More

    ಜೆಡಿಎಸ್‌ ರೆಸಾರ್ಟ್ ರಾಜಕೀಯ; ಒಗ್ಗಟ್ಟು ಪ್ರದರ್ಶನ, ಶಾಸಕರ ಅಸಮಾಧಾನ ಉಪಶಮನಕ್ಕೆ ಯತ್ನ

    ಬೆಂಗಳೂರು: ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡ ಬೆನ್ನಲ್ಲೇ ಜೆಡಿಎಸ್‌ನಲ್ಲಿ ನಡುಕ ಶುರುವಾದಂತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಹೇಳಿರುವ ಬೆನ್ನಲ್ಲೇ ಜೆಡಿಎಸ್ ಶಾಸಕರು ರೆಸಾರ್ಟ್ ರಾಜಕೀಯ ಆರಂಭಿಸಿದ್ದಾರೆ.
    ಸರ್ಕಾರ ಅಸ್ಥಿರಗೊಳಿಸುವ ಸಂದರ್ಭದಲ್ಲಿ ಶಾಸಕರನ್ನು ಉಳಿಸಿಕೊಳ್ಳಲು ರಾಜಕೀಯ ಪಕ್ಷಗಳು ರೆಸಾರ್ಟ್ ರಾಜಕೀಯ ನಡೆಸುವುದು ಮಾಮೂಲು. ಆದರೆ ರಾಜ್ಯದಲ್ಲಿ ಅಂತಹ ಸ್ಥಿತಿ ಇಲ್ಲದೇ ಇದ್ದರೂ ಜೆಡಿಎಸ್ ತನ್ನೆಲ್ಲ 19 ಶಾಸಕರು, ವಿಧಾನ ಪರಿಷತ್ ಸದಸ್ಯರು, ಪಕ್ಷದ ಹಿರಿಯ ಮುಖಂಡರನ್ನು ಮಂಗಳವಾರ ಹಾಸನದ ರೆಸಾರ್ಟ್‌ನಲ್ಲಿ ಒಟ್ಟುಗೂಡಿಸಿದೆ.
    ಶಾಸಕರಾದ ಎಚ್.ಡಿ.ರೇವಣ್ಣ, ಜಿ.ಟಿ.ದೇವೇಗೌಡ, ಎ.ಮಂಜು, ಶಾರದಾ ಪೂರ‌್ಯನಾಯ್ಕ, ಹರೀಶ್ ಗೌಡ, ಸಮೃದ್ಧಿ ಮಂಜುನಾಥ್ ಸೇರಿದಂತೆ ಬಹುತೇಕ ಶಾಸಕರು, ವಿಧಾನ ಪರಿಷತ್ ಸದಸ್ಯರು ರೆಸಾರ್ಟ್‌ನಲ್ಲಿದ್ದಾರೆ.
    ಮುಂದಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡಿ ಸರ್ಕಾರದ ವಿರುದ್ಧ ಹೋರಾಟ ರೂಪಿಸಲು ಈ ಸಭೆ ನಡೆಸಲಾಗುತ್ತದೆ ಎಂದು ಮೇಲ್ನೋಟಕ್ಕೆ ಹೇಳಿದರೂ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ರೆಸಾರ್ಟ್ ರಾಜಕೀಯದ ಪ್ರಮುಖ ಅಂಶ ಎನ್ನಲಾಗಿದೆ.
    ಪಕ್ಷಾಂತರ ಪರ್ವ ಭರ್ಜರಿ ನಡೆಯುತ್ತಿರುವಾಗ ನಾವೆಲ್ಲರೂ ಒಟ್ಟಿಗೆ ಇದ್ದೇವೆ ಎಂಬ ಸಂದೇಶ ರವಾನಿಸಲು ಜೆಡಿಎಸ್ ಈ ತಂತ್ರ ಹೆಣೆದಿದೆ.

    ಕಾಂಗ್ರೆಸ್‌ಗೆ ಒಗ್ಗಟ್ಟಿನ ಸಂದೇಶ ರವಾನೆ

    ಜೆಡಿಎಸ್‌ನವರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಪದೇ ಪದೆ ಹೇಳುತ್ತಿರುವುದರಿಂದ ಒಗ್ಗಟ್ಟು ಪ್ರದರ್ಶಿಸಲು ಎಲ್ಲ ಶಾಸಕರನ್ನು ರೆಸಾರ್ಟಗೆ ಬರುವಂತೆ ಸೂಚಿಸಲಾಗಿತ್ತು ಎನ್ನಲಾಗಿದೆ.

    ಮೈತ್ರಿ ಅಸಮಾಧಾನ ಉಪಶಮನ

    ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ಬಳಿಕ ಕೆಲವು ಶಾಸಕರು ಅಸಮಾಧಾನಗೊಂಡಿದ್ದರು. ಕೆಲವರು ಅದನ್ನು ಬಹಿರಂಗವಾಗಿ ಹೇಳಿದರೆ, ಇನ್ನು ಕೆಲವರು ತಮ್ಮ ಅತೃಪ್ತಿಯನ್ನು ಒಳಗೇ ಅದುಮಿಟ್ಟುಕೊಂಡಿದ್ದಾರೆ. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಜೆಡಿಎಸ್ ರೆಸಾರ್ಟ್ ರಾಜಕೀಯಕ್ಕೆ ಮುಂದಾಗಿದೆ.

    ಹಲವು ವಿಷಯಗಳ ಗಂಭೀರ ಚರ್ಚೆ

    ರೆಸಾರ್ಟ್ ವಾಸ್ತವ್ಯದಲ್ಲಿ ಬಿಜೆಪಿ ಜತೆಗಿನ ಮೈತ್ರಿಯಿಂದಾಗುವ ಲಾಭ, ಲೋಕಸಭೆ ಸೀಟು ಹಂಚಿಕೆ, ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಹೋರಾಟ, ಬರ ಅಧ್ಯಯನ ಪ್ರವಾಸ ಮತ್ತಿತರ ವಿಷಯಗಳು ಚರ್ಚೆಗೆ ಬರಲಿವೆ ಎಂದು ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts