More

    ಗಾಂಧಿ ಹೆಸರಿನಲ್ಲಿ ರಾಜ್ಯಪ್ರಶಸ್ತಿ: ಡಿಸಿಎಂ ಗೋವಿಂದ ಕಾರಜೋಳ

    ಮಂಗಳೂರು: ಬ್ರಿಟಿಷರ ವಿರುದ್ಧ ಸ್ವಾತಂತ್ರೃ ಹೋರಾಟದ ವೇಳೆ ಯಂಗ್ ಇಂಡಿಯಾ ಮತ್ತು ಹರಿಜನ ಪತ್ರಿಕೆಗಳ ಮೂಲಕ ಸಾರ್ವಜನಿಕರಲ್ಲಿ ಸ್ವಾತಂತ್ರೃ ಹೋರಾಟದ ಕಿಚ್ಚುಹಚ್ಚಿದ ಮಹಾತ್ಮಾ ಗಾಂಧಿಯವರು ದೇಶದ ಮೊದಲ ಪತ್ರಕರ್ತ. ಪ್ರಾದೇಶಿಕ ಭಾಷೆಗಳಲ್ಲಿಯೂ ಪತ್ರಿಕೆಗಳು ಆರಂಭವಾಗಲು ಕಾರಣರಾದ ಅವರ ಹೆಸರಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯಮಟ್ಟದ ಪ್ರಶಸ್ತಿ ನೀಡಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸಲಹೆ ನೀಡಿದರು.

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕುದ್ಮುಲ್ ರಂಗರಾವ್ ಪುರಭವದಲ್ಲಿ ಎರಡು ದಿನಗಳ ಕಾಲ ಜರುಗಿದ ಪತ್ರಕರ್ತರ 35ನೇ ರಾಜ್ಯಮಟ್ಟದ ಸಮ್ಮೇಳನದ ಭಾನುವಾರ ಸಮಾರೋಪ ಸಮಾರಂಭದಲ್ಲಿ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

    ಪತ್ರಿಕೆಗಳಲ್ಲಿ ನಿಷ್ಪಕ್ಷಪಾತವಾಗಿ ವರದಿ ಪ್ರಕಟಿಸುವ ಜತೆಗೆ ವಸ್ತುನಿಷ್ಠ ವರದಿಗಳಿಗೆ ಆದ್ಯತೆ ನೀಡಬೇಕು. ಅಭಿವೃದ್ಧಿ ವರದಿಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದು, ರೈತರ ಕುರಿತ ವರದಿಗಳಿಗೆ ಇನ್ನಷ್ಟು ಹೆಚ್ಚಿನ ಆದ್ಯತೆ ನೀಡಬೇಕು. ದೇಶದಲ್ಲಿ ಅತೀ ಕಡಿಮೆ ನೀರು ಬಳಸಿ ಕೃಷಿ ಮಾಡುವ ರೈತರು ಕರ್ನಾಟಕದವರು. ಇಂತಹ ವಿಚಾರಗಳು ದೇಶದೆಲ್ಲೆಡೆ ಪ್ರಚಾರವಾಗಬೇಕು ಎಂದರು.
    ಮುಖ್ಯ ಅತಿಥಿಯಾಗಿದ್ದ ಸಂಸದ ನಳಿನ್ ಕುಮಾರ್ ಕಟೀಲ್, ವ್ಯಕ್ತಿಗಳನ್ನು ಸೃಷ್ಟಿ ಮಾಡುವ ಶಕ್ತಿ ಪತ್ರಕರ್ತರಿಗಿದ್ದು, ಉತ್ತಮ ವಿಚಾರಗಳನ್ನು ಸಮಾಜಕ್ಕೆ ತಿಳಿಸುವ, ರಾಜಕಾರಣಿಗಳನ್ನು ತಿದ್ದುವ ಕೆಲಸ ಮಾಡುವ ಪತ್ರಕರ್ತರದ್ದು ಶ್ರೇಷ್ಟ ಕಾರ್ಯ ಎಂದರು.
    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ, ಮಾಜಿ ಸಚಿವರಾದ ರಮಾನಾಥ ರೈ, ಕೃಷ್ಣ ಜೆ.ಪಾಲೆಮಾರ್, ಭಾರತೀಯ ಪತ್ರಕರ್ತರ ಒಕ್ಕೂಟ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘ ಅಧ್ಯಕ್ಷ ರೋನ್ಸ್ ಬಂಟ್ವಾಳ, ರಾಜ್ಯ ಉಪಾಧ್ಯಕ್ಷ ಮತ್ತಿಕೆರೆ ಜಯರಾಮ, ಪುಂಡಲೀಕ ಭೀ.ಬಾಳೋಜಿ, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಪದಾಧಿಕಾರಿಗಳು ಉಪಸ್ಥಿತರಿದ್ದರು.

    ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಬೆಂಗಳೂರು ಆಕಾಶವಾಣಿ ಉದ್ಗೋಷಕಿ ಸವಿತಾ ಶಿವಕುಮಾರ್ ಪ್ರಶಸ್ತಿ ಪುರಸ್ಕೃತರ ಪಟ್ಟಿ ವಾಚಿಸಿದರು. ಪತ್ರಕರ್ತ ಪಿ.ಬಿ.ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು.

    ಪ್ರಶಸ್ತಿ ಪ್ರದಾನ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ವೃತ್ತಿ, ಸೇವೆ, ಸಾಧನೆ ಹಾಗೂ ಅತ್ಯುತ್ತಮ ವರದಿಗಳಿಗೆ ನೀಡುವ 2018ನೇ ಸಾಲಿನ ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ವಿಜಯವಾಣಿ ಹಿರಿಯ ವರದಿಗಾರ ಶ್ರೀಕಾಂತ್ ಶೇಷಾದ್ರಿಯವರಿಗೆ ಎಚ್.ಎಸ್.ರಂಗಸ್ವಾಮಿ, ವರದಿಗಾರ್ತಿ ಕೆ.ಎಂ.ಪಂಕಜಾ ಅವರಿಗೆ ನಾಡಪ್ರಭು ಕೆಂಪೇಗೌಡ, ಬೆಂಗಳೂರು ಬ್ಯೂರೋದ ನವೀನ್ ಕುಮಾರ್‌ಗೆ ಅತ್ಯುತ್ತಮ ಪುಟವಿನ್ಯಾಸ ಹಾಗೂ ವಿಜಯಪುರ ವರದಿಗಾರ ಶಶಿಕಾಂತ್ ಮಂಡೇಗಾರ ಅವರಿಗೆ ಮಂಡಿಬೆಲೆ ಶಾಮಣ್ಣ ಪ್ರಶಸ್ತಿ ಸೇರಿದಂತೆ ಹಲವು ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ದ.ಕ.ಜಿಲ್ಲೆಯ ಹಿರಿಯ ಪತ್ರಕರ್ತರಾದ ಮನೋಹರ ಪ್ರಸಾದ್, ಕೆ.ಆನಂದ ಶೆಟ್ಟಿ, ಡಾ.ಯು.ಪಿ.ಶಿವಾನಂದ್ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಪತ್ರಕರ್ತ ತಿಮ್ಮಪ್ಪ ಭಟ್ ಅವರಿಗೆ ಪಾಟೀಲ ಪುಟ್ಟಪ್ಪ, ಪೇ.ನಾ.ರಾಜಗೋಪಾಲ ರಾವ್ ಅವರಿಗೆ ಎಸ್.ವಿ.ಜಯಶೀಲ ರಾವ್ ಪ್ರಶಸ್ತಿ, ಅಬ್ಬೂರು ರಾಜಶೇಖರ್ ಅವರಿಗೆ ಎಚ್.ಕೆ.ವೀರಣ್ಣ ಗೌಡ ಸ್ಮಾರಕ ಪ್ರಶಸ್ತಿ, ಮಹೇಶ್ ಅಂಗಡಿ ಅವರಿಗೆ ಗರುಡನಗಿರಿ ನಾಗರಾಜ ಪ್ರಶಸ್ತಿ, ಜಿ.ಎನ್.ಮೋಹನ್ ಅವರಿಗೆ ಡಾ.ಎಂ.ಎಂ.ಕಲಬುರ್ಗಿ ಪ್ರಶಶ್ತಿ ನೀಡಿ ಗೌರವಿಸಲಾಯಿತು.

    ರಾಜ್ಯದ ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ನಿಧಿಗೆ 50 ಕೋಟಿ ರೂ. ಒದಗಿಸುವಂತೆ ಸಂಘದ ಪದಾಧಿಕಾರಿಗಳು ಬೇಡಿಕೆ ಇಟ್ಟಿದ್ದರು. ಮುಖ್ಯಮಂತ್ರಿಗಳು ಈ ವರ್ಷ 5 ಕೋಟಿ ರೂ. ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಮೊತ್ತವನ್ನು ಹೆಚ್ಚಿಸುವ ಕುರಿತಾಗಿ ಸಿಎಂ ಜತೆ ಮಾತನಾಡಲಾಗುವುದು. ಸಂಘದ ಬೇಡಿಕೆಯಂತೆ ಬೆಂಗಳೂರು ಪತ್ರಕರ್ತರ ಭವನಕ್ಕೆ 5 ಕೋಟಿ ರೂ. ಒದಗಿಸಲು ಪ್ರಯತ್ನ ಹಾಗೂ ಜಿಲ್ಲೆಯ ಪತ್ರಕರ್ತರ ಭವನಕ್ಕೆ ನೀಡಲಾಗುವ 25 ಲಕ್ಷ ರೂ.ಗಳನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು. ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್ ಒದಗಿಸಲು ಪ್ರಯತ್ನಿಸಲಾಗುವುದು.
    ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts