More

    ರಾಮಲಲ್ಲಾ-ಅಂಜನಾದ್ರಿ ಟೆಂಪಲ್ ಕಾರಿಡಾರ್‌ಗೆ ಚಿಂತನೆ
    ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿಕೆ

    ಕೊಪ್ಪಳ :ಉತ್ತರದಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದ್ದು, ದಕ್ಷಿಣದಲ್ಲಿ ಆಂಜನೇಯ ಜನಿಸಿದ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಂದಾಗಿದೆ. ರಾಮಲಲ್ಲಾದಿಂದ ಅಂಜನಾದ್ರಿ ಟೆಂಪಲ್ ಕಾರಿಡಾರ್ ಮಾಡುವ ಯೋಜನೆಯಿದೆ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.


    ನಗರದಲ್ಲಿ ಸೋಮವಾರ ಧ್ವಜಾರೋಹಣ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಂಜನೇಯ ಗಂಗಾವತಿಯ ಕಿಷ್ಕಿಂಧ ಭಾಗದಲ್ಲಿ ಜನಿಸಿರುವದಕ್ಕೆ ರಾಮಾಯಣದಲ್ಲಿ ಉಲ್ಲೇಖಗಳಿವೆ. ಇದಕ್ಕಿಂತ ಬೇರೆ ಪುರಾವೆ ಬೇಕಿಲ್ಲ. ಈಗಾಗಲೇ 120 ಕೋಟಿ ರೂ. ಮೊತ್ತದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ರಾಮಮಂದಿರದಂತೆ ಹನುಮ ಜನಿಸಿದ ನಾಡನ್ನು ಅಭಿವೃದ್ಧಿಪಡಿಸುವ ಯೋಜನೆಯಿದೆ ಎಂದರು.


    ಕಾಶಿಗೆ ತೆರಳುವ ಯಾತ್ರಾರ್ಥಿಗಳಿಗಾಗಿ ವಿಶೇಷ ಗೌರವ ರೈಲು ಸೇವೆಯನ್ನು ಸೆಪ್ಟಂಬರ್‌ನಿಂದ ಆರಂಭಿಸಲಾಗುವುದು. 14 ಬೋಗಿಗಳಿರಲಿದ್ದು, 11ರಲ್ಲಿ ಯಾತ್ರಿಕರಿಗೆ ಅವಕಾಶವಿದೆ. ಅರ್ಚಕರಿಗಾಗಿ ಒಂದು ಬೋಗಿ ಕಾಯ್ದಿರಿಸಲಾಗಿದೆ. ಬೆಂಗಳೂರಿನಿಂದ ಪ್ರಯಾಣ ಆರಂಭವಾಗಿ, ಕಾಶಿ, ರಾಮಮಂದಿರ, ಪ್ರಯಾಗರಾಜ ಮಾರ್ಗವಾಗಿ 1 ವಾರ ಪ್ರಯಾಣಿಸಲಿದೆ. ಮೈಸೂರಿನಿಂದ ರೈಲು ಬಿಡುವ ಚಿಂತನೆ ಇದೆ. ರೈಲು ವಿಶೇಷವಾಗಿ ವಿನ್ಯಾಸಗೊಳಿಸಿದ್ದು, ಧಾರ್ಮಿಕತೆ ಬಿಂಬಿಸುವ ಚಿತ್ರ, ಹಾಡುಗಳುನ್ನು ಕೇಳಬಹುದು.


    ಅರ್ಚಕರ ತಸ್ತಿಕ್ ಮೊತ್ತವನ್ನು 60 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. 25 ಎ ಗ್ರೇಡ್ ದೇವಾಲಯಗಳ ಅಭಿವೃದ್ದಿಗೆ ಮಾಸ್ಟರ್ ಪ್ಲಾನ್ ರಚಿಸಲಾಗುತ್ತಿದೆ. ಸಿ ದರ್ಜೆ ದೇವಾಲಯಗಳ ಅಭಿವೃದ್ಧಿಗಾಗಿ 15 ಕೋಟಿ ರೂ. ಮೀಸಲಿಡಲಾಗಿದೆ. ಸಪ್ತಪದಿ ಯೋಜನೆಯಡಿ ಸಾಮೂಹಿಕ ಮದುವೆ ನಡೆಸಲು ಅನುದಾನ ಕೊರತೆ ಇಲ್ಲ. ಆ.25ರಂದು ಎ ಗ್ರೇಡ್ ದೇವಾಲಯಗಳಲ್ಲಿ ಮದುವೆಗಳು ನಡೆಯಲಿವೆ ಎಂದರು.

    ಶಾಸಕ ಪ್ರಿಯಾಂಕ್ ಖರ್ಗೆ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡುವುದು ಸರಿಯಲ್ಲ. ಅವರ ಭಾಷೆ ಅವರ ಯೋಗ್ಯತೆ ತೋರಿಸುತ್ತದೆ. ಇತ್ತೀಚೆಗೆ ಮಹಿಳೆಯರು ಎಲ್ಲ ರಂಗಗಳಲ್ಲಿ ಮುಂದೆ ಬರುತ್ತಿದ್ದಾರೆ. ಉದ್ಯೋಗ, ರಾಜಕಾರಣ ಸೇರಿ ಅನೇಕ ರಂಗಗಳಲ್ಲಿ ತಮ್ಮ ಸಾಮರ್ಥ್ಯ ತೋರಿಸುತ್ತಿದ್ದಾರೆ. ಪ್ರಿಯಾಂಕ್ ತಮ್ಮ ಮಾತಿನ ಮೂಲಕ ಮಹಿಳೆಯರಿಗೆ ಏನು ಸಂದೇಶ ನೀಡಿದ್ದಾರೆಂದು ಅವಲೋಕಿಸಿಕೊಳ್ಳಲಿ ಎಂದು ಟೀಕಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts