More

    ಜಮ್ಮು ಕಾಶ್ಮೀರದಲ್ಲಿ ಇಂಟರ್​ನೆಟ್ ಮೇಲಿನ ನಿರ್ಬಂಧ ಸೇರಿ ಹೇರಲಾಗಿರುವ ಎಲ್ಲ ನಿರ್ಬಂಧಗಳನ್ನು ವಾರದೊಳಗೆ ಹಿಂಪಡೆಯಬೇಕು: ಸುಪ್ರೀಂಕೋರ್ಟ್​

    ನವದೆಹಲಿ: ಇಂಟರ್ನೆಟ್ ಕೂಡ ವಾಕ್​ ಮತ್ತು ಅಭಿವ್ಯಕ್ತಿ ಸ್ವಾಂತಂತ್ರ್ಯದ ಒಂದು ಭಾಗವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂಕೋರ್ಟ್​, ಒಂದು ವಾರದೊಳಗೆ ಇಂಟರ್ನೆಟ್ ಸೇರಿದಂತೆ ನಿರ್ಬಂಧಿಸಲಾಗಿರುವ ಎಲ್ಲವನ್ನು ಮರುಸ್ಥಾಪಿಸಬೇಕೆಂದು ಜಮ್ಮು ಮತ್ತು ಕಾಶ್ಮೀರ ಆಡಳಿತಕ್ಕೆ ಶುಕ್ರವಾರ ಆದೇಶ ಹೊರಡಿಸಿದೆ.

    ಆರ್ಟಿಕಲ್​ 370 ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನವನ್ನು ಕಳೆದ ಆಗಸ್ಟ್​ನಲ್ಲಿ ಕೇಂದ್ರ ಸರ್ಕಾರ ರದ್ದುಗೊಳಿದೆ. ಈ ವೇಳೆ ಮುಂಜಾಗ್ರತ ಕ್ರಮವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅನೇಕ ನಿರ್ಬಂಧಗಳನ್ನು ಹೇರಲಾಗಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ​ ದಾಖಲಾಗಿತ್ತು. ಈ ಸಂಬಂಧ ನಿರ್ಬಂಧ ತೆರವುಗೊಳಿಸುವಂತೆ ಇಂದು ಆದೇಶಿಸಿದೆ.

    ಅಂತರ್ಜಾಲ ಅಮಾನತ್ತನ್ನು ತಕ್ಷಣವೇ ಮರು ಪರಿಶೀಲಿಸಬೇಕಾಗಿದೆ. ಇಂತಹ ನಿರ್ಬಂಧಗಳು ಕೆಲವೇ ಸಮಯಗಳವರೆಗೆ ಮಾತ್ರ ಇರಬೇಕು. ಇದು ಕೂಡ ನ್ಯಾಯಾಂಗ ಪರಿಶೀಲನೆಯ ವಿಷಯವಾಗಿದೆ ಎಂದು ಸುಪ್ರೀಂಕೋರ್ಟ್​ ತಿಳಿಸಿದ್ದು, ಮುಕ್ತ ಓಡಾಟ, ಅಂತರ್ಜಾಲ ಹಾಗೂ ಮೂಲಭೂತ ಸ್ವಾತಂತ್ರ್ಯದ ಮೇಲಿನ ನಿರ್ಬಂಧ ಅಧಿಕಾರದ ಅನಿಯಂತ್ರಿತ ವ್ಯಾಯಮ ಆಗಬಾರದು ಎಂದು ಹೇಳಿತು.

    ಎಲ್ಲ ನಿರ್ಬಂಧಿತ ಆದೇಶಗಳು ಸಾರ್ವಜನಿಕರಿಗಾಗಿ ಮಾಡಿರುವುದರಿಂದ ಅದನ್ನು ಕಾನೂನಾತ್ಮಕವಾಗಿ ಅವರು ಪ್ರಶ್ನಿಸಬಹುದಾಗಿದೆ. ಇಂಟರ್ನೆಟ್ ಹಕ್ಕು ಸೇರಿ ವಾಕ್​ ಮತ್ತು ಅಭಿವ್ಯಕ್ತಿ ಸ್ವಾಂತಂತ್ರ್ಯ ಆರ್ಟಿಕಲ್​ 19ರಲ್ಲಿ ಅಡಕವಾಗಿದೆ ಎಂದು ನ್ಯಾಯಮೂರ್ತಿ ಎನ್​.ವಿ.ರಮಣ ಅವರು ತೀರ್ಪು ಓದಿದರು.

    ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹೇರಲಾಗಿದ್ದು 144 ಸೆಕ್ಷನ್​ ಅನ್ನು ಟೀಕಿಸಿದ ನ್ಯಾಯಾಲಯ ಇದು ಜನರ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವ ಸಾಧವಾಗಬಾರದು ಎಂದು ಹೇಳಿತು. ಸುರಕ್ಷತೆ ಮತ್ತು ಜನರ ಸ್ವಾತಂತ್ರ್ಯದಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕು. ಜನರಿಗೆ ಒದಗಿಸಲಾಗಿರುವ ಹಕ್ಕುಗಳನ್ನು ಖಚಿತಪಡಿಸಲು ಮಾತ್ರ ನಾವು ಇಲ್ಲಿ ಕುಳಿತಿದ್ದೇವೆ ಎಂದರು.

    ಎನ್​.ವಿ.ರಮಣ, ಆರ್. ಸುಭಾಷ್​ ರೆಡ್ಡಿ ಮತ್ತು ಬಿ.ಆರ್​.ಗವಾಯಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಮೊದಲೇ ವಿಚಾರಣೆ ಮುಗಿಸಿ ನವೆಂಬರ್​ 27ರಂದು ತೀರ್ಪು ಕಾಯ್ದಿರಿಸಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts