More

    ಪಕ್ಷೇತರರಾಗಿ ಕಣಕ್ಕಿಳಿದು ಗೆಲ್ಲಲಿ..! – ಬಸನಗೌಡ ಪಾಟೀಲ ಯತ್ನಾಳ

    ವಿಜಯಪುರ: ಜಗದೀಶ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಕಾಂಗ್ರೆಸ್ ಸೇರಿರುವುದು ಯಾವ ನ್ಯಾಯ. ಅವರಿಬ್ಬರಿಗೆ ತಾಕತ್ತಿದ್ದರೆ ಪಕ್ಷೇತರರಾಗಿ ಕಣಕ್ಕಿಳಿದು ಗೆದ್ದು ತೋರಿಸಲಿ, ಪಕ್ಷ ದ್ರೋಹ ಮಾಡಬಾರದು ಎಂದು ವಿಜಯಪುರ ನಗರ ಶಾಸಕ, ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಸವಾಲು ಹಾಕಿದ್ದಾರೆ.

    ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದ್ದು ಅವರಿಗೆ ವಯಸ್ಸಾಗಿತ್ತು ಎನ್ನುವ ದೃಷ್ಟಿಯಿಂದ. ಮುಂದೆ ಅವರೇ ಶಾಸಕ ಸ್ಥಾನಕ್ಕೆ ಚುನಾವಣೆಯಲ್ಲಿ ನಿಲ್ಲುವುದಿಲ್ಲ ಎಂದು ಘೋಷಣೆ ಮಾಡಿದ್ದರು ಎಂದರು.

    ನಾನೂ ಕೂಡ ಪಕ್ಷ ಬಿಟ್ಟಿರಲಿಲ್ಲ. ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಹೀಗಾಗಿ ಅನಿವಾರ್ಯವಾಗಿ ಜೆಡಿಎಸ್‌ಗೆ ತೆರಳಿದ್ದೆ. ಅಲ್ಲಿಯ ವಾತಾವರಣ ಕಂಡು ವಿಧಾನ ಪರಿಷತ್‌ಗೆ ಪಕ್ಷೇತರನಾಗಿ ನಿಂತು ಗೆಲುವು ಸಾಧಿಸಿದೆ. ಅದನ್ನು ಶೆಟ್ಟರ್ ಹಾಗೂ ಸವದಿ ಮಾಡಬೇಕಿತ್ತು. ಅದನ್ನು ಬಿಟ್ಟು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ದ್ರೋಹ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

    ಮುಂದೆ ಜಮ್ಮು-ಕಾಶ್ಮೀರ 371 ಕಲಂ, ಮತಾಂತರ ಕಾಯ್ದೆ, ಗೋಹತ್ಯೆ ಹಿಂದಕ್ಕೆ ಪಡೆಯಬೇಕು ಎಂದು ಕಾಂಗ್ರೆಸ್ ವಿಧಾನಸಭೆಯಲ್ಲಿ ಹೋರಾಟ ಮಾಡಿದರೆ? ನೀವು ಗೆದ್ದು ಬಂದರೆ ಏನು ಮಾಡುತ್ತೀರಿ? ಇದಕ್ಕೆ ಉತ್ತರ ಹೇಳಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದುಪಡಿಸುವುದಾಗಿ ಡಿ.ಕೆ. ಶಿವಕುಮಾರ ಹೇಳುತ್ತಿದ್ದಾರೆ, ಅದಕ್ಕೆ ಏನು ಉತ್ತರ ಕೊಡುತ್ತೀರಿ? ಲಿಂಗಾಯತ ನಾಯಕರಾಗಿ ನಿಮ್ಮ ನಿಲುವು ಏನು? ಎನ್ನುವದನ್ನು ಸ್ಪಷ್ಟಪಡಿಸಿ ಎಂದು ಸವಾಲು ಹಾಕಿದರು.

    ಡ್ಯಾಂ ಹೇಳಿಕೆಗೆ ತಿರುಗೇಟು

    ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ‘ಲಿಂಗಾಯತ ಡ್ಯಾಂ ಚುನಾವಣೆಯಲ್ಲಿ ಒಡೆಯುತ್ತದೆ’ ಎನ್ನುವ ಹೇಳಿಕೆಗೆ ತಿರುಗೇಟು ನೀಡಿದ ಯತ್ನಾಳ, ಲಿಂಗಾಯತರ ಡ್ಯಾಂ ಎಂದೂ ಒಡೆಯುವುದಿಲ್ಲ. ಅದರ ಒಂದು ಚಿಪ್ಪನ್ನು ಸರಿಸಲು ಸಾಧ್ಯವಿಲ್ಲ ಮೊದಲು ಲಿಂಗಾಯತರ ಕ್ಷಮೆ ಕೇಳಬೇಕು ಎಂದರು.

    ಚಿತ್ರ ನಟರು ಪ್ರಚಾರಕ್ಕೆ ಬರೋಲ್ಲ

    ಖ್ಯಾತ ಚಲನಚಿತ್ರ ನಟ ಸುದೀಪ್ ವಿಜಯಪುರಕ್ಕೆ ಪ್ರಚಾರಕ್ಕೆ ಬರುವುದು ಬೇಡ. ನಾನೇ ಚಿತ್ರ ನಟರಿಗಿಂದ ಪಾಪುಲರ್ ಇದ್ದೇನೆ. ಅವರ‌್ಯಾರೂ ಪ್ರಚಾರಕ್ಕೆ ಬರಲ್ಲ. ಮೋದಿ, ಅಮಿತ್‌ಷಾ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬರುತ್ತಾರೆ. ಅಷ್ಟು ಸಾಕು. ಚಿತ್ರ ನಟರಿಗಿಂತಲೂ ನಾನೇನೂ ಕಡಿಮೆ ಇಲ್ಲ. ಡೈರೆಕ್ಟರ್ , ಆಕ್ಟರ್ ಕಥೆ, ಸಂಕಲನ ಎಲ್ಲವನ್ನೂ ನಾನೇ ಮಾಡುವೆ ಎಂದರು.

    ಹಿಂದು-ಮುಸ್ಲಿಂ ಗಲಾಟೆಯಿಲ್ಲ

    ವಿಜಯಪುರ ನಗರದಲ್ಲಿ ಕಳೆದ ಐದು ವರ್ಷದಿಂದ ಯಾವುದೇ ಗಲಾಟೆ ಇಲ್ಲ. ಎಲ್ಲವೂ ಶಾಂತವಾಗಿದೆ. ಹಿಂದುಗಳು ಯಾರ ಮೇಲೂ ದಬ್ಬಾಳಿಕೆ ಆಡಿಲ್ಲ. ಯಾರದ್ದೂ ಆಸ್ತಿಯನ್ನು ನಾನು ಕಸಿದುಕೊಂಡಿಲ್ಲ. ಮುಸ್ಲಿಂ ಸಮುದಾಯದವರೂ ಆರಾಮಾಗಿದ್ದಾರೆ. ಕೆಲವು ಪುಂಡರಿಂದ ಒಂದು ಸಮುದಾಯದ ಹೆಸರು ಕೆಡುತ್ತಿದೆ ಎಂದು ವಿಷಾದಿಸಿದರು.

    ನನ್ನ ಹೇಳಿಕೆಗೆ ನಾನು ಬದ್ಧ

    ಈ ಹಿಂದೆ ಮುಸ್ಲಿಂ ಸಮುದಾಯದವರ ಮತಗಳು ಬೇಡ ಅಂತ ಹೇಳಿದ್ದೆ. ಹಿಂದುಗಳ ಮತಗಳೇ ನನಗೆ ಸಾಕು. ಆ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ಆ ಹೇಳಿಕೆಯನ್ನು ನಾನು ವಾಪಸ್ ಪಡೆದಿಲ್ಲ. ಈಗಲೂ ಆ ಹೇಳಿಕೆಗೆ ನಾನು ಬದ್ಧವಾಗಿದ್ದೇನೆ ಎಂದು ಯತ್ನಾಳ ಸ್ಪಷ್ಟಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts