More

    ಮಹದಾಯಿಗಾಗಿ ರೈತರಿಂದ ಸಚಿವ ಜೋಶಿ ಮನೆಗೆ ಮುತ್ತಿಗೆ

    ಹುಬ್ಬಳ್ಳಿ : ಕಳಸಾ ಬಂಡೂರಿ ಹಾಗೂ ಮಹದಾಯಿ ನದಿ ನೀರಿಗಾಗಿ ಕಳೆದ ಎಂಟು ವರ್ಷಗಳಿಂದ ಹೋರಾಡುತ್ತಿದ್ದರೂ ಯೋಜನೆ ಇನ್ನೂ ಅನುಷ್ಠಾನಗೊಂಡಿಲ್ಲ. ಯೋಜನೆ ಕಾರ್ಯಾರಂಭಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಮಹದಾಯಿಗಾಗಿ ಮಹಾವೇದಿಕೆ ನೇತೃತ್ವದಲ್ಲಿ ನೂರಾರು ರೈತರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಹುಬ್ಬಳ್ಳಿಯ ಮಯೂರ ಎಸ್ಟೇಟ್​ನಲ್ಲಿನ ನಿವಾಸದ ಎದುರು ಪ್ರತಿಭಟನೆ ನಡೆಸಿದರು.

    ಸಚಿವ ಪ್ರಲ್ಹಾದ ಜೋಶಿ ಅವರು ಪ್ರಧಾನಿಯವರ ಮನವೊಲಿಸಿ, ಯೋಜನೆ ಜಾರಿಗೆ ತಕ್ಷಣ ಮುಂದಾಗಬೇಕು. ಈ ಯೋಜನೆ ಜಾರಿಗೆ ತರುವಲ್ಲಿ ಯಾವುದೇ ರಾಜಕೀಯ ಬೆರೆಸದೇ ಈ ಭಾಗದ ರೈತರು ಹಾಗೂ ಜನರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

    ಮಹದಾಯಿ ಹೋರಾಟ ಪ್ರತಿ ಚುನಾವಣೆಗೆ ರಾಜಕೀಯ ವಿಷಯವಾಗಿದೆ. ಆದರೆ, ಈ ಬಾರಿಯ ಲೋಕಸಭೆ ಚುನಾವಣೆಗೆ ಈ ಹೋರಾಟವನ್ನು ರಾಜಕೀಯಗೊಳಿಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

    ಈ ಮಧ್ಯೆ ಸುರಿದ ಧಾರಾಕಾರ ಮಳೆಯಲ್ಲಿಯೂ ರೈತರು ಪ್ರತಿಭಟನಾ ಸ್ಥಳದಿಂದ ಕದಲಿಲ್ಲ. ಸಚಿವ ಪ್ರಲ್ಹಾದ ಜೋಶಿ ಹೋರಾಟಗಾರರನ್ನು ಭೇಟಿಯಾಗುವುದು ತಡವಾಗಿದ್ದರಿಂದ ರೈತರು ಅಸಮಾಧಾನ ವ್ಯಕ್ತಪಡಿಸಿದರು.

    ಸ್ಥಳಕ್ಕೆ ಆಗಮಿಸಿದ ಸಚಿವ ಪ್ರಲ್ಹಾದ ಜೋಶಿ, ರೈತ ಹೋರಾಟಗಾರರೊಂದಿಗೆ ರ್ಚಚಿಸಿದರು. ಕಳಸಾ, ಬಂಡೂರಿ ಯೋಜನೆ ವಿಚಾರದಲ್ಲಿ ಕೇಂದ್ರ ಸರ್ಕಾರ ಸ್ಪಷ್ಟ ನಿಲುವು ಹೊಂದಿದೆ. ಯೋಜನೆ ಜಾರಿಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ನ್ಯಾಯಾಧೀಕರಣ ತೀರ್ಪಿನ ವಿರುದ್ಧ ಕರ್ನಾಟಕ ಸರ್ಕಾರದ ಜತೆಗೆ ಗೋವಾ ಸರ್ಕಾರವೂ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಡಿಪಿಎಆರ್ ಅನುಮತಿ ನೀಡಿದ್ದನ್ನು ಗೋವಾ ಸರ್ಕಾರ ವಿರೋಧಿಸಿದೆ. ಇದರಲ್ಲಿ ರಾಜಕೀಯದ ಪ್ರಶ್ನೆ ಇಲ್ಲ ಎಂದು ತಿಳಿಸಿದರು.

    ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಡಿಪಿಆರ್​ಗೆ ಅನುಮತಿ ನೀಡಿದೆ. ಮಹದಾಯಿ ನೋಟಿಫಿಕೇಶನ್ ಮಾಡಿಸಿದ್ದು ಈಗಿನ ಕೇಂದ್ರ ಸರ್ಕಾರ. ಪರಿಸರ ವಿನಾಯಿತಿಯನ್ನೂ ಕೊಡಿಸಲಾಗಿದೆ. ಗೆಜೆಟ್ ನೋಟಿಫಿಕೇಶನ್ ಜತೆಗೆ ಡಿಪಿಆರ್​ಗೂ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.

    ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಕೆಲ ಸ್ಪಷ್ಟೀಕರಣ ಕೇಳಿದೆ. ರಾಜ್ಯಮಟ್ಟದಲ್ಲಿ ವೈಲ್ಡ್​ಲೈಫ್​ಗೆ ಅನುಮತಿ ಕೊಟ್ಟು ಕೇಂದ್ರಕ್ಕೆ ಕಳುಹಿಸಬೇಕಿದೆ ಎಂದು ತಿಳಿಸಿದರು.

    ಮಹಾವೇದಿಕೆ ಸಂಚಾಲಕ ಶಂಕರ ಅಂಬಲಿ, ಲೋಕನಾಥ ಹೆಬಸೂರ, ಎಂ.ಎಸ್. ತಿವಾರಿ, ರಘುನಾಥರಡ್ಡಿ ನಡುವಿನಮನಿ, ಶಿದ್ಲಿಂಗಪ್ಪ ಮಾಳಣ್ಣವರ, ಶಿವಪ್ಪ ಜಾವೂರ ಹಾಗೂ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts