More

    ರೇಸ್ ಎಕ್ರಾಸ್ ಅಮೆರಿಕಗೆ ಜೋಸೆಫ್ ಪಿರೇರಾ ಅರ್ಹತೆ: ಸೈಕಲ್‌ನಲ್ಲಿ ಪುಣೆ ಟು ಗೋವಾ ಕೇವಲ 33.45 ಗಂಟೆಯಲ್ಲಿ ಫಿನಿಷ್!

    ಮಂಗಳೂರು: ಭಾರತದ ಅತಿ ಕಠಿಣ ಸೈಕ್ಲಿಂಗ್ ರೇಸ್‌ಗಳಲ್ಲೊಂದಾದ ಡೆಕ್ಕನ್ ಕ್ಲಿಫ್ ಹ್ಯಾಂಗರ್ ಅನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಮೂಲಕ ಮಂಗಳೂರಿನ ಸೈಕ್ಲಿಸ್ಟ್ ಜೋಸೆಫ್ ಪಿರೇರಾ ಹೊಸ ದಾಖಲೆ ಬರೆದಿದ್ದಾರೆ.

    ಪೂನಾದಿಂದ ಗೋವಾಕ್ಕೆ 643 ಕಿ.ಮೀ ದೂರವನ್ನು 33.45 ಗಂಟೆಗಳಲ್ಲಿ ಅವರು ಪೂರ್ಣಗೊಳಿಸಿದ್ದಾರೆ. ಈ ಮೂಲಕ ಅಮೆರಿಕದ ಪ್ರಖ್ಯಾತ ಹಾಗೂ ಕ್ಲಿಷ್ಟಕರ ಸೈಕ್ಲಿಂಗ್ ರೇಸ್ ರ‌್ಯಾಮ್(ರೇಸ್ ಅಕ್ರಾಸ್ ಅಮೆರಿಕ)ನಲ್ಲಿ ಸ್ಪರ್ಧಿಸಲು ಅರ್ಹತೆಯನ್ನೂ ಗಳಿಸಿಕೊಂಡಿದ್ದಾರೆ.
    ದಾರಿಯುದ್ದಕ್ಕೂ ಕಡಿದಾದ ಖಂಡಾಲಾ ಘಾಟ್, 21 ಕಿ.ಮೀನಷ್ಟು ತೀವ್ರ ಏರಿಕೆಯುಳ್ಳ ಪಂಚಗನಿ ಟಾಫ್, ಪಸರ್ನಿ ಘಾಟ್ ಮತ್ತು ಸತಾರಾದಿಂದ ಬೆಳಗಾವಿವರೆಗಿನ ಏರಿಳಿತದ ಹಾದಿ ಕ್ರಮಿಸಿ ಚೋರ್ಲ ಘಾಟ್, ಪೋಂಡ ಮೂಲಕ ದಕ್ಷಿಣ ಗೋವಾದ ಬೊಗ್ಮಾಲೊ ಬೀಚ್‌ವರೆಗಿನ ಮಾರ್ಗವನ್ನು ಡೆಕ್ಕನ್ ಕ್ಲಿಫ್ ಹ್ಯಾಂಗರ್ ರೇಸ್ ಹೊಂದಿದೆ.

    ಈ ಮೊದಲು 200,300, 400, 600 ಕಿ.ಮೀ ಬ್ರೆವೆಟ್ ಸೈಕ್ಲಿಂಗ್ ರೇಸ್‌ಗಳಲ್ಲಿ ಭಾಗವಹಿಸಿದ್ದ ಜೋಸೆಫ್ ಅವರು ಕ್ಲಿಫ್‌ಹ್ಯಾಂಗರ್‌ನಲ್ಲಿ ಭಾಗವಹಿಸಲು ಉತ್ಸುಕತೆ ತೋರಿದ್ದರು. ಇದಕ್ಕೆ ಬೇಕಾದ ನೆರವನ್ನು ಮಂಗಳೂರಿನ ವೀಆರ್ ಸೈಕ್ಲಿಂಗ್ ಕ್ಲಬ್‌ನವರು ಒದಗಿಸಿದ್ದರು. ವಿಆರ್‌ಸೈಕ್ಲಿಂಗ್‌ನ ಅಶೋಕ್ ಲೋಬೊ, ಶಿವಾನಂದ ರಾವ್, ನಿತಿನ್ ಮೋಹನ್ ಮತ್ತು ಬೃಜೇಶ್ ಬಾಲಕೃಷ್ಣನ್ ಪಿರೇರಾಗೆ ರೇಸ್‌ನಲ್ಲಿ ಸಹಾಯಕರಾಗಿ ನೆರವಾದರು. ಕೋಚ್ ಆಗಿರುವ ಗ್ರೇಶಿಯನ್ ಗೋವಿಯಸ್ ಅಗತ್ಯ ನಿರ್ದೇಶನ ನೀಡಿ ಸಹಕರಿಸಿದರು. 50 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಸ್ಪರ್ಧಿಸಿರುವ ಜೋಸೆಫ್ ರೇಸ್ ಅಕ್ರಾಸ್ ಅಮೆರಿಕಗೆ ಅರ್ಹತೆ ಪಡೆಯಲು 34 ಗಂಟೆಯೊಳಗೆ ರೇಸ್ ಮುಗಿಸಬೇಕಿತ್ತು. ಅವರು 15 ನಿಮಿಷ ಮೊದಲೇ ರೇಸ್ ಪೂರ್ಣಗೊಳಿಸಿದ್ದಾರೆ.

    ಇನ್‌ಸ್ಪೈರ್ ಇಂಡಿಯಾ ಸಂಸ್ಥೆಯವರು ನಡೆಸುವ ಕಠಿಣ ರೇಸ್‌ಗಳಲ್ಲೊಂದು ಡೆಕ್ಕನ್‌ಕ್ಲಿಫ್‌ಹ್ಯಾಂಗರ್. ಇದರಲ್ಲಿನ ಘಾಟ್‌ಗಳನ್ನು ಕ್ರಮಿಸುವುದು ಸವಾಲಾಗಿತ್ತು. ಸೈಕಲ್‌ನಲ್ಲೂ ಸ್ವಲ್ಪ ಸಮಸ್ಯೆ ಇತ್ತು. ಬೇರೆ ರೇಸ್‌ನವರು ದುಬಾರಿ ಬೆಲೆಯ ಹಗುರವಾದ 3-4 ಸೈಕಲ್‌ಗಳನ್ನು ತಂದಿದ್ದರು. ನಾನು ನನ್ನ ಎಂದಿನ ಒಂದೇ ಸೈಕಲ್‌ನಲ್ಲೇ ರೇಸ್‌ನಲ್ಲಿ ಪಾಲ್ಗೊಂಡೆ ಎಂದು ಜೋಸೆಫ್ ತಮ್ಮ ರೇಸ್ ಗೆಲುವಿನ ಸಂತಸವನ್ನು ಹಂಚಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts