ಪರಿಹಾರ ಕಂಡಿಲ್ಲ ಎಂಬುದಾಗಿ ವಿದ್ಯಾರ್ಥಿಗಳು ಅಳಲು ತೋಡಿಕೊಂಡರು. ಇದಕ್ಕೆ ಧ್ವನಿಗೂಡಿಸಿದ ಬಿ.ವೀರಪ್ಪ ಅವರು, ಈಗಾಗಲೇ ಎರಡು ತಿಂಗಳ ಕಾಲಾವಧಿಯನ್ನು ನೀಡಲಾಗಿದೆ. ಇದರೊಳಗೆ ಕಾಲೇಜು ನಿರ್ಮಾಣವಾಗದಿದ್ದಲ್ಲಿ ಉಪವಾಸ ಸತ್ಯಾಗ್ರಹ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು. ಪೈಪೋಟಿಯ ಯುಗದಲ್ಲಿ ಮಕ್ಕಳಿಗೆ ಶೈಕ್ಷಣಿಕ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ. ಆದರೆ, ಹೊಟ್ಟೆಗೆ ಊಟವಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಎನ್ನುವಂತೆ ಇಲ್ಲಿ ಉತ್ಸವ ಆಚರಿಸಲಾಗುತ್ತಿದೆ ಎಂತಲೂ ಅಸಮಾಧಾನ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts