More

    ಮಂಡೆಬಿಸಿಯಾದ ಮಂಡ್ಯ ಟಿಕೆಟ್: ಜೆಡಿಎಸ್‌ನ ಹುರಿಯಾಳು ಯಾರು?

    ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾರು?
    ಇಂತಹದೊಂದು ಪ್ರಶ್ನೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾದರೂ ಉತ್ತರ ಸಿಗುತ್ತಿಲ್ಲ. ವರಿಷ್ಠರು ಅಭ್ಯರ್ಥಿ ಯಾರೆನ್ನುವ ಬಗ್ಗೆ ಸ್ಪಷ್ಟನೆ ಕೊಡದ ಪರಿಣಾಮ ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದಾರೆ. ಮಾತ್ರವಲ್ಲದೆ ಎದುರಾಳಿ ಪಕ್ಷದ ಕಾರ್ಯಕರ್ತರ ಎದುರು ಮುಜುಗರಕ್ಕೂ ಕಾರಣವಾಗಿದೆ.
    ಯಾರು ಆ ಅಭ್ಯರ್ಥಿ?: ಚುನಾವಣೆ ಘೋಷಣೆಗೂ ಮುನ್ನವೇ ಅಂದರೆ ಡಿಸೆಂಬರ್‌ನಲ್ಲಿಯೇ ಮಂಡ್ಯ ಕ್ಷೇತ್ರಕ್ಕೆ ಹಾಲಿ ಶಾಸಕ ಶ್ರೀನಿವಾಸ್ ಅವರ ಘೋಷಣೆಯಾಗಿತ್ತು. ಇದು ಬಿ ಫಾರ್ಮ್ ರೇಸ್‌ನಲ್ಲಿದ್ದವರ ಅತೃಪ್ತಿಗೆ ಕಾರಣವಾಗಿತ್ತು. ಆದಾಗ್ಯೂ ಪ್ರತ್ಯೇಕವಾಗಿ ಮತಯಾಚನೆ ನಡೆಯುತ್ತಿತ್ತು. ಈ ನಡುವೆ ಅಭ್ಯರ್ಥಿ ಬದಲಾವಣೆಯಾಗುತ್ತಾರೆನ್ನುವ ಗಾಳಿಸುದ್ದಿಗೆ ಪೂರಕವಾಗಿ ಎಚ್.ಡಿ.ಕುಮಾರಸ್ವಾಮಿ ಆಕಾಂಕ್ಷಿತರೊಂದಿಗೆ ಸಭೆ ಮಾಡಿದ್ದರು.
    ಇದಾದ ಬಳಿಕ ಕ್ಷೇತ್ರದ ಕಾರ್ಯಕರ್ತರ ಗೊಂದಲ ಮತ್ತಷ್ಟು ಹೆಚ್ಚಿಸಿತು. ಪಕ್ಷದ ಅಧಿಕೃತ ಅಭ್ಯರ್ಥಿ ಯಾರೆಂದು ಘೋಷಣೆಯಾಗದ ಪರಿಣಾಮ ಮತಯಾಚನೆಯೂ ಸರಿಯಾಗಿ ನಡೆಯುತ್ತಿಲ್ಲ. ಈ ನಡುವೆ ತಮಗೆ ಬಿ ಫಾರ್ಮ್ ಫೈನಲ್ ಆಗಲಿದೆ ಎನ್ನುವ ಭರವಸೆಯೊಂದಿಗೆ ಆಕಾಂಕ್ಷಿತರು ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಇನ್ನು ಅವರ ಬೆಂಬಲಿಗರು ಒಂದು ಹೆಜ್ಜೆ ಮುಂದೋಗಿ ತಮ್ಮ ನಾಯಕರ ಪರ ಸಾಮಾಜಿಕ ಜಾಲತಾಣದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಕೆಲವರು ಫೋಸ್ಟರ್‌ಗಳನ್ನು ಸಿದ್ಧಪಡಿಸಿಕೊಂಡು ಹಂಚುತ್ತಿದ್ದಾರೆ. ಆದ್ದರಿಂದ ಅಭ್ಯರ್ಥಿ ಯಾರೆನ್ನುವ ಕುತೂಹಲ ಜೆಡಿಎಸ್‌ಗೆ ಮಾತ್ರವಲ್ಲದೆ ಎದುರಾಳಿಗೂ ಕಾಡುತ್ತಿದೆ.
    ಎಚ್‌ಡಿಕೆ ಕೈಸೇರಿದ ವರದಿ: ಚುನಾವಣೆಗೆ ಸಂಬಂಧಿಸಿದಂತೆ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಮಾಡಿಸಲಾಗಿರುವ ಸಮೀಕ್ಷಾ ವರದಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೈಸೇರಿದೆ. ಇದನ್ನು ಹೊರಗಿನ ಏಜೆನ್ಸಿಯಿಂದ ಮಾಡಿಸಲಾಗಿದೆ. ಅಂತೆಯೇ ಮೂರು ಬಾರಿ ಸಮೀಕ್ಷೆ ನಡೆದಿದೆ ಎನ್ನಲಾಗಿದೆ.
    ಇನ್ನು ಸಮೀಕ್ಷೆಯನ್ನು 21 ಅಂಶಗಳ ಆಧಾರದ ಮೇಲೆ ನಡೆಸಲಾಗಿದೆ. ಎಲ್ಲ ಪಕ್ಷದ ಅಭ್ಯರ್ಥಿಗಳ ಹೆಸರನ್ನೊಳಗೊಂಡಂತೆ ಹಾಗೂ ಜೆಡಿಎಸ್‌ನಲ್ಲಿ ಯಾರು ಅಭ್ಯರ್ಥಿಯಾದರೆ ಚುನಾವಣೆ ಹೇಗಿರಲಿದೆ, ಯಾವ ಅಂಶದ ಆಧಾರದಲ್ಲಿ ಜನರು ಮತ ನೀಡಬಹುದು, ಸಮುದಾಯಗಳನ್ನು ಆಕರ್ಷಿಸುವ ಶಕ್ತಿ ಇದೆಯೇ, ಕ್ಷೇತ್ರದಲ್ಲಿ ಯಾರು ಪ್ರಭಾವಿ ಎಂಬಿತ್ಯಾದಿ ಮಾಹಿತಿಯನ್ನು ಕಲೆಹಾಕಲಾಗಿದೆ. ಜತೆಗೆ ಇದನ್ನು ಗೌಪ್ಯವಾಗಿಡಲಾಗುತ್ತದೆ. ಅಂತೆಯೇ ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾಗಲು ಯಾರು ಸೂಕ್ತರೆನ್ನುವ ವರದಿ ವರಿಷ್ಠರು ಕೈ ಸೇರಿದೆ. ಕಲುಬುರಗಿಯಲ್ಲಿ ಪಂಚರತ್ನ ಯಾತ್ರೆಯಲ್ಲಿರುವ ಎಚ್‌ಡಿಕೆ, ಶುಕ್ರವಾರ(ಏ.14) ಬೆಂಗಳೂರಿಗೆ ಆಗಮಿಸಲಿದ್ದಾರೆ. ಬಳಿಕ ವರದಿ ಪರಿಶೀಲನೆ ನಡೆಸಲಿದ್ದಾರೆ. ಜೆಡಿಎಸ್‌ಗೆ ಸಂಬಂಧಿಸಿದಂತೆ ಆಕಾಂಕ್ಷಿತರಲ್ಲಿ ಯಾರು ಮೊದಲ ಸ್ಥಾನ ಪಡೆದುಕೊಂಡಿರುತ್ತಾರೋ ಅವರಿಗೆ ಬಿ ಫಾರ್ಮ್ ಖಾತ್ರಿಯಾಗಲಿದೆ.
    ವರದಿಯಲ್ಲಿ ಹಾಲಿ ಶಾಸಕರ ಹೆಸರಿದ್ದರೆ ಅವರಿಗೆ ಆದ್ಯತೆ. ಒಂದು ವೇಳೆ ಬೇರೆಯವರ ಹೆಸರು ಬಂದಿದ್ದರೆ ಉಳಿದವರು ಬಂಡಾಯವೇಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈಗಾಗಲೇ ಕ್ಷೇತ್ರದಲ್ಲಿ ಹರಿದಾಡುತ್ತಿರುವ ಮಾಹಿತಿಯಂತೆ ತಮಗೆ ಅವಕಾಶ ನೀಡಬೇಕು, ಇಲ್ಲದಿದ್ದರೆ ಅಳಿಯ ಯೋಗೇಶ್‌ಗೆ ಬಿ ಫಾರ್ಮ್ ನೀಡುವಂತೆ ಶ್ರೀನಿವಾಸ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಒಂದು ವೇಳೆ ಇದೇ ಫೈನಲ್ ಆದರೆ ಉಳಿದಿಬ್ಬರ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ. ಜತೆಗೆ ಚುನಾವಣೆಯ ದಿಕ್ಕು ಬದಲಾಗಲಿದ್ದು, ಅದು ವಿಪಕ್ಷಗಳಿಗೆ ಅನುಕೂಲವಾಗಲಿದೆ. ಆದರೂ ಅಭ್ಯರ್ಥಿ ಯಾರೆನ್ನುವ ವಿಚಾರದಲ್ಲಿ ಎಂ.ಶ್ರೀನಿವಾಸ್ ಅಭಿಪ್ರಾಯ ಪ್ರಮುಖವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts