More

    ಮರಗಳನ್ನು ಉಳಿಸಲು ಜಂಟಿ ಪರಿಶೀಲನೆ, ನಂತೂರು-ಕೆಪಿಟಿ ಮಧ್ಯೆ ಓವರ್‌ಪಾಸ್ ನಿರ್ಮಾಣ ಹಿನ್ನೆಲೆ

    ಮಂಗಳೂರು: ರಾಷ್ಟ್ರೀಯ ಹೆದ್ದಾರಿ-66ರ ನಂತೂರ್‌ನಿಂದ ಕೆಪಿಟಿ ಜಂಕ್ಷನ್‌ವರೆಗೆ ವಾಹನ ದಟ್ಟಣೆ ನೀಗಿಸುವ ಸಲುವಾಗಿ 1.6 ಕಿ.ಮೀ. ವ್ಯಾಪ್ತಿಯಲ್ಲಿ ವೆಹಿಕ್ಯುಲರ್ ಓವರ್‌ಪಾಸ್ ನಿರ್ಮಿಸುವಾಗ ತೆರವುಗೊಳಿಸಬೇಕಾದ ಮರಗಳನ್ನು ಉಳಿಸುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ, ಅರಣ್ಯ ಇಲಾಖೆ, ಮನಪಾ ಸದಸ್ಯರು ಮತ್ತು ಪರಿಸರ ಹೋರಾಟಗಾರ ಸಮ್ಮುಖ ಜುಲೈ 13ರಂದು ಜಂಟಿ ಪರಿಶೀಲನೆ ನಡೆಸಲು ತೀರ್ಮಾನಿಸಲಾಯಿತು.
    ಓವರ್‌ಪಾಸ್ ನಿರ್ಮಾಣಕ್ಕೆ ಸಂಬಂಧಿಸಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾರ್ವಜನಿಕ ಅಹವಾಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
    ರಾಷ್ಟ್ರೀಯ ಹೆದ್ದಾರಿ-66ರ ವತಿಯಿಂದ ನಡೆಸಲು ಉದ್ದೇಶಿಸಿರುವ ಯೋಜನೆ ಕಾರ್ಯಗತಗೊಳಿಸಲು ಅರಣ್ಯ ಇಲಾಖೆ ಕೆಲವು ವರ್ಷಗಳಿಂದ ನೆಟ್ಟು ಬೆಳೆಸಿದ್ದ 602 ಮರಗಳನ್ನು ತೆರವುಗೊಳಿಸಲು ರಾಷ್ಟ್ರೀಯ ಹೆದ್ದಾರಿ ಅಂಗಸಂಸ್ಥೆ ನ್ಯೂಮಂಗಳೂರು ಪೋರ್ಟ್ ರೋಡ್ ಕಂಪನಿ ಬಯಸಿತ್ತು. ಈ ಪೈಕಿ 370 ಸಸಿಗಳನ್ನು ಸ್ಥಳಾಂತರಿಸಬಹುದಾಗಿದ್ದು, 232 ನೆಟ್ಟು ಬೆಳೆಸಿದ ಮರಗಳನ್ನು ಕಡಿಯಬೇಕಾದ ಅನಿವಾರ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದರು.
    ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪರಿಸರವಾದಿಗಳು ನಂತೂರು ಮತ್ತು ಕೆಪಿಟಿ ಬಳಿ ಓವರ್‌ಪಾಸ್ ಆಗಲೇಬೇಕಾಗಿದೆ. ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ, ಆದರೆ ಈಗ ಇರುವ ಯೋಜನೆಯಲ್ಲಿ ಸಾಧ್ಯವಾದಷ್ಟು ಮರಗಳನ್ನು ಉಳಿಸಿ ಓವರ್‌ಪಾಸ್ ನಿರ್ಮಾಣ ಮಾಡಲು ಸಹಮತವಿದೆ. ಇದಕ್ಕೆ ಪೂರಕವಾಗಿ ಮರುಶೀಲನೆ ನಡೆಸಿದರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
    ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಜುಲೈ 13ರಂದು ಪರಿಸರಾಸಕ್ತರು, ಮನಪಾ ಸದಸ್ಯರು, ಸಾರ್ವಜನಿಕರೊಂದಿಗೆ ಜಂಟಿ ಪರಿಶೀಲನೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು. ಇದಕ್ಕೆ ಸಭೆಯಲ್ಲಿದ್ದ ಸಾರ್ವಜನಿಕರು ಸಹಮತ ವ್ಯಕ್ತಪಡಿಸಿದರು.
    ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪೈ, ಮಂಗಳೂರು ನಗರ ಸಂಚಾರ ವಿಭಾಗದ ಸಹಾಯಕ ಪೊಲೀಸ್ ಅಧಿಕಾರಿ ಗೀತಾ ಕುಲಕರ್ಣಿ, ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕ ಜಾವೇದ್ ಆಝ್ಮಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ನಿವೃತ್ ಕಾಮತ್ ಉಪಸ್ಥಿತರಿದ್ದರು.
    ರಾಷ್ಟ್ರೀಯ ಪರಿಸರಾಸಕ್ತ ಒಕ್ಕೂಟದ ಕಾರ್ಯದರ್ಶಿ ಶಶಿಧರ್ ಶೆಟ್ಟಿ, ಪರಿಸರಪ್ರೇಮಿ ಜೀತ್‌ಮಿಲನ್ ರೋಚ್, ಸಾಮಾಜಿಕ ಹೋರಾಟಗಾರರಾದ ಹನುಮಂತ್ ಕಾಮತ್, ಯತೀಶ್ ಬೈಕಂಪಾಡಿ, ರಾಧಾಕೃಷ್ಣ, ಉಪಮೇಯರ್ ಪೂರ್ಣಿಮಾ, ಕಾರ್ಪೊರೇಟರ್‌ಗಳಾದ ಮನೋಹರ್ ಶೆಟ್ಟಿ, ಶಕೀಲಾ ಕಾವ, ಸಂದೀಪ್ ಗರೋಡಿ, ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts